ಡಿಕೆಶಿ-ಯೋಗೇಶ್ವರ್ ಪುತ್ರಿ ಭೇಟಿ: ರಾಜಕೀಯ ವಲಯದಲ್ಲಿ ಭಾರೀ ಸಂಚಲನ..!
ಬೆಂಗಳೂರಿನ ಕುಮಾರಕೃಪ ಅತಿಥಿ ಗೃಹದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ನಿಶಾ ಯೋಗೇಶ್ವರ್ ಭೇಟಿ ಮಾಡಿರುವ ಫೋಟೋವೊಂದು ವೈರಲ್ ಆಗಿದ್ದು, ರಾಜಕೀಯ ಪಡಸಾಲೆಯಲ್ಲಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ನಿಶಾ ಯೋಗೇಶ್ವರ್ ಅವರು ಸ್ವತಃ ಉದ್ಯಮಿಯಾಗಿದ್ದು, ಅವರ ಈ ಭೇಟಿ ಹಿಂದೆ ರಾಜಕೀಯ ಉದ್ದೇಶವೇನಾದರೂ ಇದೆಯೇ ಎನ್ನುವ ಪ್ರಶ್ನೆ ಮೂಡಿದೆ.
ವಿಜಯ್ ಕೇಸರಿ
ಚನ್ನಪಟ್ಟಣ(ಜು.26): ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿ.ಪಿ.ಯೋಗೇಶ್ವರ್ ಪುತ್ರಿ ನಿಶಾ ಯೋಗೇಶ್ವರ್ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿದ್ದು, ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಬೆಂಗಳೂರಿನ ಕುಮಾರಕೃಪ ಅತಿಥಿ ಗೃಹದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ನಿಶಾ ಯೋಗೇಶ್ವರ್ ಭೇಟಿ ಮಾಡಿರುವ ಫೋಟೋವೊಂದು ವೈರಲ್ ಆಗಿದ್ದು, ರಾಜಕೀಯ ಪಡಸಾಲೆಯಲ್ಲಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ನಿಶಾ ಯೋಗೇಶ್ವರ್ ಅವರು ಸ್ವತಃ ಉದ್ಯಮಿಯಾಗಿದ್ದು, ಅವರ ಈ ಭೇಟಿ ಹಿಂದೆ ರಾಜಕೀಯ ಉದ್ದೇಶವೇನಾದರೂ ಇದೆಯೇ ಎನ್ನುವ ಪ್ರಶ್ನೆ ಮೂಡಿದೆ.
ಗ್ಯಾರಂಟಿಯಿಂದ ವಿಪಕ್ಷಗಳ ಹೊಟ್ಟೆಗೆ ಬೆಂಕಿ: ಸಂಸದ ಡಿ.ಕೆ.ಸುರೇಶ್
ರಾಜ್ಯದಲ್ಲಿ ಜೆಡಿಎಸ್-ಬಿಜೆಪಿ ನಡುವೆ ಮೈತ್ರಿ ವಿಚಾರ ಚಾಲ್ತಿಯಲ್ಲಿರುವ ಹೊತ್ತಿನಲ್ಲೇ ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿ.ಪಿ.ಯೋಗೇಶ್ವರ್ ಅವರ ಪುತ್ರಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ.
ಸೋಮವಾರವಷ್ಟೇ ಡಿ.ಕೆ.ಶಿವಕುಮಾರ್, ಸಿಂಗಾಪುರದಲ್ಲಿ ಕುಳಿತು ಕಾಂಗ್ರೆಸ್ ಸರ್ಕಾರವನ್ನು ಕೆಡವುವ ಹುನ್ನಾರ ನಡೆಸಲಾಗುತ್ತಿದೆ ಎಂದು ಬಾಂಬ್ ಸಿಡಿಸಿದ್ದರು. ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಸಾಕಷ್ಟುಸಂಚಲನ ಮೂಡಿಸಿತ್ತು. ಇದರ ಮರುದಿನವೇ ನಿಶಾ ಯೋಗೇಶ್ವರ್, ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
2019ರಲ್ಲಿ ನಿಶಾ ಹೆಸರು ಮುನ್ನೆಲೆಗೆ:
2019ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಬಿಜೆಪಿಯಿಂದ ಸಿ.ಪಿ.ಯೋಗೇಶ್ವರ್ ಸ್ಪರ್ಧಿಸುವ ಕುರಿತು ಚರ್ಚೆಗಳು ನಡೆದಿದ್ದವು. ಯೋಗೇಶ್ವರ್ ಆಸಕ್ತಿ ತೋರದ ಹಿನ್ನೆಲೆಯಲ್ಲಿ ಅವರ ಪುತ್ರಿ ನಿಶಾ ಯೋಗೇಶ್ವರ್ ಹೆಸರು ಮುನ್ನೆಲೆಗೆ ಬಂದಿತ್ತು. ಆದರೆ, ಕೊನೆ ಕ್ಷಣದಲ್ಲಿ ಬಿಜೆಪಿ ಹೈಕಮಾಂಡ್ ಅಶ್ವತ್ಥ ನಾರಾಯಣಗೌಡರನ್ನು ಕಣಕ್ಕೆ ಇಳಿಸಿತ್ತು. ಅವರ ವಿರುದ್ಧ ಗೆಲುವು ಸಾಧಿಸಿದ ಡಿ.ಕೆ.ಸುರೇಶ್ ರಾಜ್ಯದಿಂದ ಗೆದ್ದ ಏಕೈಕ ಕಾಂಗ್ರೆಸ್ ಸಂಸದ ಎನಿಸಿದ್ದರು.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಯೋಗೇಶ್ವರ್ ಪಾತ್ರ ನಿರ್ಣಾಯಕವಾಗಿದೆ. ಜೆಡಿಎಸ್-ಬಿಜೆಪಿ ಮೈತ್ರಿ ಏರ್ಪಟ್ಟು ಯೋಗೇಶ್ವರ್ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆಂಬ ಚರ್ಚೆಗಳು ಚಾಲನೆಯಲ್ಲಿದೆ. ಇಂತಹ ಸಮಯದಲ್ಲೆ ನಿಶಾ ಯೋಗೇಶ್ವರ್ ಡಿಕೆಶಿ ಅವರನ್ನು ಭೇಟಿಯಾಗಿದ್ದಾರೆ.
ದೋಸ್ತಿ ಸರ್ಕಾರ ಕೆಡವಿದ್ದ ಸಿಪಿವೈ:
ಈ ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರವನ್ನು ಕೆಡವಿದ ಪ್ರಮುಖರಲ್ಲಿ ಸಿ.ಪಿ.ಯೋಗೇಶ್ವರ್ ಹೆಸರು ಮುಂಚೂಣಿಯಲ್ಲಿತ್ತು. ದೋಸ್ತಿ ಸರ್ಕಾರವನ್ನು ಕೆಡವಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರವಲ್ಲಿ ಯೋಗೇಶ್ವರ್ ಪ್ರಮುಖ ಪಾತ್ರ ವಹಿಸಿದ್ದರು. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಯೋಗೇಶ್ವರ್‌ಗೆ ಸಮಾನ ರಾಜಕೀಯ ಶತ್ರುಗಳು ಎನಿಸಿಕೊಂಡಿದ್ದಾರೆ.
ಔಟ್ ಆಫ್ ದಿ ವೇ ಯಾರೂ ಹೋಗಬೇಡಿ: ಅಧಿಕಾರಿಗಳಿಗೆ ಡಿಕೆಶಿ ಖಡಕ್ ವಾರ್ನಿಂಗ್!
2018ರಲ್ಲಿ ಜೋಡೆತ್ತುಗಳು ಎಂದು ಬಿಂಬಿಸಿಕೊಂಡಿದ್ದ ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್ ನಡುವಿನ ಸಂಬಂಧ ಅಷ್ಟಕ್ಕಷ್ಟೇ ಎಂಬಂತಿದೆ. ಇದೀಗ ಮುಂದಿನ ವರ್ಷವೇ ಲೋಕಸಭೆ ಚುನಾವಣೆ ಎದುರಾಗಲಿದ್ದು, ಇದರ ಭಾಗವಾಗಿಯೇ ಈ ಭೇಟಿ ನಡೆದಿರಬಹುದೆ ಎಂಬ ಅನುಮಾನ ಮೂಡುವಂತೆ ಮಾಡಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್ ತೆಕ್ಕೆಯಲ್ಲೇ ಉಳಿಸಿಕೊಳ್ಳಲು ನಿಶಾ ಯೋಗೇಶ್ವರ್ ಅಥವಾ ಅವರ ಮೂಲಕ ಯೋಗೇಶ್ವರ್ ಅವರನ್ನು ಸೆಳೆಯುವ ಪ್ರಯತ್ನ ನಡೆದಿರುವ ಸಾಧ್ಯತೆ ಇದೆ ಎನ್ನುವ ಮಾತುಗಳು ಹರಿದಾಡುತ್ತಿವೆ.
2013ರ ಲೋಕಸಭೆ ಉಪ ಚುನಾವಣೆಗೆ ಸುರೇಶ್ ಚೊಚ್ಚಲ ಬಾರಿ ಸ್ಪರ್ಧೆ ಮಾಡಿದ್ದಾಗ ಆಗಿನ ಸಮಾಜವಾದಿ ಪಕ್ಷದ ಶಾಸಕರಾಗಿದ್ದ ಸಿ.ಪಿ.ಯೋಗೇಶ್ವರ್ ಬೆಂಬಲ ಘೋಷಿಸಿದ್ದರು. 2014ರ ಸಾರ್ವತ್ರಿಕ ಚುನಾವಣೆ ವೇಳೆಗೆ ಕಾಂಗ್ರೆಸ್ ಸೇರ್ಪಡೆಯಾಗಿ ಸುರೇಶ್ ಅವರಿಗೆ ಚನ್ನಪಟ್ಟಣದಲ್ಲಿ ಭರ್ಜರಿ ಲೀಡ್ ದೊರಕಿಸಿಕೊಟ್ಟಿದ್ದರು. 2019ರ ಲೋಕಸಭೆ ಸಮರದಲ್ಲಿ ಸುರೇಶ್ ಗೆಲುವಿಗೆ ಜೆಡಿಎಸ್ ಆಸರೆಯಾಗಿ ನಿಂತಿತ್ತು. ಆದರೆ ಈ ಬಾರಿ ಡಿ.ಕೆ.ಸುರೇಶ್ ಲೋಕಸಭೆ ಚುನಾವಣೆ ಸ್ಪರ್ಧೆ ಕುರಿತಂತೆ ವೈರಾಗ್ಯದ ಮಾತುಗಳನ್ನಾಡುತ್ತಿದ್ದು, ಈ ಸಮಯದಲ್ಲೆ ನಿಶಾ ಯೋಗೇಶ್ವರ್ ಭೇಟಿಯಾಗಿರುವುದು ಸಾಕಷ್ಟುಕುತೂಹಲ ಕೆರಳಿಸಿದೆ.