Asianet Suvarna News Asianet Suvarna News

ಹುಷಾರ್‌... ಬೆಂಗಳೂರಲ್ಲಿ ಹೆಚ್ಚುತ್ತಿದೆ ಇವರ ಹಾವಳಿ!

ಬೆಂಗಳೂರಿನಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಹಲವರು ವಂಚನೆಗೆ ಒಳಗಾಗಿ ಲಕ್ಷ ಲಕ್ಷ ಹಣವನ್ನು ಕಳೆದುಕೊಂಡಿದ್ದಾರೆ. 

Cyber Fraud Cases increase in Bengaluru
Author
Bengaluru, First Published Dec 8, 2019, 9:03 AM IST

ಬೆಂಗಳೂರು[ಡಿ.08]:  ರಾಜಧಾನಿಯಲ್ಲಿ ಸೈಬರ್‌ ಕಳ್ಳರ ಹಾವಳಿ ಮುಂದುವರೆದಿದ್ದು, ಈಗ ಕ್ಯೂಆರ್‌ ಕೋಡ್‌ ಕಳುಹಿಸಿ ವಂಚಿಸುವ ಹೊಸ ಮಾದರಿ ಆನ್‌ಲೈನ್‌ ಮೋಸ ಕೃತ್ಯಗಳು ನಾಗರಿಕರಲ್ಲಿ ಆತಂಕ ಸೃಷ್ಟಿಸಿದೆ.

ಈ ವಂಚನೆ ಕೃತ್ಯಗಳ ಹಿನ್ನೆಲೆಯಲ್ಲಿ ಸಾರ್ವನಿಕರು, ಒಎಲ್‌ಎಕ್ಸ್‌ ಸೇರಿದಂತೆ ಆನ್‌ಲೈನ್‌ ಮಾರ್ಕೆಟ್‌ ಜಾಲ ತಾಣಗಳಲ್ಲಿ ವ್ಯವಹರಿಸುವಾಗ ಜಾಗ್ರತೆ ವಹಿಸುವಂತೆ ಪೊಲೀಸರು ಸೂಚಿಸಿದ್ದಾರೆ. ವಸ್ತು ಖರೀದಿಸುವ ನೆಪದಲ್ಲಿ ವಂಚಕರು, ಗ್ರಾಹಕರಿಗೆ ಕ್ಯೂರ್‌ ಕೋಡ್‌ ಕಳುಹಿಸಿ ಹಣ ದೋಚುತ್ತಿದ್ದಾರೆ. ಈ ಸಂಬಂಧ ವಾರದೊಳಗೆ ನಗರದ ವಿವಿಧ ಠಾಣೆಗಳಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ. ವಿಶೇಷ ಅಂದರೆ ಮೂರೂ ಪ್ರಕರಣಗಳಲ್ಲೂ ದುಷ್ಕರ್ಮಿಗಳು ಸೇನೆಯಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿ ಹಣ ದೋಚಿದ್ದಾರೆ.

ಬೈಕ್‌ ಖರೀದಿಸುವುದಾಗಿ 24 ಸಾವಿರ ವಂಚನೆ:

ಬೈಕ್‌ ಖರೀದಿಸುವುದಾಗಿ ನಂಬಿಸಿ ಫೇಸ್‌ಬುಕ್‌ ಮುಖಾಂತರ ಖಾಸಗಿ ಕಂಪನಿ ಉದ್ಯೋಗಿಯೊಬ್ಬರಿಗೆ ದುಷ್ಕರ್ಮಿ ಟೋಪಿ ಹಾಕಿದ್ದಾನೆ.

ಅಕ್ಷಯನಗರ ನಿವಾಸಿ ಎಸ್‌.ಆರ್‌.ಪುನೀತ್‌ ಹಣ ಕಳೆದುಕೊಂಡವರು. ಡಿ.2ರಂದು ಪುನೀತ್‌ ಅವರ ಖಾತೆಯಿಂದ ಆರೋಪಿ ಖಾತೆಗೆ .24,899 ವರ್ಗಾವಣೆಯಾಗಿದೆ. ಈ ಕೃತ್ಯ ಎಸಗಿರುವ ವಿಕಾಸ್‌ ಪಟೇಲ್‌ ಅಲಿಯಾಸ್‌ ಪರಂಜೀತ್‌ ಸಿಂಗ್‌ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಪುನೀತ್‌, ತಾವು ಬೈಕ್‌ ಮಾರಾಟ ಮಾಡುವುದಾಗಿ ಪೋಸ್ಟ್‌ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ವಿಕಾಸ್‌, ತಾನು ಸೇನೆಯಲ್ಲಿ ಕೆಲಸ ಮಾಡುತ್ತಿದ್ದು ದೇವನಹಳ್ಳಿಯಲ್ಲಿ ನೆಲೆಸಿದ್ದೇನೆ ಎಂದು ಪರಿಚಯಿಸಿಕೊಂಡಿದ್ದ. ಬಳಿಕ ನಿಮ್ಮ ಬೈಕ್‌ ಅನ್ನು ಖರೀದಿಸುತ್ತೇನೆ ಎಂದು ಪುನೀತ್‌ಗೆ ಹೇಳಿದ ಆತ, ಗೂಗಲ್‌ ಪೇ ಮೂಲಕ ಕ್ಯೂ ಆರ್‌ ಕೋಡ್‌ ಕಳುಹಿಸಿದ್ದ. ಆ ಕ್ಯೂಆರ್‌ ಕೋಡ್‌ ಸ್ಕಾ್ಯನ್‌ ಮಾಡಿದಾಗ ನನ್ನ ಖಾತೆಯಿಂದ 24,899ರು. ಡೆಬಿಟ್‌ ಆಗಿದೆ ಎಂದು ಪುನೀತ್‌ ದೂರಿನಲ್ಲಿ ತಿಳಿಸಿದ್ದಾರೆ.

ಬುಲೆಟ್‌ ತೋರಿಸಿ ವಂಚನೆ:

ಒಎಲ್‌ಎಕ್ಸ್‌ನಲ್ಲಿ ರಾಯಲ್‌ ಎನ್‌ಫೀಲ್ಡ್‌ ಬೈಕ್‌ ಮಾರಾಟ ಮಾಡುವ ನೆಪದಲ್ಲಿ ಕೈಗೊಂಡನಹಳ್ಳಿ ನಿವಾಸಿ ಸೌಮ್ಯದೀಪ್‌ ನಂದನ್‌ ಎಂಬುವರಿಗೆ ಓಂಪ್ರಕಾಶ್‌ ಎಂಬಾತ ಟೋಪಿ ಹಾಕಿದ್ದಾನೆ. ಈ ಸಂಬಂಧ ಡಿ.5ರಂದು ಬೆಳ್ಳಂದೂರು ಠಾಣೆಯಲ್ಲಿ ನಂದನ್‌ ದೂರು ದಾಖಲಿಸಿದ್ದಾರೆ.

ಒಎಲ್‌ಎಕ್ಸ್‌ನಲ್ಲಿ ರಾಯಲ್‌ ಎನ್‌ಫೀಲ್ಡ್‌ ಮಾರಾಟ ಮಾಡುವುದಾಗಿ ಓಂಪ್ರಕಾಶ್‌ ಪ್ರಕಟಿಸಿದ್ದ. ಇದನ್ನು ನೋಡಿದ ನಂದನ್‌, ಆರೋಪಿಯನ್ನು ಸಂಪರ್ಕಿಸಿ ಬೈಕ್‌ ಖರೀದಿಸುವುದಾಗಿ ಹೇಳಿದ್ದರು. ಮಾತುಕತೆ ನಡೆದೂ 1.10 ಲಕ್ಷ ರು. ಬೆಲೆ ನಿಗದಿಯಾಗಿದೆ. ಅದರಂತೆ ಗೂಗಲ್‌ ಪೇ ಮೂಲಕ ಹಣ ಕಳುಹಿಸುವಂತೆ ಆರೋಪಿ ಸೂಚಿಸಿದ್ದ. ಅದರಂತೆ ಡಿ.4ರಂದು ಸಂಜೆ ನಿಗದಿತ ಹಣ ಸಂದಾಯ ಮಾಡಿದ್ದು, ಬಳಿಕ ಆರೋಪಿ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ನಂದನ್‌ ದೂರು ನೀಡಿದ್ದಾರೆ.

ಟೇಬಲ್‌ ಮಾರಲು ಹೋಗಿ ಲಕ್ಷ ಕಳೆದುಕೊಂಡ್ರು!

ಒಎಲ್‌ಎಕ್ಸ್‌ನಲ್ಲಿ ಟೇಬಲ್‌ ಮಾರಾಟ ಮಾಡಲು ಹೋಗಿ ವಿದ್ಯಾರ್ಥಿನಿಯೊಬ್ಬಳು 1 ಲಕ್ಷರು. ಕಳೆದುಕೊಂಡಿದ್ದಾರೆ. ಸಿ.ಎಲ್‌.ಲೇಔಟ್‌ ನಿವಾಸಿ ನಿಹಾರಿಕಾ ಹಣ ಕಳೆದುಕೊಂಡವರು. ಸೈನಿಕರ ಹೆಸರಿನಲ್ಲಿ ವಿದ್ಯಾರ್ಥಿನಿಗೆ ಅಪರಿಚಿತ ವಂಚಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಒಎಲ್‌ಎಕ್ಸ್‌ ನಲ್ಲಿ ಟೇಬಲ್‌ ಮಾರಲು ನಿಹಾರಿಕಾ ಮುಂದಾಗಿದ್ದರು. ಆಗ ಆಕೆಯ ಮೊಬೈಲ್‌ಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ, ತಾನು ಸೇನೆಯಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿ, ಟೇಬಲ್‌ ಖರೀದಿಸುತ್ತೇನೆ ಎಂದಿದ್ದಾನೆ. ಮರುದಿನ ಮತ್ತೆ ಕರೆ ಮಾಡಿದ ಆರೋಪಿ, ಕ್ಯೂಆರ್‌ ಕೋಡ್‌ನ್ನು ನಿಹಾರಿಕಾಗೆ ಕಳುಹಿಸಿದ್ದಾನೆ. ಇದನ್ನು ಸ್ಕ್ಯಾನ್ ಮಾಡಿದರೆ ನನ್ನ ಖಾತೆಯಿಂದ ನಿಮ್ಮ ಖಾತೆಗೆ ಹಣ ವರ್ಗಾವಣೆಯಾಗುವುದಾಗಿ ತಿಳಿಸಿದ್ದಾನೆ.

ಈ ಮಾತು ನಂಬಿದ ನಿಹಾರಿಕಾ, ಗೂಗಲ್‌ ಪೇಯಿಂದ ಕ್ಯೂರ್‌ ಕೋಡ್‌ ಅನ್ನು ಸ್ಕ್ಯಾನ್ ಮಾಡಿದ್ದಾಳೆ. ಇದಾದ ಕೆಲವೇ ಹೊತ್ತಿನಲ್ಲಿ ಆಕೆಯ ಖಾತೆಯಿಂದ ಹಂತ ಹಂತವಾಗಿ 41 ಸಾವಿರ ಹಣ ವರ್ಗಾವಣೆಯಾಗಿದೆ. ಅಲ್ಲದೆ, ಪ್ರಜಾಪತಿ ಎಂಬ ವ್ಯಕ್ತಿಯ ಹೆಸರಿನಲ್ಲಿ ಆಕೆಯ ತಂದೆಗೆ ಲಿಂಕ್‌ ಅನ್ನು ಕಳುಹಿಸಿ 70 ಸಾವಿರ ಎಗರಿಸಿದ್ದಾರೆ. ಹೀಗೆ ಒಟ್ಟು 1.11 ಲಕ್ಷ ರು. ಆನ್‌ಲೈನ್‌ ವಂಚನೆಯಾಗಿದೆ ಎಂದು ಆಡುಗೋಡಿ ಠಾಣೆಯಲ್ಲಿ ನಿಹಾರಿಕಾ ದೂರು ದಾಖಲಿಸಿದ್ದಾರೆ.

ಒಟಿಪಿ ಬದಲು ಕ್ಯೂರ್‌ ಆರ್‌ ಕೋಡ್‌

ಆನ್‌ಲೈನ್‌ ಅಥವಾ ಮೊಬೈಲ್‌ ಬ್ಯಾಂಕಿಂಗ್‌ ಸೇವೆಯಲ್ಲಿ ಗ್ರಾಹಕರು, ಯೂಸರ್‌ ಐಡಿ ಹಾಗೂ ಪಾಸ್‌ವರ್ಡ್‌ ನೀಡಿ ಲಾಗಿನ್‌ ಆದ ಬಳಿಕ ಓನ್‌ ಟೈಮ್‌ ಪಾಸ್‌ವರ್ಡ್‌(ಒಟಿಪಿ) ನಮೂದಿಸಿದರೆ ಹಣ ವರ್ಗಾವಣೆ ಆಗುತ್ತಿತ್ತು. ಆದರೆ ಈಗ ಒಟಿಪಿ ಬದಲಿಗೆ ಕ್ಯೂಆರ್‌ ಕೋಡ್‌ನ್ನು ಬಳಸಲಾಗುತ್ತಿದೆ. ಈ ಸೇವೆ ಬಗ್ಗೆ ನಾಗರಿಕರಿಗೆ ತಿಳುವಳಿಕೆ ಮೂಡಿಲ್ಲ.

ಮಹಿಳಾ ಸುರಕ್ಷತೆಗೆ ಬೆಂಗಳೂರು ಪೊಲೀಸರ ವಿನೂತನ ಕ್ರಮ: ‘ಹಲೋ ನೈಬರ್‌’...

ಇದನ್ನೇ ಲಾಭ ಮಾಡಿಕೊಂಡು ಸೈಬರ್‌ ವಂಚಕರು, ಒಎಲ್‌ಎಕ್ಸ್‌, ಕ್ವಿಕರ್‌, ಇತರೆ ವೆಬ್‌ಸೈಟ್‌ ಮೂಲಕ ಆನ್‌ಲೈನ್‌ನಲ್ಲಿ ವಸ್ತುಗಳ ಖರೀದಿ ಮತ್ತು ಮಾರಾಟ ನೆಪದಲ್ಲಿ ಕ್ಯೂರ್‌ ಕೋಡ್‌ ಕಳುಹಿಸಿ ಹಣ ದೋಚುತ್ತಿದ್ದಾರೆ. ಆನ್‌ಲೈನ್‌ ಮೂಲಕ ಹಣ ವರ್ಗಾಯಿಸುವುದಾಗಿ ನಂಬಿಸುವ ಕಿಡಿಗೇಡಿಗಳು, ಗ್ರಾಹಕರಿಗೆ ವಾಟ್ಸಾಪ್‌ ಮೂಲಕ ಕ್ಯೂಆರ್‌ ಕೋಡ್‌ ಕಳುಹಿಸುತ್ತಾರೆ.

ಇದನ್ನು ಸ್ಕಾ್ಯನ್‌ ಮಾಡಿದರೆ ನನ್ನ ಖಾತೆಯಿಂದ ನಿಮಗೆ ಹಣ ವರ್ಗಾವಣೆಯಾಗಲಿದೆ ಎಂದು ಹೇಳುತ್ತಾರೆ. ಈ ಮಾತು ನಂಬಿ ಕ್ಯೂಆರ್‌ ಕೋಡ್‌ ಅನ್ನು ಸ್ಕಾ್ಯನ್‌ ಮಾಡಿದ ಕೆಲವೇ ಸೆಕೆಂಡಿನಲ್ಲಿ ಗ್ರಾಹಕರ ಖಾತೆಯಿಂದ ವಂಚಕರು ಹಣ ದೋಚುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಾರೆ.

Follow Us:
Download App:
  • android
  • ios