ಮಂಗಳೂರು(ಸೆ.06): ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ರಾಜೀನಾಮೆ ನೀಡಿದ್ದಾರೆ. ಐಎಎಸ್ ಅಧಿಕಾರಿಗಳು ಸರಣಿಯಾಗಿ ರಾಜೀನಾಮೆ ನೀಡುವ ಬೆಳವಣಿಗೆ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಐಎಎಸ್ ಸಸಿಕಾಂತ್ ಸೆಂಥಿಲ್ ಅವರು ರಾಜೀನಾಮೆ ನೀಡಿದ್ದು, ತಮ್ಮನ್ನು ವಿಶ್ವಾಸದಿಂದ ಕಂಡ ಜಿಲ್ಲೆಯ ಜನರಿಗೆ ಕೃತಜ್ಞತೆ ತಿಳಿಸಿದ್ದಾರೆ.

"

ಸೇವಾಪರ್ವ ಕೊನೆಗೊಳಿಸಿದ IPS ಅಣ್ಣಾಮಲೈ

2009ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ 2017ರ ಅಕ್ಟೋಬರ್ 10ರಿಂದ ದ‌.ಕ ಜಿಲ್ಲಾಧಿಕಾರಿಯಾಗಿ ಸೇವೆ ಆರಂಭಿಸಿದ್ದರು. ದಕ್ಷ ಅಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ತಮ್ಮ ರಾಜೀನಾಮೆ ವೈಯಕ್ತಿಕ ನಿರ್ಧಾರ ಎಂದು ತಿಳಿಸಿದ್ದರೂ, ತಮ್ಮ ಕ್ಷೇತ್ರದಲ್ಲಿ ಕೆಲಸ ಮಾಡುವ ಸವಾಲುಗಳ ಬಗ್ಗೆಯೂ ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ.

ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯ ನನಗೆ ಬೇಕು: ರಾಜೀನಾಮೆ ನೀಡಿದ ಮತ್ತೊಬ್ಬ IAS ಅಧಿಕಾರಿ!

IAS ಅಧಿಕಾರಿಯಾಗಿ ಮುಂದುವರಿದು ನೈತಿಕ ಮಾರ್ಗದಲ್ಲಿ ಕೆಲಸ ಮಾಡಲು ಸಾಧ್ಯ ಇಲ್ಲ ಎಂದು ಅನಿಸಿದ ಕಾರಣ ರಾಜೀನಾಮೆ ನೀಡುತ್ತಿದ್ದೇನೆ. ಪ್ರಜಾಪ್ರಭುತ್ವದಲ್ಲಿ ಆಗುತ್ತಿರುವ ಬದಲಾವಣೆಗಳ ಪರಿಣಾಮ ಮುಂದಿನ ದಿನಗಳಲ್ಲಿ ಒಬ್ಬ ದಕ್ಷ IAS ಅಧಿಕಾರಿಯಾಗಿ ಕೆಲಸ ಮಾಡುವುದು ಕಷ್ಟವಾಗಲಿದೆ ಎಂದು ಅವರು ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ.

ಸಿದ್ಧಾಂತಗಳಿಗೆದುರಾಗಿ ಕೆಲಸ ಮಾಡೋದು ಕಷ್ಟ:

'ಪ್ರಿಯ ಸ್ನೇಹಿತರೇ,

ನಾನು ಇಂದು ನನ್ನ ಭಾರತೀಯ ಆಡಳಿತಾತ್ಮಕ ಸೇವೆಗೆ ರಾಜೀನಾಮೆ ಸಲ್ಲಿಸಿದ್ದೇನೆ. ನನ್ನ ರಾಜೀನಾಮೆಗೆ ವೈಯಕ್ತಿಕ ಕಾರಣಗಳಿವೆಯೇ ಹೊರತು ಯಾವುದೇ ವೈಮನಸ್ಸಿಲ್ಲ. ನನ್ನ ಸದ್ಯದ ಮಂಗಳೂರು ಡಿಸಿ ಪೋಸ್ಟ್​ಗೂ ರಾಜೀನಾಮೆಗೂ ಸಂಬಂಧವಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಜನ ಮತ್ತು ಅಧಿಕಾರಿಗಳಿಗೆ ನಾನು ಈ ಸಂದರ್ಭದಲ್ಲಿ ಕ್ಷಮೆ ಕೋರಲು ಇಚ್ಚಿಸುತ್ತೇನೆ. ಅವರ ಜತೆ ಕೆಲಸ ಮಾಡಿದ್ದು ಅವಿಸ್ಮರಣೀಯ. ಅರ್ಧದಲ್ಲೇ ರಾಜೀನಾಮೆ ನೀಡಿ ಹೋಗುತ್ತಿರುವುದಕ್ಕೆ ಅವರಲ್ಲಿ ಕ್ಷಮೆ ಯಾಚಿಸುತ್ತೇನೆ.

ದೇಶದ ಸಂವಿಧಾನದ ಮೂಲ ಆಶಯಗಳು ಹಾದಿ ತಪ್ಪುತ್ತಿರುವ ಈ ದಿನಗಳಲ್ಲಿ ನಾನು ಭಾರತೀಯ ಆಡಳಿತಾತ್ಮಕ ಸೇವೆಯಲ್ಲಿ ಮುಂದುವರೆಯುವುದು ನನಗೆ ಸಮಂಜಸವೆನಿಸುತ್ತಿಲ್ಲ. ವಿವಿಧತೆಯಲ್ಲಿ ಏಕತೆಯನ್ನು ಕಾಣುವ ನಮ್ಮ ಪ್ರಜಾಪ್ರಭುತ್ವದ ತಳಹದಿ ಕುಸಿಯುತ್ತಿರುವಾಗ ನೈತಿಕವಾಗಿ ನನಗೆ ಈ ವೃತ್ತಿಯಲ್ಲಿ ಇರಲು ಇಷ್ಟವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಈ ವಿಷಮಯ ಸ್ಥಿತಿ ಇನ್ನಷ್ಟು ಉಲ್ಬಣವಾಗಲಿದೆ. ನಾನು ಐಎಎಸ್​ ವೃತ್ತಿಯ ಆಚೆಗಿದ್ದರೆ ದೇಶದ ಅಭಿವೃದ್ಧಿಗಾಗಿ, ಜನರಿಗಾಗಿ ಇನ್ನಷ್ಟು ಹೆಚ್ಚು ಕೆಲಸ ಮಾಡಬಹುದು. ಎಲ್ಲಾ ಅದರಪಾಡಿಗೆ ಆಗಲಿ ಎಂದು ಸುಮ್ಮನಾಗಲು ಇನ್ನು ಸಾಧ್ಯವಿಲ್ಲ.

ಇನ್ನೊಮ್ಮೆ ನನ್ನ ಜತೆ ಕೆಲಸ ಮಾಡಿದ ಎಲ್ಲರಿಗೂ, ರಾಜ್ಯದ ಜನರಿಗೂ ನಾನು ಧನ್ಯವಾದ ಅರ್ಪಿಸುತ್ತೇನೆ. ನನ್ನ ಸಹೋದ್ಯೋಗಿಗಳು ಮತ್ತು ಅವರ ಕುಟುಂಬಸ್ಥರು ಸಂತಸದಿಂದಿರಲಿ ಎಂದು ಆಶಯಿಸುತ್ತೇನೆಂದು,' ಎಂದು ಅವರು ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ.

IAS ಅಧಿಕಾರಿಗಳ ಸರಣಿ ರಾಜೀನಾಮೆ:

ಬೆಂಗಳೂರು ದಕ್ಷಿಣ ಡಿಸಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ದಕ್ಷ ಅಧಿಕಾರಿ IPS ಅಣ್ಣಾಮಲೈ ಅವರು ರಾಜೀನಾಮೆ ನೀಡದ್ದನ್ನೂ ಇಲ್ಲಿ ಸ್ಮರಿಸಿಕೊಳ್ಳಬಹುದು. ಹಾಗೆಯೇ ಕೇರಳ ಪ್ರವಾಹದ ಸಂದರ್ಭದಲ್ಲಿ ತಮ್ಮ ಕೆಲಸಗಳಿಂದಲೇ ಜನರ ಮೆಚ್ಚುಗೆ ಪಡೆದಿದ್ದ IAS ಕಣ್ಣನ್ ಗೋಪಿನಾಥನ್ ಅವರೂ ರಾಜೀನಾಮೆ ನೀಡಿದ್ದಾರೆ. ಆದರೆ ಅವರ ರಾಜೀನಾಮೆ ಇನ್ನೂ ಅಂಗೀಕಾರವಾಗಿಲ್ಲ.