Covid Outbreak In School : ಕುಶಾಲನಗರ ವಸತಿ ಶಾಲೆ 26 ಮಕ್ಕಳಿಗೆ ಸೋಂಕು
- ಕುಶಾಲನಗರ ವಸತಿ ಶಾಲೆ 26 ಮಕ್ಕಳಿಗೆ ಸೋಂಕು
- ಕೊರೋನಾ 3ನೇ ಅಲೆಯ ಭೀತಿಯ ನಡುವೆಯೇ ಶಾಲೆ ಕಾಲೇಜುಗಳಲ್ಲಿ ಸೋಂಕು
ಕುಶಾಲನಗರ (ಡಿ.25): ಕೊರೋನಾ (Corona) 3ನೇ ಅಲೆಯ ಭೀತಿಯ ನಡುವೆಯೇ ಶಾಲೆ ಕಾಲೇಜುಗಳಲ್ಲಿ (College) ಸೋಂಕು ಹರಡುತ್ತಿರುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕೊಡಗು ಜಿಲ್ಲೆ ಕುಶಾಲನಗರ ಸಮೀಪದ ಅತ್ತೂರು ಜ್ಞಾನ ಗಂಗಾ ವಸತಿ ಶಾಲೆಯ 26 ವಿದ್ಯಾರ್ಥಿಗಳಿಗೆ ಸೋಂಕು ತಗಲಿರುವುದು ಶುಕ್ರವಾರ ದೃಢಪಟ್ಟಿದೆ. ಅತ್ತೂರು ಜ್ಞಾನ ಗಂಗಾ ಶಾಲೆಯ 600 ವಿದ್ಯಾರ್ಥಿಗಳಲ್ಲಿ (Students) 387 ವಿದ್ಯಾರ್ಥಿಗಳನ್ನು ಪರೀಕ್ಷೆಗೆ (Exam) ಒಳಪಡಿಸಿದ ಸಂದರ್ಭ 26 ಮಂದಿಗೆ ಪಾಸಿಟಿವ್ (Positive) ಬಂದಿರುವುದಾಗಿ ತಾಲೂಕು ವೈದ್ಯಾಧಿಕಾರಿ ಡಾ.ಶ್ರೀನಿವಾಸ್ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಲೆಯನ್ನು ಮುಚ್ಚಲಾಗಿದ್ದು, ಇನ್ನುಳಿದ ವಿದ್ಯಾರ್ಥಿಗಳನ್ನು ಶನಿವಾರ ಕೋವಿಡ್ ಪರೀಕ್ಷೆಗೊಳಪಡಿಸಲಾಗುವುದು. ಶಾಲೆಯಲ್ಲಿರುವ ನೂರಕ್ಕೂ ಅಧಿಕ ಶಿಕ್ಷಕ, ಬೋಧಕೇತರ ಸಿಬ್ಬಂದಿಯನ್ನೂ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಸಕ್ರೀಯ ಕೇಸ್ - ಬೆಂಗಳೂರು ದೇಶಕ್ಕೆ ನಂಬರ್ 1 : ದೇಶದ (India) ನಗರ ಮತ್ತು ಮಹಾನಗರಗಳ ಪೈಕಿ ಸದ್ಯ ಅತಿ ಹೆಚ್ಚು ಕೊರೋನಾ ಸಕ್ರಿಯ ಸೋಂಕಿತರಿರುವ ನಗರ ನಮ್ಮ ಸಿಲಿಕಾನ್ ಸಿಟಿ ಬೆಂಗಳೂರು! ಹೌದು. ದೆಹಲಿ, ಮುಂಬೈ, ಪುಣೆ, ಚೆನ್ನೈ, ಹೈದರಾಬಾದ್‌ಗೆ ಹೋಲಿಸಿದರೆ ಅತಿ ಹೆಚ್ಚು 5,866 ಕೊರೋನಾ ಸಕ್ರಿಯ ಸೋಂಕಿತರು ಬೆಂಗಳೂರಿನಲ್ಲಿದ್ದು(Bengaluru), ಆಸ್ಪತ್ರೆ ಮತ್ತು ಮನೆಗಳಲ್ಲಿ ಚಿಕಿತ್ಸೆ/ ಆರೈಕೆಯಲ್ಲಿದ್ದಾರೆ. ಅಲ್ಲದೆ, ಕಳೆದ ಒಂದು ವಾರದಿಂದ ಹೊಸ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಈ ಅವಧಿಯಲ್ಲಿ ದೆಹಲಿ, ಹೈದರಾಬಾದ್, ಚೆನ್ನೈಗಿಂತಲೂ ಹೆಚ್ಚು ಜನರಿಗೆ ಬೆಂಗಳೂರಿನಲ್ಲಿ ಸೋಂಕು ತಗುಲಿದೆ.
ನವೆಂಬರ್‌ನಲ್ಲಿ ನಿತ್ಯ ಸರಾಸರಿ 160 ಮಂದಿಯಲ್ಲಿ ಕೊರೋನಾ(Coronavirus) ಸೋಂಕು ದೃಢಪಡುತ್ತಿತ್ತು. ಆದರೆ, ಡಿಸೆಂಬರ್‌ನಲ್ಲಿ ಸೋಂಕು ಹೆಚ್ಚಳವಾಗಿದ್ದು, ನಿತ್ಯ ಸರಾಸರಿ 210 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರಿಂದಾಗಿ ಸಕ್ರಿಯ ಸೋಂಕು ಪ್ರಕರಣಗಳು ಆರು ಸಾವಿರ ಗಡಿಗೆ ಹೆಚ್ಚಳವಾಗಿವೆ. ಮಹಾನಗರಗಳಿಗೆ ಹೋಲಿಸಿದರೆ ದೆಹಲಿ ಮತ್ತು ಹೈದರಾಬಾದ್‌ಗಿಂತಲೂ ಹತ್ತು ಪಟ್ಟು, ಚೆನ್ನೈಗಿಂತ ನಾಲ್ಕು ಪಟ್ಟು, ಮುಂಬೈ ಮತ್ತು ಪುಣೆಗಿಂತ ದುಪ್ಪಟ್ಟು ಸಕ್ರಿಯ ಸೋಂಕಿತರು ಬೆಂಗಳೂರಿನಲ್ಲಿ ಇದ್ದಾರೆ. ಇನ್ನು ಕೊರೋನಾ ಎರಡನೇ ಅಲೆಯಲ್ಲಿ ಮೂರು ಲಕ್ಷಕ್ಕೂ ಅಧಿಕ ಸಕ್ರಿಯ ಸೋಂಕಿತರನ್ನು ಹೊಂದುವ ಮೂಲಕ ಒಂದು ತಿಂಗಳ ಮಟ್ಟಿಗೆ ಬೆಂಗಳೂರು ಮೊದಲ ಸ್ಥಾನದಲ್ಲಿತ್ತು.
ಸೋಂಕು ಪ್ರಕರಣಗಳು ಹೆಚ್ಚು: ಕಳೆದ ಒಂದು ವಾರದಿಂದ ದೆಹಲಿಯಲ್ಲಿ ನಿತ್ಯ ಸರಾಸರಿ 140, ಹೈದರಾಬಾದ್‌ನಲ್ಲಿ 80, ಚೆನ್ನೈನಲ್ಲಿ 150 ಪ್ರಕರಣ ವರದಿಯಾಗುತ್ತಿವೆ. ಆದರೆ ಬೆಂಗಳೂರಿನಲ್ಲಿ ಇದು 240ರ ಆಸುಪಾಸಿನಲ್ಲಿದೆ. ಇವುಗಳನ್ನು ಹೊರತುಪಡಿಸಿ ತಿರುವನಂತಪುರದಲ್ಲಿ ನಿತ್ಯ ಸರಾಸರಿ 450, ಮುಂಬೈನಲ್ಲಿ 350, ಪುಣೆಯಲ್ಲಿ 400 ಪ್ರಕರಣಗಳು ವರದಿಯಾಗುತ್ತಿವೆ. ಈ ಮೂಲಕ ಬೆಂಗಳೂರಿನಲ್ಲಿ ದಕ್ಷಿಣ ಭಾರತದಲ್ಲಿ(South India) ಎರಡನೇ ಅತಿ ಹೆಚ್ಚು, ದೇಶದಲ್ಲಿ ನಾಲ್ಕನೇ ಅತಿ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿವೆ.
ಕೇವಲ 23 ಮಂದಿ ಆಸ್ಪತ್ರೆಯಲ್ಲಿ:
ಬಿಬಿಎಂಪಿ(BBMP) ವಾರ್‌ರೂಂ ಅಂಕಿ- ಅಂಶ ಪ್ರಕಾರ, ರಾಜಧಾನಿಯಲ್ಲಿರುವ 5,866 ಸಕ್ರಿಯ ಸೋಂಕಿತರಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ(Treatment) ಪಡೆಯುತ್ತಿರುವವರ ಸಂಖ್ಯೆ 23 ಮಾತ್ರ. ಇದರಲ್ಲಿ 18 ಮಂದಿ ಆಕ್ಸಿಜನ್ ಹಾಸಿಗೆಯಲ್ಲಿ, ಮೂರು ಮಂದಿ ತುರ್ತು ನಿಗಾ ಘಟಕದಲ್ಲಿದ್ದಾರೆ. ಮಿಕ್ಕ 5843 ಸೋಂಕಿತರು ಹೋಂ ಐಸೋಲೇಷನ್‌ನಲ್ಲಿ ಆರೈಕೆಯಲ್ಲಿದ್ದಾರೆ. ಸೋಂಕಿತರ ಪೈಕಿ ಬಹುತೇಕರಿಗೆ ಸೋಂಕಿನ ಲಕ್ಷಣಗಳಿಲ್ಲ. ಹೀಗಾಗಿಯೇ ಆಸ್ಪತ್ರೆ ದಾಖಲಾತಿಗಳು ಕಡಿಮೆ ಇವೆ ಎನ್ನುತ್ತಾರೆ ಬಿಬಿಎಂಪಿ ಆರೋಗ್ಯ ಅಧಿಕಾರಿಗಳು.
ಶೇ.70ರಷ್ಟು ಕೇಸ್ ಬೆಂಗಳೂರಿನಲ್ಲಿ ಪತ್ತೆ:
ರಾಜ್ಯದಲ್ಲಿ(Karnataka) ನಿತ್ಯ ಪತ್ತೆಯಾಗುವ ಕೊರೋನಾ ಹೊಸ ಸೋಂಕಿತರಲ್ಲಿ ಶೇ.70ರಷ್ಟುಬೆಂಗಳೂರು ಒಂದರಲ್ಲಿಯೇ ಪತ್ತೆಯಾಗುತ್ತಿವೆ. ರಾಜ್ಯದಲ್ಲಿ ಕಳೆದ ಒಂದು ವಾರದಿಂದ 300 ಪ್ರಕರಣಗಳು ಪತ್ತೆಯಾದರೆ ಇದರಲ್ಲಿ 220-230 ಬೆಂಗಳೂರಿಗೆ ಸೇರಿವೆ. ಇನ್ನು ರಾಜ್ಯದ ಒಟ್ಟಾರೆ ಸಕ್ರಿಯ ಸೋಂಕಿತರ ಸಂಖ್ಯೆ 7251 ಇದೆ. ಇದರಲ್ಲಿ 1385 ಇತರೆ 29 ಜಿಲ್ಲೆಗಳಲ್ಲಿದ್ದು, 5866 (ಶೇ. 80ರಷ್ಟು) ಬೆಂಗಳೂರು ನಗರವೊಂದರಲ್ಲಿಯೇ ಇವೆ.
ಟೆಕ್ಕಿಗಳು ಹೆಚ್ಚಿರುವ ಹೊರವಲಯದಲ್ಲಿ ಕೊರೋನಾ ಅಧಿಕ
ಬೆಂಗಳೂರು ನಗರದ ಕೇಂದ್ರ ಭಾಗಗಳಿಗಿಂತಲೂ ಹೊರವಲಯಗಳಾದ ಎಲೆಕ್ಟ್ರಾನಿಕ್ ಸಿಟಿ, ಬೇಗೂರು, ಸಿಂಗಸಂದ್ರ, ಬೆಳ್ಳಂದೂರು, ವರ್ತೂರು, ವೈಟ್‌ಫೀಲ್ಡ್, ಮಹದೇವಪುರದಲ್ಲಿ ಹೆಚ್ಚು ಕೊರೋನಾ ಸೋಂಕು ಪ್ರಕರಣಗಳು ವರದಿಯಾಗುತ್ತಿವೆ. ಈ ಪ್ರದೇಶಗಳಲ್ಲಿ ಟೆಕ್ಕಿಗಳು ಹೆಚ್ಚು ವಾಸವಿದ್ದು, ಹೊರದೇಶ ಮತ್ತು ಹೊರರಾಜ್ಯಗಳೊಂದಿಗೆ ಸಂಪರ್ಕ ಹೆಚ್ಚಿರುತ್ತದೆ. ಹೀಗಾಗಿಯೇ ಹೆಚ್ಚು ಮಂದಿ ಕೊರೋನಾ ಸೋಂಕಿಗೊಳಗಾಗುತ್ತಿದ್ದಾರೆ ಎಂದು ಸ್ಥಳೀಯ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.