ದಕ್ಷಿಣ ಕನ್ನಡದಲ್ಲಿ ಸೋಂಕಿತರ ಸಾವು ಹೆಚ್ಚಳ; ತಜ್ಞ ವೈದ್ಯರ ತಂಡದಿಂದ ಅವಲೋಕನ
ದ.ಕ.ದಲ್ಲಿ ಕೊರೋನಾ ಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿರುವವರಲ್ಲಿ ಸಾವಿನ ಸಂಖ್ಯೆ ಏರುಗತಿಯಲ್ಲಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಸೂಚನೆ ಮೇರೆಗೆ ಬೆಂಗಳೂರಿನ ತಜ್ಞ ವೈದ್ಯರ ತಂಡ ಆಗಮಿಸಿ ಪರಿಶೀಲನೆ ನಡೆಸಿದೆ.
ಮಂಗಳೂರು(ಜು.17): ದ.ಕ.ದಲ್ಲಿ ಕೊರೋನಾ ಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿರುವವರಲ್ಲಿ ಸಾವಿನ ಸಂಖ್ಯೆ ಏರುಗತಿಯಲ್ಲಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಸೂಚನೆ ಮೇರೆಗೆ ಬೆಂಗಳೂರಿನ ತಜ್ಞ ವೈದ್ಯರ ತಂಡ ಆಗಮಿಸಿ ಪರಿಶೀಲನೆ ನಡೆಸಿದೆ.
ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ನಿತ್ಯವೂ ಕೋವಿಡ್ ಸಂಬಂಧ ಚಿಕಿತ್ಸೆಗೆ ದಾಖಲಾಗಿರುವವರಲ್ಲಿ ಎರಡ್ಮೂರು ಸಾವು ಸಂಭವಿಸುತ್ತಲೇ ಇದೆ. ಇದಕ್ಕೆ ನಿಖರ ಕಾರಣ ಕಂಡುಕೊಳ್ಳಲು ಜಿಲ್ಲಾಡಳಿತ ತಜ್ಞ ವೈದ್ಯರ ಪರಿಶೀಲನೆಗೆ ವಾರದ ಹಿಂದೆ ಸಮಿತಿಯನ್ನು ರಚಿಸಿತ್ತು. ಇದೀಗ ಬುಧವಾರ ಬೆಂಗಳೂರಿನ ಮೂರು ಮಂದಿ ತಜ್ಞರ ತಂಡ ಮಂಗಳೂರಿಗೆ ಆಗಮಿಸಿ ಮಂಗಳೂರಿನ ತಜ್ಞ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದೆ.
ಅಪ್ರಾಪ್ತೆ ಮೇಲೆ ಅತ್ಯಾಚಾರ ಮಾಡಿದ ಮೀನು ವ್ಯಾಪಾರಿ
ಈಗ ಜಿಲ್ಲೆಯಲ್ಲಿ ಕೋವಿಡ್ ಸಾವಿನ ಸಂಖ್ಯೆ 50 ದಾಟಿದ್ದು, ಇಷ್ಟೊಂದು ಪ್ರಮಾಣದಲ್ಲಿ ಸಾವಿಗೆ ನಿರ್ದಿಷ್ಟಕಾರಣವನ್ನು ತಂಡ ಪತ್ತೆ ಮಾಡಲಿದೆ. ಎರಡು ದಿನಗಳ ಕಾಲ ಸಾವಿಗೀಡಾದವರ ಚಿಕಿತ್ಸಾ ವರದಿ ಪರಿಶೀಲನೆ ನಡೆಸಿ ಅಂತಿಮವಾಗಿ ಸಾವಿಗೆ ಕಾರಣ ಕುರಿತು ವಿಸ್ತೃತ ವರದಿ ನೀಡಲಿದೆ. ಜಿಲ್ಲಾ ಆರೋಗ್ಯಾಧಿಕಾರಿ ಈ ತಂಡದ ಮುಖ್ಯಸ್ಥರಾಗಿದ್ದು, ತಜ್ಞರು ಇಲ್ಲಿ ಪರಿಶೀಲನೆ ನಡೆಸಿದ ಬಳಿಕ ಬೆಂಗಳೂರಿಗೆ ತೆರಳಿ ಜಿಲ್ಲಾಡಳಿತಕ್ಕೆ ವರದಿ ನೀಡಲಿದ್ದಾರೆ. ಆ ಬಳಿಕವೇ ಕೋವಿಡ್ ಸಾವು ತಡೆಗೆ ಜಿಲ್ಲಾಡಳಿತ ಮುಂದಿನ ಕ್ರಮ ಕೈಗೊಳ್ಳಲಿದೆ.
ಮಾಸ್ಕ್, ಪಿಪಿಇ ಕಿಟ್ ಕೊರತೆ ಇಲ್ಲ: ಜಿಲ್ಲಾ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಎನ್-95 ಮಾಸ್ಕ್ ಹಾಗೂ ಪಿಪಿಇ ಕಿಟ್ ಕೊರತೆ ಕುರಿತ ಸುದ್ದಿ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಬಗ್ಗೆ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಜಿಲ್ಲೆಗೆ ಮಂಗಳವಾರ ಒಂದೂವರೆ ಸಾವಿರ ಮಾಸ್ಕ್ ಹಾಗೂ ಪಿಪಿಇ ಕಿಟ್‌ಗಳು ಬಂದಿವೆ. ಹಾಗಾಗಿ ಇಲ್ಲಿ ಯಾವುದೇ ಪರಿಕರಗಳ ಕೊರತೆ ಇಲ್ಲ. ಈ ಕುರಿತು ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕೇಸು ದಾಖಲಿಸುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.