ಕೇರಳದ ಕಾಸರಗೋಡಿನ ಗೋಕುಲಂ ಗೋಶಾಲೆಯಲ್ಲಿ ದೇಶೀ ಗೋವಿನ ವಿಸ್ಮಯ

ಮಂಗಳೂರು(ನ.03):  ಇತ್ತ ಕರ್ನಾಟಕ ಶಾಸ್ತ್ರೀಯ ಸಂಗೀತ ಸುಧೆ ಹರಿಯುತ್ತಿದ್ದರೆ, ಅತ್ತ ಗೋವು ಸಂಗೀತವನ್ನು ತನ್ಮಯತೆಯಿಂದ ಆನಂದಿಸುತ್ತಾ ನರ್ತಿಸುವ ರೀತಿ ಹಿಂದೆ, ಮುಂದೆ ಹೆಜ್ಜೆ ಹಾಕುವ ವಿಡಿಯೋ ತುಣುಕು ಜಾಲತಾಣದಲ್ಲಿ ವೈರಲ್‌ ಆಗಿದೆ. ನೆಟ್ಟಿಗರು ಚಕಿತಗೊಳ್ಳುವಂತೆ ಆಗಿರುವ ಈ ವಿದ್ಯಮಾನ ನಡೆದದ್ದು ನೆರೆಯ ಕಾಸರಗೋಡಿನಲ್ಲಿ.

ಕಾಸರಗೋಡಿನ ಪೆರಿಯ ಎಂಬಲ್ಲಿ ಗೋಕುಲಂ ಹೆಸರಿನ ದೇಶೀ ಗೋಶಾಲೆ ಇದೆ. ಇದರಲ್ಲಿ ಸುಮಾರು 200ಕ್ಕೂ ಅಧಿಕ ಗೋವುಗಳು ಇವೆ. ಪ್ರತಿ ವರ್ಷ ದೀಪಾವಳಿ ಉತ್ಸವ ವೇಳೆ ಶಾಸ್ತ್ರೀಯ ಸಂಗೀತ ಸಪ್ತಾಹ ಆಯೋಜಿಸುತ್ತಾರೆ. ಈ ಬಾರಿ ಅ.23ರಿಂದ 30ರ ವರೆಗೆ ವಿವಿಧ ಕಡೆಗಳಿಂದ ಆಗಮಿಸಿದ್ದ ಕಲಾವಿದರು ಸಂಗೀತ ಕಛೇರಿ ನಡೆಸಿದ್ದಾರೆ. ಇಲ್ಲಿ ಎರಡು ಗೋಶಾಲೆ ಮಧ್ಯೆ ವೇದಿಕೆ ನಿರ್ಮಿಸಿ ಅಲ್ಲಿ ಸಂಗೀತ ಕಛೇರಿ ನಡೆಸುತ್ತಾರೆ. ಸಂಗೀತ ಸಪ್ತಾಹ ಆರಂಭವಾದ ನಾಲ್ಕು ದಿನಗಳಿಂದ ಕಾಂಕ್ರಿಜ್‌ ತಳಿಯ ಗೋವು ಸಂಗೀತ ಕಛೇರಿ ವೇಳೆ ಆನಂದದಿಂದ ಅತ್ತಿತ್ತ ಹೆಜ್ಜೆ ಹಾಕಲಾರಂಭಿಸಿದೆ. ಇದನ್ನು ನೋಡಿ ಅಲ್ಲಿಗೆ ಬಂದ ಎಲ್ಲರೂ ಅಚ್ಚರಿಗೊಂಡಿದ್ದಾರೆ. ತಮ್ಮ ಮೊಬೈಲ್‌ನಲ್ಲಿ ಗೋವಿನ ಈ ವಿಚಿತ್ರ ನಡವಳಿಕೆಯನ್ನು ಸೆರೆ ಹಿಡಿದಿದ್ದಾರೆ.

ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷರ ಮನೆಯಲ್ಲಿ ಕನ್ನಡ ನಿತ್ಯೋತ್ಸವ..!

ಅ.29ರಂದು ಹೊಸನಗರ ಮಠಾಧೀಶ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಅವರು ಆಗಮಿಸಿ ಆಶೀರ್ವಚನ ನೀಡಿದ್ದರು. ಈ ವೇಳೆ ವಿದ್ವಾನ್‌ ಪಟ್ಟಾಭಿರಾಮ ಪಂಡಿತ್‌ ಅವರಿಂದ ಶಾಸ್ತ್ರೀಯ ಸಂಗೀತ ಕಛೇರಿ ಏರ್ಪಾಟಾಗಿತ್ತು. ಆ ವೇಳೆಯೂ ಈ ಕಾಂಕ್ರಿಜ್‌ ಗೋವು ಸಂಗೀತ ನಾದಕ್ಕೆ ಮೈಮರೆತಂತೆ ವರ್ತಿಸುತ್ತಿತ್ತು. ಇದನ್ನು ಮೊಬೈಲ್‌ನಲ್ಲಿ ಸೆರೆಹಿಡಿದು ಯಾರೋ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಈ ಕಾಂಕ್ರಿಜ್‌ ಗೋವನ್ನು ರಾಮಚಂದ್ರಾಪುರ ಮಠದಿಂದಲೇ ಗೋಕುಲಮ್‌ ಗೋಶಾಲೆಗೆ ನೀಡಲಾಗಿತ್ತು ಎನ್ನುತ್ತಾರೆ ಶ್ರೀರಾಮಚಂದ್ರಾಪುರ ಮಠದ ಕಾಮದುಘಾ ಟ್ರಸ್ಟ್‌ ಅಧ್ಯಕ್ಷ ಡಾ.ವೈ.ವಿ.ಕೃಷ್ಣಮೂರ್ತಿ ತಿಳಿಸಿದ್ದಾರೆ.