ಗಂಗಾವತಿ(ಅ.3): ಮೈಸೂರಿನಲ್ಲಿ ದಸರಾ ಹಬ್ಬ ನಡೆಸಲು ಅಭ್ಯಂತರ ಇಲ್ಲ. ಆದರೆ, ಮೂಲ ಹಂಪಿಯ ವಿಜಯನಗರ ಸಾಮ್ರಾಜ್ಯವಾಗಿದ್ದರಿಂದ ಹಂಪಿಯಿಂದಲೇ ದಸರಾ ಉತ್ಸವ ನಡೆಯಲಿ ಎಂದು ಖ್ಯಾತ ಸಂಶೋಧಕ ಡಾ. ಚಿದಾನಂದ ಮೂರ್ತಿ ಹೇಳಿದ್ದಾರೆ. 

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ವಿಜಯನಗರ ಅರಸರ ಕಾಲದಲ್ಲಿ ದಸರಾ ಉತ್ಸವ ಸಂಭ್ರಮದಿಂದ ನಡೆಯುತ್ತಿತ್ತು. ಈಗ ಅದು ಕ್ಷೀಣವಾಗಿದ್ದು, ಮೈಸೂರಿನಲ್ಲೆ ನಡೆಯುತ್ತಿದೆ. ಆದರೆ, ದಸರಾ ಉತ್ಸವದ ಮೂಲ ವಿಜಯನಗರ ಸಾಮ್ರಾಜ್ಯವಾಗಿದ್ದರಿಂದ ಹಂಪಿಯಿಂದಲೇ ಪ್ರಾರಂಭವಾಗಲಿ, ಈ ಬಗ್ಗೆ ಮುಖ್ಯಮಂತ್ರಿಗೆ ಪತ್ರ ಬರೆಯುವುದಾಗಿ ಹೇಳಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ಹಂಪಿಯಲ್ಲಿ ದಸರಾ ಉತ್ಸವ ಸಂಭ್ರಮದಿಂದ ನಡೆಯುತ್ತಿದ್ದ ಬಗ್ಗೆ ಪುರಾವೆಗಳಿವೆ. ಅಲ್ಲದೇ ಸ್ಮಾರಕಗಳು ಸಹ ದಸರಾ ಉತ್ಸವದ ಇತಿಹಾಸ ಹೇಳುತ್ತವೆ. ಕಾರಣ ಸರ್ಕಾರ ಇಂತಹ ಗತ ವೈಭವವಿರುವ ಉತ್ಸವಗಳನ್ನು ಮೆಲುಕು ಹಾಕುವ ಮೂಲಕ ಮುಂದಿನ ಪೀಳಿಗೆಗೆ ತಿಳಿ ಹೇಳುವ ಕಾರ್ಯವಾಗಬೇಕು. ಗಂಗಾವತಿ ತಾಲೂಕು ಇತಿಹಾಸ ಹೊಂದಿದ ಪ್ರದೇಶವಾಗಿದೆ. ವಿಜಯನಗರ ಸಾಮ್ರಾಜ್ಯದ ರಾಜಧಾನಿ ಆನೆಗೊಂದಿ, ಕುಮ್ಮಟದುರ್ಗಾ, ಹೇಮಗುಡ್ಡ ಸೇರಿದಂತೆ ಹಲವಾರು ಐತಿಹಾಸಿಕ ಪ್ರದೇಶಗಳಿವೆ. ಇಂತಹ ಪ್ರದೇಶಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ಗಮನಹರಿಸಬೇಕು ಎಂದರು.

ಅಕ್ರಮ ರೆಸಾರ್ಟ್‌ಗಳನ್ನು ತೆರವುಗೊಳಿಸಿ:

ಗಂಗಾವತಿ ತಾಲೂಕಿನ ವಿರೂಪಾಪುರ ಗಡ್ಡೆಯಲ್ಲಿ ಅಕ್ರಮ ರೆಸಾರ್ಟ್‌ಗಳಿದ್ದು, ಅವುಗಳನ್ನು ಸರ್ಕಾರ ಕೂಡಲೇ ತೆರವುಗೊಳಿಸಬೇಕೆಂದು ಚಿದಾನಂದ ಮೂರ್ತಿ ಸರ್ಕಾರಕ್ಕೆ ಒತ್ತಾಯಿಸಿದರು. 200ಕ್ಕೂ ಹೆಚ್ಚು ರೆಸಾರ್ಟ್‌ಗಳಿರುವುದರ ಮಾಹಿತಿ ಬಂದಿದ್ದು, ಈ ಪ್ರದೇಶದಲ್ಲಿ ಕಾನೂನುಬಾಹಿರ ಚಟುವಟಿಕೆ ನಡೆಯುತ್ತವೆ. ಇದರಿಂದ ಐತಿಹಾಸಿಕ ಪ್ರದೇಶಕ್ಕೆ ದೊಡ್ಡ ಕಳಂಕವಾಗಲಿದೆ ಎಂದರು. ಈ ಹಿಂದೆ ಅಕ್ರಮ ರೆಸಾರ್ಟ್‌ಗಳ ವಿರುದ್ಧ ಪ್ರತಿಭಟನೆ ಮಾಡಲಾಗಿತ್ತು. ಆದರೆ, ಸರ್ಕಾರ ಎಚ್ಚೆತ್ತುಕೊಳ್ಳದೆ ಬಾಹ್ಯವಾಗಿ ರೆಸಾರ್ಟ್‌ ಮಾಲೀಕರಿಗೆ ಬೆಂಬಲ ನೀಡುತ್ತಿರುವುದು ಬೇಸರ ತಂದಿದೆ ಎಂದರು.

ವಿಜಯನಗರ ಗತವೈಭವ ಸಾರುವ ಇಂತಹ ಪ್ರದೇಶದಲ್ಲಿ ಕಾನೂನುಬಾಹಿರ ಚಟುವಟಿಕೆ ನಡೆಯುತ್ತಿದೆ. 2 ತಿಂಗಳ ಹಿಂದೆ ಪ್ರವಾಹ ಬಂದ ಸಂದರ್ಭದಲ್ಲೂ ವಿದೇಶಿ ಸೇರಿದಂತೆ ದೇಶದ 500ಕ್ಕೂ ಹೆಚ್ಚು ಪ್ರವಾಸಿಗರಿಗೆ ಆಶ್ರಯ ನೀಡಿ ಅವರನ್ನು ಸಂಕಷ್ಟಕ್ಕೀಡು ಮಾಡಿದ್ದರು. ಇಷ್ಟೆಲ್ಲ ರಾದ್ಧಾಂತ ನಡೆದಿದ್ದರೂ ಜಿಲ್ಲಾಡಳಿದ ಕಣ್ಣುಮುಚ್ಚಿ ಕುಳಿತುಕೊಂಡಿದೆಯೇ ಎಂದು ಪ್ರಶ್ನಿಸಿದರು. ಕೂಡಲೇ ಸರ್ಕಾರ ಅಕ್ರಮ ರೆಸಾರ್ಟ್‌ಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದರು.

ಈ ಸಂದರ್ಭದಲ್ಲಿ ಸಂಶೋಧಕ ಡಾ. ಶರಣಬಸಪ್ಪ ಕೋಲ್ಕಾರ, ರಾಜೇಶ ನಾಯಕ, ಕೆ. ಚೆನ್ನಬಸಯ್ಯಸ್ವಾಮಿ, ರಮೇಶ ಗಬ್ಬೂರು, ಡಾ. ಶಿವಕುಮಾರ ಇದ್ದರು.

ಕುಮ್ಮಟ ದುರ್ಗಾಕ್ಕೆ ಭೇಟಿ:

ಸಮೀಪದ ಕುಮ್ಮಟದುರ್ಗಾ, ಹೇಮಗುಡ್ಡ ಪ್ರದೇಶಕ್ಕೆ ಸಂಶೋಧಕ ಡಾ. ಚಿದನಾಂದ ಮೂರ್ತಿ ಭೇಟಿ ನೀಡಿ ಮಾಹಿತಿ ಪಡೆದರು.