ಕೊರೋನಾ 3ನೇ ಭೀತಿ ನಡುವೆ ಸಾಂಸ್ಕೃತಿಕ ನಗರಿ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಮಂಗಳವಾರ ಜನಜಂಗುಳಿ ಕೋವಿಡ್‌ ನಿಯಮ ಉಲ್ಲಂಘಿಸಿ ಸಾವಿರಾರು ಭಕ್ತರಿಂದ ಚಾಮುಂಡೇಶ್ವರಿ ದರ್ಶನ 

 ಮೈಸೂರು (ಆ.04): ಕೊರೋನಾ 3ನೇ ಭೀತಿ ನಡುವೆ ಸಾಂಸ್ಕೃತಿಕ ನಗರಿ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಮಂಗಳವಾರ ಜನಜಂಗುಳಿ ಹೆಚ್ಚಾಗಿತ್ತು. ಕೋವಿಡ್‌ ನಿಯಮ ಉಲ್ಲಂಘಿಸಿ ಸಾವಿರಾರು ಭಕ್ತರು ಚಾಮುಂಡೇಶ್ವರಿ ದರ್ಶನ ಪಡೆದರು.

ಆಷಾಢದ ಶುಕ್ರವಾರ ಹಾಗೂ ವಾರಾಂತ್ಯ ರಜೆ ದಿನದಂದು ಚಾಮುಂಡಿಬೆಟ್ಟಕ್ಕೆ ಭಕ್ತರಿಗೆ ಪ್ರವೇಶ ನಿರ್ಬಂಧಿಸಿದ್ದ ಹಿನ್ನೆಲೆಯಲ್ಲಿ ಮಂಗಳವಾರ ರಾಜ್ಯದ ವಿವಿಧೆಡೆ ಹಾಗೂ ಸ್ಥಳೀಯರು ಚಾಮುಂಡಿಬೆಟ್ಟಕ್ಕೆ ಧಾವಿಸಿದ್ದರು. ಭಕ್ತರ ಸಂಖ್ಯೆ ಹೆಚ್ಚಾಗಿದ್ದರಿಂದ ಸಾಮಾಜಿಕ ಅಂತರ ಎಂಬುದು ಮಾಯವಾಗಿತ್ತು. ಇನ್ನೂ ಕೆಲವರು ಮಾಸ್ಕ್‌ ಧರಿಸದೇ ಉದ್ದಟತನ ತೋರಿದ ಪ್ರಸಂಗ ಸಹ ನಡೆಯಿತು.

ಕೋವಿಡ್‌ ಹಾವಳಿಯಿಂದಾಗಿ ಆಷಾಢ ಮಾಸದಲ್ಲಿ ಚಾಮುಂಡಿಬೆಟ್ಟದ ದೇವಾಲಯದಲ್ಲಿ ನಡೆಯುವ ವಿಶೇಷ ಪೂಜಾ ಕೈಂಕರ್ಯದಲ್ಲಿ ಭಕ್ತರ ಪಾಲ್ಗೊಳ್ಳುವಿಕೆ ನಿರ್ಬಂಧ ಹೇರಲಾಗಿದೆ. ಅಲ್ಲದೆ ವಾರಾಂತ್ಯ ರಜೆ ಹಾಗೂ ಸರ್ಕಾರಿ ರಜೆ ದಿನದಂದೂ ಚಾಮುಂಡಿಬೆಟ್ಟಕ್ಕೆ ಭಕ್ತರು ಹಾಗೂ ಪ್ರವಾಸಿಗರ ಪ್ರವೇಶವನ್ನು ಜಿಲ್ಲಾಡಳಿತ ನಿರ್ಬಂಧಿಸಿತ್ತು.

ಗಡಿಯಲ್ಲಿ ಕಟ್ಟೆಚ್ಚರ : ದ.ಕ.ದಲ್ಲಿ 13 ಗಡಿ ಬಂದ್‌, ಮದ್ಯ, ಬಸ್ ಸ್ಥಗಿತ

ಹೀಗಾಗಿ, ಆಷಾಢ ಮಾಸದಲ್ಲಿ ಚಾಮುಂಡೇಶ್ವರಿ ದರ್ಶನ ಪಡೆಯಬೇಕೆಂದು ದೇವಿಯ ಆರಾಧನೆಯ ದಿನ ಹಾಗೂ ಆಷಾಢ ಮಾಸದ ಕೊನೆಯ ಮಂಗಳವಾರ ನೂರಾರು ವಾಹನಗಳಲ್ಲಿ ಭಕ್ತರು ಆಗಮಿಸಿದ್ದರಿಂದ ಜನಜಂಗುಳಿ ಹೆಚ್ಚಾಗಿತ್ತು.

ಚಾಮುಂಡೇಶ್ವರಿ ದೇವಾಲಯಕ್ಕೆ ಪ್ರವೇಶಿಸಲು ದರ್ಮ ದರ್ಶನ ಸಾಲಿನಲ್ಲಿ ಸಾವಿರಾರು ಮಂದಿ ನಿಂತಿದ್ದರಿಂದ ಕೆಲವರು . 100 ಟಿಕೆಟ್‌ ಪಡೆದ ವಿಶೇಷ ದರ್ಶನ ಪಡೆಯಲು ಮುಗಿ ಬಿದ್ದರು. ಇದರಿಂದ ವಿಶೇಷ ದರ್ಶನದ ಸಾಲು ಬಹು ಉದ್ದವಾಗಿ ಬೆಳೆದಿತ್ತು. ಹಾಗೆಯೇ, ಚಾಮುಂಡಿಬೆಟ್ಟದ ರಸ್ತೆಯಲ್ಲಿ ವಾಹನ ದಟ್ಟಣೆ ಸಹ ಹೆಚ್ಚಾಗಿತ್ತು. ಚಾಮುಂಡಿಬೆಟ್ಟದಲ್ಲಿರುವ ಬಹುಮಹಡಿ ವಾಹನ ನಿಲುಗಡೆ ಸ್ಥಳ ವಾಹನಗಳಿಂದ ತುಂಬಿದ್ದವು.

ಭಕ್ತರ ಸಂಖ್ಯೆ ಹೆಚ್ಚಾಗಿದ್ದರಿಂದ ಹೆಚ್ಚುವರಿ ಬಸ್‌ ಸೌಲಭ್ಯ ಕಲ್ಪಿಸಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬೆಟ್ಟಕ್ಕೆ ಆಗಮಿಸಿದ್ದರಿಂದ ವ್ಯಾಪಾರಿಗಳಲ್ಲಿ ಮಂದಹಾಸ ಮೂಡಿತ್ತು.