‘ಕೃಷಿ ಜೊತೆ ಹೈನುಗಾರಿಕೆ ಅಳವಡಿಸಿಕೊಳ್ಳಿ’
ಹೈನುಗಾರಿಕೆ ಗ್ರಾಮೀಣ ಪ್ರದೇಶದ ಬಡ ಕುಟುಂಬಗಳ ಆರ್ಥಿಕ ಸುಧಾರಣೆಗೆ ಸಹಕಾರಿಯಾಗಿದ್ದು, ಕೃಷಿಯ ಜೊತೆಗೆ ಉತ್ತಮ ರಾಸುಗಳನ್ನು ಸಾಕಾಣಿಕೆ ಮಾಡಿ ಹಾಲು ಉತ್ಪಾದನೆ ಮಾಡಿದರೆ ಕುಟುಂಬದ ನೆಮ್ಮದಿಗೆ ಸಹಕಾರಿಯಾಗಲಿದೆ ಎಂದು ಮಾಜಿ ಶಾಸಕ ಡಾ. ಸಿ.ಎಂ. ರಾಜೇಶ್ ಗೌಡ ಹೇಳಿದರು.
ಶಿರಾ : ಹೈನುಗಾರಿಕೆ ಗ್ರಾಮೀಣ ಪ್ರದೇಶದ ಬಡ ಕುಟುಂಬಗಳ ಆರ್ಥಿಕ ಸುಧಾರಣೆಗೆ ಸಹಕಾರಿಯಾಗಿದ್ದು, ಕೃಷಿಯ ಜೊತೆಗೆ ಉತ್ತಮ ರಾಸುಗಳನ್ನು ಸಾಕಾಣಿಕೆ ಮಾಡಿ ಹಾಲು ಉತ್ಪಾದನೆ ಮಾಡಿದರೆ ಕುಟುಂಬದ ನೆಮ್ಮದಿಗೆ ಸಹಕಾರಿಯಾಗಲಿದೆ ಎಂದು ಮಾಜಿ ಶಾಸಕ ಡಾ. ಸಿ.ಎಂ. ರಾಜೇಶ್ ಗೌಡ ಹೇಳಿದರು.
ತಾಲೂಕಿನ ಬಂದಕುಂಟೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡಕ್ಕೆ ಭೇಟಿ ನೀಡಿ ಸಂಘದ ಸದಸ್ಯರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಹಸುಗಳನ್ನು ತಮ್ಮ ಕುಟುಂಬದ ಸದಸ್ಯರಂತೆ ಹಾರೈಕೆ ಮಾಡಿ ಪೋಷಣೆ ಮಾಡಿದರೆ ಹಾಲಿನ ಇಳುವರಿ ಹೆಚ್ಚಾಗಲಿದ್ದು ಹೆಚ್ಚು ಲಾಭ ನಿಮ್ಮ ಕೈ ಸೇರಲಿದೆ ಎಂದ ಅವರು ನಾನು ಬಂದಕುಂಟೆ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಂಘದ ಕಟ್ಟಡ ನಿರ್ಮಾಣ ಅರ್ಧಕ್ಕೆ ನಿಂತು ಹೋಗಿತ್ತು. ಈ ಗ್ರಾಮದ ರೈತರ ಮನವಿಗೆ ಸ್ಪಂದಿಸಿ ವೈಯಕ್ತಿಕ 5 ಲಕ್ಷ ರುಪಾಯಿ ಹಣ ನೀಡಿದ್ದೆನು. ಇದೀಗ ಕಟ್ಟಡ ಪೂರ್ಣಗೊಂಡು ರೈತರಿಗೆ ಸಹಕಾರಿಯಾಗಿರುವುದು ಹೆಚ್ಚು ಹರ್ಷ ನೀಡುತ್ತದೆ. ಹಾಲು ಉತ್ಪಾದಕರ ಸಂಘದ ಎಲ್ಲಾ ಸದಸ್ಯರು ಒಗ್ಗೂಡಿ ಪರಸ್ಪರ ಸಹಕಾರ ಮನೋಭಾವದಿಂದ ಸಂಘವನ್ನು ಮುನ್ನಡೆಸಿದರೆ ಹೆಚ್ಚು ಲಾಭ ಡೈರಿಗೆ ಬರಲಿದೆ ಎಂದರು.
ಬಂದಕುಂಟೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಪುಟ್ಟರಾಜು ಮಾತನಾಡಿ, ಹಾಲು ಉತ್ಪಾದಕರ ಸಂಘದ ಎಲ್ಲಾ ಸದಸ್ಯರು ಹಾಗೂ ಎಲ್ಲರ ಸಹಕಾರದಿಂದ ಸಂಘ ಸ್ಥಾಪನೆ ಸಾಧ್ಯವಾಯಿತು. ಹೆಚ್ಚು ಹೆಚ್ಚು ಹಾಲು ಉತ್ಪಾದನೆ ಮಾಡುವ ಮೂಲಕ ತಾಲೂಕಿಗೆ ಮಾದರಿ ಸಂಘ ಮಾಡುವ ಗುರಿ ಹೊಂದಲಾಗಿದೆ. ಸಂಘದ ಕಟ್ಟಡ ನಿರ್ಮಾಣಕ್ಕೆ ಮಾಜಿ ಶಾಸಕರಾದ ಡಾ.ಸಿ.ಎಂ.ರಾಜೇಶ್ ಗೌಡ ಅವರ ಸಹಾಯ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.
ಈ ಸಂದರ್ಭದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ತಿಮ್ಮಣ್ಣ, ಗ್ರಾಮ ಪಂಚಾಯಿತಿ ಸದಸ್ಯ ಮಂಜುನಾಥ್, ತಿಮ್ಮರಾಜು, ರಾಮಕೃಷ್ಣಪ್ಪ, ಭೂತರಾಜು, ತಿಪ್ಪೇಸ್ವಾಮಿ, ಶಶಿಧರ ಸೇರಿದಂತೆ ಹಲವರು ಹಾಜರಿದ್ದರು.