ಬೆಂಗಳೂರು(ನ.19): ತಮ್ಮ ಭೇಟಿಗೆ ಮುಂದಾಗಿದ್ದ ಪುಲಿಕೇಶಿನಗರದ ತಮ್ಮ ಪಕ್ಷದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರಿಗೆ ಬುಧವಾರ ಸಮಯ ನೀಡಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನಿರಾಕರಿಸಿದ್ದಾರೆ. ತನ್ಮೂಲಕ ಅಖಂಡ ಹಾಗೂ ಶಿವಕುಮಾರ್‌ ಅವರ ನಡುವಿನ ಶೀತಲ ಸಮಯ ಮುಂದುವರೆದಂತಾಗಿದೆ.

ಡಿ.ಜೆ.ಹಳ್ಳಿ ಕೆ.ಜಿ. ಹಳ್ಳಿ ಗಲಭೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಮಾಜಿ ಮೇಯರ್‌ ಸಂಪತ್‌ರಾಜ್‌ ಅವರನ್ನು ಬಂಧಿಸುವ ಮೂಲಕ ಪೊಲೀಸರು ನನಗೆ ನ್ಯಾಯ ಕೊಡಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷರು ಈಗಲಾದರೂ ನನ್ನ ಪರ ನಿಲ್ಲಬೇಕು ಎಂದು ಮಂಗಳವಾರವಷ್ಟೇ ಅಖಂಡ ಶ್ರೀನಿವಾಸಮೂರ್ತಿ ಹೇಳಿದ್ದರು. ಇದರ ಬೆನ್ನಲ್ಲೇ ಡಿ.ಕೆ.ಶಿವಕುಮಾರ್‌ ಸಂಪತ್‌ ರಾಜ್‌ ಓಡಿ ಹೋಗಿರಲಿಲ್ಲ. ಕಾಂಗ್ರೆಸ್‌ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನವನ್ನು ಬಿಜೆಪಿ ನಡೆಸುತ್ತಿದೆ ಎಂದು ಆರೋಪಿಸಿದ್ದರು.

ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು; ಸಂಪತ್‌ರಾಜ್ ಬಂಧನಕ್ಕೆ ಅಖಂಡ ಪ್ರತಿಕ್ರಿಯೆ

ಅಲ್ಲದೆ, ಅಖಂಡ ಶ್ರೀನಿವಾಸಮೂರ್ತಿ ಕೇವಲ ಮಾಧ್ಯಮಗಳಲ್ಲಿ ಹೇಳಿಕೆ ನೀಡುತ್ತಿದ್ದಾರೆ. ನನ್ನನ್ನು ಬಂದು ಇದುವರೆಗೂ ಭೇಟಿಯಾಗಿಲ್ಲ. ಮೊದಲು ನನ್ನನ್ನು ಭೇಟಿ ಮಾಡಲಿ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಅಖಂಡ ಶ್ರೀನಿವಾಸ ಮುರ್ತಿ ಬುಧವಾರ ಡಿ.ಕೆ.ಶಿವಕುಮಾರ್‌ ಭೇಟಿ ಮಾಡಲು ಮುಂದಾಗಿದ್ದರು. ಆದರೆ, ಡಿ.ಕೆ.ಶಿವಕುಮಾರ್‌ ಗುರುವಾರ ತಮ್ಮ ಮಗಳ ನಿಶ್ಚಿತಾರ್ಥ ಕಾರ್ಯಕ್ರಮ ಇರುವ ಹಿನ್ನೆಲೆಯಲ್ಲಿ ಶಾಸಕರ ಭೇಟಿಗೆ ನಿರಾಕರಿಸಿದ್ದಾರೆ ಎನ್ನಲಾಗಿದೆ. ಬದಲಿಗೆ ನ.21ಕ್ಕೆ ಬಂದು ಭೇಟಿ ಮಾಡುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.