ಮುಖ್ಯ ರಸ್ತೆಯಲ್ಲೇ ಮೊಸಳೆ ಮರಿ ಪ್ರತ್ಯಕ್ಷ..!
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಮುಖ್ಯ ರಸ್ತೆಯ ಪೆಟ್ರೋಲ್ ಬಂಕ್ ಹತ್ತಿರ ಮೊಸಳೆ ಮರಿಯೊಂದು ಭಾನುವಾರ ತಡರಾತ್ರಿ ಪತ್ತೆಯಾಗಿದೆ. ಇದರಿಂದಾಗಿ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಲು ಕಾರಣವಾಗಿದೆ.
ಸುಬ್ರಹ್ಮಣ್ಯ(ಜೂ.30): ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಮುಖ್ಯ ರಸ್ತೆಯ ಪೆಟ್ರೋಲ್ ಬಂಕ್ ಹತ್ತಿರ ಮೊಸಳೆ ಮರಿಯೊಂದು ಭಾನುವಾರ ತಡರಾತ್ರಿ ಪತ್ತೆಯಾಗಿದೆ. ಇದರಿಂದಾಗಿ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಲು ಕಾರಣವಾಗಿದೆ.
ಮೊಸಳೆ ಮರಿ ಪತ್ತೆಯಾದ ಅನತಿ ದೂರದಲ್ಲೇ ಕುಮಾರಧಾರಾ ನದಿ ಹರಿಯುತ್ತಿದ್ದು, ನದಿಯಿಂದಲೇ ಮೊಸಳೆ ಮರಿ ಬಂದಿರಬಹುದು ಎನ್ನುವ ಅನುಮಾನವಿದೆ. ಮಳೆಗಾಲದ ಸಂದರ್ಭದಲ್ಲಿ ಕುಮಾರಧಾರಾ ನದಿ ತುಂಬಿ ಹರಿಯಲಾರಂಭಿಸುತ್ತಿದ್ದು, ಇದರಿಂದಾಗಿ ನದಿಯಲ್ಲಿ ಇರುವ ಮೊಸಳೆಗಳು ದಡ ಸೇರುತ್ತಿದೆ.
Photos| ಪ್ಯಾಂಟ್‌ನೊಳಗೆ ಮೊಸಳೆ ಮರಿ ಬಚ್ಚಿಟ್ಟಿದ್ದ ಮಹಿಳೆ!
ಮರಿ ಪತ್ತೆಯಾದ ಹಿನ್ನೆಲೆಯ ಇನ್ನೂ ಹಲವು ಮೊಸಳೆಗಳು ದಡಕ್ಕೆ ಬಂದಿರುವ ಸಾಧ್ಯತೆಯಿರುವ ಕಾರಣಕ್ಕಾಗಿ ಸಾರ್ವಜನಿಕರಲ್ಲಿ ಇದೀಗ ಆತಂಕ ಮನೆಮಾಡಿದೆ. ಮೊಸಳೆ ಮರಿ ಗಮನಕ್ಕೆ ಬಂದ ತಕ್ಷಣವೇ ಗ್ರಾಮ ಪಂಚಾಯಿತಿ ಸದಸ್ಯ ದಿನೇಶ್ ಬಿ.ಎನ್. ಅವರು ಈ ವಿಚಾರವನ್ನು ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದಾರೆ. ಆದರೆ ಸಿಬ್ಬಂದಿಗಳು ಬರುವ ಸಂದರ್ಭದಲ್ಲಿ ಮೊಸಳೆ ಮರಿ ಕಾಣೆಯಾಗಿದೆ.
ಇದೀಗ ಮೊಸಳೆಯನ್ನು ಹುಡುಕುವ ಪ್ರಯತ್ನ ನಡೆಸುತ್ತಿದ್ದಾರೆ. ಈ ಹಿಂದೆಯೂ ಕುಮಾರಧಾರಾ ನದಿಯಲ್ಲಿ ಮೊಸಳೆಗಳು ಇರುವ ಬಗ್ಗೆ ಸುದ್ದಿಗಳು ಹರಿದಾಡುತ್ತಿದ್ದು, ಇದೀಗ ಮೊಸಳೆಗಳ ಇರುವಿಕೆಗೆ ಸಾಕ್ಷಿಯೂ ದೊರೆತಂತಾಗಿದೆ. ಶಿರಾಡಿ ಘಾಟ್ ಅರಣ್ಯದಿಂದ ಹರಿದುಬರುವ ಕಾರಣಕ್ಕಾಗಿ ಕುಮಾರಧಾರಾ ನದಿಯಲ್ಲಿ ಮೊಸಳೆಗಳು ಹೆಚ್ಚಿನ ಸಂಖ್ಯೆಯಲ್ಲೂ ಇರುವ ಸಾಧ್ಯತೆಯ ಬಗ್ಗೆ ಸ್ಥಳೀಯರು ಅಭಿಪ್ರಾಯಪಡುತ್ತಾರೆ.