ತುಮಕೂರು (ಏ.24):  ನಗರ ಸೇರಿದಂತೆ ಜಿಲ್ಲೆಯಲ್ಲಿ ಕೊರೋನಾ ಸೋಂಕು ಪ್ರಕರಣಗಳು ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೊರೋನಾ ತಡೆಗಾಗಿ ಸರ್ಕಾರ ನೇಮಕ ಮಾಡಿರುವ ಕೋವಿಡ್‌ ನಿಯಂತ್ರಣ ಉಸ್ತುವಾರಿಯಾಗಿರುವ ಐಜಿಪಿ ಸೀಮಂತಕುಮಾರ್‌ ಸಿಂಗ್‌ ಅವರು ನಗರಕ್ಕೆ ಭೇಟಿ ನೀಡಿ ಕೊರೋನಾ ಮಾರ್ಗಸೂಚಿ ಪಾಲನೆ ಸಂಬಂಧ ಪರಿಶೀಲನೆ ನಡೆಸಿದರು.

ನಗರದ ವಿವಿಧ ರಸ್ತೆಗಳು, ಬಡಾವಣೆಗಳಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಅವರೊಂದಿಗೆ ಭೇಟಿ ನೀಡಿದ ಐಜಿಪಿ ಸೀಮಂತಕುಮಾರ್‌ ಸಿಂಗ್‌ ಅವರು ಕೊರೋನಾ ನಿಯಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿ, ಕೋವಿಡ್‌ ನಿಯಮಗಳ ಬಗ್ಗೆ ನಿರ್ಲಕ್ಷ್ಯ ತೋರದೆ ಕಟ್ಟುನಿಟ್ಟಾಗಿ ಪಾಲಿಸುವಂತೆ ಸಲಹೆ ಮಾಡಿದರು.

'ತಜ್ಞರ ಶಿಫಾರಸ್ಸಿನ ಮೇಲೆ ಸೆಮಿಲಾಕ್‌ಡೌನ್‌ ಜಾರಿ' ...

ಮನೆಯಿಂದ ಹೊರ ಬಾರದಿರಿ

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಮಾತನಾಡಿ, ಸರ್ಕಾರ ಘೋಷಣೆ ಮಾಡಿರುವ ವಾರಾಂತ್ಯ ಲಾಕ್‌ಡೌನ್‌, ಕರ್ಫ್ಯೂ ಸಂದರ್ಭದಲ್ಲಿ ಸಾರ್ವಜನಿಕರು ಅನಗತ್ಯವಾಗಿ ಮನೆಗಳಿಂದ ಹೊರಬರದೆ ಮನೆಯೊಳಗೆ ಇದ್ದು ಈ ಮಹಾಮಾರಿ ನಿಯಂತ್ರಣಕ್ಕೆ ಸಹಕರಿಸಬೇಕು. ಒಂದು ವೇಳೆ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸದೆ ವಿನಾ ಕಾರಣ ಮನೆಯಿಂದ ಹೊರ ಬಂದರೆ ಅಂತಹವರ ವಿರುದ್ಧ ಕಾನೂನು ಕ್ರಮ ಖಚಿತ. ಇದಕ್ಕೆ ಜಿಲ್ಲೆಯ ಜನ ಅವಕಾಶ ನೀಡುವುದಿಲ್ಲ ಎಂಬ ನಂಬಿಕೆ ತಮಗಿದೆ ಎಂದರು.

ಮೇ 4ರವರೆಗೂ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರೊಂದಿಗೆ ಕೋವಿಡ್‌ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಜಿಲ್ಲಾಡಳಿತ ಮತ್ತು ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು.