ಬೆಂಗಳೂರು [ಜು.05] :  ಬ್ಯಾಂಕ್ ಗೆ ಹಣ ತುಂಬಲು ಬಂದಾಗ, ಕೋಟಿ ಕೋಟಿ ಹಣ ವಂಚನೆಯ  ದೊಡ್ಡ ಜಾಲವೊಂದು ಪೊಲೀಸರ ಬಲೆಗೆ ಬಿದ್ದಿದೆ.  ಬೆಂಗಳೂರು ಹೊರವಲಯದ ನೆಲಮಂಗಲ ಪಟ್ಟಣದ ಐಸಿಐಸಿಐ ಬ್ಯಾಂಕಿಗೆ 1 ಕೋಟಿ 90 ಲಕ್ಷ ಹಣ ತುಂಬಲು ಬಂದಾಗ ಆರೋಪಿಗಳು ನೆಲಮಂಗಲ ಪೊಲೀಸರ ಅತಿಥಿಗಳಾಗಿದ್ದಾರೆ. 

ಆನ್ ಲೈನ್ ಮೂಲಕ ವಂಚನೆ ಮಾಡಿ ಬರೋಬ್ಬರಿ 3 ಕೋಟಿ ಹಣವನ್ನು ಡ್ರಾ ಮಾಡಿದ್ದ ಆರೋಪಿಗಳು, ಹಣವನ್ನು ಬ್ಯಾಂಕ್ ನಲ್ಲಿ ಜಮೆ ಮಾಡಲು ಬಂದಾಗ ಪೊಲೀಸರ ಕೈಗೆ ಸಿಕ್ಕಿದ್ದಾರೆ.  ಈ  ಸಂಬಂಧ ಬೆಂಗಳೂರಿನ ರಾಮಮೂರ್ತಿನಗರದಲ್ಲಿ ವಂಚನೆ ಪ್ರಕರಣ ದಾಖಲು ಮಾಡಲಾಗಿದೆ.

ದೊಡ್ಡ ದೊಡ್ಡ ಬಾಕ್ಸ್ ಗಳಲ್ಲಿ ಗುರುವಾರ ಸಂಜೆ ಬ್ಯಾಂಕಿಗೆ ಕಟ್ಟಲು  ಹಣ ತಂದಾಗ ರಾತ್ರಿ 12 ಗಂಟೆ ವರೆಗೆ ಬ್ಯಾಂಕ್ ಸಿಬ್ಬಂದಿ ಹಣ ಎಣಿಕೆ ಮಾಡಿದ್ದಾರೆ. ಕೋಟಿ ಕೋಟಿ ಮೊತ್ತದ ಹಣವಿದ್ದ ಕಾರಣ ಬ್ಯಾಂಕ್ ಮ್ಯಾನೇಜರ್ ನೆಲಮಂಗಲ ಪೊಲೀಸರಿಗೆ ಮಾಹಿತಿ ನೀಡಿದ್ದು, ಈ ವೇಳೆ ಇದು ಅಕ್ರಮ ಹಣವೆನ್ನುವ ಮಾಹಿತಿ ಬೆಳಕಿಗೆ ಬಂದಿದೆ. 

ದಾವಣಗೆರೆ ಜಿಲ್ಲೆಯ ಹರಿಹರ ಮೂಲದ ಪರೀಕ್ಷಿತ್ ನಾಯ್ಡು, ಗುರು ಪ್ರಸಾದ್, ಹಾಗೂ ರಂಗಸ್ವಾಮಿ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.