ಆತ್ಮಭೂಷಣ್‌

ಮಂಗಳೂರು(ಡಿ.24): ರಾಜ್ಯ ರಾಜಧಾನಿ ಬೆಂಗಳೂರಿನೊಂದಿಗೆ ಬಂದರು ನಗರಿ ಮಂಗಳೂರನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಬರುವ ಶಿರಾಡಿ ಘಾಟ್‌ನಲ್ಲಿ ಬಹುಚರ್ಚಿತ ಸುರಂಗ ಮಾರ್ಗ ನಿರ್ಮಾಣ ಕಾಮಗಾರಿಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿರುವುದು ಇದೀಗ ಪರಿಸರವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ನಾಲ್ಕು ಪಥದ ಸುರಂಗ ಹೆದ್ದಾರಿ ನಿರ್ಮಿಸುವ ಮೂಲಕ ಚೆನ್ನೈ ಮತ್ತು ಮಂಗಳೂರು ಕೈಗಾರಿಕಾ ಕಾರಿಡಾರ್‌ ಅನ್ನು ತ್ವರಿತವಾಗಿ ಸಂಪರ್ಕಿಸುವ ಯೋಜನೆ ಇದಾಗಿದ್ದು ಸುಮಾರು 10 ಸಾವಿರ ಕೋಟಿ ವೆಚ್ಚದಲ್ಲಿ 23.50 ಕಿ.ಮೀ. ದೂರದ ‘ಸುರಂಗ ಹೆದ್ದಾರಿ’ ರಚನೆಯಾಗಲಿದೆ. ಆದರೆ ಈ ಮಾರ್ಗದಲ್ಲಿ ಸುರಂಗ ನಿರ್ಮಾಣವಾಗುವುದು ಕೇವಲ 5.50 ಕಿ.ಮೀ. ಮಾತ್ರ. ಜೊತೆಗೆ 100 ಮೀ. ಎತ್ತರಕ್ಕೆ 10ಕ್ಕೂ ಅಧಿಕ ಸೇತುವೆಗಳು ನಿರ್ಮಾಣಗೊಳ್ಳಲಿವೆ. ಕಾಮಗಾರಿ ಪೂರ್ಣಗೊಂಡರೆ ಕೇವಲ ಐದು ಗಂಟೆ ಅವಧಿಯಲ್ಲಿ ಬೆಂಗಳೂರು-ಮಂಗಳೂರು ಹಾದಿ ಕ್ರಮಿಸಲು ಸಾಧ್ಯವಾಗಲಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ವಿರೋಧ ಯಾಕೆ?: 

ಅತೀ ಸೂಕ್ಷ್ಮಪ್ರದೇಶವಾಗಿರುವ ಪಶ್ಚಿಮ ಘಟ್ಟದ ಈ ಭಾಗದಲ್ಲಿ ಈಗಾಗಲೇ ಹೆದ್ದಾರಿ ಮತ್ತು ರೈಲು ಹಳಿಗಳಿವೆ. ಇದಕ್ಕೆ ಸಮಾನಾಂತರವಾಗಿ ಸುರಂಗ ನಿರ್ಮಿಸಿದಲ್ಲಿ ಮತ್ತೆ ಶಿರಾಡಿ ಘಾಟ್‌ನಲ್ಲಿ ಭೂಕುಸಿತದ ಭೀತಿ ಎದುರಾಗುವ ಸಾಧ್ಯತೆ ಇದೆ. ಇಲ್ಲಿ ಎತ್ತಿನ ಹೊಳೆ ಯೋಜನೆಯಡಿ 7 ಡ್ಯಾಂ ಮತ್ತು ಕೆಂಪು ಹೊಳೆ ಜಲವಿದ್ಯುತ್‌ ಯೋಜನೆಯಡಿ ನಾಲ್ಕಕ್ಕೂ ಅಧಿಕ ಡ್ಯಾಂ ಕಟ್ಟಲಾಗಿದ್ದು, ಈ ಸುರಂಗ ಹೆದ್ದಾರಿ ಕಾಮಗಾರಿಯಿಂದ ಇವುಗಳಿಗೆ ಕಂಟಕವಾಗುವ ಸಾಧ್ಯತೆ ಇದೆ. ಸಾವಿರಾರು ಮರಗಳೂ ಹನನವಾಗುವ ಭೀತಿ ಇದೆ ಎನ್ನುತ್ತಾರೆ ಪರಿಸರವಾದಿಗಳು.

ಪಶ್ಚಿಮಘಟ್ಟಸೂಕ್ಷ್ಮ : ಕೇಂದ್ರ ನಿರ್ಧಾರದಿಂದ ರಾಜ್ಯದ ಜನಜೀವನಕ್ಕೆ ಪರಿಣಾಮ?

ಪರ್ಯಾಯವೇನು?: 

ಕೋಟಿಗಟ್ಟಲೆ ಮೊತ್ತ ವ್ಯಯಿಸಿ ಸುರಂಗ ಮಾರ್ಗ ನಿರ್ಮಿಸೋ ಬದಲು ಹಾಲಿ ಹೆದ್ದಾರಿ ಬದಿಯಲ್ಲಿ ಇನ್ನೊಂದು ಪಥ ರಸ್ತೆ ನಿರ್ಮಿಸಬಹುದು. ಅದಕ್ಕೆ ಹೆಚ್ಚಿನ ಮೊತ್ತವನ್ನೂ ವ್ಯಯಿಸಬೇಕೆಂದಿಲ್ಲ. ಇದರಿಂದ ಪರಿಸರ ನಾಶವೂ ತಪ್ಪುತ್ತದೆ, ಆರ್ಥಿಕ ಹೊರೆಯೂ ಕಡಿಮೆಯಾಗುತ್ತದೆ ಎಂಬುದು ಮಲೆನಾಡು ಹಿತರಕ್ಷಣಾ ಹೋರಾಟ ವೇದಿಕೆ ಮುಖಂಡ ಕಿಶೋರ್‌ ಶಿರಾಡಿ ಅಭಿಪ್ರಾಯವಾಗಿದೆ. 

ಪಶ್ಚಿಮ ಘಟ್ಟದಲ್ಲಿ ಸುರಂಗ ಕೊರೆದು ಹೆದ್ದಾರಿ ನಿರ್ಮಿಸುವ ಮೂಲಕ ಮತ್ತೆ ಪರಿಸರಕ್ಕೆ ಹಾನಿ ಎಸಗಲಾಗುತ್ತಿದೆ. ಧಾರಣಾ ಸಾಮರ್ಥ್ಯ ಅಧ್ಯಯನ ನಡೆಸದೆ ಸುರಂಗ ಮಾರ್ಗ ನಿರ್ಮಿಸುವುದು ಸರಿಯಲ್ಲ ಎಂದು ಸಹ್ಯಾದ್ರಿ ಸಂಚಯ, ಪರಿಸರ ಸಂಘಟನೆಯ ಸಂಚಾಲಕ ದಿನೇಶ್‌ ಹೊಳ್ಳ ತಿಳಿಸಿದ್ದಾರೆ.