Chikkamagaluru: ಸ್ಮಶಾನದ ಜಾಗಕ್ಕಾಗಿ ದಲಿತರ ಅನಿರ್ದಿಷ್ಟಾವಧಿ ಪ್ರತಿಭಟನೆ
ದಲಿತರಿಗೆ ಸ್ಮಶಾನ ಜಾಗ ಗುರುತಿಸಿ ಮಂಜೂರುಗೊಳಿಸುವುದು ಹಾಗೂ ಸಮಸ್ಯೆಗೆ ಸ್ಪಂದಿಸದ ಅಜ್ಜಂಪುರ ತಹಸೀಲ್ದಾರ್, ಆರ್‌ಐ ಅವರನ್ನು ಅಮಾನತುಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೊಲ್ಲಾಪುರ ಎ.ಕೆ. ಕಾಲೋನಿ ನಿವಾಸಿಗಳು ಅಜ್ಜಂಪುರ ಪಟ್ಟಣದ ತಾಲೂಕು ಕಚೇರಿ ಬಳಿ ಪ್ರತಿಭಟನೆ ನಡೆಸಿದರು.
ಚಿಕ್ಕಮಗಳೂರು (ನ.18): ದಲಿತರಿಗೆ ಸ್ಮಶಾನದ ಜಾಗ ಗುರುತು ಮಾಡದ ಹಿನ್ನೆಲೆ ದಲಿತ ಕುಟುಂಬಗಳು ತಾಲೂಕು ಕಚೇರಿ ಮುಂಭಾಗ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಮುಂದಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನಲ್ಲಿ ನಡೆದಿದೆ. ಅಜ್ಜಂಪುರ ತಾಲೂಕಿನ ಸೊಲ್ಲಾಪುರ ಸಮೀಪದ ಎ.ಕೆ.ಕಾಲೋನಿಯ ದಲಿತರಿಗೆ ಈವರೆಗೂ ಸ್ಮಶಾನದ ಜಾಗ ನಿಗದಿ ಮಾಡಿರಲಿಲ್ಲ. ಗ್ರಾಮದಲ್ಲಿ ಯಾರಾದರೂ ಸಾವನ್ನಪ್ಪಿದರೆ ಅಂತ್ಯಸಂಸ್ಕಾರಕ್ಕೂ ತೀವ್ರ ತೊಂದರೆಯಾಗುತ್ತಿತ್ತು. ಹಾಗಾಗಿ, ಎ.ಕೆ.ಕಾಲೋನಿಯ ದಲಿತ ಕುಟುಂಬಗಳು ಅಜ್ಜಂಪುರ ತಾಲೂಕು ಕಚೇರಿ ಮುಂದೆ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಪಟ್ಟಣದ ತಾಲೂಕು ಕಛೇರಿ ಬಳಿ ಸೊಲ್ಲಾಪುರ ದಲಿತ ಜನಾಂಗಕ್ಕೆ ಸ್ಮಶಾನ ಜಾಗ ಮಂಜೂರು ಸೇರಿ, ತಹಸೀಲ್ದಾರ್ ರಾಜಸ್ವ ನಿರೀಕ್ಷಕರನ್ನು ಅಮಾನತುಪಡಿಸುವಂತೆ ಹಾಗೂ ಇನ್ನಿತರ ಬೇಡಿಕೆಗಳನ್ನು ಇಡೇರಿಸುವಂತೆ ಅನಿರ್ದಿಷ್ಟಾವಧಿ ಮುಷ್ಕರ ಮಾಡಲಾಗುತ್ತಿದೆ.
ಅಧಿಕಾರಿಗಳಿಗೆ ಮನವಿ ಸಲ್ಲಿದ್ದರೂ ಪ್ರಯೋಜನವಿಲ್ಲ
ಹತ್ತಾರು ವರ್ಷಗಳಿಂದ ದಲಿತರಿಗೆ ಸರ್ಕಾರ ಸ್ಮಶಾನದ ಜಾಗ ಗುರುತು ಮಾಡಿಕೊಟ್ಟಿಲ್ಲ. ಹಲವು ವರ್ಷಗಳಿಂದ ಶಾಸಕರು ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ದಲಿತ ಕುಟುಂಬಗಳು ಅಜ್ಜಂಪುರ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ಕೂತು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಪ್ರತಿಭಟನೆಗೆ ಕೂತಿರೋ ದಲಿತ ಕುಟುಂಬಗಳು ಸರ್ಕಾರ ಸ್ಮಶಾನದ ಜಾಗ ನೀಡುವವರೆಗೂ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ.
ಈ ಹಿಂದೆಯೇ ಎರಡು ಕಡೆ ಜಾಗ ಗುರುತು ಮಾಡಿದ್ದರು. ಆದರೆ, ಯಾವ ಅಧಿಕಾರಿಯೂ ಸ್ಥಳ ಪರಿಶೀಲನೆ ಮಾಡದೆ ಕಾಲ ಹರಣ ಮಾಡಿದ್ದಾರೆ. ದಲಿತ ಸಮುದಾಯದ ಯಾರಾದರೂ ಸಾವಿಗೀಡಾದರೆ ಮಣ್ಣು ಮಾಡೋದೆ ದೊಡ್ಡ ಸಮಸ್ಯೆಯಾಗಿದೆ. ಕೂಡಲೇ ಅಧಿಕಾರಿಗಳು ಸ್ಮಶಾನದ ಜಾಗ ಮಂಜೂರು ಮಾಡದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ದಾರೆ.
ಇಂದು ಪ್ರತಿಭಟನಾ ನಿರತರನ್ನು ಉಪವಿಭಾಗಾಧಿಕಾರಿ ಭೇಟಿಯಾಗಿದ್ದು, ನ.30 ರೊಳಗೆ ಸ್ಮಶಾನ ಜಾಗ ಗುರುತಿಸಿ ಜಿಲ್ಲಾಧಿಕಾರಿಯವರಿಗೆ ಕಳುಹಿಸುತ್ತೇವೆ. ಪ್ರತಿಭಟನೆ ಅಂತ್ಯಗೊಳಿಸಿ ಎಂದು ಮನವಿ ಮಾಡಿದ್ದಾರೆ. ಅವರ ಮಾತನ್ನು ಧಿಕ್ಕರಿಸಿದ ಪ್ರತಿಭಟನಾಕಾರರು, ಪ್ರತಿಭಟನೆ ನಿಲ್ಲಿಸುತ್ತೇವೆ ಆದರೆ ಸೌತನಹಳ್ಳಿ ಸ.ನಂ 7 ರಲ್ಲಿ ಚೆಕ್ ಡ್ಯಾಂ, ಕೆರೆ ನಿರ್ಮಾಣವನ್ನು ಸ್ಥಗಿತಗೊಳಿಸಬೇಕೆಂದು ಹಠ ಹಿಡಿದರು.
ನವಲಗುಂದ ತಾಲೂಕಿನ ಬ್ಯಾಲಾಳ ಗ್ರಾಮದಲ್ಲಿ ಸ್ಮಶಾನ ಭೂಮಿ ನೀಡುವಂತೆ ಶವವಿಟ್ಟು ಪ್ರತಿಭಟನೆ
ಕಂದಾಯ ಇಲಾಖೆಯವರಿಗೆ ಕೆರೆ, ಚೆಕ್ ಡ್ಯಾಂ ನಿರ್ಮಾಣದ ಬಗ್ಗೆ ಮಾಹಿತಿಯೇ ಇಲ್ಲದ್ದರಿಂದ ಎ.ಸಿ ಆಗಲಿ ಅಥವಾ ತಹಸೀಲ್ದಾರ್ ಆಗಲಿ ಪ್ರತಿಕ್ರಿಯಿಸಲಿಲ್ಲ. ಪ್ರತಿಭಟನಾಕಾರರು, ಸೌತನಹಳ್ಳಿ ಗೋಮಾಳದಲ್ಲಿ ಸ್ಥಳ ಪರಿಶೀಲನೆ ಮಾಡಲು ಹೋಗೋಣ ಬನ್ನಿ ಎಂದ ಕೂಡಲೆ ನಾವು ಬೇರೆ ಕೆಲಸದ ನಿಮಿತ್ತ ಹೋಗಬೇಕಿದೆ ಎಂದು ಅಧಿಕಾರಿಗಳು ಅಲ್ಲಿಂದ ಕಾಲ್ಕಿತ್ತರು.
ಬ್ಯಾಲಾಳ ಗ್ರಾಮದಲ್ಲಿ ಇಲ್ಲ ಸ್ಮಶಾನ: ಅಂತ್ಯಕ್ರಿಯೆಗೆ ಪರದಾಟ
ನಮಗೆ ಸ್ಮಶಾನ ಮಂಜೂರಾತಿ ಸೇರಿದದಂತೆ ಇತರೆ ಬೇಡಿಕೆಗಳನ್ನು ಸ್ಥಳದಲ್ಲೇ ಈಡೇರಿಸಲು ಜಿಲ್ಲಾಧಿಕಾರಿ ಬರಬೇಕು. ತಪಿತಸ್ಥ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆಯ ಅನುಮತಿ ಪಡೆಯದೆ ಕಾಮಗಾರಿ ಮಾಡುತ್ತಿರುವ ಇಲಾಖೆ ಎಂಜಿನಿಯರ್, ಗುತ್ತಿಗೆದಾರರ ವಿರುದ್ಧ ಕೇಸು ದಾಖಲಿಸಬೇಕೆಂದು ಪಟ್ಟು ಹಿಡಿದು ಪ್ರತಿಭಟನೆಯನ್ನು ಮುಂದುವರೆಸಿದರು.