ಲಕ್ಷ್ಮೇಶ್ವರ[ಜ.31]: ಜಮ್ಮು ಕಾಶ್ಮೀರದಲ್ಲಿ ಕರ್ತವ್ಯದಲ್ಲಿದ್ದ ಸಿಆರ್‌ಪಿಎಫ್ ಯೋಧ ಈಶ್ವರಪ್ಪ ಯಲ್ಲಪ್ಪ ಸೂರಣಗಿ (45) ಅವರು ಗುರುವಾರ ಬೆಳಗ್ಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. 

ಮೂಲತಃ ಕುಂದಗೋಳ ತಾಲೂಕಿನ ಬರದವಾಡ ಗ್ರಾಮದ ಈಶ್ವರಪ್ಪ ಸೂರಣಗಿ ಅವರು ಪಟ್ಟಣದ ಈಶ್ವರ ನಗರದಲ್ಲಿ ಕಳೆದ 12-12 ವರ್ಷಗಳಿಂದ ವಾಸವಾಗಿದ್ದರು. ಈಶ್ವರಪ್ಪ ಅವರು ಡಿಸೆಂಬರ್ ತಿಂಗಳಲ್ಲಿ ರಜೆಗೆ ಬಂದಿದ್ದು, ಜ. 6 ರಂದು ರಜೆ ಮುಗಿಸಿಕೊಂಡು ಕರ್ತವ್ಯಕ್ಕೆ ಮರಳಿದ್ದರು. 20 ದಿನಗಳ ಹಿಂದೆ ಕರ್ತವ್ಯಕ್ಕೆ ಮರಳಿದ್ದ ಯೋಧ ಬುಧವಾರ ಸಂಜೆ ತನ್ನ ಪತ್ನಿಯೊಂದಿಗೆ ಮಾತನಾಡಿ, ಇಲ್ಲಿ ತುಂಬಾ ಚಳಿ ಇದ್ದು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದೇನೆ ಎಂದು ಹೇಳಿದ್ದರಲ್ಲದೆ, ಮಕ್ಕಳ ಕುಶಲೋಪರಿ ವಿಚಾರಿಸಿದ್ದಾಗಿ ಪತ್ನಿ ಲಲಿತಾ ಕಣ್ಣೀರು ಸುರಿಸುತ್ತ ಹೇಳಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಆತ್ಮಹತ್ಯೆಗೆ ಕಾರಣವೇನು ಎನ್ನುವುದು ತಿಳಿದು ಬಂದಿಲ್ಲ. ಗುರುವಾರ ಬೆಳಗ್ಗೆ ಸಿಆರ್‌ಪಿಎಫ್ ಕಚೇರಿಯ ಸಿಬ್ಬಂದಿ ಫೋನ್ ಮೂಲಕ ಈಶ್ವರಪ್ಪ ಪತ್ನಿ ಲಲಿತಾ ಅವರಿಗೆ ಮಾಹಿತಿ ನೀಡಿದ್ದಾರೆ. ಯೋಧ ಈಶ್ವರಪ್ಪ ಅವರು ಪಟ್ಟಣದ ಸಮೀಪದ ರಾಮಗೇರಿ ಗ್ರಾಮದ ಲಲಿತಾ ಅವರನ್ನು 2007ರಲ್ಲಿ ಮದುವೆಯಾಗಿ, ಪಟ್ಟಣದ ಈಶ್ವರ ನಗರದಲ್ಲಿ ಸ್ವಂತ ಮನೆ ನಿರ್ಮಿಸಿಕೊಂಡು ವಾಸವಾಗಿದ್ದರು. ಅವರಿಗೆ ಒಬ್ಬ ಮಗ ಸಾಗರ ಮತ್ತು ಒಬ್ಬ ಮಗಳು ಶಾಂಭವಿ ಇದ್ದಾರೆ. ಈಶ್ವರಪ್ಪ ಸೂರಣಗಿ ಸಿಆರ್‌ಪಿಎಫ್‌ನಲ್ಲಿ 16 ವರ್ಷ ಸೇವೆ ಸಲ್ಲಿಸಿದ್ದು, ನಿವೃತ್ತಿಗೆ ಇನ್ನು ನಾಲ್ಕು ವರ್ಷ ಬಾಕಿ ಇತ್ತು.