ಬೆಂಗಳೂರು (ಫೆ.16):  ನಗರದ ಕಾವಲುಬೈರಸಂದ್ರದ ಮಂಜುಶ್ರೀ ನರ್ಸಿಂಗ್‌ ಕಾಲೇಜಿನ ಕೇರಳ ಮೂಲದ 40 ವಿದ್ಯಾರ್ಥಿಗಳು ಹಾಗೂ ಬೊಮ್ಮನಹಳ್ಳಿಯ ಎಸ್‌ಎನ್‌ಎನ್‌ ರಾಜ್‌ ಲೇಕ್‌ ವ್ಯೂವ್‌ ರೆಸಿಡೆನ್ಸಿಯ 28 ಮಂದಿಯಲ್ಲಿ ಕೋವಿಡ್‌ ಸೋಂಕು ಕಾಣಿಸಿಕೊಂಡಿರುವುದರಿಂದ ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್‌ ಎರಡನೇ ಅಲೆಯ ಭೀತಿ ಆರಂಭಗೊಂಡಿದೆ.

ಈ ಹಿನ್ನೆಲೆಯಲ್ಲಿ ಸೋಮವಾರ ಮಲ್ಲೇಶ್ವರದ ಬಿಬಿಎಂಪಿ ಐಪಿಪಿ ಕಚೇರಿಯಲ್ಲಿ ಪಾಲಿಕೆ ಎಂಟು ವಲಯದ ವಿಶೇಷ ಆಯುಕ್ತರು, ಜಂಟಿ ಆಯುಕ್ತರು ಹಾಗೂ ಆರೋಗ್ಯಾಧಿಕಾರಿಗಳೊಂದಿಗೆ ಆಯುಕ್ತ ಮಂಜುನಾಥ್‌ ಪ್ರಸಾದ್‌ ತುರ್ತು ಸಭೆ ನಡೆಸಿದರು. ನಗರದಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಈ ಹಿಂದೆ ಕೈಗೊಂಡ ಕಠಿಣ ಮುನ್ನೆಚ್ಚರಿಕೆ ಕ್ರಮ, ಸೋಂಕಿತರ ಸಂಪರ್ಕ ತ್ವರಿತ ಪತ್ತೆ, ಸೋಂಕಿನ ಲಕ್ಷಣ ಹೊಂದಿರುವವರ ಪರೀಕ್ಷೆಗೆ ನಿರ್ದೇಶಿಸಿದ್ದಾರೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆಯುಕ್ತರು, ಕಾವಲುಬೈರಸಂದ್ರ ಮಂಜುಶ್ರೀ ನರ್ಸಿಂಗ್‌ ಕಾಲೇಜಿನ 210 ವಿದ್ಯಾರ್ಥಿಗಳ ಪೈಕಿ 40 ಕೇರಳ ಮೂಲದ ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಬೊಮ್ಮನಹಳ್ಳಿಯ ಎಸ್‌ಎನ್‌ಎನ್‌ ರಾಜ್‌ ಲೇಕ್‌ವೀವ್‌ ರೆಸಿಡೆನ್ಸಿಯ 500 ಮಂದಿಯ ಪೈಕಿ 28 ಮಂದಿಯಲ್ಲಿ ಸೋಂಕು ಕಾಣಿಕೊಂಡಿದೆ. ಇನ್ನೂ ಒಂದು ಸಾವಿರ ಮಂದಿ ಇದ್ದು, ಅವರನ್ನು ಸೋಂಕು ಪರೀಕ್ಷೆಗೆ ಒಳಪಡಿಸಲಾಗಿದೆ. ಸೋಂಕು ದೃಢಪಟ್ಟವರು ಲಕ್ಷಣ ರಹಿತ ಸೋಂಕಿತರಾಗಿದ್ದು ಐಸೋಲೇಷನ್‌ ಮಾಡಲಾಗಿದೆ ಎಂದು ತಿಳಿಸಿದರು.

ಎರಡು ಪ್ರಕರಣದಲ್ಲಿ ಸೋಂಕು ಒಬ್ಬರಿಂದ ಒಬ್ಬರಿಗೆ ತೀವ್ರ ಗತಿಯಲ್ಲಿ ಹರಡುತ್ತಿರುವುದು ಕಂಡು ಬಂದಿದೆ. ಬೊಮ್ಮನಹಳ್ಳಿಯಲ್ಲಿ ಪಾರ್ಟಿಹಾಲ್‌ನಲ್ಲಿ ಗುಂಪು ಸೇರಿದ ಕಾರಣದಿಂದ ಸೋಂಕು ಹರಡಿದೆ ಎಂದು ಆರೋಗ್ಯ ಅಧಿಕಾರಿಗಳು ವರದಿ ನೀಡಿದ್ದಾರೆ ಎಂದರು.

ಮಾರ್ಚ್‌ನಿಂದ 2ನೇ ಹಂತದ ಕೊರೋನಾ ಲಸಿಕೆ ವಿತರಣೆ; 50 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನ್! ..

ಬಿಬಿಎಂಪಿಯ 141 ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ 200 ಮೊಬೈಲ್‌ ಕೋವಿಡ್‌ ಸೋಂಕು ಪರೀಕ್ಷೆ ತಂಡಗಳಿದ್ದು, ದಿನಕ್ಕೆ 25 ಸಾವಿರ ಮಂದಿಯನ್ನು ಸೋಂಕು ಪರೀಕ್ಷೆಗೆ ಒಳಪಡಿಸುವಂತೆ ಸೂಚನೆ ನೀಡಲಾಗಿದೆ. ಯಾವುದೇ ಕಾರಣಕ್ಕೂ ಪರೀಕ್ಷೆ ಪ್ರಮಾಣ ಇಳಿಸುವಂತಿಲ್ಲ ಎಂದು ತಿಳಿಸಲಾಗಿದೆ. ಇನ್ನು ನಗರದಲ್ಲಿ ಸೋಂಕು ನಿಯಂತ್ರಣ ಕಾರ್ಯದ ಬಗ್ಗೆ ವಲಯ ಜಂಟಿ ಆಯುಕ್ತರು, ಆರೋಗ್ಯಾಧಿಕಾರಿಗಳ ಪ್ರತಿದಿನ ಮತ್ತು ವಲಯ ವಿಶೇಷ ಆಯುಕ್ತರು ಎರಡು ದಿನಕ್ಕೆ ಒಂದು ಬಾರಿ ಸೋಂಕು ಪತ್ತೆ, ಪರೀಕ್ಷೆ ಕುರಿತು ಸಭೆ ನಡೆಸಬೇಕೆಂದು ನಿರ್ದೇಶನ ನೀಡಲಾಗಿದೆ ಎಂದರು.

ನಗರದಲ್ಲಿ ದಿನಕ್ಕೆ ಸರಾಸರಿ 200 ಹೊಸ ಪ್ರಕರಣ ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಪಾಲಿಕೆಯ ಎಂಜಿನಿಯರಿಂಗ್‌ ಮತ್ತು ಕಂದಾಯ ವಿಭಾಗದ ಅಧಿಕಾರಿ-ಸಿಬ್ಬಂದಿಯೇ ಸಂಪರ್ಕ ಪತ್ತೆ ಮಾಡುತ್ತಿದ್ದು, ಬೇರೆ ಇಲಾಖೆಯ ಸಿಬ್ಬಂದಿ ಅವಶ್ಯಕತೆ ಇಲ್ಲ. ಸದ್ಯ ಪ್ರತಿ ಸೋಂಕಿತರೊಂದಿಗೆ ಸಂಪರ್ಕ ಹೊಂದಿದ 10 ಮಂದಿ ಸಂಪರ್ಕಿತರ ಪತ್ತೆ ನಡೆಯುತ್ತಿದೆ. ಅದನ್ನು 15ಕ್ಕೆ ಏರಿಕೆ ಮಾಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ವಿಶೇಷ ಆಯುಕ್ತರಾದ ತುಳಸಿ ಮದ್ದಿನೇನಿ, ಬಸವರಾಜು, ಡಿ.ರಂದೀಪ್‌, ರೆಡ್ಡಿ ಶಂಕರ ಬಾಬು, ರವಿಂದ್ರ, ರಾಜೇಂದ್ರ ಚೋಳನ್‌, ವಲಯ ಜಂಟಿ ಆಯುಕ್ತರು, ಆರೋಗ್ಯಾಧಿಕಾರಿಗಳು ಇದ್ದರು.

72 ಗಂಟೆ ನೆಗೆಟಿವ್‌ ವರದಿ ಕಡ್ಡಾಯ

ಕೇರಳದಲ್ಲಿ ಸೋಂಕು ಪ್ರರಕಣ ಹೆಚ್ಚಾಗಿದೆ. ಆದರೆ, ರಾಜ್ಯದ ಗಡಿ ಬಂದ್‌ ಮಾಡುವುದಕ್ಕೆ ಅವಕಾಶವಿಲ್ಲ. ಹಾಗಾಗಿ, ಕೇರಳದಿಂದ ನಗರಕ್ಕೆ ಆಗಮಿಸುವ ವಿದ್ಯಾರ್ಥಿಗಳು ಅಥವಾ ಇತರೆ ಉದ್ಯೋಗಿಗಳು ಕಡ್ಡಾಯವಾಗಿ 72 ಗಂಟೆ ಒಳಗಿನ ಆರ್‌ಟಿಪಿಸಿಆರ್‌ ನೆಗೆಟಿವ್‌ ವರದಿ ತರಬೇಕು. ಇಲ್ಲವಾದರೆ 14 ದಿನ ಕ್ವಾರಂಟೈನ್‌ನಲ್ಲಿ ಇರಬೇಕು. ಈ ಬಗ್ಗೆ ಸಂಬಂಧ ಪಟ್ಟಶಿಕ್ಷಣ ಸಂಸ್ಥೆ ಹಾಗೂ ಕಂಪನಿಗಳ ಮುಖ್ಯಸ್ಥರು ನಿಗಾ ವಹಿಸಬೇಕು. ನಿರ್ಲಕ್ಷ್ಯ ವಹಿಸಿದರೆ ಸಂಸ್ಥೆಯ ಮುಖ್ಯಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮಂಜುನಾಥ್‌ ಪ್ರಸಾದ್‌ ತಿಳಿಸಿದರು.

ಮಾರ್ಷಲ್‌ ಬಳಕೆ: ನಗರದಲ್ಲಿ ಸೋಂಕು ಪ್ರಕರಣ ಕಡಿಮೆ ಆಗುತ್ತಿರುವುದರಿಂದ ನಾಗರಿಕರು ಮಾಸ್ಕ್‌ ಹಾಗೂ ಸಾಮಾಜಿಕ ಅಂತರ ಉಲ್ಲಂಘನೆ ಹೆಚ್ಚಾಗುತ್ತಿದೆ. ಇದರಿಂದ ಸೋಂಕು ಹೆಚ್ಚಾಗುವ ಸಾಧ್ಯತೆ ಇದೆ. ಹಾಗಾಗಿ, ಘನತ್ಯಾಜ್ಯ ನಿರ್ವಹಣೆಗೆ ನಿಯೋಜನೆಗೊಂಡ ಮಾರ್ಷಲ್‌ಗಳನ್ನು ಇನ್ನೂ ಮೂರು ತಿಂಗಳು ಕೋವಿಡ್‌ ಮುನ್ನೆಚ್ಚರಿಕೆ ಕ್ರಮ ನಿಗಾ ವಹಿಸುವುದಕ್ಕೆ ಸೂಚನೆ ನೀಡಲಾಗಿದೆ ಎಂದು ಬಿಬಿಎಂಪಿ ಆಯುಕ್ತರು ತಿಳಿಸಿದರು.

ಕೋವಿಡ್‌ ಸೋಂಕು ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಿವಾಸಿ ಕ್ಷೇಮಾಭಿವೃದ್ಧಿ ಸಂಘ-ಸಂಸ್ಥೆಗಳೊಂದಿಗೆ ಚರ್ಚೆ ನಡೆಸಿ ಸಭೆ, ಸಮಾರಂಭ ಆಯೋಜಿಸುವುದಕ್ಕೆ ಕಡಿವಾಣ ಹಾಕುವುದರೊಂದಿಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗುತ್ತದೆ.

-ಮಂಜುನಾಥ್‌ ಪ್ರಸಾದ್‌, ಬಿಬಿಎಂಪಿ ಆಯುಕ್ತ.