ಬೆಂಗಳೂರಿನಲ್ಲಿ ಕ್ಯೂಟ್ ಟ್ಯಾಕ್ಸಿ ಸೇವೆ ಆರಂಭ: ಹಳದಿ ಟ್ಯಾಕ್ಸಿ ದರವೆಷ್ಟು ಗೊತ್ತಾ?
ಬೆಂಗಳೂರಿನಲ್ಲಿ ಪ್ರಯಾಣಿಕರಿಗೆ ಅನುಕೂಲ ಆಗುವಂತೆ ಟ್ಯಾಕ್ಸಿ ಸೇವೆ ಕಲ್ಪಿಸುತ್ತಿರುವ ಓಲಾ, ಉಬರ್ ಟ್ಯಾಕ್ಸಿ ಸೇವೆಯ ಜೊತೆಗೆ ಮತ್ತೊಂದು ಹೊಸದಾದ ಹಳದಿ ಬಣ್ಣದ ಕ್ಯೂಟ್ ಟ್ಯಾಕ್ಸಿ ಸೇವೆಯು ಆರಂಭವಾಗಲಿದೆ.
ಬೆಂಗಳೂರು (ಏ.24): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರಯಾಣಿಕರಿಗೆ ಅನುಕೂಲ ಆಗುವಂತೆ ಟ್ಯಾಕ್ಸಿ ಸೇವೆ ಕಲ್ಪಿಸುತ್ತಿರುವ ಓಲಾ, ಉಬರ್ ಟ್ಯಾಕ್ಸಿ ಸೇವೆಯ ಜೊತೆಗೆ ಮತ್ತೊಂದು ಹೊಸದಾದ ಹಳದಿ ಬಣ್ಣದ ಕ್ಯೂಟ್ ಟ್ಯಾಕ್ಸಿ ಸೇವೆಯು ಆರಂಭವಾಗಲಿದೆ.
ಬೆಂಗಳೂರಿನಲ್ಲಿ ಇಂದಿನಿಂದ ರಸ್ತೆಗೆ ಇಳಿಯುತ್ತಿದೆ ಮತ್ತೊಂದು ಟ್ಯಾಕ್ಸಿ ಸರ್ವೀಸ್. ಈಗಾಗಲೇ ಓಲಾ, ಊಬರ್ ಕಂಪನಿಗಳು ಟ್ಯಾಕ್ಸಿ ಸೇವೆಗಳನ್ನು ನೀಡುತ್ತಿದ್ದು, ಪ್ರಸ್ತುತ ಇರುವ ಕಾರುಗಳನ್ನೇ ಬಾಡಿಗೆ ಪಡೆದು ಸೇವೆ ನಿಡುತ್ತಿದೆ. ಆದರೆ, ಈಗ ಹೊಸದಾಗಿ ಸಣ್ಣ ಗಾತ್ರದ ಹಳದಿ ಟ್ಯಾಕ್ಸಿ ಸೇವೆಯು ಆರಂಭವಾಗುತ್ತಿದ್ದು, ಇದಕ್ಕೆ ಸರ್ಕಾರದ ಸಾರಿಗೆ ಇಲಾಖೆ ಕೂಡ ಅನುಮತಿ ನೀಡಿದೆ. ಜೊತೆಗೆ, ಇಂತಿಷ್ಟು ಕಿಲೋಮೀಟರ್‌ಗೆ ಪ್ರಯಾಣಿಕರಿಂದ ಪಡೆಯಬೇಕಾದ ದರವನ್ನೂ ಕೂಡ ಸಾರಿಗೆ ಇಲಾಖೆಯೇ ನಿರ್ಧರಿಸಿ ಆದೇಶವನ್ನು ಹೊರಡಿಸಿದೆ.
ಬೈಕ್ ಟ್ಯಾಕ್ಸಿ ವಿರುದ್ಧ ಇಂದು ಆಟೋ ಬಂದ್: ಮಧ್ಯರಾತ್ರಿವರೆಗೂ ರಸ್ತೆಗಿಳಿಯಲ್ಲ ಆಟೋ
4 ಕಿ.ಮೀ.ಗೆ 60 ರೂ. ದರ ನಿಗದಿ: ಸಾರಿಗೆ ಇಲಾಖೆ ಅನುಮತಿ ಮೇರೆಗೆ ಹಳದಿ ಟ್ಯಾಕ್ಸಿ ರಸ್ತೆಗಿಳಿಯುತ್ತಿದೆ. ಸಾರಿಗೆ ಇಲಾಖೆಯು ಓಲಾ, ಊಬರ್ ನಂತೆ ಪ್ರತ್ಯೇಕ ಪ್ರಯಾಣ ದರ ನಿಗದಿ ಮಾಡಿದೆ. ಪ್ರತಿ 1 ಕಿಲೋಮೀಟರ್ ಗೆ 16 ರೂ. ದರವನ್ನು ನಿಗದಿ ಮಾಡಲಾಗಿದೆ. ಇನ್ನು 4 ಕಿಲೋ ಮೀಟರ್‌ವರೆಗೆ ರೂ. 60 ರಷ್ಟು ಕನಿಷ್ಠ ದರ ನಿಗದಿ ಮಾಡಿ ಆದೇಶವನ್ನು ಹೊರಡಿಸಿದೆ. ಈ ಮೂಲಕ ಕೇವಲ ಮೂರ್ನಾಲ್ಕು ಕಿಲೋಮೀಟರ್ ಪ್ರಯಾಣದ ಸೇವೆಗೆ ನೂರಾರು ರೂ. ವಸೂಲಿ ಮಾಡುವ ಟ್ಯಾಕ್ಸಿಗಳಿಗೆ ಹೋಲಿಕೆ ಮಾಡಿದಲ್ಲಿ ಈ ಹೊಸ ಟ್ಯಾಕ್ಸಿಯ ದರ ಅತ್ಯಂತ ಕಡಿಮೆಯಾಗಿದೆ. ಇದನ್ನು ಪ್ರಯಾಣಿಕರ ಸ್ನೇಹಿ ಎಂದು ಹೇಳಲಾಗುತ್ತಿದೆ.
ಬಜಾಬ್ ಕಂಪನಿಯ ವಾಹನ: ನಾಲ್ಕು ಚಕ್ರದ ವಾಹನಗಳು ಮೀಟರ್ ಆಳವಡಿಕೆಯೊಂದಿಗೆ ರಸ್ತೆಗೆ ಇಳಿಯುತ್ತಿದೆ. ಬಜಾಬ್ ಕಂಪನಿಯ ಕ್ಯೂಟ್ (ಕ್ವಾಡ್ರಿ ಸೈಕಲ್) ವಾಹನಗಳು ನಗರದಲ್ಲಿ ಸೇವೆಯನ್ನು ಆರಂಭಿಸಲಿವೆ. ಕಾರು ಮಾದರಿಯ ಬಜಾಬ್ ಕ್ಯೂಟ್ ಕ್ವಾಡ್ರಿ ಸೈಕಲ್ ವಾಹನವು 2019 ರಲ್ಲೇ ಮಾರುಕಟ್ಟೆಗೆ ಬಂದಿದೆ. ಆದರೆ, ಹಲವು ವರ್ಷದಿಂದ ಬೆಂಗಳೂರಿನಲ್ಲಿ ಪ್ರಯಾಣಿಕರಿಗೆ ಸೇವೆಯನ್ನು ನೀಡಲು ಸಾರಿಗೆ ಇಲಾಖೆ ಅನುಮತಿ ನೀಡಿರಲಿಲ್ಲ. ಇದೀಗ ದರ ನಿಗದಿಪಡಿಸಿ ಸಾರ್ವಜನಿಕ ಸೇವೆಗೆ ಅನುಮತಿಯನ್ನು ನೀಡಿದೆ. ಆದ್ದರಿಂದ ಇಂದಿನಿಂದ ಕ್ಯೂಟ್ ಟ್ಯಾಕ್ಸಿ ಸಾರ್ವಜನಿಕರ ಸೇವೆಗೆ ಸಜ್ಜಾಗಿ ಆಗಮಿಸಿವೆ.
ಬೈಕ್ ಟ್ಯಾಕ್ಸಿಗಳ ರದ್ದತಿಗೆ ಆಟೋ ಚಾಲಕರ ಪಟ್ಟು: ಆ್ಯಪ್ ಆಧಾರಿತ ಅನಧಿಕೃತ ವೈಟ್‌ಬೋರ್ಡ್ ಬೈಕ್ ಟ್ಯಾಕ್ಸಿ (Whiteboard Bike Taxi)ಗಳ ಹಾವಳಿ ಹೆಚ್ಚಿದೆ. ಸಾರಿಗೆ ಇಲಾಖೆಯ ಕಣ್ಗಾವಲು ತಪ್ಪಿಸಿ ಇವರು ಕಾರ್ಯಾಚರಣೆ ಮಾಡುತ್ತಿದ್ದಾರೆ. ಇವರಿಂದ ಆಟೋ ಚಾಲಕರ ಬದುಕು ಸಂಕಷ್ಟಕ್ಕೆ ಸಿಲುಕಿರುವುದು ಮಾತ್ರವಲ್ಲ, ಸರ್ಕಾರಕ್ಕೂ ಆರ್ಥಿಕ ನಷ್ಟವಾಗುತ್ತಿದೆ. ಇದರ ಭಾಗವಾಗಿ ರಾರಯಪಿಡೋ ಬೈಕ್ ಟ್ಯಾಕ್ಸಿ ಆ್ಯಪ್ ಬ್ಯಾನ್ ಮಾಡಬೇಕು ಹಾಗೂ ಬೌನ್ಸ್ ಎಲೆಕ್ಟ್ರಿಕ್ ಬೈಕ್‌ಗೆ ನೀಡಿರುವ ಅನುಮತಿ ಹಿಂಪಡೆಯಬೇಕು ಎಂದು ಆಟೋ ಚಾಲಕರ ಸಂಘಟನೆಗಳು ಒತ್ತಾಯಿಸಿದ್ದರು.
ಕ್ಯೂಟ್ ಟ್ಯಾಕ್ಸಿಗೆ ಆಟೋ ಚಾಲಕರ ಅಭಿಪ್ರಾಯವೇನು? : ಈ ಅಕ್ರಮದಿಂದಾಗಿ ಮೆಕ್ಯಾನಿಕ್‌ಗಳು, ಟಾಪ್ ಟಿಂಕರಿಂಗ್ ಕೆಲಸಗಾರರು, ಮೀಟರ್ ದುರಸ್ತಿಗಾರರು, ಬಿಡಿಭಾಗ ಮಾರಾಟಗಾರರು ಸೇರಿ ಹಲವರು ಆರ್ಥಿಕ ನಷ್ಟಅನುಭವಿಸಲಿದ್ದಾರೆ. ಸಾರಿಗೆ ವ್ಯವಸ್ಥೆಗೆ ಮಾರಕವಾಗಿರುವ ಈ ಅಕ್ರಮಕ್ಕೆ ಸರ್ಕಾರ ತಕ್ಷಣ ನಿಷೇಧ ಹೇರಬೇಕು ಎಂದು ಆಟೋ ಚಾಲಕರು ಆಗ್ರಹಿಸಿದ್ದಾರೆ. ಈಗಾಗಲೇ ಪ್ರಯಾಣಿಕರು ಬಿಎಂಟಿಸಿ ಬಸ್(BMTC Bus), ಮೆಟ್ರೋ (Metro), ಖಾಸಗಿ ವಾಹನ, ಟ್ಯಾಕ್ಸಿ ಹಾಗೂ ಓಲಾ, ಊಬರ್ ಸೇರಿ ಇತರೆ ವಾಹನಗಳನ್ನು ಹೆಚ್ಚಾಗಿ ಅವಲಂಬನೆ ಮಾಡಿದ್ದು, ಆಟೋ (Autorikshaw) ಚಾಲಕರು ಸಂಕಷ್ಟಕ್ಕೆ ಒಳಗಾಗಿದ್ದೇವೆ ಎಂದು ಅಳಲು ತೋಡಿಕೊಂಡು ಮೂರ್ನಾಲ್ಕು ಬಾರಿ ಪ್ರತಿಭಟನೆ ಮಾಡಿದ್ದಾರೆ. ಆದರೆ, ಈಗ ಹೊಸ ಕ್ಯೂಟ್ ಟ್ಯಾಕ್ಸಿಗೆ ಯಾವ ಪ್ರತಿಕ್ರಿಯೆ ಬರುತ್ತದೆ ಎಂಬುದನ್ನು ಕಾದು ನೊಡಬೇಕಿದೆ.