ಶಾಲಾ ಕಟ್ಟಡಕ್ಕೆ ವಿದ್ಯುತ್ ಸ್ಪರ್ಶದ ಅಪಾಯ: ಮಕ್ಕಳ ಜೀವಕ್ಕಿದೆ ಆಪತ್ತು!
ಶಾಲಾ ಕಟ್ಟಡ ಸಮೀಪವೇ ಹಾದುಹೋಗಿರುವ ವಿದ್ಯುತ್ ತಂತಿ| ಭಯದಲ್ಲಿ ಮಕ್ಕಳು| ತಾಲೂಕಿನ ಚಿನ್ನಕಾರ ಗ್ರಾಪಂ ವ್ಯಾಪ್ತಿಯಲ್ಲಿರುವ ಧರ್ಮಪೂರ್ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ| ವಿದ್ಯುತ್ ತಂತಿ ಭಯದಿಂದ ವಿದ್ಯರ್ಥಿಗಳು ಶಾಲೆಗೆ ಹೋಗಲು ಭಯ|
ಗುರುಮಠಕಲ್(ಜ.18): ವಿದ್ಯುತ್ ತಂತಿಗಳು ಶಾಲೆಯ ಗೋಡೆಯ ಮೇಲಿಂದ ಹಾದು ಹೋಗಿರುವುದರಿಂದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ವಿದ್ಯುತ್ ಸ್ಪರ್ಶ ಅಪಾಯದ ಭಯದಲ್ಲಿದ್ದಾರೆ ಎಂದು ಪಾಲಕರು ಆರೋಪಿಸಿದ್ದಾರೆ.
ತಾಲೂಕಿನ ಚಿನ್ನಕಾರ ಗ್ರಾಪಂ ವ್ಯಾಪ್ತಿಯಲ್ಲಿರುವ ಧರ್ಮಪೂರ್ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 5ನೇ ತರಗತಿಯವರೆಗೆ ಒಟ್ಟು 46 ವಿದ್ಯಾರ್ಥಿಗಳು ಓದುತ್ತಿದ್ದು, ಶಾಲೆಯ ಗೋಡೆಯ ಮೇಲಿಂದ ವಿದ್ಯುತ್ ತಂತಿಗಳು ಹಾದು ಹೋಗಿದ್ದು, ವಿದ್ಯಾರ್ಥಿಗಳು ಛಾವಣಿ ಮೇಲೇರಿದರೆ ಅಪಾಯಕ್ಕೆ ತುತ್ತಾಗುತ್ತಾರೆ. ಇದರ ಕುರಿತು ಜೆಸ್ಕಾಂ ಅಧಿಕಾರಿಗಳಿಗೆ ಹಲವು ಸಲ ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಗಾಳಿ ಜೋರಾಗಿ ಬಂದರೆ, ಆಕಸ್ಮಿಕವಾಗಿ ಈ ತಂತಿಗಳು ತುಂಡರಿಸಿ ಬಿದ್ದರೆ ಅನಾಹುತ ತಪ್ಪಿದ್ದಲ್ಲ. ತಲೆ ಮೇಲೆ ಕತ್ತಿ ತೂಗುತ್ತಿರುವ ಸ್ಥಿತಿ ಇಲ್ಲಿನ ವಿದ್ಯಾರ್ಥಿಗಳದ್ದು. ಮುಂದೆ ಸಂಭವಿಸಬಹುದಾದ ಅನಾಹುತ ತಪ್ಪಿಸಬೇಕು. ತುರ್ತಾಗಿ ಶಾಲೆ ಮೇಲೆ ಹಾದು ಹೋಗಿರುವ ತಂತಿ ಮಾರ್ಗವನ್ನು ಬದಲಿಸಬೇಕು ಎನ್ನುತ್ತಾರೆ ಶಾಲೆಯ ಮುಖ್ಯಗುರು ಭೀಮಯ್ಯ ಗಾಜರಕೋಟ್.
ವಿದ್ಯುತ್ ತಂತಿ ಭಯದಿಂದ ಶಾಲೆಗೆ ಹೋಗಲು ಭಯಪಡುತ್ತಿದ್ದಾರೆ. ಇದರಿಂದ ಶಾಲೆಯಲ್ಲಿ ಹಾಜರಾತಿ ಸಂಖ್ಯೆ ದಿನದಿನಕ್ಕೆ ಕ್ಷೀಣಿಸುತ್ತಿದೆ. ನಮ್ಮ ತಾಂಡಾ ಮಕ್ಕಳು ಶಾಲೆಯಿಂದ ವಂಚಿತಗೊಳ್ಳುವ ದುಸ್ಥಿತಿ ಒದಗಿಬಂದಿದೆ. ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಬೇಕು ಎಂದು ಶಿಕ್ಷಣಾಧಿಕಾರಿಗಳು ಮಧ್ಯಸ್ಥಿಕೆ ವಹಿಸಿ ತಂತಿ ಮಾರ್ಗ ಬದಲಾಯಿಸಬೇಕಾಗಿದೆ ಎಂದು ಚಿನ್ನಕಾರ ಗ್ರಾಪಂ ಮಾಜಿ ಅಧ್ಯಕ್ಷ ಸುರೇಶ ರಾಠೋಡ್ ಆಗ್ರಹಿಸಿದ್ದಾರೆ.