ರಿಯಾಜಹಮ್ಮದ ಎಂ. ದೊಡ್ಡಮನಿ

ಡಂಬಳ(ನ.20): ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿ ನಿರ್ಮಾಣಗೊಂಡ ಇಲ್ಲಿಯ ಗ್ರಾಮೀಣ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಗ್ರಾಮೀಣ ಭಾಗದ ಜನರಿಗೆ ಸುಗಮ ಸಂಚಾರ ಕಷ್ಟವಾಗಿದೆ.
ಡಂಬಳ ಗ್ರಾಮದಿಂದ ಜಂತ್ಲಿಶಿರೂರ ಮಾರ್ಗ ಕಲ್ಪಿಸುವ ರಸ್ತೆ, ಚುರ್ಚಿಹಾಳದಿಂದ ಲಕ್ಕುಂಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳೂ ಹದಗೆಟ್ಟಿದ್ದು, ರಸ್ತೆಗೆ ಕಂಟಿಗಳು ಚಾಚುವಿಕೆ, ಹಳ್ಳದ ಸೇತುವೆಗಳು ಕಿರಿದಾದ ಪರಿಣಾಮವಾಗಿ ಸುಗಮ ಸಂಚಾರಕ್ಕೆ ಸಂಚಕಾರ ಉಂಟುಮಾಡಿವೆ.

ಜಂತ್ಲಿಶಿರೂರ ಗ್ರಾಮದಿಂದ ಡಂಬಳ ಗ್ರಾಮಕ್ಕೆ ಮತ್ತು ಗದಗದ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ 4 ಕಿ.ಮೀವರೆಗಿನ ರಸ್ತೆ ಡಾಂಬರ್‌ ಮತ್ತು ಕಡಿಗಳು ಕಿತ್ತು ಪ್ರಯಾಣಿಕರು ನಿತ್ಯ ಗೋಳಾಡುವಂತಾದರೆ ರಸ್ತೆಯ ಬದಿ ಬೇಕಾಬಿಟ್ಟಿ ಬೆಳೆದ ಜಾಲಿಕಂಟಿಗಳು ಅಪಘಾತಕ್ಕೆ ಆಹ್ವಾನ ನೀಡುತ್ತವೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಚುರ್ಚಿಹಾಳದಿಂದ ಲಕ್ಕುಂಡಿಗೆ ಸಂಪರ್ಕ ಕಲ್ಪಿಸುವ ಗ್ರಾಮೀಣ ರಸ್ತೆಯೂ ಸಂಪೂರ್ಣವಾಗಿ ಡಾಂಬರ್‌ ಮತ್ತು ಕಡಿಯೂ ಕಿತ್ತಿರುವುದರಿಂದಾಗಿ ದೊಡ್ಡ ಗುಂಡಿಗಳು ನಿರ್ಮಾಣವಾಗಿವೆ. ರಸ್ತೆಯುದ್ದಕ್ಕೂ ವಾಹನ ಸವಾರರಿಗೆ ಧೂಳಿನ ಮಜ್ಜನ ಸಾಮಾನ್ಯವಾಗಿದೆ. ಅಲ್ಲದೆ ಈ ಮಾರ್ಗದಲ್ಲಿ ತುಂಗಭದ್ರಾ ನದಿಯ ಏತ ನೀರಾವರಿ ಮೂಲಕವಾಗಿ ಹರಿದು ಬರುವ ನೀರು ಮತ್ತು ಸತತವಾಗಿ ಸುರಿದ ಮಳೆಯಿಂದಾಗಿ ಹಳ್ಳದಲ್ಲಿ ಸತತವಾಗಿ ನೀರು ಹರಿಯುತ್ತಿರುವುದರಿಂದಾಗಿ ಸಣ್ಣಪ್ರಮಾಣದ ಸೇತುವೆಯಲ್ಲಿ ಪಾಚಿಗಟ್ಟಿದೆ. ಬೈಕ್‌ ಸವಾರರು ಜಾರಿ ಹಳ್ಳದಲ್ಲಿ ಬೀಳುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ.

ಜೀವಕ್ಕೆ ಸಂಚಕಾರ ತರುವ ಸೇತುವೆ ಎತ್ತರಿಸಬೇಕು

ಡಂಬಳ ಗ್ರಾಮದ ಕೆರೆಯೂ ಕೋಡಿ ಬಿದ್ದ ನೀರು ಮತ್ತು ಸತತವಾಗಿ ಮಳೆ ಬಿದ್ದ ಪರಿಣಾಮವಾಗಿ ಹಳ್ಳದಲ್ಲಿ ಹರಿಯುವ ನೀರು ತೀವ್ರತೆಯಿಂದಾಗಿ ಸೇತುವೆಯೂ ಸಣ್ಣದಾಗಿದ್ದರಿಂದ ಸೇತುವೆಯ ಮೇಲೆ ನೀರು ರಭಸವಾಗಿ ಹರಿಯುತ್ತಿದ್ದು, ಬೆಳಗಿನ ಜಾವದಲ್ಲಿ ಗದಗ ಮಾರ್ಗದಿಂದ ಬೈಕ್‌ ಮೂಲಕ ಬರುವ ಪೇಪರ್‌ ವಿತರಕ ಮತ್ತು ವಿದ್ಯುತ್‌ ಘಟಕದಲ್ಲಿ ಸೆಕ್ಯೂರಿಟಿಯಾಗಿ ಸೇವೆ ಮಾಡುವವರು ನೀರಿನ ರಭಸಕ್ಕೆ ತೇಲಿಹೋಗುವ ಸಂದರ್ಭದಲ್ಲಿ ಕಾಕತಾಳಿಯಂತೆ ಗ್ರಾಮಸ್ಥರ ಸಹಾಯದಿಂದ ರಕ್ಷಣೆ ಮಾಡಲಾಗಿದೆ. ಇದೆ ಸ್ಥಳದಲ್ಲಿ ಎಮ್ಮೆಯೂ ನೀರಿನಲ್ಲಿ ಸಿಕ್ಕು ಸತ್ತಿದ್ದು ಸೇತುವೆಯನ್ನು ಎತ್ತರಿಸಲು ಅಧಿಕಾರಿಗಳು, ಜನಪ್ರತಿನಿಧಿಗಳು ಮುಂದಾಗಬೇಕು ಎನ್ನುತ್ತಾರೆ ಗ್ರಾಮಸ್ಥರು.

ಡಂಬಳ ಕೆರೆಯ ನೀರು ಹಳ್ಳದಲ್ಲಿ ಹಳೆಯ ಕಿರಿದಾದ ಸೇತುವೆಯ ಮೇಲೆ ರಭಸವಾಗಿ ಹರಿಯುತ್ತಿರುವ ಸಂದರ್ಭದಲ್ಲಿ ಜನರ ಜೀವಕ್ಕೆ ಸಂಚಕಾರ ತರುತ್ತಿದ್ದು, ವಿವಿಧ ಭಾಗಕ್ಕೆ ಹೋಗಲು ಸಂಪರ್ಕ ಕಲ್ಪಿಸುವ ಸೇತುವೆಯನ್ನು ಎತ್ತರಿಸುವ ಕಾರ್ಯವನ್ನು ಕೈಗೊಳ್ಳಬೇಕು ಎಂದು ಡಂಬಳ ಗ್ರಾಮ ಪಂಚಾಯಿತಿ ಸದಸ್ಯ ಗೋಣಿಬಸಪ್ಪ ಕೋರ್ಲಹಳ್ಳಿ ಅವರು ಹೇಳಿದ್ದಾರೆ.

ಡಂಬಳದಿಂದ ಜಂತ್ಲಿಶಿರೂರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯೂ ಹದಗೆಟ್ಟಿದ್ದು, ರಸ್ತೆಗೆ ಜಾಲಿಕಂಟಿಗಳು ಚಾಚಿಕೊಂಡಿದ್ದು ಪ್ರಯಾಣಿಕರಿಗೆ, ಸವಾರರಿಗೆ ಸಂಚಕಾರ ತಂದಿದೆ. ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ರಸ್ತೆಗಳ ದುರಸ್ತಿ ಕಾರ್ಯಕ್ಕೆ ಮುಂದಾಗಬೇಕು ಎಂದು ಬೈಕ್‌ ಸವಾರ ರಮೇಶ ಜಂತ್ಲಿ ಅವರು ಹೇಳಿದ್ದಾರೆ.