ಕೊರೋನಾ ಹೆಚ್ಚಳ ಹಿನ್ನೆಲೆಯಲ್ಲಿ ಕೇರಳ ಪ್ರಯಾಣಿಕರ ದ.ಕ. ಪ್ರವೇಶಕ್ಕೆ ಕೋವಿಡ್‌ ನೆಗೆಟಿವ್‌ ವರದಿ ಕಡ್ಡಾಯ ದ.ಕ. ಪ್ರವೇಶಿಸುವ ಎಲ್ಲ 13 ಗಡಿ ಪ್ರದೇಶಗಳಲ್ಲಿ ಕಟ್ಟುನಿಟ್ಟು ತಪಾಸಣೆ

 ಮಂಗಳೂರು/ಉಳ್ಳಾಲ (ಆ.02): ಕೊರೋನಾ ಹೆಚ್ಚಳ ಹಿನ್ನೆಲೆಯಲ್ಲಿ ಕೇರಳ ಪ್ರಯಾಣಿಕರ ದ.ಕ. ಪ್ರವೇಶಕ್ಕೆ ಕೋವಿಡ್‌ ನೆಗೆಟಿವ್‌ ವರದಿಯನ್ನು ಕರ್ನಾಟಕ ಸರ್ಕಾರ ಕಡ್ಡಾಯಗೊಳಿಸಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ದ.ಕ. ಪ್ರವೇಶಿಸುವ ಎಲ್ಲ 13 ಗಡಿ ಪ್ರದೇಶಗಳಲ್ಲಿ ಕಟ್ಟುನಿಟ್ಟು ತಪಾಸಣೆ ಕೈಗೊಳ್ಳಲಾಗಿದೆ. ಮಂಗಳೂರು-ಕಾಸರಗೋಡು ನಡುವೆ ಒಂದು ವಾರದ ಮಟ್ಟಿಗೆ ಎಲ್ಲ ಬಸ್‌ ಸಂಚಾರ ಸ್ಥಗಿತಗೊಳಿಸಲಾಗಿದೆ.

ನೆಗೆಟಿವ್‌ ವರದಿ ಇಲ್ಲದಿದ್ದರೆ ಸ್ಥಳದಲ್ಲೇ ಸ್ವಾಬ್‌ ತಪಾಸಣೆ ವ್ಯವಸ್ಥೆ ಮಾಡಲಾಗಿದ್ದು, ತಲಪಾಡಿ ಗಡಿಯಲ್ಲಿ ಮಾರುದ್ದದ ಸಾಲು ಕಂಡುಬಂದಿದೆ. ಕೇರಳದಿಂದ ಆಗಮಿಸುವ ಪ್ರತಿಯೊಬ್ಬರನ್ನೂ ಜಿಲ್ಲಾ ಪೊಲೀಸರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಹದ್ದುಗಣ್ಣಿನಿಂದ ಕಾಯುತ್ತಿದ್ದಾರೆ.

ಕೇರಳದಲ್ಲಿ ಕೊರೋನಾ ಅಬ್ಬರ: ದಕ್ಷಿಣ ಕನ್ನಡದಲ್ಲಿಯೂ ಹೆಚ್ಚಾಗುತ್ತಿದೆ ಕೋವಿಡ್ ಕೇಸ್‌..!

ಕೇರಳದಲ್ಲಿ ಕೋವಿಡ್‌ ಕೇಸ್‌ ಜಾಸ್ತಿಯಾಗುತ್ತಿದ್ದಂತೆಯೇ ಕಳೆದ ಒಂದು ವಾರದಿಂದ ಗಡಿಭಾಗಗಳಲ್ಲಿ ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ. ಇದುವರೆಗೆ ಕೋವಿಡ್‌ ಲಸಿಕೆ ಅಥವಾ ಕೋವಿಡ್‌ ನೆಗೆಟಿವ್‌ ವರದಿ ತೋರಿಸಿದರೆ ಸಾಕಿತ್ತು. ಆದರೆ ಕೇರಳದಲ್ಲಿ ಕೊರೋನಾ ಕೇಸ್‌ ದಿನೇದಿನೆ ಹೆಚ್ಚುತ್ತಿರುವುದರಿಂದ ಉಭಯ ಜಿಲ್ಲೆಗಳ ನಡುವಿನ ಬಸ್‌ ಸಂಚಾರ ಸ್ಥಗಿತಗೊಳಿಸಿದ್ದಲ್ಲದೆ, ಸ್ವಾಬ್‌ ಟೆಸ್ಟ್‌ ನೆಗೆಟಿವ್‌ ವರದಿಯನ್ನು ಕಡ್ಡಾಯಗೊಳಿಸಲಾಗಿದೆ.

ಗಡಿ ವಿದ್ಯಾರ್ಥಿಗಳ ಸಂಕಷ್ಟ:

ಆ.2ರಿಂದ ಮಂಗಳೂರು ವಿಶ್ವವಿದ್ಯಾಲಯದ ಬಾಕಿಯುಳಿದ ಪದವಿ ಪರೀಕ್ಷೆ ಆರಂಭವಾಗುತ್ತಿದೆ. ಪರೀಕ್ಷೆ ಮುಂದೂಡದೇ ಇರಲು ವಿ.ವಿ. ತೀರ್ಮಾನಿಸಿದೆ. ಕೇರಳ ವಿದ್ಯಾರ್ಥಿಗಳು ಈಗಾಗಲೇ ಜಿಲ್ಲೆಗೆ ಆಗಮಿಸಿ ಹಾಸ್ಟೆಲ್‌, ರೂಮ್‌, ಪಿ.ಜಿ.ಗಳಲ್ಲಿ ಓದುತ್ತಿದ್ದಾರೆ. ಗಡಿಭಾಗದಿಂದ ನಿತ್ಯ ಕಾಲೇಜಿಗೆ ಆಗಮಿಸುವವರು ಬೆರಳೆಣಿಕೆ ವಿದ್ಯಾರ್ಥಿಗಳಿಗೆ ಮಾತ್ರ ಈಗ ಪರೀಕ್ಷೆಗೆ ಹಾಜರಾಗಲು ತೊಂದರೆಯಾಗಲಿದೆ. ಅಂತಹವರಿಗೆ ಮರು ವಿಶೇಷ ಪರೀಕ್ಷೆ ನಡೆಸಲಾಗುವುದು ಎಂದು ವಿ.ವಿ. ಸ್ಪಷ್ಟಪಡಿಸಿದೆ.

ಇದೇ ವೇಳೆ ವಿ.ವಿ. ಪರೀಕ್ಷೆಗೆ ಹಾಜರಾಗಲು ಕೇರಳ ವಿದ್ಯಾರ್ಥಿಗಳಿಗೆ ಗಡಿ ಪ್ರದೇಶದಲ್ಲಿ ಅವಕಾಶ ನೀಡುವಂತೆ ಕೋರಿ ಕಾಸರಗೋಡು ಬಿಜೆಪಿ ಅಧ್ಯಕ್ಷ ನ್ಯಾಯವಾದಿ ಶ್ರೀಕಾಂತ್‌ ಭಾನುವಾರ ಕರ್ನಾಟಕ ಮುಖ್ಯಮಂತ್ರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

* ಸ್ವಾಬ್‌ ಟೆಸ್ಟ್‌ಗೆ ಸಾಲು

ವಿ.ವಿ. ಪರೀಕ್ಷೆಗೆ ಹಾಜರಾಗುವ ಸಲುವಾಗಿ ಗಡಿ ಪ್ರದೇಶದ ವಿದ್ಯಾರ್ಥಿಗಳು 72 ಗಂಟೆ ಅವಧಿಯ ಕೋವಿಡ್‌ ನೆಗೆಟಿವ್‌ ಸರ್ಟಿಫಿಕೆಟ್‌ಗಾಗಿ ಗಡಿ ಪ್ರದೇಶದಲ್ಲಿ ಇರುವ ಕೋವಿಡ್‌ ಪರೀಕ್ಷಾ ಕೇಂದ್ರಕ್ಕೆ ಭಾನುವಾರ ಆಗಮಿಸಿದ್ದಾರೆ. ತಕ್ಷಣಕ್ಕೆ ನೆಗೆಟಿವ್‌ ವರದಿ ಸಿಗುವುದು ಸಾಧ್ಯವಿಲ್ಲವಾದರೂ ಮಹತ್ವಾಕಾಂಕ್ಷೆಯಿಂದ ಕೋವಿಡ್‌ ಪರೀಕ್ಷೆ ಮಾಡಿಸುತ್ತಿದ್ದಾರೆ. ಪ್ರಸಕ್ತ 1, 3 ಮತ್ತು 5ನೇ ಪದವಿ ಸೆಮಿಸ್ಟರ್‌ ಪರೀಕ್ಷೆ ನಡೆಯುತ್ತಿದೆ. 6ನೇ ಸೆಮಿಸ್ಟರ್‌ ಪರೀಕ್ಷೆ ಸೆಪ್ಟೆಂಬರ್‌ ಅಥವಾ ಅಕ್ಟೋಬರ್‌ನಲ್ಲಿ ನಡೆಯಲಿದೆ.

ಮಂಗಳೂರು ವಿ.ವಿ.ಯ ಮುಂದುವರಿದ ಸೆಮಿಸ್ಟರ್‌ ಪರೀಕ್ಷೆ ಆ.2ರಿಂದ ನಡೆಯಲಿದೆ. ಗಡಿ ಪ್ರದೇಶದ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಹಾಜರಾಗಲು ಅನನುಕೂಲವಾದರೆ ಅಂತಹವರಿಗಾಗಿ ವಿಶೇಷ ಪರೀಕ್ಷೆ ನಡೆಸಲಾಗುವುದು. ಇವರಲ್ಲದೆ ಕೋವಿಡ್‌ ಸೋಂಕಿಗೆ ಒಳಗಾಗಿ ಪರೀಕ್ಷೆ ಬರೆಯಲು ಅಸಾಧ್ಯವಾದರೆ ಅಂತಹ ವಿದ್ಯಾರ್ಥಿಗಳು ವೈದ್ಯಕೀಯ ದೃಢಪತ್ರ ಜೊತೆಗೆ ಪ್ರಾಂಶುಪಾಲರ ಪತ್ರದೊಂದಿಗೆ ವಿವಿಗೆ ಸಲ್ಲಿಸಬೇಕಾಗುತ್ತದೆ.

-ಪ್ರೊ.ಪಿ.ಎಸ್‌.ಯಡಪಡಿತ್ತಾಯ, ಕುಲಪತಿ, ಮಂಗಳೂರು ವಿ.ವಿ.