ಸ್ವಿಫ್ಟ್ ಕಾರಿನಲ್ಲಿ ಗೋವುಗಳ ಹಿಂಸಾತ್ಮಕ ಸಾಗಾಟ: ಒಂದು ಹಸು ಸಾವು
ಸ್ವಿಫ್ಟ್ ಕಾರಿನಲ್ಲೇ ಗೋ ಸಾಗಾಟ| ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಗೇರಸೊಪ್ಪ ಬಳಿ ನಡೆದ ಘಟನೆ| ವಾಹನದಲ್ಲಿ ಮೂರು ಜನ ಗೋ ಕಳ್ಳರಿದ್ದು, ಇಬ್ಬರು ಅಪಘಾತವಾದ ಸಂದರ್ಭದಲ್ಲಿ ಪರಾರಿ| ಓರ್ವನನ್ನು ಸೆರೆಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು|
ಹೊನ್ನಾವರ(ಆ.17): ತಾಲೂಕಿನ ಗೇರಸೊಪ್ಪ ಬಳಿ ಸ್ವಿಫ್ಟ್ ಕಾರು ಮತ್ತು ಎರ್ಟಿಗಾ ಕಾರಿನ ನಡುವೆ ಮುಖಾಮುಖಿ ಅಫಘಾತ ಸಂಭವಿಸಿದ್ದು, ಸ್ವಿಫ್ಟ್ ಕಾರಿನಲ್ಲಿ ಗೋ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಎರ್ಟಿಗಾ ಕಾರು ಹೊನ್ನಾವರದಿಂದ ಗೇರಸೊಪ್ಪ ಮಾರ್ಗದಲ್ಲಿ ಹೋಗುತ್ತಿರುವಾಗ ಎದುರಗಡೆಯಿಂದ ಮಾವಿನಗುಂಡಿಯಿಂದ ಹೊನ್ನಾವರ ಮಾರ್ಗವಾಗಿ ಬರುತ್ತಿದ್ದ ಸ್ವಿಫ್ಟ್ ಕಾರಿನ ಚಾಲಕನ ಅಜಾಗರುಕತೆ ಚಾಲನೆಯಿಂದ ಡಿಕ್ಕಿ ಸಂಭವಿಸಿದ್ದು, ರಕ್ಷಣೆಗಾಗಿ ಸ್ಥಳೀಯರು ಧಾವಿಸಿದಾಗ ಸ್ವಿಫ್ಟ್ ವಾಹನದಲ್ಲಿ ಗೋ ಸಾಗಾಟ ಮಾಡುತ್ತಿರುವುದು ಕಂಡು ಬಂದಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ: ಜನಜೀವನ ಸಂಪೂರ್ಣ ಅಸ್ತವ್ಯಸ್ತ
ಸ್ವಿಫ್ಟ್ ವಾಹನದಲ್ಲಿ ಎರಡು ಗೋವುಗಳನ್ನು ಹಿಂಸಾತ್ಮಕವಾಗಿ ತುಂಬಿಕೊಂಡು ಸಾಗರದಿಂದ ಭಟ್ಕಳಕ್ಕೆ ಸಾಗಿಸುತ್ತಿದ್ದು, ಒಂದು ಗೋವು ಮೃತಪಟ್ಟಿದೆ. ವಾಹನದಲ್ಲಿ ಮೂರು ಜನ ಗೋ ಕಳ್ಳರಿದ್ದು, ಇಬ್ಬರು ಅಪಘಾತವಾದ ಸಂದರ್ಭದಲ್ಲಿ ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಸ್ಥಳೀಯರು ಓರ್ವನನ್ನು ಸೆರೆಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಬಂಧಿತ ಆರೋಪಿ:
ಹೊನ್ನಾವರ ತಾಲೂಕಿನ ವಲ್ಕಿ ಗ್ರಾಮದ ನಿವಾಸಿ ವಾಸಿಮ್ ಬಂಧಿತ ಆರೋಪಿಯಾಗಿದ್ದು, ಮೂಲತಃ ಭಟ್ಕಳ ಬಂದರ್ ರೋಡ ನಿವಾಸಿ ಸುಲೇಮಾನ ಮಿರ್ಜೇಕರ (36) ಎಂದು ತಿಳಿದುಬಂದಿದೆ. ಹಲವು ವರ್ಷಗಳಿಂದ ಹೊನ್ನಾವರದಲ್ಲಿ ವಾಸ್ತವ್ಯ ಇದ್ದು ಇದೇ ಕೃತ್ಯದಲ್ಲಿ ಭಾಗಿಯಾಗಿದ್ದ ಎಂದು ಸ್ಥಳಿಯರು ಮಾಹಿತಿ ನಿಡಿದ್ದಾರೆ. ಬಂಧಿತನಿಂದ ಸ್ವಿಫ್ಟ್ ವಾಹನ ವಶಪಡಿಸಿಕೊಂಡಿದ್ದಾರೆ. ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.