Mandya : ಜಿಲ್ಲೆಯಲ್ಲಿ ಭತ್ತದ ಬೆಳೆ ಸೂಪರ್‌..!

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯೊಳಗೆ ಭತ್ತದ ಉತ್ಪಾದನೆ 4,91,672 ಮೆಟ್ರಿಕ್‌ ಟನ್‌ ಭತ್ತ ಹಾಗೂ 1,00,601 ಮೆಟ್ರಿಕ್‌ ಟನ್‌ ರಾಗಿ ಉತ್ಪಾದನೆಯಾಗಲಿದೆ ಎಂದು ಅಂದಾಜಿಸಲಾಗಿದೆ.

  current monsoon season the production of paddy  is 491672 metric tonnes in Mandya snr

 ಮಂಡ್ಯ (ನ.18):  ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯೊಳಗೆ ಭತ್ತದ ಉತ್ಪಾದನೆ 4,91,672 ಮೆಟ್ರಿಕ್‌ ಟನ್‌ ಭತ್ತ ಹಾಗೂ 1,00,601 ಮೆಟ್ರಿಕ್‌ ಟನ್‌ ರಾಗಿ ಉತ್ಪಾದನೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ಜಿಲ್ಲೆಯ 61,459 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತದ ಬೆಳೆ ಬೆಳೆಯಲಾಗಿದ್ದು, ಪ್ರತಿ ಹೆಕ್ಟೇರ್‌ಗೆ 80 ಕ್ವಿಂಟಾಲ್‌ನಂತೆ 49,16,720 ಕ್ವಿಂಟಾಲ್‌ ಭತ್ತ ಉತ್ಪಾದನೆಯಾದರೆ, 45,728 ಹೆಕ್ಟೇರ್‌ ಪ್ರದೇಶದಲ್ಲಿ ರಾಗಿ ಬೆಳೆದಿದ್ದು ಪ್ರತಿ ಹೆಕ್ಟೇರ್‌ಗೆ 22 ಕ್ವಿಂಟಾಲ್‌ನಂತೆ 10,06,016 ಕ್ವಿಂಟಾಲ್‌ ರಾಗಿ ಉತ್ಪಾದನೆಯಾಗಬಹುದೆಂದು ನಿರೀಕ್ಷಿಸಲಾಗಿದೆ.

ಕಳೆದ ವರ್ಷ 58,679 ಹೆಕ್ಟ್ೕರ್‌ನಲ್ಲಿ ಭತ್ತ (Paddy)  ಬೆಳೆದಿದ್ದು 4,69,432 ಮೆಟ್ರಿಕ್‌ ಟನ್‌ ಹಾಗೂ 55,088 ಹೆಕ್ಟೇರ್‌ನಲ್ಲಿ ರಾಗಿ (millet)  ಬೆಳೆದಿದ್ದು 1,21,193 ಮೆಟ್ರಿಕ್‌ ಟನ್‌ ಉತ್ಪಾದನೆಯಾಗಲಿದೆ ಎಂದು ಅಂದಾಜಿಸಿತ್ತು. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಭತ ಬೆಳೆಯನ್ನು 2780 ಹೆಕ್ಟೇರ್‌ ಹೆಚ್ಚು ವಿಸ್ತೀರ್ಣದಲ್ಲಿ ಬೆಳೆದು ಉತ್ಪಾದನೆ 22,240 ಮೆಟ್ರಿಕ್‌ ಟನ್‌ನಷ್ಟುಹೆಚ್ಚಿದ್ದರೆ, ರಾಗಿ ಬೆಳೆ ವಿಸ್ತೀರ್ಣ ಕಳೆದ ವರ್ಷಕ್ಕಿಂತ 9360 ಹೆಕ್ಟೇರ್‌ನಷ್ಟುಕಡಿಮೆಯಾಗಿದೆ. ಹಾಗಾಗಿ ರಾಗಿ ಉತ್ಪಾದನೆ 20592 ಮೆಟ್ರಿಕ್‌ ಟನ್‌ನಷ್ಟುಕಡಿಮೆಯಾಗಿರುವುದಾಗಿ ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಾರಿ ಉತ್ತಮ ಮಳೆಯಿಂದಾಗಿ ರೈತರು ಭತ್ತದ ಬೆಳೆಗೆ ಹೆಚ್ಚಿನ ಆಸಕ್ತಿ ತೋರಿಸಿದ್ದರಿಂದ ಬೆಳೆ ಬೆಳೆಯುವ ವಿಸ್ತೀರ್ಣ ಹೆಚ್ಚಾಗಿದೆ. ಫäರ್ವ ಮುಂಗಾರು ಹಾಗೂ ಮುಂಗಾರು ಹಂಗಾಮು ಆಶಾದಾಯಕವಾಗಿದ್ದರಿಂದ ಬೆಳೆಗಳಿಗೆ ನೀರು ಸಮೃದ್ಧವಾಗಿ ದೊರಕಿದ್ದರ ಪರಿಣಾಮವಾಗಿ ಭತ್ತ ಬೆಳೆಯುವ ಪ್ರದೇಶದ ವ್ಯಾಪ್ತಿ ವಿಸ್ತಾರಗೊಂಡಿತು. ರಾಗಿ ಬೆಳೆಯುತ್ತಿದ್ದ ಪ್ರದೇಶದ ರೈತರು ಭತ್ತದ ಕಡೆ ಮುಖ ಮಾಡಿದರು. ಇದು ರಾಗಿ ಬೆಳೆಯ ಉತ್ಪಾದನೆ ಕ್ಷೀಣಿಸುವುದಕ್ಕೆ ಕಾರಣವಾಯಿತು ಎಂದು ಹೇಳಲಾಗಿದೆ.

ಜುಲೈ ತಿಂಗಳಲ್ಲಿ ರೈತರು ಭತ್ತದ ಸಸಿ ಮಡಿ ಮಾಡಿಟ್ಟುಕೊಂಡಿದ್ದರು. ಆದರೆ, ಆ ವೇಳೆ ಸುರಿದ ಭಾರೀ ಮಳೆಯಿಂದಾಗಿ ಸಸಿಮಡಿ ನಾಶವಾದವು. ಆದರೆ, ರೈತರು ಸುಮ್ಮನಾಗಲಿಲ್ಲ. ಮತ್ತೆ ಸಸಿ ಮಡಿ ಮಾಡಿ ಭತ್ತ ಬೆಳೆಯುವುದಕ್ಕೆ ಒಲವನ್ನು ತೋರಿದರು. ನಾಲೆಗಳ ಮೂಲಕವೂ ಸಾಕಷ್ಟುನೀರು ದೊರಕಿದ್ದರಿಂದ ಮಂಡ್ಯ ಮತ್ತೊಮ್ಮೆ ಭತ್ತದ ಕಣಜ ಎಂಬ ಹೆಗ್ಗಳಿಕೆಯನ್ನು ಕಾಯ್ದುಕೊಳ್ಳುವುದಕ್ಕೆ ಸಾಧ್ಯವಾಯಿತು.

ಭತ್ತ ಮತ್ತು ರಾಗಿ ಬೆಳೆಗಳಿಗೆ ಪೂರಕವಾದ ವಾತಾವರಣ ಸೃಷ್ಟಿಯಾಗಿದ್ದರಿಂದ ರೋಗಗಳು ಬೆಳೆಗಳನ್ನು ಕಾಡಲಿಲ್ಲ. ಬೆಳೆಯೂ ಉತ್ತಮವಾಗಿ ಬಂದು ರೈತರ ಕೈಸೇರುವಂತಾಯಿತು. ನಿರೀಕ್ಷೆಯಂತೆ ಭತ್ತ ಬೆಳೆಯುವ ವಿಸ್ತೀರ್ಣ ಹೆಚ್ಚಿದ್ದರಿಂದ ಉತ್ಪಾದನೆಯಲ್ಲಿ ಮೇಲುಗೈ ಸಾಧಿಸಿದರೆ, ರಾಗಿ ಬೆಳೆಯುವ ವಿಸ್ತೀರ್ಣ ಕುಸಿತವಾಗಿ ಉತ್ಪಾದನೆಯೂ ಇಳಿಮುಖವಾಯಿತು.

ಖರೀದಿ ಕೇಂದ್ರ ತೆರೆಯುವ ಆಸಕ್ತಿ ತೋರಿಲ್ಲ..!

ಪ್ರತಿ ವರ್ಷವೂ ಭತ್ತ ಮತ್ತು ರಾಗಿ ಖರೀದಿ ಕೇಂದ್ರ ತೆರೆಯುವುದು ವಿಳಂಬವಾಗುತ್ತಿರುವ ಬಗ್ಗೆ ರೈತ ಸಂಘಟನೆಗಳು ಹಾಗೂ ರೈತ ಸಮುದಾಯದಿಂದ ತೀವ್ರ ಆರೋಪಗಳು ಕೇಳಿಬರುತ್ತಿದ್ದರೂ ಸರ್ಕಾರ ಮಾತ್ರ ಎಚ್ಚೆತ್ತುಕೊಂಡಿಲ್ಲ. ಭತ್ತ, ರಾಗಿ ಕಟಾವಿನ ಹಂತ ತಲುಪಿದ್ದರೂ ಖರೀದಿ ಕೇಂದ್ರಗಳನ್ನು ತೆರೆಯುವುದಕ್ಕೆ ಇದುವರೆಗೂ ಆಸಕ್ತಿಯನ್ನೇ ತೋರಿಸಿಲ್ಲ.

ಡಿಸೆಂಬರ್‌ ಅಂತ್ಯ ಅಥವಾ ಜನವರಿ ವೇಳೆಗೆ ಖರೀದಿ ಕೇಂದ್ರ ಆರಂಭಿಸುವುದರಿಂದ ರೈತರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ದಲ್ಲಾಳಿಗಳಿಗೆ ಲಾಭ ಮಾಡಿಕೊಡುವ ಸಲುವಾಗಿ ಖರೀದಿ ಕೇಂದ್ರ ತೆರೆಯುವುದನ್ನು ಸರ್ಕಾರ ವಿಳಂಬ ಮಾಡುತ್ತಿದೆ ಎಂಬ ಕೂಗು ಕೇಳಿಬರುತ್ತಿದೆ.

ಪ್ರತಿ ವರ್ಷದಂತೆ ಈ ವರ್ಷವೂ ಡಿಸೆಂಬರ್‌ ಮೊದಲ ವಾರದಲ್ಲಿ ಭತ್ತದ ಕಟಾವು ಆರಂಭವಾಗಲಿದೆ. ಈಗಾಗಲೇ ಕಟಾವನ್ನೇ ಎದುರು ನೋಡುತ್ತಿರುವ ದಲ್ಲಾಳಿಗಳು ಮುಂಗಡ ಹಣ ಕೊಟ್ಟು ಭತ್ತವನ್ನು ಕೊಳ್ಳುವುದಕ್ಕೆ ಸಿದ್ಧತೆ ನಡೆಸಿದ್ದಾರೆ. ಜಿಲ್ಲಾಡಳಿತ ಕೂಡಲೇ ಕೃಷಿ ಸಚಿವರ ಗಮನಸೆಳೆದು ಖರೀದಿ ಕೇಂದ್ರ ತೆರೆದು ನೋಂದಣಿ ಆರಂಭಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಪ್ರಸ್ತುತ ರಾಜ್ಯಸರ್ಕಾರ ಪ್ರತಿ ಕ್ವಿಂಟಾಲ್‌ ಭತ್ತಕ್ಕೆ 1960 ರು. ನಿಗದಿಪಡಿಸಿದೆ. ಈಗಲೇ ನೋಂದಣಿ ಪ್ರಕ್ರಿಯೆ ಆರಂಭಿಸಿದರೆ ರೈತರಿಗೆ ಅಲ್ಪಸ್ವಲ್ಪ ಹಣವಾದರೂ ಸಿಗುತ್ತದೆ. ಖರೀದಿ ಕೇಂದ್ರ ವಿಳಂಬ ಮಾಡಿದರೆ ದಲ್ಲಾಳಿಗಳು ರೈತರಿಂದ ಪ್ರತಿ ಕ್ವಿಂಟಾಲ್‌ ಭತ್ತಕ್ಕೆ 1400 ರಿಂದ 1450 ರು.ಗೆ ಖರೀದಿ ಮಾಡುವ ಸಾಧ್ಯತೆಗಳಿದ್ದು, ರೈತರಿಂದ ಖರೀದಿಸಿದ ಭತ್ತವನ್ನು ಅವರದೇ ಆರ್‌ಟಿಸಿಯನ್ನು ಮುಂದಿಟ್ಟು ಖರೀದಿ ಕೇಂದ್ರಕ್ಕೆ ಮಾರಾಟ ಮಾಡುವುದು ಹಿಂದಿನಿಂದಲೂ ಬೆಳೆದುಬಂದಿರುವ ಸಂಪ್ರದಾಯವಾಗಿದೆ.

ಈ ವ್ಯವಸ್ಥೆಯಿಂದ ರೈತರಿಗೆ ಆಗುತ್ತಿರುವ ವಂಚನೆಯನ್ನು ತಡೆಗಟ್ಟುವುದಕ್ಕೆ ಭತ್ತ ಖರೀದಿ ಕೇಂದ್ರವನ್ನು ಶೀಘ್ರಗತಿಯಲ್ಲಿ ತೆರೆಯುವಂತೆ ಸರ್ಕಾರವನ್ನು ರೈತರು ನಿರಂತರವಾಗಿ ಆಗ್ರಹಿಸುತ್ತಿದ್ದರೂ ಕುಂಭಕರ್ಣ ನಿದ್ರೆಯಲ್ಲಿರುವ ಆಳುವ ನಾಯಕರಿಗೆ ಅನ್ನದಾತರ ಕೂಗು ಕೇಳಿಸುತ್ತಲೇ ಇಲ್ಲ. ಇದರಿಂದ ಕಷ್ಟಪಟ್ಟು ಬೆಳೆ ಬೆಳೆದರೂ ರೈತರ ಜೀವನಮಟ್ಟಸುಧಾರಣೆಯನ್ನೇ ಕಾಣದಂತಾಗಿದೆ.

2022-23ನೇ ಸಾಲಿನಲ್ಲಿ ಭತ್ತ ಹಾಗೂ ರಾಗಿ ಬೆಳೆ ವಿಸ್ತೀರ್ಣ, ಅಂದಾಜು ಉತ್ಪಾದನೆ

ಭತ್ತ ರಾಗಿ

ತಾಲೂಕು ವಿಸ್ತೀರ್ಣ ಅಂ.ಉತ್ಪಾದನೆ ಅಂ. ಉತ್ಪಾದನೆ ವಿಸ್ತೀರ್ಣ ಅಂ. ಉತ್ಪಾದನೆ ಅಂ. ಉತ್ಪಾದನೆ

(ಹೆಕ್ಟೇರ್‌) (ಕ್ವಿಂಟಾಲ್‌) (ಮೆ.ಟನ್‌) (ಹೆಕ್ಟೇರ್‌) (ಕ್ವಿಂಟಾಲ್‌) (ಮೆ.ಟನ್‌)

ಮಂಡ್ಯ 12133 970640 97064 6487 142714 14271

ಮದ್ದೂರು 12400 992000 99200 3950 86900 8690

ಮಳವಳ್ಳಿ 10180 814400 81440 4740 104280 10428

ಶ್ರೀರಂಗಪಟ್ಟಣ 9180 734400 73440 756 16632 1663

ಪಾಂಡವಪುರ 3411 272889 27288 3470 76340 7634

ಕೆ.ಆರ್‌.ಪೇಟೆ 12530 1002400 100240 10815 237930 23793

ನಾಗಮಂಗಲ 1625 130000 13000 15510 341220 34122

ಒಟ್ಟು 61459 4916720 491672 45728 1006016 100601

(ಹೆ.80 ಕ್ವಿಂ) (ಹೆ.22 ಕ್ವಿಂ)

ನೋಂದಣಿ ಆರಂಭಿಸಲಿ

ರೈತರಿಗೆ ಅನಾನುಕೂಲವಾಗದಂತೆ ಶೀಘ್ರವೇ ಖರೀದಿ ಕೇಂದ್ರ ತೆರೆದು ನೋಂದಣಿ ಆರಂಭಿಸಬೇಕು. ಈ ಬಗ್ಗೆ ಜಿಲ್ಲಾಡಳಿತ ಕೂಡಲೇ ಕೃಷಿ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಸರ್ಕಾರದ ಗಮನಸೆಳೆದು ಖರೀದಿ ಕೇಂದ್ರ ತೆರೆಯಲು ಕ್ರಮ ವಹಿಸಬೇಕು. ಇಲ್ಲದಿದ್ದರೆ ಭತ್ತ ದಲ್ಲಾಳಿಗಳ ಪಾಲಾಗಲಿದೆ. ರೈತರಿಗೆ ಆಗುತ್ತಿರುವ ಅನ್ಯಾಯ ಮುಂದುವರೆಯಲಿದೆ.

- ನಾಗರಾಜು, ರೈತ, ಹನಿಯಂಬಾಡಿ

ರೈತರ ಹಿತ ಬೇಕಿಲ್ಲ

ಈ ಸರ್ಕಾರಕ್ಕೆ ರೈತರ ಹಿತ ಕಾಪಾಡುವ ಮನಸ್ಸಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರಿಗಂತೂ ಈ ಜಿಲ್ಲೆ ಬೇಡವೇ ಬೇಡವೆಂಬ ಮನಸ್ಥಿತಿಯಲ್ಲಿದ್ದಾರೆ. ಐದು ತಿಂಗಳಿಂದ ಒಂದು ಕೆಡಿಪಿ ಸಭೆ ಕರೆದಿಲ್ಲ. ಜಿಲ್ಲೆಯೊಳಗೆ ಆಡಳಿತ ವ್ಯವಸ್ಥೆ ಏನಾಗಿದೆ ಎಂದು ನೋಡೋರಿಲ್ಲ. ಭತ್ತ ಕಟಾವಿನ ಹಂತ ತಲುಪಿದ್ದರೂ ಖರೀದಿಕೇಂದ್ರ ಶುರುವಾಗಿಲ್ಲ. ಖರೀದಿ ಕೇಂದ್ರ ತೆರೆಯುವುದಕ್ಕೂ ವಿಳಂಬ ಮಾಡುತ್ತಿರುವುದು ರೈತರಿಗೆ ಮಾಡುವ ಅನ್ಯಾಯವಾಗಿದೆ.

-ಎಸ್‌.ಸಿ.ಮಧುಚಂದನ್‌, ಸಂಘಟನಾ ಕಾರ‍್ಯದರ್ಶಿ, ರಾಜ್ಯ ರೈತಸಂಘ

Latest Videos
Follow Us:
Download App:
  • android
  • ios