ದಾಬಸ್‌ಪೇಟೆ: ಕುಡಿದು ಬರುವ ಪ್ರಾಂಶುಪಾಲರ ಅಮಾನತಿಗೆ ಸೂಚನೆ
ಯಂಟಗಾನಹಳ್ಳಿ ಸರ್ಕಾರಿ ಪಿಯು ಕಾಲೇಜಿಗೆ ದಿಢೀರ್ ಭೇಟಿ ನೀಡಿದ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಿತೇಶ್‌ಕುಮಾರ್ ಸಿಂಗ್ಭಾ ಕಾಲೇಜು ದುಸ್ಥಿತಿ ಕಂಡು ಜಿಲ್ಲೆಯ ಪಿಯು ಡಿಡಿ ಡಾ.ಬಾಲಗುರುಮೂರ್ತಿಗೆ ತರಾಟೆಗೆ ತೆಗೆದುಕೊಂಡು ಕುಡಿದು ಬರುವ ಕಾಲೇಜಿನ ಪ್ರಾಂಶುಪಾಲ ಪ್ರಸಾದ್ ಅಮಾನತಿಗೆ ಸೂಚನೆ ನೀಡಿದರು.
ದಾಬಸ್‌ಪೇಟೆ: ಯಂಟಗಾನಹಳ್ಳಿ ಸರ್ಕಾರಿ ಪಿಯು ಕಾಲೇಜಿಗೆ ದಿಢೀರ್ ಭೇಟಿ ನೀಡಿದ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಿತೇಶ್‌ಕುಮಾರ್ ಸಿಂಗ್ಭಾ ಕಾಲೇಜು ದುಸ್ಥಿತಿ ಕಂಡು ಜಿಲ್ಲೆಯ ಪಿಯು ಡಿಡಿ ಡಾ.ಬಾಲಗುರುಮೂರ್ತಿಗೆ ತರಾಟೆಗೆ ತೆಗೆದುಕೊಂಡು ಕುಡಿದು ಬರುವ ಕಾಲೇಜಿನ ಪ್ರಾಂಶುಪಾಲ ಪ್ರಸಾದ್ ಅಮಾನತಿಗೆ ಸೂಚನೆ ನೀಡಿದರು.
ಯಂಟಗಾನಹಳ್ಳಿ ಗ್ರಾಪಂ ಸಮೀಪವಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಪ್ರಸಾದ್ ಪ್ರಾಂಶುಪಾಲರಾಗಿ ಬಂದ ನಂತರ ಕಾಲೇಜು ದಾಖಲಾತಿ ಕಡಿಮೆಯಾಗುವ ಜೊತೆಗೆ ಕಾಲೇಜಿನಲ್ಲಿ ಶೌಚಾಲಯ, ಗ್ರಂಥಾಲಯ, ಕೊಠಡಿಗಳ ದುಸ್ಥಿತಿ ಕುರಿತು ಸಾರ್ವಜನಿಕರು ಮನವಿ ಮಾಡಿದ ಹಿನ್ನೆಲೆಯಲ್ಲಿ ಪಿಯು ಡಿಡಿ ತನಿಖೆ ಮಾಡಿದಾಗ ಸಮಸ್ಯೆಗಳನ್ನು ಕಂಡು ಆತಂಕ ವ್ಯಕ್ತಪಡಿಸಿದ್ದರು.
ಸಂಬಳ ಕೊಡುವುದು ಶೋಕಿಗಲ್ಲ:
ಡಿಡಿ ಎದುರೇ ಕುಡಿದು ಬರುವುದಾಗಿ ತಪ್ಪು ಒಪ್ಪಿಕೊಂಡಿದ್ದ ಪ್ರಾಂಶುಪಾಲನನ್ನು ರಜೆಯಲ್ಲಿ ಕಳುಹಿಸಿ ಸುಮ್ಮನಾಗಿದ್ದರು. ಕಾಲೇಜಿಗೆ ದಿಢೀರ್ ಭೇಟಿ ನೀಡಿದ ಸರ್ಕಾರದ ಪ್ರಧಾನಕಾರ್ಯದರ್ಶಿಗಳು ಶೌಚಾಲಯ, ಕೊಠಡಿಗಳನ್ನು ಕಂಡು ಅಚ್ಚರಿ ಪಟ್ಟಿದ್ದಲ್ಲದೆ ಸರ್ಕಾರದ ಸಂಬಳ ಪಡೆಯುವುದು ಶೋಕಿಮಾಡಲು ಅಲ್ಲ ಎಂದು ಎಚ್ಚರಿಕೆ ನೀಡಿದರು.
3 ದಿನದಲ್ಲಿ ಅಮಾನತು:
ಪ್ರಾಂಶುಪಾಲ ಪ್ರಸಾದ್ ಕುಡಿದು ಬರುವ ದೂರುಗಳ ಪ್ರತಿಯನ್ನು ಪಡೆದ ಪ್ರಧಾನ ಕಾರ್ಯದರ್ಶಿಗಳು, ಈ ಹಿಂದೆ ತನಿಖೆ ಮಾಡಿ ನೀಡಿರುವ ವರದಿಯನ್ನು ತಕ್ಷಣ ಕಳುಹಿಸಿ 3 ದಿನದಲ್ಲಿ ಆತನನ್ನು ಅಮಾನತು ಮಾಡಲಾಗುತ್ತದೆ. ಸರ್ಕಾರಿ ಕಾಲೇಜುಗಳು ಈ ಸ್ಥಿತಿಗೆ ತೆಗೆದುಕೊಂಡು ಹೋದರೆ ಸರ್ಕಾರಿ ಕೆಲಸ ಏಕೆ ನಿಮಗೆ, ಈ ಬಾರಿ ಕೇವಲ 20 ದಾಖಲಾತಿ ಆಗಿರುವುದು ದುರಂತವೇ ಸರಿ ಎಂದು ಡಿಡಿಗೆ ತರಾಟೆಗೆ ತೆಗೆದುಕೊಂಡರು.
ಶೌಚಾಲಯಕ್ಕೆ ಬಕೆಟ್‌ನಲ್ಲಿ ನೀರು:
ಹೆಣ್ಣು ಮಕ್ಕಳ ಶೌಚಾಲಯಕ್ಕೆ ಪೈಪ್‌ನಲ್ಲಿ ನೀರಿನ ಸರಬರಾಜು ಇಲ್ಲದ ಕಾರಣ ಹೆಣ್ಣು ಮಕ್ಕಳು 100 ಮೀಟರ್ ದೂರದಿಂದ ಬಕೆಟ್‌ಗಳಲ್ಲಿ ನೀರು ತಂದು ಶೌಚಾಲಯಕ್ಕೆ ಹೋಗುವ ಹೀನಾಯ ಸ್ಥಿತಿ ಕಾಲೇಜಿನಲ್ಲಿದ್ದು ಇದನ್ನು ತಿಳಿದ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಆಯುಕ್ತ ಕಾವೇರಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ಸಮಸ್ಯೆ ಬಗೆಹರಿಸುವಂತೆ ಡಿಡಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಣ ಆಯುಕ್ತೆ ಕಾವೇರಿ, ಪಿಯು ಡಿಡಿ ಬಾಲಗುರುಮೂರ್ತಿ, ಪ್ರಭಾರ ಪ್ರಾಂಶುಪಾಲ ದಯಾನಂದ್, ಡಿಡಿಪಿಐ ಕೃಷ್ಣಮೂರ್ತಿ ಉಪಸ್ಥಿತರಿದ್ದರು.