ಉಡುಪಿ(ಜು.02): ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಮತ್ತೇ ಹೆಚ್ಚಾಗಿದೆ. ಅದರಲ್ಲೂ ಸೋಂಕಿತರ ಸಂಪರ್ಕದಲ್ಲಿದ್ದವರಿಗೆ ಸೋಂಕು ತಗಲಿರುವುದು ಹೆಚ್ಚುತ್ತಿದೆ. ಬುಧವಾರ ಒಂದೇ ದಿನ 22 ಮಂದಿ ಸೋಂಕಿತರನ್ನು ಜಿಲ್ಲೆಯಲ್ಲಿ ಪತ್ತೆ ಮಾಡಲಾಗಿದೆ. ಜಿಲ್ಲೆಯಲ್ಲೀಗ ಸೋಂಕಿತರ ಸಂಖ್ಯೆ 1228 ಆಗಿದೆ.

ಈ 22 ಮಂದಿಯಲ್ಲಿ 11 ಮಹಿಳೆಯರು, 10 ಪುರುಷರು ಮತ್ತು 1 ವರ್ಷದ ಗಂಡು ಮಗು ಸೇರಿದ್ದಾರೆ. ಅವರಲ್ಲಿ 5 ಮಂದಿ ಮಹಾರಾಷ್ಟ್ರದಿಂದ, ಬೆಂಗಳೂರು, ತೆಲಂಗಾಣ, ಅಬುದಾಬಿಯಿಂದ ಬಂದ ತಲಾ ಒಬ್ಬೊಬ್ಬರು ಮತ್ತು 14 ಮಂದಿ ಜಿಲ್ಲೆಯ ಪ್ರಾಥಮಿಕ ಸೋಂಕಿತರಾಗಿದ್ದಾರೆ. ಈ ಪ್ರಾಥಮಿಕ ಸೋಂಕಿತರಲ್ಲಿ 6 ಮಂದಿ ಜೂ.27ರಂದು ಸೋಂಕಿತರೆಂದು ಪತ್ತೆಯಾದ ಇಬ್ಬರು ಸಹೋದರರ ಸಂಪರ್ಕಿತರಾಗಿದ್ದಾರೆ.

ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣಕ್ಕೆ ಕ್ಷಣಗಣನೆ: ವರ್ಚುವಲ್ ಲೈವ್ ಮುಖಾಂತರ ಕಾರ್ಯಕ್ರಮ!

ಬುಧವಾರ 17 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ 1069 ಮಂದಿ ಬಿಡುಗಡೆಯಾಗಿದ್ದಾರೆ, 3 ಮಂದಿ ಮೃತಪಟ್ಟಿದ್ದಾರೆ. 156 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.

ಹಾಟ್‌ಸ್ಪಾಟ್‌ನಿಂದ 201: ಜಿಲ್ಲೆಗೆ ಮುಂಬೈ, ಬೆಂಗ​ಳೂರು ಮತ್ತಿತರ ಹಾಟ್‌ಸ್ಪಾಟ್‌ನಿಂದ ಬರುತ್ತಿರುವವರ ಸಂಖ್ಯೆ ಕೂಡ ಹೆಚ್ಚುತ್ತಿದೆ. ಬುಧವಾರ 263 ಮಂದಿ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಅವರಲ್ಲಿ 201 ಮಂದಿ ಹಾಟ್‌ ಸ್ಪಾಟ್‌ ನಿಂದಲೇ ಬಂದವರಾಗಿದ್ದಾರೆ. ಉಳಿದವರಲ್ಲಿ 19 ಮಂದಿ ಸೋಂಕಿತರ ಸಂಪರ್ಕದಲ್ಲಿದ್ದವರು, 17 ಮಂದಿ ಕೊರೋನಾ ಸೋಂಕಿನ ಶಂಕಿತರು, 20 ಮಂದಿ ಶೀತಜ್ವರ ಮತ್ತು 6 ಮಂದಿ ಉಸಿರಾಟದ ತೊಂದರೆಯಿಂದ ಬಳಲುತ್ತಿರುವವರಾಗಿದ್ದಾರೆ. ಬುಧವಾರ ಒಟ್ಟು 240 ವರದಿಗಳು ಬಂದಿದ್ದು, ಅವುಗಳಲ್ಲಿ 22 ಪಾಸಿಟಿವ್‌, 218 ನೆಗೆಟಿವ್‌ ಆಗಿವೆ. ಇನ್ನೂ 397 ವರದಿಗಳು ಕೈಸೇರಬೇಕಾಗಿವೆ.

ಮುಂಬೈ ಸೋಂಕಿತರಿಂದ ಸೋಂಕು ಹರಡುತ್ತಿದೆ

ಜಿಲ್ಲೆಯಲ್ಲಿ ಪ್ರತಿದಿನ 250 - 300 ಮಂದಿ ಮಹಾರಾಷ್ಟ್ರ ಮತ್ತು ಇತರ ಜಿಲ್ಲೆಗಳಿಂದ ಬರುತ್ತಿದ್ದಾರೆ. ಅವರನ್ನೂ ಹೋಂಕ್ವಾರಂಟೈನ್‌ ಮಾಡಲಾಗುತ್ತಿರುವುದಿಂದ ಸಹಜವಾಗಿಯೇ ಅವರಲ್ಲಿ ಸೋಂಕಿತರ ಪ್ರಾಥಮಿಕ ಸಂಪರ್ಕಿತರಲ್ಲಿಯೂ ಸೋಂಕು ಪತ್ತೆಯಾಗುತ್ತಿದೆ. ಆದರೆ ಅದು ಸಮುದಾಯಕ್ಕೆ ಹರಡಿಲ್ಲ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ಹೇಳಿ​ದ್ದಾ​ರೆ.