ಕೆ. ಎನ್‌. ರವಿ

ಮಂಡ್ಯ(ಏ.20):  ಕೊರೋನಾ ಹರಡುವಿಕೆಯನ್ನು ತಡೆಗಟ್ಟಲು ಲಾಕ್‌ಡೌನ್‌ ಜಾರಿ ಮಾಡಿದ ದಿನದಿಂದ ದಿನಸಿ ಪದಾರ್ಥಗಳ ಬೆಲೆಗೆ ಕಡಿವಾಣ ಹಾಕುವುದೇ ಕಷ್ಟವಾಗಿದೆ. ದಿನಸಿ ಪದಾರ್ಥಗಳನ್ನು ಮಾರಾಟ ಮಾಡುವ ವ್ಯಾಪಾರಸ್ಥರಿಗೆ ಹೊರ ಜಿಲ್ಲೆ ಮತ್ತು ರಾಜ್ಯಗಳಿಂದ ಪದಾರ್ಥಗಳು ಬರುವುದೇ ಕಡಿಮೆಯಾಗಿದೆ. ಇದರಿಂದ ಇರುವ ಪದಾರ್ಥಗಳನ್ನು ದುಪ್ಪಟ್ಟು ಲಾಭಕ್ಕೆ ಮಾರಿಕೊಳ್ಳುವ ವ್ಯಾಪಾರಸ್ಥರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ.

ಬೆಲೆಗಳ ಬಗ್ಗೆ ತಿಳಿವಳಿಕೆ ನೀಡಿಲ್ಲ:

ಮಧ್ಯಮ ಮತ್ತು ಕೆಳ ವರ್ಗದ ಜನರಿಗೆ ದಿನಸಿ ಪದಾರ್ಥಗಳ ಬೆಲೆಏರಿಕೆ ಬರೆ ಹಾಕಿದಂತಾಗಿದೆ. ಸರ್ಕಾರ ಮತ್ತು ಜಿಲ್ಲಾಡಳಿತ ದಿನಸಿ ಪದಾರ್ಥಗಳನ್ನು ನಿಗದಿತ ದರದಲ್ಲಿ ಮಾರಾಟ ಮಾಡಬೇಕು. ಉದ್ದೇಶ ಪೂರ್ವಕವಾಗಿ ಬೆಲೆ ಏರಿಕೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ಮಾತ್ರ ನೀಡಲಾಗುತ್ತಿದೆ. ಜಿಲ್ಲಾಡಳಿತ ಕೂಡ ಚಿಲ್ಲರೆ ದಿನಸಿ ಪದಾರ್ಥಗಳ ದರಗಳನ್ನು (ಎಸ್ಸೆನ್ಸಿಯಲ್‌ ಕಮಾಡಿಟಿ ಆಕ್ಟ್ ನಡಿ)ಯಲ್ಲಿ ಇಲ್ಲಿಯವರೆಗೂ ನಿಗದಿ ಮಾಡಿಲ್ಲ. ಇದುವರೆಗೂ ಬೆಲೆಗಳ ಬಗ್ಗೆ ವ್ಯಾಪಾರಸ್ಥರಿಗೆ ಯಾವುದೇ ತಿಳಿವಳಿಕೆ ನೀಡಿರುವುದಿಲ್ಲ.

ಕೊರೋನಾ ಸೋಂಕಿತರಿದ್ದ ಡೇಂಜರ್ ಏರಿಯಾಗಳಲ್ಲಿ ಡಿಸಿ ರಿಯಾಲಿಟಿ ಚೆಕ್

ದರ ಪಟ್ಟಿಯೂ ಇಲ್ಲ:

ಆಹಾರ ಇಲಾಖೆ ಮತ್ತು ತೂಕ ಮಾಪನಶಾಸ್ತ್ರ ಅಧಿಕಾರಿಗಳು ವ್ಯಾಪಾರಸ್ಥರ ಬಳಿ ಹೋಗಿ ಬೆಲೆ ದರಗಳನ್ನು ವಿಚಾರಣೆ ಮಾಡುತ್ತಾರೆ. ಆದರೆ, ಅಧಿಕಾರಿಗಳಿಗೆ ಹೇಳುವುದು ಒಂದು. ಮಾರಾಟ ಮಾಡುವುದು ಮತ್ತೊಂದು ದರ. ಜಿಲ್ಲೆಯ ಯಾವುದೇ ದಿನಸಿ ಅಂಗಡಿಗಳು ಆಯಾ ಪದಾರ್ಥಗಳ ದರದ ಪಟ್ಟಿಯನ್ನು ಹೊರಗೆ ಪ್ರಕಟ ಮಾಡಿಲ್ಲ. ಆಹಾರ ಇಲಾಖೆ ಅಧಿಕಾರಿಗಳು ಕೂಡ ಈ ಬಗ್ಗೆ ಯಾವುದೇ ವಿಚಾರಣೆ ಮಾಡದೇ ಇರುವುದು ಇಂತಹ ಸಮಸ್ಯೆಗಳಿಗೆ ಕಾರಣವಾಗಿದೆ.

ಲಾಕ್‌ಡೌನ್‌ ಲಾಭಕ್ಕೆ ಬಳಕೆ:

ಜಿಲ್ಲಾಡಳಿತ ಎಲ್ಲ ತಹಸೀಲ್ದಾರ್‌ ಮತ್ತು ಆಹಾರ ಅಧಿಕಾರಿಗಳಿಗೆ ಪ್ರತಿಯೊಂದು ದಿನಸಿ ಅಂಗಡಿ ಮುಂದೆ ಆಯಾ ದಿನದ ಪದಾರ್ಥಗಳ ದರದ ಪಟ್ಟಿಯನ್ನು ಅಂಗಡಿಯ ಮುಂದೆ ಪ್ರಕಟ ಮಾಡಿದಾಗ ವ್ಯಾಪಾರಸ್ಥರು ದುಪ್ಪಟ್ಟು ದರಲ್ಲಿ ಮಾರುವುದನ್ನು ತಪ್ಪಿಸಬಹುದು. ಆದರೆ, ಆ ಕೆಲಸ ಇದುವರೆಗೂ ಆಗಿಲ್ಲ. ಶ್ರೀರಂಗಪಟ್ಟಣದ ಸನ್‌ ಫ್ಲವರ್‌ ಅಡಿಗೆ ಎಣ್ಣೆ ತಯಾರಿಕೆ ಕಾರ್ಖಾನೆಯವರು ಲಾಕ್‌ಡೌನ್‌ ಸಮಯವನ್ನು ತಮ್ಮ ಲಾಭಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ತೂಕ ಮತ್ತು ಕಾನೂನು ಮಾಪನ ಶಾಸ್ತ್ರ ಅಧಿಕಾರಿಗಳು ಮದ್ದೂರಿನಲ್ಲಿ ದಿಢೀರ ದಾಳಿ ಮಾಡಿ ಕೆಲ ಅಂಗಡಿಗಳನ್ನು ವಿಚಾರಣೆ ನಡೆಸಿದ್ದಾರೆ.

ಜಿಲ್ಲಾಡಳಿತ ಸನ್‌ ಫ್ಲವರ್‌ ಎಣ್ಣೆ ಸೇರಿದಂತೆ ಎಲ್ಲಾ ಪದಾರ್ಥಗಳ ಮಾರಾಟ ದರವನ್ನು ನಿಗದಿ ಮಾಡಿ ದರ ಪಟ್ಟಿಯನ್ನು ಪ್ರಕಟಿಸಬೇಕು. ಲಾಕ್‌ ಡೌನ್‌ ಸಮಯದಲ್ಲಿ ಗ್ರಾಹಕರನ್ನು ಸುಲಿಗೆ ಮಾಡುವ ವ್ಯಾಪಾರಸ್ಥರನ್ನು ಪತ್ತೆ ಮಾಡಿ ಕಠಿಣ ಕ್ರಮ ಜರುಗಿಸಬೇಕು ಎಂಬುದು ಗ್ರಾಹಕರ ಒತ್ತಾಯ.

10ರು. ಹೆಚ್ಚಿಗೆ ಬೆಲೆಗೆ ಎಣ್ಣೆ ಮಾರಾಟ!

ಸನ್‌ ಫ್ಲವರ್‌ 1 ಲೀಟರ್‌ ಎಣ್ಣೆಗೆ ಎಂಆರ್‌ಪಿ ದರ 125 ರು. ಇದೆ. ಸಗಟು ವ್ಯಾಪಾರಸ್ಥರಿಗೆ ಈ ಮೊದಲು 90 ಅಥವಾ 92 ರು.ಗೆ ಮಾರಾಟ ಮಾಡುತ್ತಿದ್ದರು. ಲಾಕ್‌ಡೌನ್‌ ನಂತರ ಅದೇ ಎಂಆರ್‌ಪಿ ದರ 125 ರು.ನಲ್ಲಿ ಕಾರ್ಖಾನೆಯವರು 105 ರು.ಗೆ ಸಗಟು ವ್ಯಾಪಾರದಾರರಿಗೆ ಮಾರಾಟ ಮಾಡುತ್ತಿದ್ದಾರೆ. ಅಂದರೆ ಕಾರ್ಖಾನೆಗೆ ಒಂದು ತಿಂಗಳಲ್ಲಿ ಲೀಟರ್‌ವೊಂದಕ್ಕೆ ಸುಮಾರು 10 ರು. ಲಾಭ ಸಿಕ್ಕಿತು. ಸಗಟು ವ್ಯಾಪಾರದಾರರು 110 ರು.ಗೆ ಪ್ರತಿ ಲೀಟರ್‌ ಎಣ್ಣೆಯನ್ನು ಮಾರಾಟ ಮಾಡುತ್ತಿದ್ದಾರೆ. ಅಂದರೆ ಈ ವ್ಯಾಪಾರಸ್ಥರಿಗೆ 5 ರು. ಲಾಭ. ಚಿಲ್ಲರೆ ವ್ಯಾಪಾರಸ್ಥರು ಇದೇ 1 ಲೀಟರ್‌ ಎಣ್ಣೆಯನ್ನು 115 ರು.ಗೆ ಮಾರಾಟ ಮಾಡುತ್ತಿದ್ದಾರೆ. ಆಗ ಅವರಿಗೂ 5 ರು. ಲಾಭ. ಅಂದರೆ ಗ್ರಾಹಕರು ಒಂದು ಲೀಟರ್‌ ಎಣ್ಣೆಗೆ ಲಾಕ್‌ ಡೌನ್‌ ವೇಳೆಯಲ್ಲಿ ಸುಮಾರು 20 ರು. ಪ್ರತಿ ಲೀಟರ್‌ ಗೆ ಹೆಚ್ಚುವರಿಯಾಗಿ ಕೊಡಬೇಕು. ಇದರಿಂದ ಕಾರ್ಖಾನೆಯವರು ಸಾಕಷ್ಟು ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂಬುದು ಗ್ರಾಹಕರ ದೂರು.