ಬಳ್ಳಾರಿ: ಮಂಗಳಮುಖಿಯರಿಗೆ ಕೋವಿಡ್ ಲಸಿಕೆ
* ಮಂಗಳಮುಖಿಯರು ಹಾಗೂ ಸವಿತಾ ಸಮಾಜದವರಿಗೆ ಕೊರೋನಾ ಲಸಿಕೆ
* ಸಾರ್ವಜನಿಕರು ಭಯ ಬಿಟ್ಟು ತಪ್ಪದೇ ಕೋವಿಡ್ ಲಸಿಕೆ ಪಡೆಯಿರಿ
* ಕೋವಿಡ್ ವೈರಸ್ ತಡೆಗಟ್ಟಲು ಸರ್ಕಾರದೊಂದಿಗೆ ಕೈಜೋಡಿಸಿ
ಬಳ್ಳಾರಿ(ಜೂ.12): ಮಂಗಳಮುಖಿಯರು ಹಾಗೂ ಸವಿತಾ ಸಮಾಜದವರಿಗೆ ಕೋವಿಡ್ ಲಸಿಕೆ ನೀಡುವ ಪ್ರಕ್ರಿಯೆಗೆ ತಹಸೀಲ್ದಾರ್ ರೆಹಮಾನ್ ಪಾಷಾ ತಾಲೂಕು ಕಚೇರಿ ಆವರಣದಲ್ಲಿ ಗುರುವಾರ ಚಾಲನೆ ನೀಡಿದ್ದಾರೆ.
ನಂತರ ಅವರು ಮಾತನಾಡಿ, ಸರ್ಕಾರ ಹೊರಡಿಸಿದ ಮಾರ್ಗಸೂಚಿ ಅನ್ವಯ ಮಂಗಳಮುಖಿಯರು ಹಾಗೂ ಸವಿತಾ ಸಮಾಜದವರಿಗೆ ಗುರುವಾರ ಹಾಗೂ ಶುಕ್ರವಾರ ಲಸಿಕೆ ನೀಡಲಾಗುತ್ತದೆ. ಬಳ್ಳಾರಿ ತಾಲೂಕು ವ್ಯಾಪ್ತಿಯಲ್ಲಿ 500 ಮಂಗಳಮುಖಿಯರಿದ್ದು, ನಗರ ವ್ಯಾಪ್ತಿಯಲ್ಲಿರುವ 300 ಮಂಗಳಮುಖಿಯರಿಗೆ ಹಾಗೂ ನಗರ ವ್ಯಾಪ್ತಿಯಲ್ಲಿರುವ ಸವಿತಾ ಸಮಾಜದ ಸಾವಿರ ಜನರಿಗೆ ಲಸಿಕೆ ನೀಡುವ ಗುರಿಯಿದೆ ಎಂದು ಹೇಳಿದ್ದಾರೆ. ಎಲ್ಲ ಸಾರ್ವಜನಿಕರು ಭಯ ಬಿಟ್ಟು ತಪ್ಪದೇ ಕೋವಿಡ್ ಲಸಿಕೆ ಪಡೆಯಿರಿ. ಕೊರಾನಾ ವೈರಸ್ ತಡೆಗಟ್ಟಲು ಸರ್ಕಾರದೊಂದಿಗೆ ಕೈಜೋಡಿಸಿ ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಮೋಹನ್ ಕುಮಾರಿ ಮಾತನಾಡಿ ಎರಡು ದಿನ ತಾಲೂಕು ಕಚೇರಿ ಆವರಣದಲ್ಲಿ ಲಸಿಕಾ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಬಳ್ಳಾರಿಯಲ್ಲಿ ವದಂತಿ ನಂಬಿದ ಜನ: ಲಸಿಕೆಗೆ 4 ಗ್ರಾಮಸ್ಥರು ಹಿಂದೇಟು
ಲಸಿಕೆ ಪಡೆದ ಮಂಗಳಮುಖಿಯರಾದ ಚಾಂದಿನಿ, ಸಂಧ್ಯಾ, ಗೌಸಿಯಾಭಾನು, ಎಲ್ಲರು ಲಸಿಕೆ ಪಡೆಯಿರಿ. ಯಾರೂ ಭಯಪಡಬೇಡಿ, ಇದರಿಂದ ಏನೂ ತೊಂದರೆಯಾಗುವುದಿಲ್ಲ. ಲಸಿಕೆ ಪಡೆದು ಕೊರೋನಾ ವಿರುದ್ಧ ಹೋರಾಡೋಣ ಎಂದರು. ಈ ವೇಳೆ ಆರೋಗ್ಯ ಇಲಾಖೆ ಹಾಗೂ ತಾಪಂ ಸಿಬ್ಬಂದಿ ಇದ್ದರು.
ಕಾರ್ಮಿಕರಿಗೆ ಕೋವಿಡ್ ಲಸಿಕೆ
ನಗರದ ಮುಂಡರಗಿ ಬಳಿಯ ಮಹಾತ್ಮಗಾಂಧಿ ಟೌನ್ ಶಿಪ್ ಜಿ+2 ಮನೆಗಳ ನಿರ್ಮಾಣ ಕಾಮಗಾರಿಯಲ್ಲಿ ಭಾಗಿಯಾಗಿರುವ ಎನ್‌ಸಿಸಿ ಕಂಪನಿಯ ನೌಕರರಿಗೆ ಮತ್ತು ಕಾರ್ಮಿಕರಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ನ್ಯಾ. ಎಸ್.ಎಚ್. ಪುಷ್ಪಾಂಜಲಿದೇವಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಕೋವಿಡ್ ಲಸಿಕೆಯ ಬಗ್ಗೆ ಕಾರ್ಮಿಕರಲ್ಲಿ ಅರಿವು ಮೂಡಿಸಿ, ಕೊರೋನಾ ತಡೆಯಲು ಸರ್ಕಾರ ಹೊರಡಿಸಿರುವ ಮಾರ್ಗಸೂಚಿ ಪಾಲಿಸುವಂತೆ ಹೇಳಿದರು. ಈ ವೇಳೆ 150 ಕಾರ್ಮಿಕರು ಲಸಿಕೆ ಪಡೆದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಮೋಹನ್ ಕುಮಾರಿ, ಎನ್‌ಸಿಸಿ ಕಂಪನಿಯ ಸೈಟ್ ಎಂಜನಿಯರ್ ಶ್ರೀನಿವಾಸ, ಕಾರ್ಮಿಕ ಇಲಾಖೆಯ ಉಪವಿಭಾಗ 1ರ ಕಾರ್ಮಿಕ ಅಧಿಕಾರಿ ಕಮಲ್ ಷಾ ಅಲ್ತಾಫ್ ಅಹಮದ್, ಉಪವಿಭಾಗ 2ರ ಕಾರ್ಮಿಕ ಅಧಿಕಾರಿ ಚಂದ್ರಶೇಖರ ಎನ್. ಐಲಿ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಎನ್‌ಸಿಸಿ ಕಂಪನಿಯ ಆಡಳಿತ ಮಂಡಳಿಯವರು ಇದ್ದರು.