ಪಿರಿಯಾಪಟ್ಟಣ (ಡಿ.01):  ಕೊರೋನಾ ಸೋಂಕು ತಡೆ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿದರೆ ಶಿಸ್ತು ಕ್ರಮ ತೆಗೆದುಕೊಳ್ಳುವುದಾಗಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಎಚ್ಚರಿಸಿದರು.

ತಾಪಂ ಆವರಣದ ಸುವರ್ಣ ಸೌಧದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಕೋವಿಡ್ ನಿರ್ವಹಣೆ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿ ಅವರು ಮಾತನಾಡಿದರು.

ಸರ್ಕಾರದ ಮಾರ್ಗಸೂಚಿಯಂತೆ ತಾಲೂಕು ಆಸ್ಪತ್ರೆಗಳಲ್ಲಿ ಕೊರೋನಾ ಸೋಂಕಿತರ ಆರೈಕೆಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದರು, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳದಿರುವುದು ಸರಿಯಲ್ಲ ಎಂದು ಹೇಳಿ ಅವ್ಯವಸ್ಥೆಗಳನ್ನು ಶೀಘ್ರ ಸರಿಪಡಿಸುವಂತೆ ಸೂಚಿಸಿದರು.

ತಾಲೂಕಿನಲ್ಲಿ ಒಟ್ಟು 124 ಅರ್ಜಿಗಳು ಸ್ವಿಕೃತವಾಗಿದ್ದು, ಶೇ. 80 ರಷ್ಟುಕಂದಾಯ ಮತ್ತು ಸರ್ವೇ ಇಲಾಖೆಗೆ ಸೇರಿದ ಸಮಸ್ಯೆಗಳಾಗಿವೆ, ಅಧಿಕಾರಿಗಳು ಅರ್ಜಿಗಳನ್ನು ಶೀಘ್ರ ಪರಿಗಣಿಸಿ ದರ್ಕಾಸು ಜಾಗದ ದಾರಿಗಳನ್ನು ಬಿಡಿಸಿಕೊಡುವಂತೆ ಸೂಚಿಸಿದರು. ಸಾರ್ವಜನಿಕರ ಸಮಸ್ಯೆಗಳ ಇತ್ಯರ್ಥದ ಬಗ್ಗೆ ಅವರು ನೀಡಿರುವ ದೂರವಾಣಿ ಸಂಖ್ಯೆಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಅರ್ಜಿ ಪರಿಶೀಲಿಸಿ ಮಾಹಿತಿ ನೀಡಲಿದ್ದು, ಅಧಿಕಾರಿಗಳು ಪಾರದರ್ಶಕ ಕರ್ತವ್ಯ ನಿರ್ವಹಿಸುವಂತೆ ಸೂಚಿಸಿದರು.

ಮೈಸೂರು ಡಿಸಿ ರೋಹಿಣಿ ವರ್ಗಾವಣೆ - ಕರ್ತವ್ಯದಿಂದ ವಜಾ? ...

ತಾಲೂಕಿನ ವಿವಿಧೆಡೆಯ ಸಾರ್ವಜನಿಕರು ತಮ್ಮ ಸಮಸ್ಯೆಗಳಾದ ಪೋಡಿ, ರಸ್ತೆ, ಗ್ರಾಮಠಾಣಾ, ಕೆರೆ ಒತ್ತುವರಿ, ರೈತ ಆತ್ಮಹತ್ಯೆ ಪರಿಹಾರ ವಿಳಂಬ, ಗ್ರಾಪಂಗಳಲ್ಲಿನ ಅವ್ಯವಹಾರ, ಖಾತೆ ಬದಲಾವಣೆ ವಿಳಂಬ, ಆರಕ್ಷಕ ಮತ್ತು ಪುರಸಭೆ ಇಲಾಖೆ ಕೆಲಸಗಳ ವಿಳಂಬ, ತಂಬಾಕು ರೈತರಿಗೆ ಉತ್ತಮ ಬೆಲೆ ನಿಗದಿ ಸೇರಿದಂತೆ ಹಲವು ದೂರುಗಳನ್ನು ನೀಡಿದರು.

ಜಿಪಂ ಸಿಇಒ ಭಾರತಿ, ಉಪ ವಿಭಾಗಾಧಿಕಾರಿ ವೀಣಾ, ತಹಸೀಲ್ದಾರ್‌ ಶ್ವೇತಾ ಎನ್‌ ರವಿಂದ್ರ, ಇಒ ಡಿ.ಸಿ. ಶ್ರುತಿ, ಶಿರಸ್ತೆದಾರ್‌ ಶಕೀಲಾಬಾನು, ಟ್ರೀಜಾ, ಉಪ ತಹಸೀಲ್ದಾರ್‌ ನಿಜಾಮುದ್ದೀನ್‌, ಕೆಂಚಯ್ಯ, ಶಶಿ, ವಿವಿಧ ಇಲಾಖೆ ಅಧಿಕಾರಿಗಳು, ಸಾರ್ವಜನಿಕರು ಇದ್ದರು.