Liquor ಮಾರಾಟದಲ್ಲಿ ದ.ಕ‌ ಟಾಪರ್ ಅಲ್ಲ: ಮಂಗಳೂರು ಅಬಕಾರಿ ಡಿಸಿ ಸ್ಪಷ್ಟನೆ!

ಮದ್ಯ ಮಾರಾಟದಲ್ಲಿ ದ.ಕ ಜಿಲ್ಲೆ ಇಡೀ ರಾಜ್ಯಕ್ಕೆ ಟಾಪರ್ ಎಂಬ ಸುದ್ದಿ ಭಾರೀ ಸಂಚಲನ ಮೂಡಿಸಿದ್ದು,  ಇದೊಂದು ಸುಳ್ಳು ಸುದ್ದಿ ಎಂಬುದು ಈಗ ಗೊತ್ತಾಗಿದೆ.

Dakshina kannada topper in liquor sales news false gow

ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್

ಮಂಗಳೂರು (ಜು.15): ಮದ್ಯ ಮಾರಾಟದಲ್ಲಿ ದ.ಕ ಜಿಲ್ಲೆ ಇಡೀ ರಾಜ್ಯಕ್ಕೆ ಟಾಪರ್ ಎಂಬ ಸುದ್ದಿ ಭಾರೀ ಸಂಚಲನ ಮೂಡಿಸಿದ್ದು, ಸಾಮಾಜಿಕ ತಾಣಗಳಲ್ಲೂ ಭಾರೀ ವೈರಲ್ ಆಗಿತ್ತು. ಆದರೆ ಈ ಸುದ್ದಿಗೆ ಸಂಬಂಧಿಸಿದಂತೆ ಮಂಗಳೂರು ಅಬಕಾರಿ ಡಿಸಿ ಬಿಂದುಶ್ರೀ ಸ್ಪಷ್ಟನೆ ನೀಡಿದ್ದು, ಇದೊಂದು ಸುಳ್ಳು ಸುದ್ದಿ ಎಂದಿದ್ದಾರೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಈ ಬಗ್ಗೆ ಸ್ಪಷ್ಟನೆ ‌ನೀಡಿದ ಮಂಗಳೂರು ಅಬಕಾರಿ ಡಿಸಿ ಬಿಂದುಶ್ರೀ, ಈ ವರದಿಯನ್ನು ನಾವು ಯಾರಿಗೂ ಕೊಟ್ಟಿಲ್ಲ. ‌ರಾಜ್ಯದಲ್ಲಿ ದ‌.ಕ ಜಿಲ್ಲೆಯಲ್ಲಿ ಅತೀ ಹೆಚ್ಚು ಮದ್ಯ ಮಾರಾಟ ಎನ್ನುವುದು ಸರಿಯಲ್ಲ. ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ನಮಗಿಂತ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಮಾರಾಟ ಆಗ್ತಿದೆ. ಈ ಬಗ್ಗೆ ಯಾವುದೇ ವರದಿಯನ್ನು ನಮ್ಮ ಇಲಾಖೆ ವತಿಯಿಂದ ಕೊಟ್ಟಿಲ್ಲ. ಲೀಟರ್ ಲೆಕ್ಕಾಚಾರದಲ್ಲಿ ಹೇಳಿದರೂ ನಮಗಿಂತ ಬೇರೆ ಜಿಲ್ಲೆಗಳಲ್ಲಿ ಮದ್ಯ ಮಾರಾಟ ಹೆಚ್ಚಾಗಿದೆ. ಆದರೆ ಕೋವಿಡ್ ಬಳಿಕ ನಮ್ಮ ‌ಜಿಲ್ಲೆಯಲ್ಲಿ ಸ್ವಲ್ಪ ಮದ್ಯ ಮಾರಾಟ ಹೆಚ್ಚಾಗಿರುವುದು ನಿಜ. ಹಾಗಂತ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಅದು ಕಡಿಮೆ. ಹೀಗಾಗಿ ದ‌.ಕ ಜಿಲ್ಲೆ ಮದ್ಯ ಮಾರಾಟದಲ್ಲಿ ಟಾಪರ್ ಎಂಬ ಸುದ್ದಿ ಸುಳ್ಳು ಅಂತ ಸ್ಪಷ್ಟನೆ ‌ಕೊಟ್ಟಿದ್ದಾರೆ. 

ಅಲ್ಲದೇ ಕಳೆದ ವರ್ಷದ ಅಬಕಾರಿ ಆದಾಯ 25 ರಿಂದ 27 ಸಾವಿರ ಕೋಟಿ ರೂಪಾಯಿ ಆಗಿದ್ದು, ಅದರಲ್ಲಿ ದ‌.ಕ ಜಿಲ್ಲೆಯ ಆದಾಯ ಕೇವಲ 370 ಕೋಟಿ ರೂ. ಮಾತ್ರ. ಹೀಗಾಗಿ ದ.ಕ ಜಿಲ್ಲೆ ಟಾಪರ್ ಆಗಿದ್ದಲ್ಲಿ ಆದಾಯದಲ್ಲೂ ಹೆಚ್ಚಳ ಆಗಿರಬೇಕಿತ್ತು ಎಂದಿದ್ದಾರೆ. ಕಳೆದ ವರ್ಷ 521 ಇದ್ದ ಮದ್ಯದಂಗಡಿಗಳ ಸಂಖ್ಯೆ ಸದ್ಯ ಜಿಲ್ಲೆಯಲ್ಲಿ 526ಕ್ಕೆ ಏರಿಕೆಯಾಗಿದೆ ಎಂದಿದ್ದಾರೆ. 

'ನಾವು ಯಾವುದೇ ಅಧಿಕೃತ ವರದಿ ಕೊಟ್ಟಿಲ್ಲ':  ಇನ್ನು ದಕ್ಷಿಣ ಕನ್ನಡ ಜಿಲ್ಲೆ ಮದ್ಯ ಮಾರಾಟದಲ್ಲಿ ಅಗ್ರಸ್ಥಾನ ಎಂಬ ಬಗ್ಗೆ ನಾವು ಯಾರಿಗೂ ಯಾವುದೇ ಅಧಿಕೃತ ವರದಿ ಕೊಟ್ಟಿಲ್ಲ ಎಂದು ಮಂಗಳೂರು ಅಬಕಾರಿ ಡಿಸಿ ಬಿಂದುಶ್ರೀ ಹೇಳಿದ್ದಾರೆ. ಅಸಲಿಗೆ ಕೆಎಸ್ ಬಿಸಿಎಲ್ ಮೂಲಕ ಈ ವರ್ಷ ಬರೋಬ್ಬರಿ 25 ಲಕ್ಷ ಬಾಟಲ್ ಮದ್ಯ ಮಾರಾಟವಾಗಿದ್ದು ನಿಜ. ಅದರ ಲೆಕ್ಕಾಚಾರ ಪ್ರಕಾರ ಲೀಟರ್ ಗೆ ಹೋಲಿಸಿದರೆ ಕೋಟಿ ದಾಟಬಹುದು. ಆದರೆ ನಮಗಿಂತಲೂ ಹೆಚ್ಚು ಲೀಟರ್ ಗಳಲ್ಲಿ ಬೇರೆ ಜಿಲ್ಲೆಗಳಲ್ಲಿ ಮದ್ಯ ಮಾರಾಟವಾಗುತ್ತದೆ. ಆದರೆ ಎಲ್ಲೂ ಬೇರೆ ಜಿಲ್ಲೆಗಳ ಮದ್ಯ ಮಾರಾಟದ ವರದಿ ಇಲ್ಲ. ಕೇವಲ ದ‌.ಕ ಜಿಲ್ಲೆಯ ಮದ್ಯ ಮಾರಾಟದ ಲೆಕ್ಕಾಚಾರ ಇಟ್ಟುಕೊಂಡು ಅಗ್ರಸ್ಥಾನ ಎನ್ನಲು ಬರಲ್ಲ. ಹಾಗೇನಿದ್ದರೂ ರಾಜ್ಯ ಅಬಕಾರಿ ಇಲಾಖೆ ಮಾಹಿತಿ ನೀಡುತ್ತದೆ. ಇನ್ನು ಕೆಎಸ್ ಬಿಸಿಎಲ್  ಮೂಲಕ ನಾವು ಜಿಲ್ಲೆಯ ಮದ್ಯದಂಗಡಿಗಳಿಗೆ ಮದ್ಯ ಮಾರಾಟ ಮಾಡಿದ್ದೇವೆ ನಿಜ. ಆದರೆ ಅವೆಲ್ಲವೂ ನಮ್ಮ ಮಾರಾಟದ ಲೆಕ್ಕವೇ ಹೊರತು ಗ್ರಾಹಕರಿಗೆ ತಲುಪಿದ ಲೆಕ್ಕವಲ್ಲ ಎಂದಿದ್ದಾರೆ. ನಿನ್ನೆ ದ.ಕ‌ ಮದ್ಯ ಮಾರಾಟದಲ್ಲಿ ಟಾಪರ್ ಎನ್ನುವ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಭಾರೀ ಟ್ರೋಲ್ ಆಗಿತ್ರು.

Latest Videos
Follow Us:
Download App:
  • android
  • ios