ಕೃಷಿ ಸಚಿವರ ಉಸ್ತುವಾರಿ ಕೊಪ್ಪಳ ಜಿಲ್ಲೆಯಲ್ಲೇ ವಿಮೆ ತಾರತಮ್ಯ..!
*2 ರಿಂದ 3 ಸಾವಿರ ವಿಮೆ ಪ್ರೀಮಿಯಂ ಕಟ್ಟಿದ ರೈತರಿಗೆ 100 ಪರಿಹಾರ ಬಂತು
* 500ಕ್ಕೂ ಹೆಚ್ಚು ರೈತರಿಗೆ ಸರಿಯಾಗಿ ವಿಮೆ ಪರಿಹಾರ ಸಿಗದೆ ತೊಂದರೆ
* ಸರಿಯಾದ ರೀತಿಯಲ್ಲಿ ಬೆಳೆ ಸರ್ವೇ ಮಾಡದೇ ಇರುವುದರಿಂದ ರೈತರಿಗೆ ಅನ್ಯಾಯ
ರಾಮಮೂರ್ತಿ ನವಲಿ
ಕೊಪ್ಪಳ(ಜು.18): ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ಉಸ್ತುವಾರಿ ಹೊತ್ತಿರುವ ಜಿಲ್ಲೆಯಲ್ಲಿ ಸಾವಿರಾರು ರುಪಾಯಿ ಬೆಳೆ ವಿಮೆ ಪಾವತಿಸಿದ ರೈತರಿಗೆ ಕೇವಲ 100ರಿಂದ 300 ವಿಮೆ ಪರಿಹಾರ ಬಂದಿದ್ದು, ಕೃಷಿ ಇಲಾಖೆ, ವಿಮಾ ಕಂಪನಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತವಾಗಿದೆ.
ತಾಲೂಕಿನ ಹಿರೇಸಿಂದೋಗಿ ಗ್ರಾಮದ ವ್ಯಾಪ್ತಿಯಲ್ಲಿ ಬರುವ 500ಕ್ಕೂ ಹೆಚ್ಚು ರೈತರು ಈಗ ವಿಮೆ ಪರಿಹಾರ ಸಿಗದೆ ತೊಂದರೆಗೆ ಈಡಾಗಿದ್ದಾರೆ. ಹಿರೇಸಿಂದೋಗಿ ಗ್ರಾಮ ಸೇರಿದಂತೆ ಬೂದಿಹಾಳ, ಹಂದ್ರಾಳ ಗ್ರಾಮಗಳ ರೈತರು ಕಳೆದ ಬಾರಿ ಮೆಕ್ಕೆಜೋಳ, ಸೂರ್ಯಕಾಂತಿ, ಹತ್ತಿ, ಜೋಳ, ಸೆಜ್ಜೆ ಬೆಳೆಗಳು ಸೇರಿದಂತೆ ವಿವಿಧ ಬೆಳೆಗಳಿಗೆ ವಿಮೆಗೆ ಹಣ ಪಾವತಿಸಿದ್ದಾರೆ. ಆದರೆ ಈಗ ರೈತರು ಪ್ರೀಮಿಯಂ ಪಾವತಿಸಿದಷ್ಟೂವಿಮೆ ಹಣ ಬಂದಿಲ್ಲ.
ಈ ಗ್ರಾಮಗಳ ವ್ಯಾಪ್ತಿಯಲ್ಲಿ ಸುಮಾರು 4 ಸಾವಿರಕ್ಕೂ ಹೆಚ್ಚು ಎಕರೆ ಭೂಮಿ ಇದ್ದು, ರೈತರು ಬಹುತೇಕವಾಗಿ ಕೃಷಿ ಮಾಡಿಕೊಂಡಿದ್ದಾರೆ. ಕೆಲವರು ಕೊಳವೆ ಬಾವಿ ಮೇಲೆ ಅವಲಂಬಿತರಾಗಿದ್ದು, ಇನ್ನು ಹಲವರು ಮಳೆ ಆಧಾರಿತವಾಗಿ ಕೃಷಿ ಮಾಡುತ್ತಿದ್ದಾರೆ. ಅದರಂತೆ ಕಾಟ್ರಳ್ಳಿ, ಕಾತರಕಿ, ಗುಡ್ಲಾನೂರು ಗ್ರಾಮಗಳ ಕೆಲ ರೈತರಿಗೆ ಹೆಚ್ಚಿನ ವಿಮೆ ಬಂದರೆ ಇನ್ನು ಕೆಲವರಿಗೆ ಕಡಿಮೆ ವಿಮೆ ಪಾವತಿಸಿದ್ದಾರೆ.
ಎಲ್ಲಾ ವರ್ಗದ ರೈತರಿಗೆ ಸಬ್ಸಿಡಿ: ಸಚಿವ ಬಿಸಿ ಪಾಟೀಲ್ ಮಾಹಿತಿ
ರೈತರ ಖಾತೆಗೆ 100 ವಿಮೆ
ಕಳೆದ ವರ್ಷ 2020-21ನೇ ಸಾಲಿನ ಬೆಳೆ ವಿಮೆಗೆ ರೈತರು 2ರಿಂದ 3 ಸಾವಿರ ರುಪಾಯಿಗಳನ್ನು ಆನ್‌ಲೈನ್ ಮೂಲಕ ಪಾವತಿಸಿದ್ದಾರೆ. ಈಗ ವಿಮೆ ಪಾವತಿಸಿದ ರೈತರಿಗೆ 100 ರಿಂದ 300 ವಿಮೆ ಖಾತೆಗೆ ಜಮಾ ಆಗಿದ್ದು, ರೈತರಿಗೆ ಅನ್ಯಾಯವಾಗಿದೆ. ಅಲ್ಲದೇ ಕೋಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲ ರೈತರಿಗೆ 1 ಹೆಕ್ಟೇರ್‌ಗೆ 25 ಸಾವಿರ ಸಂದಾಯವಾಗಿದೆ. ಕಳೆದ ಬಾರಿ ಬೆಳೆ ಸಮೀಕ್ಷೆಗೆ ಬಂದ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ವೀಕ್ಷಣೆ ಮಾಡದೆ ತಮಗೆ ತಿಳಿದಂತೆ ಸರ್ವೇ ಮಾಡಿದ್ದರಿಂದ ರೈತರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಾಗಲೇ ತಮಗೆ ಅನ್ಯಾಯವಾದ ಬಗ್ಗೆ ರೈತರು, ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದು, ಸರಿಪಡಿಸುವಂತೆ ಕೋರಿದ್ದಾರೆ.
ಪ್ರತಿ ತಿಂಗಳು ಕೊಪ್ಪಳ ಜಿಲ್ಲೆಗೆ ಆಗಮಿಸುವ ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ರೈತರ ಬಗ್ಗೆ ಕಾಳಜಿ ಇದೆ. ಸಾಕಷ್ಟು ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂಬ ಹೇಳಿಕೆ ನೀಡುತ್ತಿದ್ದಾರೆ. ಆದರೆ ತೊಂದರೆಗೊಳಗಾದ ರೈತರು ಚಿಂತಿತರಾಗಿದ್ದಾರೆ.
ಕಳೆದ ಬಾರಿ ಲಕ್ಷಾಂತರ ರುಪಾಯಿ ಮೌಲ್ಯದ ಬೆಳೆಗಳು ಹಾಳಾಗಿ ಹೋಗಿದ್ದು, ರೈತರಿಗೆ ಬೆಳೆ ಹಾನಿ ತಕ್ಕಂತೆ ವಿಮೆ ನೀಡುವದಾಗಿ ಸಚಿವರು ಘೋಷಣೆ ಮಾಡಿದ್ದರು. ಆದರೆ ಈಗ ಸರಿಯಾಗಿ ವಿಮೆ ಬಾರದೆ ಇರುವದು ವಿಷಾದನೀಯ ಸಂಗತಿ ಎನ್ನುತ್ತಿದ್ದಾರೆ. ಈಗಾಲಾದರೂ ಕೃಷಿ ಸಚಿವರು ರೈತರಿಗೆ ಆದ ಅನ್ಯಾಯವನ್ನು ಸರಿಪಡಿಸಬೇಕೆಂಬ ಅಭಿಪ್ರಾಯ ಕೇಳಿ ಬರುತ್ತಿದೆ.
ಪ್ರೀಮಿಯಂ ಕಟ್ಟಿದ ಹಣವೂ ಬರಲಿಲ್ಲ
ಹಿರೇಸಿಂದೋಗಿ ಗ್ರಾಮದಲ್ಲಿ ವೆಂಕಟೇಶ ತವದಿ ಎನ್ನುವ ರೈತ ಮೆಕ್ಕೆಜೋಳ ಬೆಳೆದ 10 ಎಕರೆ ಭೂಮಿಗೆ 4 ಸಾವಿರ ರುಪಾಯಿ ಪ್ರೀಮಿಯಂ ಸಂದಾಯಿಸಿದರೆ ವಿಮೆ ಹಣ 800 ಖಾತೆಗೆ ಸಂದಾಯವಾಗಿದೆ. ಅದರಂತೆ ಪುನೀತ್ ಎನ್ನುವ ರೈತ 24 ಎಕರೆ ಭೂಮಿಗೆ 12 ಸಾವಿರ ಪ್ರೀಮಿಯಂ ಪಾವತಿಸಿದರೆ 1200 ಖಾತೆಗೆ ಸಂದಾಯವಾಗಿದೆ. ಅದರಂತೆ ಗಿರಿಯವ್ವ ಹೊಸಳ್ಳಿ ಎನ್ನುವ ರೈತ ಮಹಿಳೆಗೆ 42 ಮತ್ತು 187 ವಿಮೆ ಹಣ ಸಂದಾಯವಾಗಿದೆ.
ಭೀಮನಗೌಡ ಮಾಲೀಪಾಟೀಲ್ ಎನ್ನುವ ರೈತ 24 ಎಕರೆ ಭೂಮಿಗೆ 11 ಸಾವಿರ ಪ್ರೀಮಿಯಂ ಪಾವತಿಸಿದ್ದು, ಅವರಿಗೆ 900, 800 ಮತ್ತು 1800 ವಿಮೆ ಹಣ ಸಂದಾಯವಾಗಿದೆ. ಶಂಕ್ರಮ್ಮ ಹನುಮಪ್ಪ ಮೈನಳ್ಳಿ ಎನ್ನುವ ಮಹಿಳೆಗೆ 220, ದೇವಪ್ಪ ಹನುಮಪ್ಪ ಅಬ್ಬಿ 7 ಎಕರೆ ಭೂಮಿಗೆ 2630 ಪ್ರೀಮಿಯಂ ಪಾವತಿಸಿದ್ದು, 1000 ವಿಮೆ ಬಂದಿದೆ. ಕೆಂಚಣ್ಣ ಮಲ್ಲನಗೌಡ ಪಾಟೀಲ್ ಎನ್ನುವ ರೈತ 4 ಎಕರೆ ಭೂಮಿಯಲ್ಲಿ ಮೆಕ್ಕೆಜೋಳ ಬೆಳೆದು ನಷ್ಟವಾಗಿದ್ದಕ್ಕೆ 1620 ಪ್ರೀಮಿಯಂ ಪಾವತಿಸಲಾಗಿದ್ದು, ಈ ರೈತನಿಗೆ 612 ವಿಮೆ ಹಣ ಬಂದಿದೆ.
ಮಳೆ ಬಂದ್ರೂ ಕಷ್ಟ ಬರದಿದ್ರೂ ಕಷ್ಟ: ಅನ್ನದಾತನಿಗೆ ತಪ್ಪದ ಗೋಳು..!
ಹಿರೇಸಿಂದೋಗಿ ಗ್ರಾಮದ ರೈತರಿಗೆ ಬೆಳೆ ವಿಮೆ ನೀಡಲು ಕೃಷಿ ಇಲಾಖೆ ಮತ್ತು ವಿಮೆ ಕಂಪನಿ ತಾರತಮ್ಯ ಮಾಡಿದೆ. ಕೃಷಿ ಇಲಾಖೆಯವರು ಸರಿಯಾದ ರೀತಿಯಲ್ಲಿ ಬೆಳೆ ಸರ್ವೇ ಮಾಡದೇ ಇರುವುದರಿಂದ ರೈತರಿಗೆ ಅನ್ಯಾಯವಾಗಿದೆ. ಕೇವಲ . 100 ವಿಮೆ ಪರಿಹಾರ ಜಮಾ ಆಗಿರುವುದನ್ನು ಗಮನಿಸಿದರೆ ರೈತರ ಬಗ್ಗೆ ಎಷ್ಟರ ಮಟ್ಟಿಗೆ ಕಾಳಜಿ ಇದೆ ಎಂಬದು ತೋರುತ್ತದೆ. ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ಕೃಷಿ ಸಚಿವರು ವಿಮೆ ತಾರತಮ್ಯ ಸರಿಪಡಿಸಬೇಕು ಎಂದು ಸಿಂದೋಗಿಯ ಪ್ರಗತಿಪರ ರೈತ ವೆಂಕನಗೌಡ ಹೇಳಿದ್ದಾರೆ.
ಬೆಳೆಯ ಇಳುವರಿಯಲ್ಲಿ ವ್ಯತ್ಯಾಸವಾದರೆ ವಿಮೆ ಸರಿಯಾದ ರೀತಿಯಲ್ಲಿ ಬರುವುದಿಲ್ಲ. ಕಳೆದ 7 ವರ್ಷಗಳ ಹಿಂದಿನ ವರ್ಷಗಳ ಬೆಳೆಯ ಇಳುವರಿ ಆಧಾರದ ಮೇಲೆ ವಿಮೆ ನಿಗದಿ ಮಾಡಲಾಗುತ್ತದೆ. ಇದರ ಬಗ್ಗೆ ಫ್ಯೂಚರ್ ಜನರಲ್ ಇನ್ಸೂರೆನ್ಸ್ ಕಂಪನಿಯವರು ವಿಮೆ ನೀಡುತ್ತಿದ್ದು, ಕೃಷಿ ಇಲಾಖೆ ಬೆಳೆಯ ಅಂಕೆ ಸಂಖ್ಯೆಗಳನ್ನು ನೀಡಿದೆ. ರೈತರಿಗೆ ಅನ್ಯಾಯವಾದ ಬಗ್ಗೆ ಕೃಷಿ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಪರಿಶೀಲನೆ ಮಾಡಲಾಗುತ್ತದೆ ಎಂದು ಕೊಪ್ಪಳ ಕೃಷಿ ಇಲಾಖೆ ತಾಂತ್ರಿಕ ವಿಭಾಗ ಪ್ರಕಾಶ ಚವಡಿ ತಿಳಿಸಿದ್ದಾರೆ.