ಲಾಕ್‌ಡೌನ್ ವೇಳೆ ರಸ್ತೆಗೆ ಇಳಿದವರ ಮೇಲೆಲ್ಲಾ ಲಾಠಿ ಚಾರ್ಜ್ ಲಾಠಿ ಬೀಸದೆ ಮಾದರಿಯಾದ ದಕ್ಷಿಣ ಕನ್ನಡ ಪೊಲೀಸರು ಪೊಲೀಸರ ಕರ್ತವ್ಯ ಪ್ರಜ್ಞೆ ಹಾಗೂ ಪರಿಸ್ಥಿತಿ ನಿಭಾಯಿಸುವ ರೀತಿಗೆ ನಾಗರಿಕರ ವ್ಯಾಪಕ ಪ್ರಶಂಸೆ

ವರದಿ : ಆತ್ಮಭೂಷಣ್‌

 ಮಂಗಳೂರು (ಮೇ.12):  ಕಳೆದ ಕೆಲವು ದಿನಗಳಿಂದ ಲಾಕ್‌ಡೌನ್‌ ಸಡಿಲ ಅವಧಿಯಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ರಸ್ತೆಗೆ ಇಳಿದವರ ಮೇಲೆಲ್ಲಾ ಲಾಠಿ ಬೀಸುತ್ತಿರುವುದೇ ವರದಿಯಾಗುತ್ತಿರುವ ಈ ದಿನಗಳಲ್ಲಿ ದ.ಕ. ಪೊಲೀಸರು ಲಾಠಿ ಬೀಸದೆ ರಾಜ್ಯಕ್ಕೇ ಮಾದರಿಯಾಗಿದ್ದಾರೆ. ಹಾಗೆಂದು ಇಲ್ಲಿನ ನಾಗರಿಕರು ಅನಗತ್ಯ ರಸ್ತೆಗೆ ಬರುತ್ತಿಲ್ಲ, ಕಾನೂನು ಪಾಲಿಸುತ್ತಿದ್ದಾರೆ ಎಂದರ್ಥವಲ್ಲ. ಇಲ್ಲಿ ಯಾವೊಬ್ಬ ಪೊಲೀಸರೂ ನಾಗರಿಕರ ಮೇಲೆ ಲಾಠಿ ಎತ್ತಿಲ್ಲ, ಹೊಡೆದೂ ಇಲ್ಲ. ಅನಗತ್ಯವಾಗಿ ಪೇಟೆ ಪ್ರವೇಶಿಸಿದವರನ್ನು ಅರ್ಧದಲ್ಲೇ ತಡೆದು ವಾಪಸ್‌ ಕಳುಹಿಸುತ್ತಾರೆ, ಇಲ್ಲವೇ ವಾಹನ ವಶಪಡಿಸಿ, ದಂಡ ವಿಧಿಸುತ್ತಾರೆ. ಪೊಲೀಸರು ಈ ಕರ್ತವ್ಯ ಪ್ರಜ್ಞೆ ಹಾಗೂ ಪರಿಸ್ಥಿತಿ ನಿಭಾಯಿಸುವ ರೀತಿ ನಾಗರಿಕರ ವ್ಯಾಪಕ ಪ್ರಶಂಸೆಗೆ ಒಳಗಾಗಿದ್ದು, ಇದೀಗ ನಾಗರಿಕರೇ ಸ್ವಯಂ ಆಗಿ ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕುತ್ತಿದ್ದಾರೆ.

ಲಾಠಿಗೆ ಕೆಲಸವೇ ಇಲ್ಲ!:

ಪೊಲೀಸರ ಕೈಯಲ್ಲಿ ಲಾಠಿ ಇದ್ದರೆ ಅದು ಹೊಡೆಯುವುದಕ್ಕೆ ಮಾತ್ರ ಎಂದೇ ಹಲವರು ಭಾವಿಸಿದ್ದಿದೆ. ಆದರೆ ದ.ಕ. ಜಿಲ್ಲೆಯ ಮಟ್ಟಿಗೆ ಅದನ್ನು ಪೊಲೀಸರೇ ಸುಳ್ಳು ಮಾಡಿದ್ದಾರೆ. ಲಾಠಿ ಇದ್ದರೂ ಅದನ್ನು ನೋಡಿಯೇ ಕೆಲವು ಮಂದಿ ಪೇಟೆ ಕಡೆ ಮುಖಮಾಡದಿದ್ದರೆ, ಇನ್ನೂ ಕೆಲವರು ಪೇಟೆಗೆ ಅನಗತ್ಯ ಬಂದರೂ ಮರಳಿ ವಾಪಸ್‌ ಹೋಗುತ್ತಿದ್ದಾರೆ. ಅಷ್ಟರ ಮಟ್ಟಿಗೆ ಪೊಲೀಸರ ಪ್ರಯತ್ನಗಳು ಯಶಸ್ಸು ಕಾಣುತ್ತಿವೆ.

ರಸ್ತೆಗಿಳಿದು ಮೊಂಡಾಟವಾಡಿದ BMW ಸವಾರನಿಗೆ ಲೇಡಿ ಪೊಲೀಸ್ ಕೊಟ್ರು ಗೂಸಾ..! .

ಕರ್ಫ್ಯೂ ಸಡಿಲ ಅವಧಿಯಲ್ಲಿ ಸಾಕಷ್ಟುಮಂದಿ ರಸ್ತೆಗೆ ಇಳಿದಿದ್ದಾರೆ. ಕೆಲವು ದಿನ ಮಾರ್ಕೆಟ್‌ಗಳಲ್ಲಿ ಮುಗಿಬಿದ್ದಿದ್ದಾರೆ. ಆದರೂ ಪೊಲೀಸರು ತಾಳ್ಮೆ ಕಳೆದುಕೊಳ್ಳದೆ, ಅತ್ಯಂತ ಸಂಯಮದಿಂದ ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ. ಅನಗತ್ಯ ಪೇಟೆ ಪ್ರವೇಶಿಸಿದ ವಾಹನಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಉದ್ಧಟನತದಿಂದ ವರ್ತಿಸಿದವರ ವಿರುದ್ಧ ಕೇಸು ದಾಖಲಿಸಿದ್ದಾರೆ. ಮಾಸ್ಕ್‌ ಧರಿಸದೆ ನಿರ್ಲಕ್ಷ ತೋರಿಸಿದವರಿಗೆ ದಂಡ ವಿಧಿಸಿದ್ದಾರೆ. ಹೀಗೆ ಸಾಮ, ಭೇದ, ದಂಡ ಪ್ರಯೋಗ ಮಾಡುವ ಕ್ರಮ ಇದ್ದರೂ ಪೊಲೀಸರು ಮೊದಲ ಎರಡು ಪ್ರಯತ್ನವನ್ನು ಮಾತ್ರ ನಡೆಸುತ್ತಿದ್ದಾರೆ. ಸಾಧ್ಯವಾದಷ್ಟುಬುದ್ಧಿಮಾತು ಹೇಳಿ, ಇಲ್ಲವೇ ದಂಡ, ಕೇಸು ಹಾಕಿ ನಿಯಂತ್ರಿಸುತ್ತಿದ್ದಾರೆ.

ವಾಹನ ವಶವಾದರೆ ಕೋರ್ಟಲ್ಲೇ ದಂಡ ಪಾವತಿ

ಲಾಕ್‌ಡೌನ್‌ ವೇಳೆ ಅನಗತ್ಯ ವಾಹನ ರಸ್ತೆಗೆ ಬಂದರೆ, ಅಂತಹ ವಾಹನವನ್ನು ವಶಪಡಿಸುವ ಪೊಲೀಸರು ಎರಡು ಪ್ರತ್ಯೇಕ ಕಾಯ್ದೆ ಬಳಸಿ ಕೇಸು ದಾಖಲಿಸುತ್ತಾರೆ. ಸಾಂಕ್ರಾಮಿಕ ರೋಗ ತಡೆ ಕಾಯ್ದೆ ಹಾಗೂ ರಾಷ್ಟ್ರೀಯ ಪ್ರಾಕೃತಿಕ ವಿಕೋಪ ಕಾಯ್ದೆಯಡಿ ಕೇಸು ದಾಖಲಿಸಿ ವಾಹನ ವಶಕ್ಕೆ ತೆಗೆದುಕೊಳ್ಳುತ್ತಾರೆ. ಈ ಎರಡು ಕಾಯ್ದೆಯಡಿ ಕೇಸು ದಾಖಲಿಸಿದರೆ, ಪೊಲೀಸ್‌ ಠಾಣೆಯಲ್ಲಿ ದಂಡ ಪಾವತಿಸಿ ವಾಹನ ಬಿಡಿಸಿಕೊಳ್ಳುವಂತಿಲ್ಲ. ಏನಿದ್ದರೂ ಕೋರ್ಟ್‌ನಲ್ಲಿ ಬಿಡಿಸಿಕೊಳ್ಳಬೇಕು. ಈ ಕಾಯ್ದೆಯಡಿ ವ್ಯಕ್ತಿಗತ ಕೇಸು ದಾಖಲಾದರೆ, ಸುಲಭದಲ್ಲಿ ಜಾಮೀನು ಕೂಡ ಸಿಗುವುದಿಲ್ಲ. ಈ ಬಗ್ಗೆ ನಾಗರಿಕರಿಗೆ ಪೊಲೀಸರು ಮೊದಲೇ ಮಾಹಿತಿ ಕೂಡ ನೀಡಿದ್ದಾರೆ. ಆದರೂ ಪೇಟೆ ಪ್ರವೇಶಿಸಿದ ಅನಗತ್ಯ ವಾಹನಗಳನ್ನು ಮುಟ್ಟುಗೋಲು ಹಾಕಿ ಕೇಸು ದಾಖಲಿಸಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ ಸುಮಾರು 1,500ಕ್ಕೂ ಅಧಿಕ ವಾಹನಗಳ ವಿರುದ್ಧ ಈ ಕಠಿಣ ಕೇಸು ದಾಖಲಿಸಲಾಗಿದೆ.

ಬಲಪ್ರಯೋಗ ಮಾಡದಂತೆ ಪೊಲೀಸರಿಗೆ ಖಡಕ್ ಸೂಚನೆ ..

ಕರ್ಫ್ಯೂ ಸಡಿಲ ವೇಳೆ ಅನಗತ್ಯ ಲಾಠಿ ಪ್ರಹಾರ ನಡೆಸಬಾರದು ಎಂದು ಮೇಲಧಿಕಾರಿಗಳ ನಿರ್ದೇಶನ ಇದೆ. ಪ್ರತಿಯೊಬ್ಬರೂ ಯಾವುದೇ ಅಗತ್ಯ ಕಾರಣಕ್ಕೆ ಜನತೆ ಪೇಟೆಗೆ ಧಾವಿಸುತ್ತಾರೆ. ಈ ಜಿಲ್ಲೆಯ ಜನತೆ ಪೊಲೀಸರ ಕರ್ತವ್ಯಕ್ಕೆ ಸಹಕಾರ ನೀಡುತ್ತಿದ್ದಾರೆ. ಕೆಲವು ಮಂದಿಯಷ್ಟೇ ಅನಗತ್ಯ ರಸ್ತೆಗೆ ಬರುತ್ತಿದ್ದಾರೆ. ಅಂತಹವರ ಮೇಲೆ ಕ್ರಮ ಕೈಗೊಳ್ಳುತ್ತೇವೆ.

-ಋುಷಿಕೇಶ್‌ ಸೋನೆವಾಣೆ, ಎಸ್ಪಿ, ದ.ಕ.

ಅನಗತ್ಯ ಪೇಟೆಗೆ ಆಗಮಿಸುವವರ ವಾಹನಗಳ ವಿರುದ್ಧ ಕಠಿಣ ಕಾಯ್ದೆಯಡಿ ಕೇಸು ದಾಖಲಿಸುತ್ತಿದ್ದೇವೆ. ಹೀಗಾಗಿ ಈಗ ಪೇಟೆಗೆ ವಾಹನಗಳು ಬರುವುದು ಕಡಿಮೆಯಾಗಿದೆ. ದಂಡ ಮತ್ತು ಕೇಸು ದಾಖಲಿಸುವ ಕಠಿಣ ಕ್ರಮ ಕೈಗೊಳ್ಳುವುದರಿಂದ ಲಾಠಿ ಬೀಸುವುದಿಲ್ಲ. ಇಲ್ಲಿನ ಜನತೆ ಪ್ರಜ್ಞಾವಂತರಿದ್ದು, ಕಾನೂನಿಗೆ, ಪೊಲೀಸರಿಗೆ ಬೆಲೆ ಕೊಡುತ್ತಿದ್ದಾರೆ.

-ಹರಿರಾಂ ಶಂಕರ್‌, ಡಿಸಿಪಿ ಅಪರಾಧ ವಿಭಾಗ, ಮಂಗಳೂರು

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona