ಸಿದ್ದರಾಮಯ್ಯ ಹತ್ಯಾ ರಾಜಕಾರಣಕ್ಕೆ ಬೆಂಬಲ ಕೊಡೋ ವ್ಯಕ್ತಿ: ಸಚಿವ
ಯಡಿಯೂರಪ್ಪ ದುರ್ಬಲ ಸಿಎಂ’ ಎಂದಿದ್ದ ಸಿದ್ದರಾಮಯ್ಯ ಅವರಿಗೆ ಸಚಿವ ಸಿ. ಟಿ. ರವಿ ಅವರು ತಿರುಗೇಟು ನೀಡಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಹತ್ಯಾರಾಜಕಾರಣ ಮಾಡುವಲ್ಲಿ ಸಮರ್ಥರಲ್ಲ ಎಂದಿರುವ ಅವರು ಸಿದ್ದರಾಮಯ್ಯ ಅವರ ಬಗ್ಗೆ ಟೀಕೆ ಮಾಡಿದ್ದಾರೆ.
ಉಡುಪಿ(ಅ.02): ಸಿದ್ದರಾಮಯ್ಯ ಪ್ರಬಲವಾಗಿದ್ದಾಗ ದಿನನಿತ್ಯ ಹತ್ಯೆಗಳು ನಡೆಯುತ್ತಿತ್ತು. ಮುಖ್ಯಮಂತ್ರಿ ಯಡಿಯೂರಪ್ಪ ಹತ್ಯಾರಾಜಕಾರಣ ಮಾಡುವಲ್ಲಿ ಸಮರ್ಥರಲ್ಲ. ಸಿದ್ದರಾಮಯ್ಯ ಹತ್ಯಾರಾಜಕಾರಣಕ್ಕೆ ಬೆಂಬಲ ಕೊಡುವ ವ್ಯಕ್ತಿ. ಆ ಲೆಕ್ಕದಲ್ಲಿ ಸಿದ್ದರಾಮಯ್ಯ ಅವರೇ ಪ್ರಬಲರು ಎಂದು ಸಚಿವ ಸಿ. ಟಿ. ರವಿ ಅವರು ಹೇಳಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಯಡಿಯೂರಪ್ಪ ದುರ್ಬಲ ಸಿಎಂ’ ಎಂದಿದ್ದ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.
ಬೈರಪ್ಪ ಮಾತಾಡಿದ್ದರಲ್ಲಿ ಏನೂ ತಪ್ಪಿಲ್ಲ:
ಸಾಹಿತಿ ಎಸ್.ಎಲ್. ಬೈರಪ್ಪ ಮೈಸೂರು ದಸರಾ ಉದ್ಘಾಟನಾ ಭಾಷಣ ಸಂದರ್ಭ ಪ್ರಗತಿಪರರ ಟೀಕೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಬೈರಪ್ಪ ಅವರ ಪಕ್ಕದಲ್ಲೇ ಇದ್ದೆ. ಅವರು ತಪ್ಪೇನೂ ಮಾತಾಡಿಲ್ಲ. ನಾಡದೇವಿಗೆ ಕೈ ಮುಗಿಯದ ನಾಸ್ತಿಕರು ಕೂಡಾ ಉದ್ಘಾಟನೆ ಮಾಡಿದ್ದಾರೆ. ತಮ್ಮ ಶ್ರದ್ಧೆ ತೋರ್ಪಡಿಸಿದ ಬೈರಪ್ಪ ಕೋಟಿ ಪಾಲು ಮೇಲಿದ್ದಾರೆ ಎಂದಿದ್ದಾರೆ.
ಜೀವನವೇ ತಂತಿ ಮೇಲಿನ ನಡಿಗೆ:
ಮುಖ್ಯಮಂತ್ರಿ ಯಡಿಯೂರಪ್ಪ ಅವರ ತಂತಿ ಮೇಲಿನ ನಡಿಗೆ ಹೇಳಿಕೆ ವಿಚಾರವಾಗಿ ಮಾತನಾಡಿದ ಸಿಟಿ ರವಿ, ಸಾರ್ವಜನಿಕ ಜೀವನವೇ ತಂತಿ ಮೇಲಿನ ನಡಿಗೆ ಇದ್ದ ಹಾಗೆ. ಜೀವನದಲ್ಲಿ ಏರುವುದಕ್ಕೆ ಬಹಳ ಕಷ್ಟಪಡಬೇಕು. ಒಂದು ಕ್ಷಣ ಮೈಮರೆತರೂ ಜಾರಿ ಬೀಳಬೇಕಾಗುತ್ತದೆ. ತಂತಿ ಮೇಲಿನ ನಡಿಗೆಗೆ ಗುರಿ ಏಕಾಗ್ರತೆ ಬೇಕು. ಗುರಿ ತಪ್ಪಿದರೆ ಕೆಳಗೆ ಬೀಳಬೇಕಾಗುತ್ತದೆ. ಸಿಎಂ ಈ ಹಿನ್ನೆಲೆಯಲ್ಲಿ ಹೇಳಿಕೆ ಕೊಟ್ಟಿದ್ದಾರೆ. ಆರ್‌ಎಸ್‌ಎಸ್ ರಾಜಕೀಯ ಪಕ್ಷ ಅಲ್ಲ. ನಳೀನ್ ಕುಮಾರ್ ಕಟೀಲ್‌ಗೂ ಸಿಎಂಗೂ ತಿಕ್ಕಾಟವಿಲ್ಲ. ತಿಕ್ಕಾಟವಿದೆ ಎಂದು ಇಬ್ಬರೂ ಹೇಳಿಕೆ ಕೊಟ್ಟಿಲ್ಲ. ಆರ್‌ಎಸ್‌ಎಸ್ ರಾಜಕೀಯ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದರು.
ಹೊಸ ಜಿಲ್ಲೆ ರಚನೆ: ಹೆರಿಗೆ ನೋವಿಗೆ ಹೋಲಿಸಿದ ಸಚಿವ ಸಿಟಿ ರವಿ
ಪ್ರಧಾನಿಯ ದೃಷ್ಟಿಯಲ್ಲಿ ಎಲ್ಲ ರಾಜ್ಯಗಳೂ ಸಮಾನ:
ರಾಜ್ಯಕ್ಕೆ ಇನ್ನೂ ನೆರೆ ಪರಿಹಾರ ಸಿಗದಿರುವ ಬಗ್ಗೆ ಮಾಹಿತಿ ನಿಡಿದ ಸಚಿವ ಸಿ.ಟಿ. ರವಿ, ಹತ್ತು ರಾಜ್ಯಗಳಲ್ಲಿ ಮಳೆಯಿಂದ ಹಾನಿಯಾಗಿದೆ. ಹತ್ತೂ ರಾಜ್ಯಕ್ಕೆ ಮದ್ಯಂತರ ಪರಿಹಾರ ಕೊಟ್ಟಿದ್ದಾರೆ. ಪೂರ್ಣ ಪರಿಹಾರ ಕೊಟ್ಟಿಲ್ಲ. ಮಹಾರಾಷ್ಟ್ರಕ್ಕೂ ಪರಿಹಾರ ಕೊಟ್ಟಿಲ್ಲ. ಪ್ರಧಾನಿಯ ದೃಷ್ಟಿಯಲ್ಲಿ ಎಲ್ಲ ರಾಜ್ಯಗಳೂ ಸಮಾನ. ದೇಶದ 132 ಕೊಟಿ ಜನರೂ ಅವರಿಗೆ ಸಮಾನ.
ನೆರೆ ಪರಿಹಾರ ವಿಚಾರದಲ್ಲಿ ವಿಪಕ್ಷದಿಂದ ಅನಗತ್ಯ ರಾಜಕಾರಣ:
ಈ ವಿಚಾರದಲ್ಲಿ ವಿಪಕ್ಷಗಳು ಅನಗತ್ಯ ರಾಜಕಾರಣ ಮಾಡುತ್ತಿವೆ. ಒಂದೂ ಸೀಟು ಗೆಲ್ಲದ ಕೇರಳ, ಒಂದೇ ಸೀಟು ಗೆದ್ದ ತಮಿಳುನಾಡಿಗೂ ಪರಿಹಾರ ಕೊಟ್ಟಿದ್ದಾರೆ. ನಮಗೂ ಕೊಡುತ್ತಾರೆ. ಒಂದು ರಾಜ್ಯಕ್ಕೆ ಕೊಟ್ಟು ಇನ್ನೊಬ್ಬರಿಗೆ ಕೊಡದೇ ಇದ್ದರೆ ರಾಜಕಾರಣ ಅನ್ನಬಹುದಿತ್ತು. ಹಾಗೇನಾದರೂ ಆಗಿದ್ದರೆ ನಾವೇ ಧ್ವನಿ ಎತ್ತುತ್ತೇವೆ, ಸಂಶಯ ಬೇಡ. ಅವಶ್ಯಕತೆ ಬಿದ್ದರೆ ನಮ್ಮ ಸಂಸದರು, ಮುಖ್ಯಮಂತ್ರಿಗಳೂ ದೆಹಲಿಗೆ ಹೋಗುತ್ತಾರೆ. ಕರ್ನಾಟಕದ ಹಿತಾಸಕ್ತಿ ಬಿಟ್ಟು ರಾಜಕಾರಣ ಮಾಡುವುದಿಲ್ಲ ಎಂದರು.
ಬ್ಯೂಟಿ ಆಫ್ ಡೆಮಾಕ್ರಸಿ! ಸೂಲಿಬೆಲೆಗೆ ಸಿಟಿ ರವಿ ಪ್ರತಿಕ್ರಿಯೆ