ಬೆಂಗಳೂರು (ಫೆ.16): ವಿದ್ಯಾರ್ಥಿನಿಯೋರ್ವಳು 9ನೇ ತರಗತಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ಹಿನ್ನೆಲೆಯಲ್ಲಿ ಆಕೆಯ ತಂದೆಯಿಂದ ಕೋಚಿಂಗ್‌ ಸೆಂಟರ್‌ವೊಂದು ಪಡೆದಿದ್ದ ಶುಲ್ಕವನ್ನು ವಾಪಸ್‌ ನೀಡುವಂತೆ ಬೆಂಗಳೂರಿನ ಜಿಲ್ಲಾ ಗ್ರಾಹಕ ಪರಿಹಾರ ವೇದಿಕೆ ಆದೇಶಿಸಿದೆ.

‘ಕೋಚಿಂಗ್‌ ಸಂಸ್ಥೆಯೊಂದು ತಮ್ಮ ಮಗಳಿಗೆ ಉತ್ತಮ ರೀತಿಯ ತರಬೇತಿ ನೀಡುವುದಾಗಿ ಆಶ್ವಾಸನೆ ನೀಡಿ .69,408 ಶುಲ್ಕ ಕಟ್ಟಿಸಿಕೊಂಡಿತ್ತು. ಆದರೆ ಅದರ ಸೇವೆ ಆಶ್ವಾಸನೆಯಂತೆ ಇರಲಿಲ್ಲ. ಹೆಚ್ಚುವರಿ ತರಗತಿಗಳಿರಲಿ, ದೈನಂದಿನ ತರಗತಿಗಳನ್ನೂ ಸರಿಯಾಗಿ ನಡೆಸುತ್ತಿರಲಿಲ್ಲ. ಪರಿಣಾಮ ಮಗಳು ಕಲಿಕೆಯಲ್ಲಿ ಹಿಂದುಳಿದು, ಶಾಲೆಯು ನಡೆಸಿದ 9ನೇ ತರಗತಿಯ ಘಟಕ ಪರೀಕ್ಷೆಯಲ್ಲಿ ಆಕೆ ಅನುತ್ತೀರ್ಣಳಾಗಿದ್ದಾಳೆ. ಹೀಗಾಗಿ ಶುಲ್ಕದ ಹಣವನ್ನು ವಾಪಸ್‌ ನೀಡಬೇಕು’ ಎಂದು ವಿದ್ಯಾರ್ಥಿನಿಯ ತಂದೆ ತ್ರಿಲೋಕ್‌ ಚಂದ್‌ ಗುಪ್ತಾ ದೂರು ನೀಡಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಗ್ರಾಹಕ ರಕ್ಷಣಾ ವೇದಿಕೆಯು, 6 ವಾರಗಳ ಒಳಗಾಗಿ ಒಟ್ಟು ಶುಲ್ಕದ ಪೈಕಿ .26,250 ಮತ್ತು .5000 ದಾವೆ ಶುಲ್ಕವನ್ನು ಮರು ಪಾವತಿಸಬೇಕೆಂದು ಕೋಚಿಂಗ್‌ ಸೆಂಟರ್‌ನ ವ್ಯವಸ್ಥಾಪಕ ನಿರ್ದೇಶಕರಿಗೆ ಆದೇಶಿಸಿದೆ.