ಕೊರೋನಾ ಸೋಂಕಿತ ಮಹಿಳೆಯೋರ್ವರು ಆಂಬುಲನ್ಸ್‌ನಲ್ಲೇ ಸುಮಾರು 8 ಗಂಟೆಗಳ ಕಾಲ ನರಳಾಡಿದ ಮನಕಲುಕುವ ಘಟನೆ ನಡೆದಿದೆ. ನಾಲ್ಕೈದು ಆಸ್ಪತ್ರೆಗೆ ಅಲೆದರೂ ಬೆಡ್‌ ಸಿಗದೆ ಒದ್ದಾಡಿದ್ದಾರೆ. 

ಬೆಂಗಳೂರು (ಏ.29):  ನಾಲ್ಕೈದು ಆಸ್ಪತ್ರೆಗೆ ಅಲೆದಾಡಿದರೂ ಬೆಡ್‌ ಸಿಗದೇ 70 ವರ್ಷದ ಕೊರೋನಾ ಸೋಂಕಿತ ಮಹಿಳೆ ಆ್ಯಂಬುಲೆನ್ಸ್‌ನಲ್ಲೇ ಸುಮಾರು ಎಂಟು ತಾಸು ನರಳಾಡಿದ ಮನಕಲಕುವ ಘಟನೆ ಬುಧವಾರ ನಗರದಲ್ಲಿ ಜರುಗಿದೆ.

ರಾಜಾಜಿನಗರ ನಿವಾಸಿಯಾದ ಮಹಿಳೆಗೆ ಬೆಳಗ್ಗೆ ಕೊರೋನಾ ಸೋಂಕು ದೃಢಪಟ್ಟಿದೆ. ತೀವ್ರ ಕೆಮ್ಮು ಇದ್ದಿದ್ದರಿಂದ ಉಸಿರಾಟದ ಸಮಸ್ಯೆ ಉಂಟಾಗಿದೆ. ಅಷ್ಟರಲ್ಲಿ ಕುಟುಂಬದ ಸದಸ್ಯರು ಆ್ಯಂಬುಲೆನ್ಸ್‌ ಕರೆಸಿ ಸಿಂಧಿ ಆಸ್ಪತ್ರೆ, ಸೇಂಟ್‌ ಮಾರ್ಥಾಸ್‌ ಆಸ್ಪತ್ರೆ, ಕೆ.ಸಿ.ಜರನಲ್‌ ಆಸ್ಪತ್ರೆ ಸೇರಿದಂತೆ ನಾಲ್ಕೈದು ಆಸ್ಪತ್ರೆಗೆ ಅಲೆದರೂ ಬೆಡ್‌ ಸಿಕ್ಕಿಲ್ಲ. ಅಷ್ಟೇ ಅಂಗಲಾಚಿದರೂ ಆಸ್ಪತ್ರೆಗಳಲ್ಲಿ ಬೆಡ್‌ ಇಲ್ಲ ಎಂಬ ಉತ್ತರ ಬಂದಿದೆ. ಕಡೆಗೆ ಅನ್ಯ ಮಾರ್ಗ ಇಲ್ಲದೇ ಬೆಳಗ್ಗೆ 11 ಗಂಟೆಯಿಂದ ರಾತ್ರಿ 7 ಗಂಟೆ ವರೆಗೂ ಶ್ರೀರಾಂಪುರದ ಮೆಟ್ರೋ ನಿಲ್ದಾಣದ ಸಮೀಪದ ರಸ್ತೆಯಲ್ಲಿ ಆ್ಯಂಬುಲೆನ್ಸ್‌ ನಿಲುಗಡೆ ಮಾಡಿಕೊಂಡು ಸೋಂಕಿತೆಗೆ ಚಿಕಿತ್ಸೆ ನೀಡಲಾಯಿತು.

ಕರ್ನಾಟಕದ ಹತ್ತು ಸೇರಿ ಒಟ್ಟು 150 ಜಿಲ್ಲೆ ಲಾಕ್‌ಡೌನ್‌ ಮಾಡಿ: ಕೇಂದ್ರಕ್ಕೆ ತಜ್ಞ ಸಲಹೆ! 

ಸುಮಾರು ಎಂಟು ತಾಸು ಆ್ಯಂಬುಲೆನ್ಸ್‌ನಲ್ಲೇ ಸೋಂಕಿತೆಗೆ ಚಿಕಿತ್ಸೆ ನೀಡಿದ್ದು, ಈ ಅವಧಿಯಲ್ಲಿ ಮೂರು ಆಕ್ಸಿಜನ್‌ ಸಿಲಿಂಡರ್‌ ಬದಲಿಸಲಾಗಿದೆ. ರಾತ್ರಿ ಏಳು ಗಂಟೆ ಸುಮಾರಿಗೆ ಕೆ.ಸಿ.ಜನರಲ್‌ ಆಸ್ಪತ್ರೆಯಲ್ಲಿ ಬೆಡ್‌ ಲಭ್ಯವಾದ ಹಿನ್ನೆಲೆಯಲ್ಲಿ ಸೋಂಕಿತೆಯನ್ನು ಚಿಕಿತ್ಸೆಗೆ ದಾಖಲಿಸಲಾಯಿತು.

ಪಾಲಿಕೆಯ ವೈದ್ಯರ ಸಹಕಾರ ಸ್ಮರಣೆ: ‘ಐದಾರು ಆಸ್ಪತ್ರೆಗೆ ಅಲೆದಾಡಿದರೂ ಬೆಡ್‌ ಸಿಗಲಿಲ್ಲ. ಇತ್ತ ತಾಯಿಗೆ ವಿಪರೀತ ಕೆಮ್ಮು ಹಾಗೂ ಉಸಿರಾಟದ ಸಮಸ್ಯೆ ಇದ್ದಿದ್ದರಿಂದ ನರಳಾಡುತ್ತಿದ್ದರು. ಕಡೆಗೆ ಗಾಯಿತ್ರಿನಗರ ವಾರ್ಡ್‌ ಪಾಲಿಕೆಯ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯರು ಹಾಗೂ ನರ್ಸ್‌ ತಾಯಿಯ ನೆರವಿಗೆ ಬಂದರು. ಸುಮಾರು ಎಂಟು ತಾಸು ಆ್ಯಂಬುಲೆನ್ಸ್‌ನಲ್ಲಿ ಇದ್ದು, ತಾಯಿಗೆ ತುರ್ತು ಚಿಕಿತ್ಸೆ ನೀಡಿದರು. ಅವರು ಸಹಕಾರ ನೀಡದಿದ್ದರೆ ಬಹಳ ಕಷ್ಟವಾಗುತ್ತಿತ್ತು. ದೇವರ ದಯೆ ರಾತ್ರಿ ಕೆ.ಸಿ.ಜನರಲ್‌ ಆಸ್ಪತ್ರೆಯಲ್ಲಿ ಬೆಡ್‌ ಸಿಕ್ಕಿತು’ ಎಂದು ಸೋಂಕಿತೆಯ ಪುತ್ರ ಜಯಪ್ಪ ಅವರು ನಿಟ್ಟುಸಿರುಬಿಟ್ಟರು.

‘ಯಾವ ಆಸ್ಪತ್ರೆಗೆ ಹೋದರೂ ಬೆಡ್‌ ಇಲ್ಲ ಎಂದು ಹೇಳುತ್ತಾರೆ. ಹಾಗಾದರೇ, ಸೋಂಕಿತರು ಎಲ್ಲಿಗೆ ಹೋಗಬೇಕು? ಇಡೀ ದಿನ ಸೋಂಕಿತೆಗೆ ರಸ್ತೆಯಲ್ಲಿ ಆ್ಯಂಬುಲೆನ್ಸ್‌ ನಿಲುಗಡೆ ಮಾಡಿಕೊಂಡು ಚಿಕಿತ್ಸೆ ನೀಡಲಾಗಿದೆ. ಪಾಲಿಕೆಯ ವೈದ್ಯರು ನೆರವಿಗೆ ಬಾರದಿದ್ದರೆ ನಾವು ಏನು ಮಾಡಬೇಕಿತ್ತು?’ ಎಂದು ಸೋಂಕಿತೆಯ ಸಂಬಂಧಿಕರು ಪ್ರಶ್ನಿಸಿದರು. ರಾಜ್ಯ ಸರ್ಕಾರ ಸೋಂಕಿತರಿಗೆ ಅಗತ್ಯವಿರುವ ಬೆಡ್‌, ಆಕ್ಸಿಜನ್‌ ಹಾಗೂ ವೆಂಟಿಲೇಟರ್‌ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.