200 ಗಡಿಯತ್ತ ಅಡುಗೆ ಎಣ್ಣೆ: ಗ್ರಾಹಕರು ಕಂಗಾಲು..!
ಪಾಮ್ ಆಯಿಲ್ ದರವೂ ವಿಪರೀತ ಹೆಚ್ಚಳ| ಇಂಧನದಂತೆ ನಿತ್ಯವೂ ಏರಿಕೆಯಾಗುತ್ತಲೇ ಧಾರಣೆ| ಬೆಲೆ ಏರಿಕೆಯ ಪೈಪೋಟಿ ಒಂದು ಕಡೆಯಾದರೆ ಅಡುಗೆ ಎಣ್ಣೆಯಲ್ಲಿ ಕಲಬೆರಕೆಯ ಹಾವಳಿ ಮಿತಿಮೀರಿದೆ| ಇನ್ನೊಂದೆರಡು ತಿಂಗಳಲ್ಲಿಯೇ ಅಡುಗೆ ಎಣ್ಣೆ ದರ ಕೆಜಿಗೆ ಡಬಲ್ ಸಂಚುರಿ ಹೊಡೆಯುವುದರಲ್ಲಿ ಅನುಮಾನವೇ ಇಲ್ಲ|
ಸೋಮರಡ್ಡಿ ಅಳವಂಡಿ
ಕೊಪ್ಪಳ(ಮಾ.10): ಇಂಧನ ದರದಂತೆ ಅಡುಗೆ ಎಣ್ಣೆ ಧಾರಣೆಯೂ ಗ್ರಾಹಕರ ಕೆಂಗಣ್ಣಿಗೆ ಗುರಿಯಾಗಿದ್ದು, ಶೇಂಗಾ, ಸೂರ್ಯಕಾಂತಿ ಎಣ್ಣೆ ಕೆಜಿಗೆ ಡಬಲ್ ಸೆಂಚುರಿಯತ್ತ ಸಾಗುತ್ತಿರುವುದು ಗ್ರಾಹಕರ ಆಕ್ರೋಶಕ್ಕೆ ಕಾರಣವಾಗಿದೆ.
ಶೇಂಗಾ ಎಣ್ಣೆ ಹಾಗೂ ಸೂರ್ಯಕಾಂತಿ ಎಣ್ಣೆ ಪ್ರತಿ ಕೆಜಿಗೆ 170 ದಾಟುತ್ತಿದೆ. ಕಳೆದ ಕೆಲ ದಿನಗಳಿಂದ ನಿರಂತರವಾಗಿ ಏರುತ್ತಲೇ ಇದೆ. ಹೆಚ್ಚಾಗಿ ಹೋಟೆಲ್, ರಸ್ತೆ ಬದಿಯ ಅಂಗಡಿಗಳಲ್ಲಿ ಬಳಸುವ ಅಗ್ಗ ದರದ ಅಡುಗೆ ಎಣ್ಣೆ ಎಂದೇ ಹೇಳಲಾಗುವ ಪಾಮ್ ಎಣ್ಣೆಯೂ 140 ಆಗಿದೆ. ಇದರ ದರವೂ ಹೀಗೆ ಏರಿಕೆಯಾಗುತ್ತಲೇ ಇದೆ.
ಕಳೆದ ಕೆಲ ದಿನಗಳಿಂದ ಇವೆಲ್ಲವೂ ಮಿತಿ ಮೀರಿ ಏರಿಕೆಯಾಗುತ್ತಿದ್ದು, ಇದಕ್ಕೆ ನಿಖರ ಕಾರಣ ತಿಳಿಯುತ್ತಿಲ್ಲ ಎನ್ನುತ್ತಾರೆ ವ್ಯಾಪಾರಸ್ಥರು. ಅದರಲ್ಲೂ ಕಳೆದ ಮೂರು ತಿಂಗಳಲ್ಲಿಯೇ ಏರುತ್ತಿರುವ ವೇಗ ನೋಡಿದರೆ ಇನ್ನೊಂದೆರಡು ತಿಂಗಳಲ್ಲಿಯೇ ಅಡುಗೆ ಎಣ್ಣೆ ದರ ಕೆಜಿಗೆ ಡಬಲ್ ಸಂಚುರಿ ಹೊಡೆಯುವುದರಲ್ಲಿ ಅನುಮಾನವೇ ಇಲ್ಲ ಎನ್ನುತ್ತಾರೆ. ಕಳೆದ ನಾಲ್ಕು ತಿಂಗಳ ಹಿಂದೆ ಕೆಜಿಗೆ 120 ಇದ್ದ ಶೇಂಗಾ, ಸೂರ್ಯಕಾಂತಿ ಎಣ್ಣೆ ಈಗ 170ರ ಗಡಿ ದಾಟಿದೆ.
ಶರವೇಗದಲ್ಲಿ ಏರಿಕೆ:
ಸಾಮಾನ್ಯವಾಗಿ ಶೇಂಗಾ ಮತ್ತು ಸೂರ್ಯಕಾಂತಿ ಎಣ್ಣೆಗೂ ಏನಿಲ್ಲವೆಂದರೂ ಕೆಜಿಗೆ 30- 40 ವ್ಯತ್ಯಾಸ ಇರುತ್ತಿತ್ತು. ಶೇಂಗಾ ಎಣ್ಣೆ ಕೆಜಿಗೆ ನೂರು ರುಪಾಯಿ ಇದ್ದಾಗ ಸೂರ್ಯಕಾಂತಿ ಎಣ್ಣೆ 60-70 ಇತ್ತು. ಇನ್ನು ಪಾಮ್ ಎಣ್ಣೆಯಂತೂ 40- 50 ಇರುತ್ತಿತ್ತು. ಆದರೆ, ಶೇಂಗಾ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆ ದರಕ್ಕೂ ಯಾವುದೇ ವ್ಯತ್ಯಾಸ ಇಲ್ಲ. ಇದರ ಬೆನ್ನ ಹಿಂದೆಯೇ ಪಾಮ್ ಎಣ್ಣೆಯ ದರವೂ ಇರುವುದು ಅಡುಗೆ ಎಣ್ಣೆ ಮಾರುಕಟ್ಟೆಯಲ್ಲಿ ತಲ್ಲಣ ಮೂಡಿಸಿದೆ.
ವಿಜಯೇಂದ್ರನ ಆಪರೇಷನ್ ಕಮಲ ಸಕ್ಸಸ್: ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಮಾಜಿ ಸಂಸದ
ಕಲಬೆರಕೆ:
ಬೆಲೆ ಏರಿಕೆಯ ಪೈಪೋಟಿ ಒಂದು ಕಡೆಯಾದರೆ ಅಡುಗೆ ಎಣ್ಣೆಯಲ್ಲಿ ಕಲಬೆರಕೆಯ ಹಾವಳಿ ಮಿತಿಮೀರಿದೆ. ಈಗಿರುವ ಶೇಂಗಾ ಮತ್ತು ಸೂರ್ಯಕಾಂತಿ ದರ ಪರಿಗಣಿಸಿದರೆ ಎಣ್ಣೆಯನ್ನು ಕೆಜಿಗೆ 200ರಂತೆ ಮಾರಿದರೂ ವರ್ಕೌಟ್ ಆಗುವುದಿಲ್ಲ ಎನ್ನುತ್ತಾರೆ ವ್ಯಾಪಾರಸ್ಥರು. ಇದಕ್ಕಾಗಿಯೇ ಕಲಬೆರಕೆ ಮಾಡಲಾಗುತ್ತದೆ. ಬೇರೆ ಯಾವುದೋ ಪದಾರ್ಥದಿಂದ ಮಾಡಿದ ಕಲಬೆರಕೆ ಎಣ್ಣೆಗೆ ಶೇಂಗಾ, ಸೂರ್ಯಕಾಂತಿ ಎಣ್ಣೆಯ ಪರಿಮಳ, ಸುವಾಸನೆ ಬರುವಂತೆ ಮತ್ತೇನನ್ನೋ ಸೇರಿಸಲಾಗುತ್ತದೆ. ಎಣ್ಣೆಗೆ ಒಂದು ಹನಿ ಈ ಪದಾರ್ಥ ಹಾಕಿದರೆ ಆಯಾ ಎಣ್ಣೆಗಳ ಪರಿಮಳ ಬರುತ್ತದೆಯಂತೆ. ಈ ಎಣ್ಣೆ ಸೇವಿಸದರೆ ಆರೋಗ್ಯದ ಮೇಲೆ ಭಾರೀ ಗಂಭೀರ ಪರಿಣಾಮ ಬೀರುತ್ತದೆ. ಬಹುತೇಕ ಕೊಲೆಸ್ಟ್ರಾಲ್, ಹೃದಯ ಸಂಬಂಧಿ ಕಾಯಿಲೆ, ಮಧುಮೇಯ, ರಕ್ತದೊತ್ತಡ, ಕ್ಯಾನ್ಸರ್‌ಗಳಿಗೆ ಈ ಕಲಬೆರಕೆ ಎಣ್ಣೆಯೇ ಕಾರಣವಾಗಿದೆ.
ಗುಣಮಟ್ಟ ಪರಿಶೀಲಿಸಿ
ಕಲಬೆರಕೆ ಎಣ್ಣೆಯಿಂದ ಆರೋಗ್ಯದ ಮೇಲೆಯೂ ದೊಡ್ಡ ಪೆಟ್ಟು ಬೀಳುತ್ತದೆ. ನಾನಾ ಕಾಯಿಲೆಗಳಿಗೆ ದಾರಿಯಾಗುತ್ತದೆ ಎನ್ನಲಾಗುತ್ತಿದೆ. ಮಾರುಕಟ್ಟೆಯಲ್ಲಿನ ಅಡುಗೆ ಎಣ್ಣೆಯನ್ನು ಗುಣಮಟ್ಟಪರಿಶೀಲನೆಗೆ ಒಳಪಡಿಸಬೇಕು ಎನ್ನುವ ಆಗ್ರಹವೂ ಕೇಳಿ ಬರುತ್ತಿದೆ.
ಏರಿಕೆಗೆ ಏನು ಕಾರಣ?
ಪಾಮ್ ಎಣ್ಣೆಯನ್ನು ಮಲೇಶಿಯಾ ಸೇರಿದಂತೆ ನಾನಾ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಈಗ ಕೇಂದ್ರ ಸರ್ಕಾರ ಇದಕ್ಕೆ ನಿಷೇಧ ಹೇರಿದೆ ಎಂದು ಹೇಳಲಾಗುತ್ತಿದೆ. ಈ ಕಾರಣಕ್ಕೂ ದರ ಏರಿಕೆಯಾಗುತ್ತಿರುಬಹುದು ಎಂದು ವಿಶ್ಲೇಷಣೆ ಮಾಡಲಾಗುತ್ತಿತ್ತು. ಇನ್ನು ಇಂಧನ ದರ ಏರುತ್ತಿರುವುದರಿಂದ ಸಾರಿಗೆ ವೆಚ್ಚದ ಹೆಚ್ಚಳವೂ ದರ ಏರಿಕೆಗೆ ಕಾರಣವಾಗಿರಬಹುದು ಎನ್ನಲಾಗುತ್ತಿದೆ.
ಪೆಟ್ರೋಲ್ ದರದಂತೆ ಅಡುಗೆ ಎಣ್ಣೆಯ ದರವೂ ಏರಿಕೆಯಾಗುತ್ತಿದೆ. ನಿತ್ಯವೂ ಮಾರುಕಟ್ಟೆಯಲ್ಲಿ ಒಂದೆರಡು ರುಪಾಯಿ ಏರುತ್ತಲೇ ಇದೆ. ಹೀಗಾಗಿ ಶೇಂಗಾ ಮತ್ತು ಸೂರ್ಯಕಾಂತಿ ಎಣ್ಣೆ ಡಬಲ್ ಸೆಂಚುರಿ ಬಾರಿಸುವುದರಲ್ಲಿ ಅನುಮಾನ ಇಲ್ಲ ಎಂದು ಅಡುಗೆ ಎಣ್ಣೆ ವ್ಯಾಪಾರಿ ಗಿರೀಶ ಪಾನಘಂಡಿ ತಿಳಿಸಿದ್ದಾರೆ.