ಮೈಸೂರು (ಅ.05): ದಸರಾ ಜಂಬೂಸವಾರಿ ವೇಳೆ 21 ಕುಶಾಲತೋಪು ಸಿಡಿಸುವ ಹಿನ್ನೆಲೆಯಲ್ಲಿ ಮೈಸೂರು ಅರಮನೆ ಆವರಣದಲ್ಲಿ 7 ಫಿರಂಗಿಗಳಿಗೆ ನಗರ ಪೊಲೀಸ್‌ ಆಯುಕ್ತ ಡಾ.ಚಂದ್ರಗುಪ್ತ ಅವರು  ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿದರು.

ಮೈಸೂರು ಅರಮನೆ ಮುಂಭಾಗದ ಪ್ರಾಂಗಣದಲ್ಲಿ 7 ಫಿರಂಗಿಗಳಿಗೂ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ, ಸಿಡಿಮದ್ದು ಸಿಡಿಸುವ ತಾಲೀಮಿಗೆ ಅನುವು ಮಾಡಿಕೊಡಲಾಯಿತು. ಈ ವೇಳೆ ಪೊಲೀಸ್‌ ಆಯುಕ್ತ ಡಾ.ಚಂದ್ರಗುಪ್ತ ಮಾತನಾಡಿ, ಕುಶಾಲತೋಪು ಸಿಡಿಸುವ ಕಾರ್ಯದ ನಿಮಿತ್ತ ಇಂದಿನಿಂದ ಫಿರಂಗಿ ದಳದ ಸಿಬ್ಬಂದಿ ಒಣ ತಾಲೀಮು ನಡೆಸಲಿದ್ದಾರೆ.

'ದಸರೆಗೆ ಹೋಗಬೇಕಂದ್ರೆ 5 ದಿನ ಮುಂಚೆ ಕೋವಿಡ್ ಟೆಸ್ಟ್ ಅಗತ್ಯ'
 
ಅರಣ್ಯ ಇಲಾಖೆ ನಿಗದಿ ಮಾಡಿದ ದಿನಾಂಕದಂದು ಸಿಡಿಮದ್ದು ಸಿಡಿಸುವ ತಾಲೀಮು ನಡೆಸಲಾಗುತ್ತದೆ. ತಾಲೀಮಿನ ವೇಳೆ ಅಗತ್ಯ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತದೆ. ಸಿಡಿಮದ್ದು ಸಿಡಿಯುವುದರಿಂದ ಯಾವುದೇ ಪಾರಂಪರಿಕ ಕಟ್ಟಡಗಳಿಗೆ ಹಾನಿಯಾಗದಂತೆ ಮುಂಜಾಗ್ರತ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಗಜಪಡೆ ತಾಲೀಮು:  ದಸರಾ ಗಜಪಡೆಯು ಮೈಸೂರು ಅರಮನೆ ಆವರಣದೊಳಗೆ ಭಾನುವಾರ ನಡಿಗೆ ತಾಲೀಮು ನಡೆಸಿದವು. ಅರಮನೆ ಆನೆ ಬಿಡಾರದಿಂದ ಆರಂಭವಾದ ನಡಿಗೆ ತಾಲೀಮಿನಲ್ಲಿ ಅಂಬಾರಿ ಆನೆ ಅಭಿಮನ್ಯು ಸೇರಿದಂತೆ ವಿಕ್ರಮ, ಗೋಪಿ, ವಿಜಯ ಮತ್ತು ಕಾವೇರಿ ಆನೆಗಳು ಪಾಲ್ಗೊಂಡಿದ್ದವು.