ಬೆಳಗಾವಿ(ಡಿ.23): ಸಿಲಿಂಡರ್ ಗ್ಯಾಸ್ ಸೋರಿಕೆಯಿಂದ ಸಿಲಿಂಡರ್ ಸ್ಫೋಟ ಉಂಟಾಗಿ ನಾಲ್ಕು ಮನೆಗಳಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಸುಮಾರು 40.30 ಲಕ್ಷ ಮೌಲ್ಯದ ಮನೆ ಸೇರಿದಂತೆ ವಿವಿಧ ಸಾಮಗ್ರಿಗಳು ಸುಟ್ಟು ಕರಕಲಾದ ಘಟನೆ ಭಾನುವಾರ ತಾಲೂಕಿನ ಹಲಗಾ ಗ್ರಾಮದಲ್ಲಿ ನಡೆದಿದೆ.

ಹಲಗಾ ಗ್ರಾಮದ ಲಕ್ಷ್ಮಿ ಗಲ್ಲಿಯ ಶಾಂತಿನಾಥ ಪಾಯಣ್ಣಾ ಚಿಕ್ಕಪರಪ್ಪ ಉರ್ಫ್ ದೇಸಾಯಿ ಎಂಬುವರ ಮನೆ ಸಂಪೂರ್ಣವಾಗಿ ಸುಟ್ಟು ಕರಲಾಗಿದೆ. ಈ ಮನೆ ಪಕ್ಕದಲ್ಲಿರುವ ಸುನೀಲ ದೇಸಾಯಿ, ವಸಂತ ದೇಸಾಯಿ ಹಾಗೂ ಭರತೇಶ ಚಿಕ್ಕಪರಪ್ಪ ಎಂಬುವರ ಮನೆಗಳಿಗೆ ಬೆಂಕಿ ತಗುಲಿದ್ದರಿಂದ ಅಲ್ಪ ಪ್ರಮಾಣದ ಚಾವಣಿ ಸುಟ್ಟು ಹಾನಿಯಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಗ್ಯಾಸ್ ಸಿಲಿಂಡರ್ ನಿಂದ ಸೋರಿಕೆ ಉಂಟಾಗಿ ದೇವರ ಮನೆಯಲ್ಲಿದ್ದ ದೀಪದಿಂದ ಬೆಂಕಿ ತಗುಲಿದೆ. ಇದರಿಂದ ಸಿಲಿಂಡರ್ ಸ್ಫೋಟಗೊಂಡು, ಅಕ್ಕಪಕ್ಕದ ಮನೆಗಳಿಗೆ ಬೆಂಕಿ ವ್ಯಾಪಿಸಿದೆ. ಶಾಂತಿನಾಥ ದೇಸಾಯಿ ಹಾಗೂ ಸಹೋದರ ನಭಿರಾಜ ಎಂಬುವರು ಒಂದೇ ಮನೆಯಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದರು. ಗ್ಯಾಸ್ ಸೋರಿಕೆಯಿಂದ ಬೆಂಕಿ ಹೊತ್ತಿಕೊಂಡ ಪರಿಣಾಮ ಮನೆಯ ಚಾವಣಿಗೆ ತಗುಲಿದೆ. ಬೆಂಕಿಯ ಕೆನ್ನಾಲಿಗೆ ಹೆಚ್ಚುತ್ತಿದ್ದಂತೆ ಹಾಗೂ ಸಿಲಿಂಡರ್ ಸ್ಪೋಟ್‌ದ ಶಬ್ಧದಿಂದ ನೆರೆ ಹೊರೆಯವರು ತಕ್ಷಣ ಬೆಂಕಿ ಹೊತ್ತಿಕೊಂಡ ಮನೆಗೆ ಬಂದು ನಂದಿಸುವ ಕಾರ್ಯ ಮಾಡಿದ್ದಾರೆ. ಆದರೆ ಗ್ರಾಮಸ್ಥರ ಯತ್ನ ಫಲ ಕೊಡಲಿಲ್ಲ. ಅಷ್ಟರಲ್ಲಿ ಬೆಂಕಿಯ ಕೆನ್ನಾಲಿಗೆ ಈಡಿ ಮನೆಗೆ ಆವರಿಸಿದ್ದಲ್ಲದೇ ನೆರೆ ಹೊರೆಯ ಮನೆಗಳಿಗೂ ತಾಗಿಕೊಂಡಿತ್ತು. ಇದರಿಂದ ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ಮನೆ ಮಾಡಿತ್ತು. 

ಶಾಂತಿನಾಥ ಅವರ ಮನೆಯಲ್ಲಿದ್ದ ಪಾತ್ರೆ ಗಳು, ಬೀರುವಿನಲ್ಲಿದ್ದ 35 ಗ್ರಾಂ ಬಂಗಾರದ ಸರ,  3 ಲಕ್ಷ ನಗದು, ಟಿವಿ, ಎತ್ತಿನ ಚಕ್ಕಡಿ ಗಾಲಿಯ ಕಟ್ಟಿಗೆಗಳು ಸೇರಿದಂತೆ ಇನ್ನಿತರ ಅಗತ್ಯ ವಸ್ತುಗಳು ಸುಟ್ಟು ಕರಲಾಗಿದೆ. ಸುಮಾರು 20 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ. ಇನ್ನು ಸಹೋದರ ನಭಿರಾಜ ಅವರ ಕೊಠಡಿಯಲ್ಲಿದ್ದ ಆಹಾರ ಧಾನ್ಯಗಳು, ಶೆರ್ಟ್‌ನ ಜೇಬಿನಲ್ಲಿದ್ದ 10 ಸಾವಿರ ನಗದು, ಟಿವಿ ಸೇರಿದಂತೆ ದಿನನಿತ್ಯದ ಅಗತ್ಯ ವಸ್ತುಗಳು ಸೇರಿ ಸುಮಾರು 20 ಲಕ್ಷ ಮೌಲ್ಯದ ಸಾಮಗ್ರಿಗಳು ಬೆಂಕಿಗಾಹುತಿಯಾಗಿವೆ. ಇನ್ನು ಪಕ್ಕದ ವಸಂತ ದೇಸಾಯಿ ಅವರ ಮನೆಗೆ ಬೆಂಕಿ ಹೊತ್ತಿದ್ದರಿಂದ ಮನೆಯ ಚಾವಣಿ ದಿನನಿತ್ಯದ ವಸ್ತುಗಳು ಹಾಗೂ ಸುನೀಲ ದೇಸಾಯಿ ಹಾಗೂ ಭರತೇಶ ಚಿಕ್ಕಪರಪ್ಪ ಎಂಬುವರ ಮನೆಗೂ ಬೆಂಕಿಯ ಕೆನ್ನಾಲಿಗೆ ಹರಡಿದ್ದರಿಂದ ತಲಾ 15 ಸಾವಿರದಂತೆ 30 ಸಾವಿರ ಮೌ ಲ್ಯದ ವಸ್ತುಗಳು ಸುಟ್ಟು ಕರಲಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. 

ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದು, ಸ್ಥಳೀಯರ ಸಹಕಾರದಿಂದ ಬೆಂಕಿ ನಂದಿಸುವ ಮೂಲಕ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಹಲಗಾ ಗ್ರಾಮದಲ್ಲಿ ಸಿಲಿಂಡರ್ ಸ್ಫೋಟದಿಂದ ಬೆಂಕಿ ಹೊತ್ತಿಕೊಂಡು ನಾಲ್ಕು ಮನೆಗಳು ಬೆಂಕಿ ಗಾಹುತಿಯಾಗಿವೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ದೌಡಾಯಿಸಿದ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರು, ಬೆಂಕಿಯಿಂದ ಹಾನಿಯಾದ ಕುಟುಂಬ ಸದಸ್ಯರಿಗೆ ಸಂತೈಯಿಸುವುದರ ಜತೆಗೆ ಆತ್ಮಸ್ಥೈರ್ಯ ತುಂಬುವ ಮೂಲಕ ನೊಂದ ಕುಟುಂಬಗಳ ಕಣ್ಣೀರು ಒರೆಸುವ ಕಾರ್ಯ ಮಾಡಿದರು. ಅಲ್ಲದೇ ಬೆಂಕಿ ಯಿಂದ ಸುಟ್ಟು ಹಾನಿಯಾದ ಮನೆಗಳ ಒಳಗೆ ಪ್ರವೇಶಿಸಿ ಪ್ರತಿಯೊಂದನ್ನು ಖುದ್ದಾಗಿ ಪರಿಶೀಲಿಸಿದರು. ನಂತರ ಕುಟುಂಬದವರೊಂದಿಗೆ ಮಾತನಾಡಿ, ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯವಿಲ್ಲ. ನಿಮ್ಮೊಂದಿಗೆ ನಾನೀದ್ದೇನೆ ಎಂದು ಹಾನಿಯಿಂದ ನೊಂದ ಕುಟುಂಬಗಳಿಗೆ ಆತ್ಮಸ್ಥರ್ಯ ತುಂಬಿದರು. ಅಲ್ಲದೇ ಶೀಘ್ರವೇ ಸರ್ಕಾರದಿಂದ ಸಿಗುವ ಸೌಲಭ್ಯ ಹಾಗೂ ಪರಿಹಾರವನ್ನು ಕಲ್ಪಿಸಿಕೊಡುವ ಭರವಸೆಯನ್ನು ನೀಡಿದರು. 

ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರ ತ್ವರಿತ ಸ್ಪಂದನೆಗೆ ಹಲಗಾ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು. ಮಹಿಳೆಗೆ ಆಘಾತ ಶಾಂತಿನಾಥ ದೇಸಾಯಿ ಅವರ ಪತ್ನಿ ಸುರೇಖಾ ದೇಸಾಯಿ ಅವರು ಬೆಂಕಿ ಅಪಘಾತದಿಂದ ಆಘಾತಕ್ಕೆ ಒಳಗಾಗಿ ಅಸ್ವಸ್ಥಗೊಂಡ ಪರಿಣಾಮ ಅವರನ್ನು ಬೆಳಗಾವಿಯ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಿಕಿತ್ಸೆ ಪಡೆದು ಅವರು ಆರೋಗ್ಯವಾಗಿದ್ದಾರೆ. ಈ ಕುರಿತು ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.