ಧ್ರುವನಾರಾಯಣ ಹಾದಿಯಲ್ಲೇ ಸಾಗಿರುವ ದರ್ಶನ್
ಮಾಜಿ ಸಂಸದ ದಿವಂಗತ ಆರ್. ಧ್ರುವನಾರಾಯಣ್ ಅವರು ಅಭಿವೃದ್ದಿ ಕೆಲಸಗಳಿಂದಾಗಿ ಮತ್ತು ಜನರ ಸಂಕಷ್ಟಗಳಿಗೆ ನಗುಮುಖದಿಂದಲೇ ಸ್ಪಂದಿಸುವ ಗುಣಗಳಿಂದ ಚಾಮರಾಜನಗರ ಲೋಕಸಭಾ ಕ್ಷೇತ್ರದ 2 ಜಿಲ್ಲೆಗಳಲ್ಲಿ ಜನರ ಮನಸ್ಸನ್ನು ಗೆದ್ದಿದ್ದ ಅಪರೂಪದ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದರು.
ಎಚ್.ಡಿ. ರಂಗಸ್ವಾಮಿ
ನಂಜನಗೂಡು ; ಮಾಜಿ ಸಂಸದ ದಿವಂಗತ ಆರ್. ಧ್ರುವನಾರಾಯಣ್ ಅವರು ಅಭಿವೃದ್ದಿ ಕೆಲಸಗಳಿಂದಾಗಿ ಮತ್ತು ಜನರ ಸಂಕಷ್ಟಗಳಿಗೆ ನಗುಮುಖದಿಂದಲೇ ಸ್ಪಂದಿಸುವ ಗುಣಗಳಿಂದ ಚಾಮರಾಜನಗರ ಲೋಕಸಭಾ ಕ್ಷೇತ್ರದ 2 ಜಿಲ್ಲೆಗಳಲ್ಲಿ ಜನರ ಮನಸ್ಸನ್ನು ಗೆದ್ದಿದ್ದ ಅಪರೂಪದ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದರು.
ಸಾಮಾನ್ಯವಾಗಿ ರಾಜಕೀಯ ಕ್ಷೇತ್ರದಲ್ಲಿ ಅಧಿಕಾರ ಇದ್ದಾಗ ಜನಾನುರಾಗಿ ಎನಿಸಿಕೊಂಡರೂ ಅಧಿಕಾರ ಹೋದ ನಂತರ ತೆರೆಮರೆಗೆ ಸರಿದು ಮೂಲೆಗುಂಪಾಗುವ ರಾಜಕಾರಣಿಗಳ ಮಧ್ಯೆ ದಿ.ಆರ್. ಧ್ರುವನಾರಾಯಣ್ ಅವರಿಗೆ ದೊಡ್ಡ ಮಟ್ಟದ ಅಧಿಕಾರವಿಲ್ಲದಿದ್ದರೂ ಕೂಡ ಅವರ ಸರಳ, ಸಜ್ಜನ ವ್ಯಕ್ತಿತ್ವದ ನಾಯಕತ್ವದ ಗುಣಗಳಿಂದ ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಪಕ್ಷಾತೀತವಾಗಿ ಜನಮನ್ನಣೆ ಉಳಿಸಿಕೊಂಡು ಅಜಾತ ಶತ್ರು ರಾಜಕಾರಣಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಲ್ಲದೆ ದ್ರುವತಾರೆ ಎಂಬ ಹೆಸರನ್ನು ಕಾಯಕದಿಂದಲೇ ಸಂಪಾದಿಸಿಕೊಂಡು ಜನರ ಮನಸ್ಸಿನಲ್ಲಿ ಅಜರಾಮರಾಗಿ ಉಳಿದ ಅಪರೂಪದ ರಾಜಕಾರಣಿ.
ಅವರು ಎಂದು ಯಾರ ವಿರುದ್ಧವೂ ಕೀಳು ಭಾಷೆಯನ್ನು ಬಳಸಿದವರಲ್ಲ, ಬದಲಾಗಿ ಪಕ್ಷಾತೀತವಾಗಿ 2 ಜಿಲ್ಲೆಯ ಜನರ ಸಂಕಷ್ಟಗಳಿಗೆ ಕಿವಿಯಾಗಿದ್ದವರು. ಆದ್ದರಿಂದಲೇ ಧ್ರುವನಾರಾಯಣ್ ಅವರು ಕಳೆದ 1 ವರ್ಷದ ಹಿಂದೆ ಅಕಾಲಿಕವಾಗಿ ನಮ್ಮಿಂದ ದೂರವಾಗಿದ್ದರೂ ಕೂಡ 2 ಜಿಲ್ಲೆಗಳ ಅವರ ಅಭಿಮಾನಿಗಳು ಮತ್ತು ಕಾರ್ಯಕರ್ತರು ನಮ್ಮ ಸಂಷ್ಟವನ್ನು ಕೇಳುವಂತಹ ಇನ್ನೊಬ್ಬ ರಾಜಕಾರಣಿ ಇಲ್ಲ ಎಂಬ ಕೊರಗಿನೊಂದಿಗೆ ತಮ್ಮ ರಾಜಕೀಯ ಭವಿಷ್ಯ ಕಾಣದೆ ಅಲೆಯುವಂತಾಗಿದೆ. 2 ಜಿಲ್ಲೆಯಲ್ಲಿ ಅವರ ಸ್ಥಾನವನ್ನು ಇನ್ನೂ ಯಾರೂ ಕೂಡ ತುಂಬಲು ಸಾಧ್ಯವಾಗಿಲ್ಲ. ಈ ನೋವು ಎಲ್ಲಾ ಕಾರ್ಯಕರ್ತರಲ್ಲಿ ಇನ್ನೂ ಕಾಡುತ್ತಿದೆ.
ಸಂತೆಮರಹಳ್ಳಿಯಲ್ಲಿ ಸ್ಪರ್ಧಿಸಿ ಒಂದು ಮತದಿಂದ ಗೆಲುವು ಸಂಪಾದಿಸಿ ಪ್ರಜಾಪ್ರಭುತ್ವದಲ್ಲಿ ಒಂದು ಮತದ ಮಹತ್ವವನ್ನು ಲೋಕಕ್ಕೆ ಸಾರಿದ ಕೀರ್ತಿಯೂ ಇದೇ ಧ್ರುವನಾರಾಯಣರದ್ದು. ತಮ್ಮನ್ನು ಗೆಲ್ಲಿಸಿದ ಜನತೆಯ ಕುಡಿಯುವ ನೀರಿನ ಬವಣೆಯನ್ನು ನೀಗಿಸಲು ರಾಜ್ಯದಲ್ಲೇ ಪ್ರಥಮಬಾರಿಗೆ 53 ಹಳ್ಳಿಗಳಿಗೆ ಬಹುಗ್ರಾಮ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆ ಜಾರಿಗೊಳಿಸಿದ ಆಧುನಿಕ ಭಗೀರಥ.
ರಾಜ್ಯದಲ್ಲೇ ಅತ್ಯಂತ ಹಿಂದುಳಿದ ಜಿಲ್ಲೆ ಎಂಬ ಖ್ಯಾತಿಯ ಚಾಮರಾಜನಗರ ಜಿಲ್ಲೆಯ ಆ ಅಪಖ್ಯಾತಿಯನ್ನು ಅಳಿಸುವ ಸಲುವಾಗಿ ಚಾಮರಾಜನಗರಕ್ಕೆ ಸಂಸದರಾಗಿ ಬಂದು ಕೈಗಾರಿಕಾ ಕೇಂದ್ರ, ವೈದೈಕೀಯ ಕಾಲೇಜು, ಎಂಜಿನಿಯರಿಂಗ್ ಕಾಲೇಜು, ಕೇಂದ್ರೀಯ ವಿದ್ಯಾಲಯ ತಂದ ಕೀರ್ತಿಯೂ ಅವರದ್ದೇ ಆಗಿದೆ, ಅಲ್ಲದೆ ಒಬ್ಬ ಜವಾಬ್ದಾರಿಯುತ ಸಂಸದರಾಗಿ ಜನಸಾಮಾನ್ಯರ ಬವಣೆಗಳ ಕುರಿತಾಗಿ ಸಂಸತ್ ನಲ್ಲಿ ಅತಿಹೆಚ್ಚು ಪ್ರಶ್ನೆಗಳನ್ನು ಕೇಳುತ್ತಲೇ ಸಮಾಜದ ಅನಿಷ್ಠಗಳ ಕುರಿತು ಬೆಳಕು ಚೆಲ್ಲುವಲ್ಲಿ ಬಹಳವಾಗಿ ಶ್ರಮಿಸಿದವರು. ಸ್ವ ಪಕ್ಷೀಯರಿಂದ ಹೊಗಳಿಸಿಕೊಳ್ಳುವದು ಸಾಮಾನ್ಯ. ಆದರೆ ವಿರೋಧ ಪಕ್ಷದಲ್ಲಿದ್ದು ಆಡಳಿತ ಪಕ್ಷದವರಿಂದ ಅದೂ ಬಹಿರಂಗವಾಗಿ ಅಭಿವೃದ್ಧಿ ಕೆಲಸದ ಕುರಿತು ಹೊಗಳಿಸಿಕೊಂಡ ಅಪರೂಪದ ರಾಜಕಾರಣಿ. ಜೊತೆಗೆ ನಿಷ್ಠೂರವಾದಿ, ಸ್ವಾಭಿಮಾನಿ, ಪ್ರಾಮಾಣಿಕ ರಾಜಕಾರಣಿ ಎಂದಿನಿಸಿಕೊಂಡ ಮಾಜಿ ಕೇಂದ್ರ ಸಚಿವರೂ, ಸಂಸದರೂ ಆದ ವಿ. ಶ್ರೀನಿವಾಸ ಪ್ರಸಾದ ಅವರಿಂದ ಈ ಭಾಗದ ಸೋಲು, ಗೆಲುವಿನ ಒಳಗುಟ್ಟನ್ನು ಕಲಿತಿದ್ದೂ ಅಲ್ಲದೆ ಪ್ರಸಾದರ ಬಾಯಲ್ಲೇ ಇವರೇ ತಮ್ಮ ಉತ್ತರಾಧಿಕಾರಿ ಎಂದು ಕರೆಸಿಕೊಂಡ ಏಕೈಕ ರಾಜಕಾರಣಿ.
ವಿ. ಶ್ರೀನಿವಾಸ ಪ್ರಸಾದ್ ಅವರು ಕಾಂಗ್ರೆಸ್ ಪಕ್ಷ ಬಿಟ್ಟ ನಂತರ ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಪಾಲಿನ ದಲಿತ ನಾಯಕರಾಗಿ ಹೊರಹೊಮ್ಮಿದ್ದವರು.
ಇನ್ನು ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಬಣ- ಡಿ.ಕೆ. ಶಿವಕುಮಾರ್ ಬಣ ಎಂಬ ಬಣ ರಾಜಕೀಯದಿಂದ ದೂರ ಉಳಿದು ಕೊರೋನಾ ಸಮಯದಲ್ಲಿ ಪಕ್ಷ ಹಮ್ಮಿಕೊಂಡಿದ್ದ ಆರೋಗ್ಯ ಹಸ್ತ ಮತ್ತು ಆಹಾರ ಕಿಟ್ ವಿತರಣೆ ಕಾರ್ಯಕ್ರಮದ ನೇತೃತ್ವ ವಹಿಸಿಕೊಂಡು ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಓಡಾಡಿ ಕೋವಿಡ್ ಸಂತ್ರಸ್ಥರಿಗೆ ನೆರವು ನೀಡಿದ್ದವರು.
ಅಲ್ಲದೆ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ 9 ಜಿಲ್ಲೆಗಳ ಸಂಘಟನೆ, ಚುನಾವಣೆ ಹೊಣೆ ಹೊತ್ತಿದ್ದ ಆರ್. ಧ್ರುವನಾರಾಯಣ್ ಅವರು ಕಾಂಗ್ರೆಸ್ ಪಕ್ಷದ ಕಟ್ಟಾಳಿನಂತೆ ಕೆಲಸ ಮಾಡಿದ್ದವರು. ಹಳೇ ಮೈಸೂರು ಭಾಗದಲ್ಲಿ ಲಿಂಗಾಯತರು, ಒಕ್ಕಲಿಗರ ಪ್ರಾಬಲ್ಯವಿರುವ ಮಧ್ಯೆ ನೂರೆಂಟು ಗುಂಪುಗಳ ಮಧ್ಯೆ ದಲಿತ ಸಮುದಾಯಕ್ಕೆ ಸೇರಿದ್ದ ಆರ್. ಧ್ರುವನಾರಾಯಣ್ ಎಲ್ಲರ ಮನವೊಲಿಸಿ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದರು. ಪ್ರತಿಯೊಬ್ಬರ ಹೆಸರನ್ನೂ ನೆನಪಿಟ್ಟುಕೊಂಡು ಮಾತನಾಡಿಸುತ್ತಾ, ಕಾರ್ಯಕರ್ತರ ನಾಯಕತ್ವ ಗುಣಗಳನ್ನು ಪೋಷಿಸುತ್ತಾ ಅವರ ಬೆಂಬಲಕ್ಕೆ ನಿಂತು ಪ್ರೋತ್ಸಾಹಿಸುವ ಮೂಲಕ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಂಡು ಎಲ್ಲಾ ಜಿಲ್ಲೆಗಳಿಗೂ ಹಗಲು ಇರುಳು ಪ್ರವಾಸ ಮಾಡಿ ಕಾರ್ಯಕರ್ತರ ಹುಮ್ಮಸ್ಸು ಹೆಚ್ಚಿಸುತ್ತಿದ್ದ ರಾಜಕಾರಣಿ.
ತಂದೆ ಹಾದಿಯಲ್ಲಿ ಮಗ
2 ಜಿಲ್ಲೆಯ ಕಾರ್ಯಕರ್ತರು, ಅಭಿಮಾಮಿಗಳು ಕೂಡ ದರ್ಶನ್ ಅವರಲ್ಲಿ ಆರ್. ಧ್ರುವನಾರಾಯಣ್ ಅವರನ್ನು ಕಾಣುವಂತಹ ಹಂಬಲ ಹೊತ್ತಿದ್ದಾರೆ. ಶಾಸಕ ದರ್ಶನ್ ಧ್ರುವನಾರಾಯಣ್ ಅವರು ತಮ್ಮ ತಂದೆಯ ಅಭಿಮಾನಿಗಳ ಸಂಕಷ್ಟಕ್ಕೆ ಸ್ಪಂದಿಸಿ ಅವರ ಬೆಂಬಲಕ್ಕೆ ನಿಲ್ಲವುದೂ ಕೂಡ ತಮ್ಮ ಜವಾಬ್ದಾರಿ ಎಂದು ಅರಿತುಕೊಂಡಿರುವ ಅವರು 2 ಜಿಲ್ಲೆಯಲ್ಲಿ ಪ್ರವಾಸ ಮಾಡುವ ಮೂಲಕ ಕಾರ್ಯಕರ್ತರ ಸಮಸ್ಯೆಗಳಿಗೆ ಸ್ಪಂದಿಸುತ್ತ ತಂದೆ ಹಾದಿಯಲ್ಲೇ ಮುನ್ನೆಡೆಯುತ್ತಿದ್ದಾರೆ.