Karnataka Rains: ಬೆಳೆ, ಮನೆ ಹಾನಿ ಕುಟುಂಬಗಳಿಗೆ ಪರಿಹಾರ: ಸಚಿವ ಸಿ.ಸಿ.ಪಾಟೀಲ
ಚೊಳಚಗುಡ್ಡ ರೈತರ ಬೆಳೆ, ಸೇತುವೆ ಪರಿಶೀಲನೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಭರವಸೆ
ಬಾದಾಮಿ(ಸೆ.20): ಕಳೆದ ವಾರ ಸುರಿದ ಮಳೆಯಿಂದಾಗಿ ಮತ್ತು ಬೆಣ್ಣಿ ಹಳ್ಳದಿಂದಾಗಿ ಮಲಪ್ರಭಾ ನದಿ ದಂಡೆಯಲ್ಲಿನ ಹಾನಿಯಾದ ಬೆಳೆ ಮತ್ತು ಚೊಳಚಗುಡ್ಡ ಸೇತುವೆಗೆ ರಾಜ್ಯದ ಲೋಕೋಪಯೋಗಿ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಭೇಟಿ ನೀಡಿದರು. ತಾಲೂಕಿನ ಚೊಳಚಗುಡ್ಡ ಗ್ರಾಮದ ಮಲಪ್ರಭಾ ನದಿಗೆ ಅಡ್ಡಲಾಗಿರುವ ಸೇತುವೆಗೆ ಶನಿವಾರ ಭೇಟಿ ನೀಡಿ ರೈತರಿಗೆ ಸರ್ಕಾರದಿಂದ ಘೋಷಣೆಯಾದ ಪರಿಹಾರ ಮತ್ತು ಸೇತುವೆ ದುರಸ್ತಿಗೊಳಿಸಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಚೊಳಚಗುಡ್ಡ ಗ್ರಾಮದ ಶರಣಪ್ಪ ಸಾತನ್ನವರ ಹಾಗೂ ಶಂಕ್ರಪ್ಪ ಭಜಂತ್ರಿ ಅವರ ಜಮೀನಿನಲ್ಲಿ ಹಾನಿಯಾದ ಗೋವಿನಜೋಳದ ಬೆಳೆಯನ್ನು ಸಚಿವ ಸಿ.ಸಿ.ಪಾಟೀಲ ವೀಕ್ಷಿಸಿ ಪರಿಹಾರಕ್ಕೆ ಸೂಚಿಸಲಾಗಿದೆ ಎಂದು ರೈತರಿಗೆ ತಿಳಿಸಿದರು. ಹೊಳಿ ಬಂದಾಗೆಲ್ಲ ನಮ್ಮ ಬೆಳೆ ಹಾನಿಯಾಗುತ್ತಲೇ ಇದೆ. ಇದಕ್ಕೆ ಶಾಶ್ವತ ಪರಿಹಾರ ಮಾಡಬೇಕು ಎಂದು ರೈತರು ಸಚಿವರನ್ನು ಒತ್ತಾಯಿಸಿದರು.
ಬಾಗಲಕೋಟೆ ಜಿಲ್ಲೆಯಲ್ಲಿ ಮಳೆ ಪ್ರವಾಹದಿಂದ ಉಂಟಾದ ಹಾನಿ ವೀಕ್ಷಿಸಿದ ಸಚಿವ ಸಿ.ಸಿ.ಪಾಟೀಲ್
ಚೊಳಚಗುಡ್ಡದ ಸೇತುವೆ ವೀಕ್ಷಣೆ ಸಂದರ್ಭದಲ್ಲಿ ಸೇತುವೆಯ ದಂಡೆಯಲ್ಲಿದ್ದ ಯುವಕನಿಗೆ ಏ ಬಾರೊ ಇತ್ತಾಗ ಮಾರಾಯಾ ಬಿದ್ದಗಿದ್ದಿ ಅಂದು ಯುವಕನೋರ್ವನ ಮೇಲೆ ಮಾನವೀಯತೆ ತೋರಿದರು. ಕಳೆದ ಐದು ಬಾರಿ(2007-08-09 ಮತ್ತು 2019 ಮತ್ತೆ ಈಗೀನ ಪ್ರವಾಹವನ್ನು ನಾನು ಕಂಡಿದ್ದೇನೆ. ಧಾರವಾಡ ಹುಬ್ಬಳ್ಳಿಯ ನೀರು ಬೆಣ್ಣಿ ಹಳ್ಳದ ಮೂಲಕ ನದಿಗೆ ಸೇರುವ ಚಲನ ಕ್ರಿಯೆಯಿಂದ ನದಿ ಪಾತ್ರದ ರೈತರ ಬೆಳೆಗಳು ಸಂಪೂರ್ಣ ಹಾಳಾಗುತ್ತಲೇ ಇವೆ. ನಮ್ಮ ಸರ್ಕಾರ ಬೆಳೆ, ಮನೆ ಹಾನಿಯಾದ ಕುಟುಂಬಗಳಿಗೆ ಪರಿಹಾರ ನೀಡಲಾಗುತ್ತಿದೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ, ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಎಸ್‌ಎಲ್‌ಡಿ ಬ್ಯಾಂಕ್ ರಾಜ್ಯ ಉಪಾಧ್ಯಕ್ಷ ಮಹಾಂತೇಶ ಮಮದಾಪೂರ, ಶರಣಗೌಡ ಪಾಟೀಲ, ಬಸವರಾಜ ಯಂಕಂಚಿ, ಬಸು ಹಂಪಿಹೊಳಿ, ವೀರೇಶ ಅಂಗಡಿ, ಯಾದವಾಡ, ಪರಶುರಾಮ ಬಿರಾದಾರ, ಉಪವಿಭಾಗಾಧಿಕಾರಿ ಶ್ವೇತಾ ಬಿಡಿಕರ, ಜಿಲ್ಲಾ ಕೃಷಿ ಜಂಟಿ ನಿರ್ದೇಶಕಿ ಚೇತನಾ ಪಾಟೀಲ, ತಹಸೀಲ್ದಾರ್ ಜೆ.ಬಿ.ಮಜ್ಜಗಿ, ತಾಪಂ ಇಒ ಮಲ್ಲಿಕಾರ್ಜುನ ಕಲಾದಗಿ, ರಾಜ್ಯ ಹೆದ್ದಾರಿಯ ಅಧಿಕಾರಿಗಳ ತಂಡ, ಸಹಾಯಕ ನಿರ್ದೇಶಕ ಅಶೋಕ ತಿರಕನ್ನವರ, ಕೃಷಿ ಅಧಿಕಾರಿಗಳಾದ ಆನಂದ ಗೌಡರ, ಬಿ.ಎನ್.ಬುದ್ನಿ, ಚಂದಾವರಿ ಸೇರಿದಂತೆ ಇತರರಿದ್ದರು.