ಬೆಂಗಳೂರು(ಅ.02): ಮಾಸ್ಕ್‌ ಧರಿಸುವಿಕೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮಗಳನ್ನು ಪದೇ ಪದೆ ಉಲ್ಲಂಘಿಸುವವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ್‌ ಪ್ರಸಾದ್‌ ಎಚ್ಚರಿಸಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾ ಸೋಂಕು ತಗುಲದಂತೆ ಸದ್ಯಕ್ಕೆ ಇರುವ ಪರಿಣಾಮಕಾರಿ ಔಷಧಿ ಮಾಸ್ಕ್‌ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಕೈಗಳನ್ನು ಪದೇ ಪದೆ ತೊಳೆಯುವುದು ಅನಿವಾರ್ಯವಾಗಿದೆ. ಬಾಯಿ ಮತ್ತು ಮೂಗು ಸಂಪೂರ್ಣವಾಗಿ ಮುಚ್ಚುವ ರೀತಿಯಲ್ಲಿ ಮಾಸ್ಕ್‌ ಧರಿಸಬೇಕು. ಆದರೂ ಸಾರ್ವಜನಿಕರು ನಿಯಮ ಉಲ್ಲಂಘಿಸುತ್ತಿರುವ ಹಿನ್ನೆಲೆಯಲ್ಲಿ ಕ್ರಿಮಿನಲ್‌ ಕೇಸ್‌ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮಾಸ್ಕ್ ಹಾಕದಿದ್ರೆ ಒಂದು ಸಾವಿರ ರುಪಾಯಿ ದಂಡಕ್ಕೆ ಸಿಎಂ ಬಿಎಸ್‌ವೈ ಅನುಮತಿ..!

ಹೆಚ್ಚುವರಿ 120 ಮಾರ್ಷಲ್‌ ನೇಮಕ:

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸದೇ ಇರುವವರಿಗೆ ದಂಡ ವಿಧಿಸಲು 230 ಮಾರ್ಷಲ್‌ಗಳು ಕಾರ್ಯ ನಿರ್ವಹಿಸುತ್ತಿದ್ದು, ಇನ್ನೂ 120 ಮಂದಿ ಮಾರ್ಷಲ್‌ಗಳನ್ನು ನಿಯೋಜನೆ ಮಾಡಿಕೊಳ್ಳಲಾಗುತ್ತಿದೆ. ದಂಡ ವಿಧಿಸುವ ವೇಳೆ ಮಾರ್ಷಲ್‌ಗಳ ಜೊತೆ ಪೊಲೀಸ್‌ ಸಿಬ್ಬಂದಿ ಕೂಡ ತೊಡಗಿಸಿಕೊಂಡಿದ್ದಾರೆ. ಆತ್ಯಾಧುನಿಕ ತಂತ್ರಜ್ಞಾನದ ಯಂತ್ರ ನೀಡಲಾಗಿದೆ. ಮಾಸ್ಕ್‌ ಧರಿಸದ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳದ ವ್ಯಕ್ತಿಯ ಭಾವಚಿತ್ರ ಮತ್ತು ಸ್ಥಳದ ವಿವರ ನೋಂದಣಿ ಮಾಡಬಹುದು ಎಂದು ತಿಳಿಸಿದರು.