ಸುಳ್ಯದ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ರಸ್ತೆಯು ಎರಡು ದಿನಗಳಲ್ಲಿ ಎರಡು ಬಾರಿ ಪ್ರತ್ಯೇಕವಾಗಿ ಉದ್ಘಾಟನೆಗೊಂಡಿದೆ. ಶಾಸಕಿ ಭಾಗೀರಥಿ ಮುರುಳ್ಯ ನೇತೃತ್ವದಲ್ಲಿ ಒಂದು ದಿನ ನಡೆದರೆ, ಮರುದಿನ ದೇವಸ್ಥಾನ ಸಮಿತಿ ಅಧ್ಯಕ್ಷರ ನೇತೃತ್ವದಲ್ಲಿ ಮತ್ತೊಂದು ಉದ್ಘಾಟನೆ ನಡೆಯಿತು, ಇದು ಸ್ಥಳೀಯವಾಗಿ ಚರ್ಚೆಗೆ ಕಾರಣವಾಗಿದೆ.

ಮಂಗಳೂರು: ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಶಿಫಾರಸಿನ ಮೇರೆಗೆ ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಮಂಜೂರಾಗಿದ್ದ ಅನುದಾನದ 20 ಲಕ್ಷ ರು. ವೆಚ್ಚ ಹಾಗೂ ಸ್ಥಳೀಯ ನಗರ ಪಂಚಾಯಿತಿ ಸದಸ್ಯರ ನಿಧಿಯಿಂದ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ರಸ್ತೆ ಕಾಂಕ್ರಿಟೀಕರಣ ಪೂರ್ಣಗೊಂಡಿದೆ. ಆದರೆ, ಎರಡು ದಿನ ಎರಡು ಪ್ರತ್ಯೇಕ ಕಾರ್ಯಕ್ರಮಗಳ ಮೂಲಕ ಉದ್ಘಾಟನೆ ನಡೆದು ಸುದ್ದಿಯಾಗಿದೆ. ಭಾನುವಾರ ಸಂಜೆ ಶಾಸಕರ ನೇತೃತ್ವದಲ್ಲಿ ಉದ್ಘಾಟನೆ ನಡೆದರೆ, ಸೋಮವಾರ ಕಾಯರ್ತೋಡಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ. ವೆಂಕಪ್ಪ ಗೌಡರ ನೇತೃತ್ವದಲ್ಲಿ ನಡೆಯಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸೋಮವಾರ ಬೆಳಗ್ಗೆ 10.30ಕ್ಕೆ ಶಾಸಕಿ ಭಾಗೀರಥಿ ಮುರುಳ್ಯ ಉಪಸ್ಥಿತಿಯಲ್ಲಿ ಕಾಂಕ್ರಿಟೀಕರಣ ಉದ್ಘಾಟನೆ ನಡೆಯುವುದೆಂದು ಎಲ್ಲರೂ ಇದ್ದು ನಿರ್ಧರಿಸಲಾಗಿ ಆಮಂತ್ರಣ ಹಂಚಲಾಗಿತ್ತು.

ಆದರೆ ಭಾನುವಾರ ಬೆಳಗ್ಗೆ ದೇಗುಲದ ವಾಟ್ಸಾಪ್ ಗ್ರೂಪಿನಲ್ಲಿ ರಸ್ತೆಯ ಉದ್ಘಾಟನಾ ಕಾರ್ಯಕ್ರಮವು ದಿನಾಂಕ 15.6.26ರಂದು 10.30ಕ್ಕೆ ನಿಗದಿಯಾಗಿದ್ದು, ಶಾಸಕರಿಗೆ ತುರ್ತು ಕಾರ್ಯಕ್ರಮ ನಿಗದಿಯಾಗಿರುವುದರಿಂದ ದಿನಾಂಕ. 14.6.2026 ರ ಭಾನುವಾರ ಸಂಜೆ 4ಕ್ಕೆ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಪ್ರಕಟಣೆ ಹೊರಬಿತ್ತು. ಇದಾದ ಸ್ವಲ್ಪ ಹೊತ್ತಿನಲ್ಲಿ ಪತ್ರಕರ್ತರನ್ನು ಸಂಪರ್ಕಿಸಿದ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ. ವೆಂಕಪ್ಪ ಗೌಡರು, ಕಾರ್ಯಕ್ರಮವನ್ನು ಶಾಸಕರ ಗಮನಕ್ಕೆ ತಂದು ಜೂ.15ರಂದು ಉದ್ಘಾಟನೆ ಮಾಡುವುದೆಂದು ತೀರ್ಮಾನಿಸಲಾಗಿತ್ತು. ಕಾರ್ಯಕ್ರಮವು ನಿಗದಿಯಂತೆ ನಡೆಯಲಿದೆ ಎಂದು ತಿಳಿಸಿದರು.

ಶಾಸಕರಿಂದ ಉದ್ಘಾಟನೆ

ಭಾನುವಾರ ಸಂಜೆ ಉದ್ಘಾಟನೆ ನೆರವೇರಿಸಿದ ಭಾಗೀರಥಿ ಮುರುಳ್ಯ ಅವರು, ಸುಳ್ಯ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮ ವಹಿಸಿ ಕೆಲಸ ಮಾಡಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಪ್ರಧಾನ ಕಾರ್ಯದರ್ಶಿ ವಿನಯ ಕುಮಾರ್ ಕಂದಡ್ಕ, ನಗರ ಪಂಚಾಯಿತಿ ನಿಕಟಪೂರ್ವ ಸದಸ್ಯ ಪ್ರವಿತಾ ಪ್ರಶಾಂತ್, ಮಾಜಿ ಅಧ್ಯಕ್ಷ ಎನ್.ಎ. ರಾಮಚಂದ್ರ, ಕಾಯರ್ತೋಡಿ ದೇವಸ್ಥಾನದ ನಿಕಟಪೂರ್ವ ಆಡಳಿತ ಸಮಿತಿ ಅಧ್ಯಕ್ಷ ಪಿ.ಕೆ. ಉಮೇಶ್, ಬ್ರಹ್ಮಕಲಶ ಸಮಿತಿ ಅಧ್ಯಕ್ಷರಾಗಿದ್ದ ಕೃಷ್ಣ ಕಾಮತ್, ರಸ್ತೆಗೆ ಈ ಹಿಂದೆ ಸ್ಥಳ ದಾನ ಮಾಡಿದ ದೆಂಗೋಡಿ ಕುಟುಂಬಸ್ಥರು ಮತ್ತು ಅಳಿಕೆ ಮಜಲು ಕುಟುಂಬಸ್ಥರು ಸೇರಿದಂತೆ ನೂರಾರು ಮಂದಿ ಸೇರಿದ್ದರು.

ಅಭಿವೃದ್ಧಿಯಲ್ಲಿ ಕಾಂಪಿಟೇಶನ್ ಬೇಕು, ಕಾರ್ಯಕ್ರಮದಲ್ಲಿ ಅಲ್ಲ

ಸೋಮವಾರ ಬೆಳಗ್ಗೆ ಎಂ. ವೆಂಕಪ್ಪ ಗೌಡರ ನೇತೃತ್ವದಲ್ಲಿ ನಗರ ಪಂಚಾಯಿತಿ ಆಡಳಿತಾಧಿಕಾರಿ, ತಹಸೀಲ್ದಾರ್ ಮಂಜುಳಾ, ಹಿರಿಯರಾದ ಉದ್ಯಮಿ ಕೃಷ್ಣ ಕಾಮತ್ ಅರಂಬೂರು, ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ, ಸೂಡಾ ಅಧ್ಯಕ್ಷ ಕೆ.ಎಂ. ಮುಸ್ತಫಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಮಾಜಿ ಅಧ್ಯಕ್ಷ ಪಿ.ಸಿ. ಜಯರಾಮ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಸುಳ್ಯ ವಿಧಾನಸಭಾ ಕ್ಷೇತ್ರದ ಇಂಟೆಕ್ ಕಾಂಗ್ರೆಸ್ ಅಧ್ಯಕ್ಷ ಶಾಫಿ ಕುತ್ತಮೊಟ್ಟೆ, ಬ್ಲಾಕ್ ಕಾಂಗ್ರೆಸ್ ಮಾಜಿ ಪ್ರಧಾನ ಕಾರ್ಯದರ್ಶಿ ಪಿ.ಎಸ್. ಗಂಗಾಧರ್, ನ.ಪಂ. ನಾಮನಿರ್ದೇಶಿತ ಸದಸ್ಯ ರಾಜು ಪಂಡಿತ್, ಶರೀಫ್ ಕಂಠಿ, ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಗೀತಾ ಕೋಲ್ಚಾರ್ ಮೊದಲಾದವರಿದ್ದರು.

ಈ ವೇಳೆ ಮಾತನಾಡಿದ ಎಂ. ವೆಂಕಪ್ಪ ಗೌಡರು, ಸಿದ್ಧರಾಮಯ್ಯರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಕ್ಷೇತ್ರದ ಶಾಸಕರಾದ ಭಾಗೀರಥಿಯವರ ಶಿಫಾರಸಿನ ಮೇರೆಗೆ 25 ಕೋಟಿ ರು. ಬಿಡುಗಡೆಗೊಂಡಿದ್ದು, ಆ ಅನುದಾನದ 20 ಲಕ್ಷ ರು. ವೆಚ್ಚದಲ್ಲಿ ಹಾಗೂ ಸ್ಥಳೀಯ ವಾರ್ಡ್ ಸದಸ್ಯರ ಪಂಚಾಯಿತಿ ಅನುದಾನ 4 ಲಕ್ಷ ರು. ಹೀಗೆ 24 ಲಕ್ಷ ರು. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಯಾಗಿದೆ. 

ಈ ರಸ್ತೆಗೆ ಪಿ.ಎ. ಮಹಮ್ಮದ್‌ ಅವರು 3 ಫೀಟ್ ಜಾಗ ಹಿಂದೆಯೇ ನೀಡಿದ್ದು, ಅದು ಈಗ ಬಳಕೆಯಾಗಿದೆ. ಇಲ್ಲಿದ್ದ ವಿದ್ಯುತ್ ಕಂಬ ಸ್ಥಳಾಂತರಕ್ಕೆ ಹಿಂದಿನ ವ್ಯವಸ್ಥಾಪನಾ ಸಮಿತಿ ಎಸ್ಟಿಮೇಟ್ ರಚಿಸಿತು. ಆದರೆ ಮಹಾವಿಷ್ಣು ನಮಗೆ ಶಕ್ತಿ ನೀಡಿದ್ದು ಅದನ್ನು ಯಾವ ಎಷ್ಟಿಮೇಟು ಇಲ್ಲದೆ ಲಕ್ಷ ಹಣವೂ ಇಲ್ಲದೆ ಬದಿಗೆ ಹಾಕಿಸುವ ಕೆಲಸ ಮಾಡಿದ್ದೇವೆ. ಭಕ್ತರ ಅನುಕೂಲಕ್ಕಾಗಿ ಮೂಲಭೂತ ಕೆಲಸಗಳು ಆಗುತ್ತಿದ್ದು, ಅದರ ಭಾಗವಾಗಿ ದೇವಸ್ಥಾನದ ಅನುದಾನದಲ್ಲಿ ದ್ವಾರವನ್ನು ಮಾಡಲಾಗಿದ್ದು, ಅದರ ಲೋಕಾರ್ಪಣೆಯೂ ನಡೆದಿದೆ. ಅಭಿವೃದ್ಧಿ ವಿಚಾರದಲ್ಲಿ ಕಾಂಪಿಟೇಶನ್ ಬೇಕು ಹೊರತು, ಕಾರ್ಯಕ್ರಮ ಮಾಡುವುದರಲ್ಲಿ ಅಲ್ಲ ಎಂದು ಹೇಳಿದರು.

ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ ಮಾತನಾಡಿ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ವೆಂಕಪ್ಪ ಗೌಡರು ಶಾಸಕರೊಂದಿಗೆ ಮಾತನಾಡಿ, ಬಳಿಕ ಎಲ್ಲರಿಗೂ ಹೇಳಿ ಇವತ್ತು ರಸ್ತೆ ಉದ್ಘಾಟನೆ ಎಂದು ನಿಗದಿಯಾಗಿತ್ತು. ಆದರೆ ಯಾಕೆ ನಿನ್ನೆ ಸಂಜೆಯೇ ಶಾಸಕರು ಉದ್ಘಾಟಿಸಿದರೆಂದು ಗೊತ್ತಾಗುತ್ತಿಲ್ಲ. ಬೇಸರ ಎಂದರೆ ಧರ್ಮರಕ್ಷಕರು ಎಂದು ಹೇಳುವವರು ದೇವಸ್ಥಾನದಲ್ಲಿ ರಾಜಕೀಯ ಮಾಡಬಾರದು ಎಂದರು.