ಗಾಂಧಿನಗರ ತ್ಯಾಜ್ಯ ವಿಲೇವಾರಿಯಲ್ಲಿ ಕೋಟ್ಯಂತರ ಲೂಟಿ: ಎನ್.ಆರ್ ರಮೇಶ್ ದೂರು
ಗಾಂಧಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮೂರು ಪಾಳಿಗಳಲ್ಲಿ ತ್ಯಾಜ್ಯ ವಿಲೇವಾರಿ ಕಾರ್ಯ ನಡೆಸುತ್ತಿರುವುದಾಗಿ ಪ್ರತೀ ತಿಂಗಳು ಕೋಟ್ಯಂತರ ರು. ಲೂಟಿ ಹೊಡೆಯಲಾಗುತ್ತಿದೆ ಎಂದು ಆರೋಪಿಸಿರುವ ಬಿಜೆಪಿ ಮುಖಂಡ ಎನ್.ಆರ್.ರಮೇಶ್.

ಬೆಂಗಳೂರು (ಫೆ.04): ಗಾಂಧಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮೂರು ಪಾಳಿಗಳಲ್ಲಿ ತ್ಯಾಜ್ಯ ವಿಲೇವಾರಿ ಕಾರ್ಯ ನಡೆಸುತ್ತಿರುವುದಾಗಿ ಪ್ರತೀ ತಿಂಗಳು ಕೋಟ್ಯಂತರ ರು. ಲೂಟಿ ಹೊಡೆಯಲಾಗುತ್ತಿದೆ ಎಂದು ಆರೋಪಿಸಿರುವ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಅವರು, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೇರಿದಂತೆ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದಾರೆ. ತ್ಯಾಜ್ಯ ವಿಲೇವಾರಿಯ ವೆಚ್ಚವು ಬೇರೆ ಕ್ಷೇತ್ರದಲ್ಲಿ ಸರಾಸರಿ ₹15 ಲಕ್ಷಗಳಾದರೆ, ಸಚಿವ ದಿನೇಶ್ ಗುಂಡೂರಾವ್ ಕ್ಷೇತ್ರದಲ್ಲಿ ಮಾತ್ರ ಪ್ರತಿ ವಾರ್ಡ್‌ನ ಸರಾಸರಿ ವೆಚ್ಚ ₹36.73 ಲಕ್ಷ ಆಗಿದೆ.
ಈ ಬಗ್ಗೆ ಸೂಕ್ತ ತನಿಖೆ ಕೈಗೊಂಡು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ರಮೇಶ್ ಒತ್ತಾಯಿಸಿದ್ದಾರೆ. ಬಿಬಿಎಂಪಿಯ 27 ವಿಧಾನಸಭಾ ಕ್ಷೇತ್ರಗಳಲ್ಲಿ ಗಾಂಧಿನಗರ ಕ್ಷೇತ್ರ ಹೊರತುಪಡಿಸಿ ಇನ್ನುಳಿದ 26 ಕ್ಷೇತ್ರಗಳಲ್ಲಿ ಕಾನೂನು ರೀತಿ ಟೆಂಡರ್ ಪ್ರಕ್ರಿಯೆಯಲ್ಲಿ ಕಾರ್ಯಾದೇಶ ಪತ್ರ ಪಡೆದುಕೊಂಡಿರುವ ಗುತ್ತಿಗೆದಾರರು ಬೆಳಗಿನ ಹೊತ್ತು ತ್ಯಾಜ್ಯ ವಿಲೇವಾರಿ ಮಾಡುತ್ತಾರೆ. ಆದರೆ, ಗಾಂಧಿನಗರ ಕ್ಷೇತ್ರದಲ್ಲಿ ಮಾತ್ರ ಕಳೆದ ಮೂರ್ನಾಲ್ಕು ವರ್ಷಗಳಿಂದ ನಿತ್ಯ 3 ಪಾಳಿಗಳಲ್ಲಿ ತ್ಯಾಜ್ಯ ವಿಲೇವಾರಿ ಮಾಡುತ್ತಿರುವುದಾಗಿ ಹಣ ಲೂಟಿ ಮಾಡಲಾಗುತ್ತಿದೆ.
ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆ ಹೆಸರಲ್ಲಿ 40,000 ಕೋಟಿ ಹಗರಣ: ಸಿಎಂ ಸೇರಿ ಇಡೀ ಸಚಿವ ಸಂಪುಟದ ವಿರುದ್ಧವೇ ದೂರು!
ಗಾಂಧಿನಗರ ಕ್ಷೇತ್ರದ 7 ವಾರ್ಡ್‌ಗಳ ತ್ಯಾಜ್ಯ ವಿಲೇವಾರಿ ಕಾರ್ಯಗಳಿಗೆ ಪ್ರತೀ ತಿಂಗಳಿಗೆ ₹2.57 ಕೋಟಿಯಷ್ಟು ವೆಚ್ಚ ಮಾಡಲಾಗುತ್ತಿದೆ. ಕಳೆದ ವರ್ಷ ₹30.85 ಕೋಟಿ ವೆಚ್ಚ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಕಾನೂನು ಬಾಹಿರವಾಗಿ ಮಧ್ಯಾಹ್ನ ಮತ್ತು ರಾತ್ರಿ ಪಾಳಿಗಳಲ್ಲಿ ತ್ಯಾಜ್ಯ ವಿಲೇವಾರಿ ಕಾರ್ಯ ನಿರ್ವಹಿಸುವ ಕಾರ್ಯಾದೇಶ ಪತ್ರಗಳನ್ನು ವಿತರಣೆ ಮಾಡಲಾಗಿದ್ದು, ಕೆಲವು ವಂಚಕರು ತಮಗಿರುವ ರಾಜಕೀಯ ಪ್ರಭಾವಗಳಿಂದ ಕೋಟ್ಯಂತರ ರು. ದೋಚುತ್ತಿದ್ದಾರೆ ಎಂದು ದೂರಿದ್ದಾರೆ.
ಅಗರದಲ್ಲಿ 35 ಎಕರೆ ಭೂಮಿ ಅಕ್ರಮ ವಶ: ನಗರದ ಪ್ರತಿಷ್ಠಿತ ನಗರಗಳಲ್ಲೊಂದಾದ ಎಚ್‌ಎಸ್‌ಆರ್ ಬಡಾವಣೆಯ ಬಳಿಯ ಅಗರ ಗ್ರಾಮದ ವಿವಿಧ ಸರ್ವೇ ನಂಬರ್‌ಗಳ 35.5 ಎಕರೆಯಷ್ಟು ಭೂಮಿಯನ್ನು ಅಕ್ರಮವಾಗಿ ಕೆಲವರು ತಮ್ಮ ಹೆಸರಿಗೆ ಮಾಡಿಕೊಂಡು ಸಾವಿರಾರು ಕೋಟಿ ರು. ವಂಚನೆ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಆರೋಪಿಸಿದ್ದಾರೆ. ಈ ಸಂಬಂಧ ತನಿಖೆ ನಡೆಸುವಂತೆ ಕೋರಿ ಲೋಕಾಯುಕ್ತ ಸಂಸ್ಥೆಗೆ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ದೂರು ನೀಡಿದ್ದಾರೆ. 1986-87 ರಲ್ಲಿ ಬಿಡಿಎ ಭೂಸ್ವಾಧೀನ ಪಡಿಸಿಕೊಂಡು 1987-88 ರಲ್ಲಿ ಸ್ವತ್ತುಗಳ ಮಾಲೀಕರಿಗೆ ನಿಯಮಾನುಸಾರ ಪರಿಹಾರ ಧನವನ್ನು ಬಿಡುಗಡೆ ಮಾಡಿದೆ. ಪ್ರಸ್ತುತ ಸದರಿ ಸ್ವತ್ತಿನ ಪ್ರತಿ ಚದರ ಅಡಿಯ ಮಾರುಕಟ್ಟೆ ಬೆಲೆಯು ಸುಮಾರು 70 ಸಾವಿರ ರು.ಗಿಂತ ಹೆಚ್ಚು ಮೌಲ್ಯಯುತವಾಗಿದ್ದು, ಈ ಅತ್ಯಮೂಲ್ಯ ಬಿಡಿಎ ಸ್ವತ್ತಿನ ಮೇಲೆ ಭೂಗಳ್ಳರು ಕಣ್ಣು ಹಾಕಿ ಅಕ್ರಮವಾಗಿ ಭೂಕಬಳಿಕೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಬಿಬಿಎಂಪಿಯಲ್ಲಿ ₹46 ಸಾವಿರ ಕೋಟಿ ದುರ್ಬಳಕೆ: ಬಿಜೆಪಿ ಮುಖಂಡ ಎನ್.ಆರ್.ರಮೇಶ್ ದೂರು
ಸದಾಶಿವ ರೆಡ್ಡಿ, ಶ್ರೀನಿವಾಸ ರೆಡ್ಡಿ ಮತ್ತು ಆನಂದ ರೆಡ್ಡಿ ಎಂಬ ಸರ್ಕಾರಿ ನೆಲಗಳ್ಳರು ಬಿಡಿಎನಲ್ಲಿರುವ ಭ್ರಷ್ಟ ಅಧಿಕಾರಿಗಳನ್ನು ತಮ್ಮ ಹಣದ ಬಲದಿಂದ ಬಲೆಗೆ ಹಾಕಿಕೊಂಡು ನಿಯಮಾನುಸಾರ ಬಿಡಿಎದಿಂದ ಪರಿಹಾದ ಧನ ಪಡೆದುಕೊಂಡಿರುವ ಆಯಾ ಸ್ವತ್ತುಗಳ ಮೂಲ ಮಾಲೀಕರಿಂದ ಹಿಂದಿನ ದಿನಾಂಕಗಳನ್ನು ಜಿಪಿಎ ಮತ್ತು ಕರಾರು ಪತ್ರಗಳನ್ನು ಮಾಡಿಸಿಕೊಂಡಿದ್ದಾರೆ. ತಮಗಿರುವ ಆರ್ಥಿಕ ಮತ್ತು ರಾಜಕೀಯ ಪ್ರಭಾವಗಳಿಂದ ಸದರಿ ಸ್ವತ್ತುಗಳನ್ನು ತಮ್ಮ ಹೆಸರಿಗೆ ನೋಂದಣಿ ಮಾಡಿಸಿಕೊಂಡು ಬಹಳಷ್ಟು ಸ್ವತ್ತುಗಳನ್ನು ಮಾರಾಟ ಮಾಡಿದ್ದಾರೆ. ಅಲ್ಲದೇ, ಬಹಳಷ್ಟು ಸ್ವತ್ತುಗಳಲ್ಲಿ ಬೃಹತ್ ವಾಣಿಜ್ಯ ಕಟ್ಟಡಗಳು ಮತ್ತು ವಸತಿ ಕಟ್ಟಡಗಳನ್ನು ನಿರ್ಮಾಣ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.