Asianet Suvarna News Asianet Suvarna News

‘ಡಿಕೆಶಿಗೆ ಪಟ್ಟ : ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಏರಲಿದೆ ಕಾಂಗ್ರೆಸ್ ’

ಕೆಪಿಸಿಸಿ ನೂತನ ಪದಾಧಿಕಾರಿಗಳು ರಾಜ್ಯಾದ್ಯಂತ ಪಕ್ಷ ಸಂಘಟಿಸುವ ಜೊತೆಗೆ ರಾಜ್ಯದಲ್ಲಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರಲಿದ್ದಾರೆ. ರಾಜ್ಯ, ರಾಷ್ಟ್ರದಲ್ಲಿ ಕಾಂಗ್ರೆಸ್‌ ಪುನಾ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ದಾವಣಗೆರೆ ಕೈ ಮುಖಂಡರು ಹೇಳಿದ್ದಾರೆ. 

Davanagere Congress Leaders  Happy Over DK Shivakumar Appointed As KPCC President
Author
Bengaluru, First Published Mar 16, 2020, 3:15 PM IST

ದಾವಣಗೆರೆ [ಮಾ.16]:  ಕೆಪಿಸಿಸಿಗೆ ಡಿ.ಕೆ.ಶಿವಕುಮಾರ, ಸತೀಶ ಜಾರಕಿಹೊಳಿ, ಈಶ್ವರ ಖಂಡ್ರೆ ನೇಮಕವಾಗಿದ್ದಕ್ಕೆ ಕಾಂಗ್ರೆಸ್‌ ಜಿಲ್ಲಾ ಘಟಕ ಹರ್ಷ ವ್ಯಕ್ತಪಡಿಸಿದೆ. ಕೆಪಿಸಿಸಿ ನೇಮಕದಲ್ಲಿ ಪ್ರಾದೇಶಿಕ, ಸಾಮಾಜಿಕ ನ್ಯಾಯಕ್ಕೆ ಪಕ್ಷದ ವರಿಷ್ಟರು ಒತ್ತು ನೀಡಿರುವುದೇ ಸಾಕ್ಷಿಯಾಗಿದೆ ಎಂದು ಜಿಲ್ಲಾ ಕಾಂಗ್ರೆಸ್‌ ಹೇಳಿದೆ. ನಗರದಲ್ಲಿ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ.ಬಸವರಾಜ, ಕೆಪಿಸಿಸಿ ನೇಮಕಾತಿಯಲ್ಲಿ ಎಂ.ನಾರಾಯಣಸ್ವಾಮಿ, ಅಜಯ ಸಿಂಗ್‌ಗೂ ಅವಕಾಶ ನೀಡಿರುವುದು ಶ್ಲಾಘನೀಯ ವಿಚಾರ ಎಂದು ಹೇಳಿದ್ದಾರೆ.

ಕೆಪಿಸಿಸಿ ನೂತನ ಪದಾಧಿಕಾರಿಗಳು ರಾಜ್ಯಾದ್ಯಂತ ಪಕ್ಷ ಸಂಘಟಿಸುವ ಜೊತೆಗೆ ರಾಜ್ಯದಲ್ಲಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರಲಿದ್ದಾರೆ. ರಾಜ್ಯ, ರಾಷ್ಟ್ರದಲ್ಲಿ ಕಾಂಗ್ರೆಸ್‌ ಪುನಾ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಜಿಲ್ಲೆಯಲ್ಲೂ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್ಸೆಸ್‌ ಮಲ್ಲಿಕಾರ್ಜುನ ನಾಯಕತ್ವದಲ್ಲಿ ಪಕ್ಷವನ್ನು ಬೂತ್‌, ವಾರ್ಡ್‌, ಬ್ಲಾಕ್‌, ತಾಲೂಕು, ಜಿಲ್ಲಾ ಮಟ್ಟದಲ್ಲಿ ಕೆಳ ಹಂತದಿಂದ ಸಂಘಟಿಸಿ, ಬಲಪಡಿಸುವುದಾಗಿ ಅವರು ಹೇಳಿದರು.

ದೇಶದಲ್ಲಿ ಹಿಂದೆಲ್ಲಾ ಗುಜರಾತ್‌ ಮಾದರಿ ಮಾತು ಕೇಳಿ ಬರುತ್ತಿತ್ತು. ಕೋಮು ದಳ್ಳುರಿಯಲ್ಲಿ ಬೆಂದ ಗುಜರಾತ್‌ ಮಾದರಿ ದೇಶಕ್ಕೆ ಮಾದರಿಯಾಗಿದ್ದು ದುರಂತ. ಈಗ ಗುಜರಾತ್‌ ಮಾದರಿ ಮಾಯವಾಗಿ ಕರ್ನಾಟಕ ಮಾದರಿ ಪ್ರಸಿದ್ಧಿಗೆ ಬಂದಿದೆ. ಇದು ಯಾವುದೇ ಅಭಿವೃದ್ಧಿ ಕಾರ್ಯ, ವಿಶೇಷ ಕಾರಣಕ್ಕೆ ಅಲ್ಲ. ಬದಲಿಗೆ ಆಪರೇಷನ್‌ ಕಮಲದಿಂದ ಎಂದು ಅವರು ಲೇವಡಿ ಮಾಡಿದರು.

ಜೆಡಿಎಸ್ ನಲ್ಲಿ ಬಂಡಾಯ : ಕೈ , ದಳದ ನಡುವೆ ಪೈಪೋಟಿ...

ಪ್ರಜಾಪ್ರಭುತ್ವಕ್ಕೆ ಮಸಿ ಬಳಿಯುವಂತೆ ರಾಜ್ಯದಲ್ಲಿ ಬಿಜೆಪಿ ಆಪರೇಷನ್‌ ನಡೆಸಿ, ಅಧಿಕಾರಕ್ಕೆ ಬಂದಿದೆ. ಬಿಜೆಪಿಯ ಈ ಕೆಲಸದಿಂದಾಗಿ ಕನ್ನಡಿಗರು ತಲೆ ಬಾಗುವಂತಾಗಿದೆ. ಗುಜರಾತ್‌ ಮಾಜರಿ ಮುಂದಿಟ್ಟುಕೊಂಡು ನರೇಂದ್ರ ಮೋದಿ ಜನರ ಭಾವನೆಗಳನ್ನು ಅಸ್ತ್ರ ಮಾಡಿಕೊಂಡರು. ಇದು ಜನರಿಗೆ ಅರ್ಥವಾಗಿದ್ದರಿಂದಲೇ ದೇಶದ ಅನೇಕ ರಾಜ್ಯಗಳಲ್ಲಿ ಜನತೆ ಕೇಸರಿ ಪಕ್ಷಕ್ಕೆ ತಕ್ಕ ಪಾಠ ಕಲಿಸಿದರು ಎಂದು ಅವರು ಹೇಳಿದರು.

ಇನ್ನು ತಮ್ಮ ಆಟ ನಡೆಯದೆಂಬ ಸತ್ಯ ಅರಿತ ನರೇಂದ್ರ ಮೋದಿ-ಅಮಿತ್‌ ಶಾ ಈಗ ಸಂವಿಧಾನ ವಿರೋಧಿಯಾದ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್‌ ತಂದು, ಜನರ ಗಮನ ಬೇರೆಡೆ ಸೆಳೆಯುವ ತಂತ್ರ ಮಾಡುತ್ತಿದ್ದಾರೆ. ಎಲ್ಲಿ ನೋಡಿದರಲ್ಲಿ ದೇಶಾದ್ಯಂತ ಗಲಾಟೆ ಶುರುವಾದರು. ಆಗ ಮೋದಿ-ಶಾ ಜೋಡಿ ಗುಜರಾತ್‌ ಮಾದರಿಯಿಂದ ಕರ್ನಾಟಕ ಮಾದರಿಗೆ ಶಿಫ್ಟ್‌ ಆಗಿದೆಯಷ್ಟೇ. ಜನತೆ ಬಿಜೆಪಿಯನ್ನು ಸಂಪೂರ್ಣ ತಿರಸ್ಕರಿಸಿದ್ದಕ್ಕೆ ಮಧ್ಯ ಪ್ರದೇಶ, ಮಹಾರಾಷ್ಟ್ರ, ಛತ್ತೀಸಘಡದ ಪ್ರತಿಪಕ್ಷದ ಶಾಸಕರ ಖರೀದಿಗೆ ಕೋಟಿ ಕೋಟಿ ಸುರಿಯಲು ಮುಂದಾಗಿದೆ ಎಂದು ಅವರು ಆರೋಪಿಸಿದರು.

ಪಾಲಿಕೆ ಸದಸ್ಯ ಕೆ.ಚಮನ್‌ ಸಾಬ್‌ ಮಾತನಾಡಿ, ಜಾಗತಿಕ ಮಟ್ಟದಲ್ಲಿ ತೈಲ ದರ ಇಳಿಕೆಯಾಗಿದೆ. ಆದರೆ, ಇದರ ಲಾಭ ಗ್ರಾಹಕರಿಗೆ ನೀಡದ ಪ್ರಧಾನಿ ಮೋದಿ ಅಬಕಾರಿ ಸುಂಕ ಲೀಟರ್‌ಗೆ 3 ರು. ಹೆಚ್ಚಿಸಲು ನಿರ್ಧರಿಸಿದ್ದು ಖಂಡನೀಯ. ಜನತೆ ಬಿಜೆಪಿಯವರ ಇಂತಹ ಜನ ವಿರೋಧಿ, ಅವಕಾಶವಾದಿ ನೀತಿಗಳ ವಿರುದ್ಧ ಜಾಗೃತರಾಗಬೇಕು ಎಂದರು.

ಪಾಲಿಕೆ ಸದಸ್ಯರಾದ ಎ.ನಾಗರಾಜ, ದೇವರಮನೆ ಶಿವಕುಮಾರ, ಗಡಿಗುಡಾಳ್‌ ಮಂಜುನಾಥ, ಪಾಮೇನಹಳ್ಳಿ ನಾಗರಾಜ, ಸೈಯದ್‌ ಚಾರ್ಲಿ, ನಿಟುವಳ್ಳಿ ಗಣೇಶ ಹುಲ್ಮನಿ, ಅಲ್ಲಾವಲಿ ಘಾಜಿಖಾನ್‌, ಬಿ.ಎಚ್‌.ಉದಯಕುಮಾರ, ಅಶ್ರಫ್‌ ಅಲಿ, ಡಿ.ಶಿವಕುಮಾರ, ಖಾಜಿ ಖಲೀಲ್‌, ಆವರಗೆರೆ ಶಶಿಕುಮಾರ, ಹದಡಿ ವೆಂಕಟೇಶ, ಆವರಗೆರೆ ಪ್ರಕಾಶ ನಾಯ್ಕ, ಎಚ್‌.ಹರೀಶ, ದಾದಾಪೀರ್‌ ಇತರರು ಇದ್ದರು.

Follow Us:
Download App:
  • android
  • ios