ಸರ್ಕಾರದ ಆರನೇ ಗ್ಯಾರಂಟಿ ಜಾರಿಗೊಳಿಸಲು ಸಿಪಿಐ ಒತ್ತಾಯ
ರಾಜ್ಯ ಸರ್ಕಾರವು ಅಂಗನವಾಡಿ ಕಾರ್ಯಕರ್ತರಿಗೆ ಮಾಸಿಕ 15 ಸಾವಿರ ಮತ್ತು ಸಹಾಯಕಿಯರಿಗೆ 10 ಸಾವಿರ ರು. ಗೌರವ ಧನ ಹೆಚ್ಚಳಮಾಡಬೇಕು ಎಂದು ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷ ಪ್ರತಿಭಟನೆ ನಡೆಸಿತು.
ತುಮಕೂರು : ರಾಜ್ಯ ಸರ್ಕಾರವು ಅಂಗನವಾಡಿ ಕಾರ್ಯಕರ್ತರಿಗೆ ಮಾಸಿಕ 15 ಸಾವಿರ ಮತ್ತು ಸಹಾಯಕಿಯರಿಗೆ 10 ಸಾವಿರ ರು. ಗೌರವ ಧನ ಹೆಚ್ಚಳಮಾಡಬೇಕು ಎಂದು ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷ ಪ್ರತಿಭಟನೆ ನಡೆಸಿತು.
ತುಮಕೂರಿನ ಟೌನ್ ಹಾಲ್ ವೃತ್ತದಿಂದ, ಎಂ.ಜಿ. ರಸ್ತೆ, ಸ್ವತಂತ್ರ ಚೌಕದ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಲಾಯಿತು. ಆಶಾ ಕಾರ್ಯಕರ್ತರಿಗೆ ಮಾಸಿಕ 8 ಸಾವಿರ ಮತ್ತು ಅಕ್ಷರ ದಾಸೋಹ ಬಿಸಿ ಊಟ ಕಾರ್ಯಕರ್ತರಿಗೆ 6 ಸಾವಿರ ಗೌರವ ಧನ ಹೆಚ್ಚಿಸಬೇಕೆಂದು ಆಗ್ರಹಿಸಲಾಯಿತು.
ರಾಷ್ಟ್ರೀಯ ನಾಯಕರಾದ ಪ್ರಿಯಾಂಕ ಗಾಂಧಿ ಅವರು ಬೆಳಗಾವಿಯ ಖಾನಾಪುರದಲ್ಲಿ ಗೌರವ ಧನ ಹೆಚ್ಚಿಸುವುದಾಗಿ ಹೇಳಿದ್ದರು. ಹಾಗೆಯೇ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮತ್ತು ರಾಜ್ಯದಲ್ಲಿ 50 ಲಕ್ಷ ಬಡ ಕುಟುಂಬಗಳಿಗೆ ಮನೆ ಕಟ್ಟಿಸಿ ಕೊಡುವ ವಿಚಾರ ಪ್ರಸ್ತಾಪಿಸಲಾಗಿತ್ತು. ಆದರೆ, ಈವರೆಗೆ ಯಾವುದೇ ಮನೆ ನಿರ್ಮಿಸಿಲ್ಲ ಎಂದರು.
ರಾಜ್ಯದಲ್ಲಿ 17ಲಕ್ಷ ಎಕರೆ ಸರ್ಕಾರಿ ಭೂಮಿ ಖಾಲಿ ಇದೆ. ಈ ಸರ್ಕಾರಿ ಭೂಮಿಯಲ್ಲಿ ಮುಂದಿನ 25 ವರ್ಷಕ್ಕೆ ಇದರಲ್ಲಿ 5 ಲಕ್ಷ ಎಕರೆ ಭೂಮಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಕಾರ್ಮಿಕರಿಗಾಗಿ ಮೀಸಲಿಡಲು ಸರ್ಕಾರಕ್ಕೆ ಒತ್ತಾಯಿಸಿದರು. 18 ಬೇಡಿಕೆಗಳನ್ನು ಇಟ್ಟುಕೊಂಡು ಪ್ರತಿಭಟನೆ ನಡೆಸಿದ್ದೇವೆ ಎಂದು ಭಾರತ ಕಮಿನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಗಿರೀಶ್ ಹೇಳಿದ್ದಾರೆ.
ಭಾರತ ಕಮ್ಯುನಿಸ್ಟ್ ಪಕ್ಷದ ಜ್ಯೋತಿ ಮಾತನಾಡಿ, ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದ್ದು, ಜನರ ಸಮಸ್ಯೆ ಬಗೆಹರಿಸಲು ಸರ್ಕಾರ ನೀಡಿರುವ ಗ್ಯಾರಂಟಿಗಳನ್ನು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ 6 ಗ್ಯಾರಂಟಿ ಘೋಷಿಸಿದ್ದು, ಅಧಿಕಾರಕ್ಕೆ ಬಂದ ಮೇಲೆ ಐದೇ ಗ್ಯಾರಂಟಿ ಘೋಷಿಸಿದ್ದೇವೆ ಎಂದು ಸುಳ್ಳು ಹೇಳುವ ಮೂಲಕ ಆರನೇ ಗ್ಯಾರಂಟಿ ಕೈ ಬಿಟ್ಟಿದ್ದಾರೆ. ಈ 6ನೇ ಗ್ಯಾರಂಟಿಯಲ್ಲಿ ಶ್ರಮಿಕರು. ಕಾರ್ಮಿಕರು, ಆಶಾ ಕಾರ್ಯಕರ್ತರು, ಸಹಾಯಕಿಯರು ಮಹಿಳಾ ಕಾರ್ಮಿಕರಿಗೆ ಗೌರವಧನ ಹೆಚ್ಚಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಕಮ್ಯುನಿಸ್ಟ್ ಪಕ್ಷದ ಕಾರ್ಯದರ್ಶಿ ಗಿರೀಶ್, ಮಂಡಳಿ ಸದಸ್ಯರು ಕಂಬೆಗೌಡ, ಜಿಲ್ಲಾ ಖಜಾಂಚಿ ಅಶ್ವಥ್ ನಾರಾಯಣ , ಜಿಲ್ಲಾ ಸಹ ಕಾರ್ಯದರ್ಶಿ ಗೋವಿಂದರಾಜು, ಜಿಲ್ಲಾ ಸಹ ಕಾರ್ಯದರ್ಶಿ ಚಂದ್ರಶೇಖರ್ ಜಿ , ತಿಪಟೂರು ತಾಲೂಕು ಕಾರ್ಯದರ್ಶಿ ಗೋವಿಂದರಾಜು ಸಿ ಎಸ್, ಪಾವಗಡ ತಾಲೂಕ ಕಾರ್ಯದರ್ಶಿ, ರಾಮಕೃಷ್ಣ ಶಿರಾ ತಾಲೂಕು ಕಾರ್ಯದರ್ಶಿ ಭೂತರಾಜು, ಜಿಲ್ಲಾ ಮುಖಂಡರು ರುದ್ರಪ್ಪ, ಕಾರ್ಮಿಕರು ಪಾಲ್ಗೊಂಡಿದ್ದರು.