ಆಮೆಗತಿಯಲ್ಲಿ ಸಾಗಿದ ಮೆಟ್ರೋ ರೀಚ್‌ - 6 ಕಾಮಗಾರಿ: ಯಾವಾಗ ಡೆಡ್ಲೈನ್?  2024ರೊಳಗೆ ಕಾಮಗಾರಿ ಪೂರ್ಣಕ್ಕೆ ಯೋಜನೆ ಒಟ್ಟು ಮಾರ್ಗದಲ್ಲಿ ಅರ್ಧದಷ್ಟು ಸುರಂಗ ಮಾರ್ಗ 2019ರಲ್ಲೇ ಕೆಲಸ ಶುರು  - ಆದರೆ ಲಾಕ್‌ಡೌನ್‌ನಿಂದಾಗಿ ಸುರಂಗ ಕೊರೆಯುವ ಕೆಲಸಕ್ಕೆ ಹಿನ್ನಡೆ ಕೇವಲ 5.20 ಕಿ.ಮೀ. ಮಾರ್ಗ ಭೂಗತ ಮಾರ್ಗ ಪೂರ್ಣ

ರದಿ : ರಾಕೇಶ್‌ ಎನ್‌.ಎಸ್‌.

 ಬೆಂಗಳೂರು (ಡಿ.16): ನಮ್ಮ ಮೆಟ್ರೋದ (Namma Metro) ಕಾಳೇನ ಅಗ್ರಹಾರ-ನಾಗವಾರ ಮಧ್ಯೆ (ಪಿಂಕ್‌ ಲೈನ್‌ ) ಮೆಟ್ರೋ ಕಾಮಗಾರಿ ಕುಂಟುತ್ತ ಸಾಗಿದ್ದು, 2024ರೊಳಗೆ ಯೋಜನೆ ಪೂರ್ಣಗೊಳಿಸಿ ಜನಸಾಮಾನ್ಯರ ಓಡಾಟಕ್ಕೆ ಅವಕಾಶ ಮಾಡಿಕೊಡಲು ಬೆಂಗಳೂರು (Bengaluru) ಮೆಟ್ರೋ ನಿಗಮ ಹರಸಾಹಸ ಪಡುತ್ತಿದೆ. ಕೋವಿಡ್‌ (Covid) ಅಬ್ಬರದ ವೇಳೆಯಲ್ಲಿ ಹೇರಿದ್ದ ಲಾಕ್‌ಡೌನ್‌ (Lockdown) ಈ ಮಾರ್ಗದ ಕಾಮಗಾರಿಯ ವೇಗ ಕುಂಠಿತಗೊಂಡಿತ್ತು. ಬೆಂಗಳೂರು ಮೆಟ್ರೋದ ಅತ್ಯಂತ ಸವಾಲಿನ ಮಾರ್ಗ ನಿರ್ಮಾಣ ಕಾಮಗಾರಿ ರೀಚ್‌ 6ರಲ್ಲಿ ನಡೆಯುತ್ತಿದೆ ಎಂದು ಖುದ್ದು ಮೆಟ್ರೋ ನಿಗಮವೇ ಒಪ್ಪಿಕೊಂಡಿದೆ. ಗೊಟ್ಟಿಗೆರೆಯಿಂದ ನಾಗವಾರದ ಮಧ್ಯೆ ಒಟ್ಟು 21.26 ಕಿ.ಮೀ. ಮಾರ್ಗ ನಿರ್ಮಾಣವಾಗಬೇಕಿದ್ದು, 13.9 ಕಿ.ಮೀ. ಸುರಂಗ ಅಂದರೆ ಅರ್ಧಕ್ಕಿಂತಲೂ ಹೆಚ್ಚು ಭೂಗತ ಕಾಮಗಾರಿಯಾಗಿದೆ. ಉಳಿದ 7.36 ಕಿಮೀ ಎತ್ತರಿಸಿದ ಮಾರ್ಗವಾಗಿದೆ. ಸುರಂಗ ಮಾರ್ಗದಲ್ಲಿ 12 ನಿಲ್ದಾಣ ಮತ್ತು ಎತ್ತರಿಸಿದ ಮಾರ್ಗದಲ್ಲಿ 5 ನಿಲ್ದಾಣಗಳನ್ನು ಹೊಂದಿರಲಿದೆ.

ರೀಚ್‌ 6ರ ಭೂಗತ ಮೆಟ್ರೋ ಕಾಮಗಾರಿ 2019ರ ಫೆಬ್ರವರಿಗೆ ಆರಂಭವಾಗಿತ್ತು. ಕಾಮಗಾರಿ (Metro Work) ಆರಂಭಗೊಂಡ ಒಂದೇ ವರ್ಷದಲ್ಲಿ ಕೊರೋನಾ ಮಹಾಮಾರಿಯ ಆರ್ಭಟ ಆರಂಭಗೊಂಡಿತ್ತು. ಈ ಸಂದರ್ಭದಲ್ಲಿ ಹೇರಲಾದ ಲಾಕ್‌ಡೌನ್‌ ಹೊಡೆತಕ್ಕೆ ಯೋಜನೆಯ ಕಾಲಮಿತಿಯಲ್ಲಿ ಏರುಪೇರಾಗಿದೆ.

ಇದೇ ವೇಳೆ 2025ರೊಳಗೆ ಮುಗಿಸಬೇಕಾದ ಮೆಟ್ರೋ ಯೋಜನೆಯ ಹಂತ 2ರ ಕಾಮಗಾರಿಯನ್ನು 2024ರೊಳಗೆ ಮುಗಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraja Bommai) ಸೂಚನೆ ನೀಡಿದ್ದಾರೆ. 2024ರೊಳಗೆ ಯೋಜನೆ ಪೂರ್ಣಗೊಳಿಸುವುದಾಗಿಯೂ ಮೆಟ್ರೋ ನಿಗಮ ಹೇಳಿದೆ.

ಪಿಂಕ್‌ ಲೈನ್‌ನಲ್ಲಿ (Pink Line) ಸಮಾನಾಂತರ ಎರಡು ಸುರಂಗಗಳು ಸೇರಿ ಒಟ್ಟು 20.95 ಕಿಮೀ ಸುರಂಗ ಮಾರ್ಗ ನಿರ್ಮಾಣವಾಗಬೇಕಿದೆ. ಆದರೆ ಕಳೆದ 32 ತಿಂಗಳಲ್ಲಿ ಬರೀ 5.20 ಕಿಮೀ ಸುರಂಗ ಮಾರ್ಗ ಮಾತ್ರ ನಿರ್ಮಾಣವಾಗಿದೆ. ಇನ್ನುಳಿದ 15.75 ಕಿಮೀ ಸುರಂಗ ಮಾರ್ಗ ಉಳಿದಂತೆ ಭೂಗತ ರ್ಯಾಂಪ್, ನಿಲ್ದಾಣದ ಸುರಂಗ ಕೆಲಸ ನಡೆಯಲು ಬಾಕಿಯಿದೆ. ಒಟ್ಟಾರೆ ಸುರಂಗ ಮಾರ್ಗದ ಶೇ.25ರಷ್ಟು ಕಾಮಗಾರಿ ಮಾತ್ರ ಈವರೆಗೆ ನಡೆದಿದೆ.

ಈ ಮಾರ್ಗದ ಸುರಂಗ ಮಾರ್ಗಕ್ಕೆ ಮಾತ್ರವಲ್ಲದೇ ಎತ್ತರಿಸಿದ ಮಾರ್ಗದ ಕಾಮಗಾರಿಯ ವೇಗಕ್ಕೂ ಆಡಳಿತಾತ್ಮಕ ಸಮಸ್ಯೆ ತಡೆಯೊಡ್ಡಿತು. 7.50 ಕಿಮೀಗಳ ಎಲಿವೇಟೆಡ್‌ ಕಾಮಗಾರಿಯನ್ನು ಸಿಂಪ್ಲೆಕ್ಸ್‌ ಇನ್‌ಫ್ರಾಸ್ಟ್ರಕ್ಚ​ರ್‍ಸ್ಗೆ ನೀಡಲಾಗಿತ್ತು. ಆದರೆ ಸಿಂಪ್ಲೆಕ್ಸ್‌ ಕಾಮಗಾರಿಯಲ್ಲಿ ನಿಗದಿತ ಪ್ರಗತಿ ಪ್ರದರ್ಶಿಸಲು ವಿಫಲಗೊಂಡ ಹಿನ್ನೆಲೆಯಲ್ಲಿ ಮೆಟ್ರೊ ನಿಗಮವು 2021ರಲ್ಲಿ ಅದರ ಗುತ್ತಿಗೆಯನ್ನು ರದ್ದುಪಡಿಸಿತ್ತು. 2021ರ ಸೆಪ್ಟೆಂಬರ್‌ನಿಂದ ಈ ಗುತ್ತಿಗೆಯನ್ನು ಜಿ.ಆರ್‌.ಇನಾ್ೊ್ರಪ್ರಾಜೆಕ್ಟ್ ಲಿಮಿಟೆಡ್‌ಗೆ ನೀಡಲಾಗಿದೆ.

ನಿಗದಿತ ಅವಧಿಯೊಳಗೆ ಸುರಂಗ ಮಾರ್ಗ ಪೂರ್ಣ

ಕೋವಿಡ್‌ ಲಾಕ್‌ಡೌನ್‌ನಿಂದಾಗಿ (Covid Lockdown) ಕಾರ್ಮಿಕರು ಅಲಭ್ಯತೆ, ಕಾರ್ಮಿಕರ ಓಡಾಟದ ಸಮಸ್ಯೆ ಮತ್ತು ಟಿಬಿಎಂ (TBM) ಯಂತ್ರಕ್ಕೆ ಕೆಲಸ ಮಾಡಲು ಅಗತ್ಯವಾದ ಆಮ್ಲಜನಕದ ಕೊರತೆ ಮುಂತಾದ ಕಾರಣಗಳಿಂದ ರೀಚ್‌ 6ರ ಕಾಮಗಾರಿ ನಿಗದಿಯಾದ ವೇಗದಲ್ಲಿ ನಡೆದಿಲ್ಲ ಎಂದು ಮೆಟ್ರೋ ನಿಗಮವೇ ಒಪ್ಪಿಕೊಳ್ಳುತ್ತದೆ. ಆದರೆ, ಸದ್ಯ 9 ಸುರಂಗ ಕೊರೆಯುವ ಯಂತ್ರ (ಟಿಬಿಎಂ) ಸುರಂಗ ಕೊರೆಯುವುದರಲ್ಲಿ ವ್ಯಸ್ತವಾಗಿದ್ದು, ಪ್ರತಿ ಟಿಬಿಎಂ ಪ್ರತಿದಿನ ಸರಾಸರಿ 3 ಮೀಟರ್‌ ಸುರಂಗ ಕೊರೆಯುತ್ತಿವೆ. ಇದರಿಂದಾಗಿ ಪ್ರತಿದಿನ ಒಟ್ಟು 25 ರಿಂದ 30 ಮೀಟರ್‌ ಸುರಂಗ ಕೊರೆಯುತ್ತಿದ್ದೇವೆ. ಸುರಂಗ ಕೊರೆಯುವ ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುತ್ತೇವೆ ಎಂಬ ವಿಶ್ವಾಸವನ್ನು ಮೆಟ್ರೋ ನಿಗಮ ವ್ಯಕ್ತಪಡಿಸಿದೆ.

ಪಿಂಗ್‌ ಲೈನ್‌ ನಿಲ್ದಾಣಗಳಿವು

ಪಿಂಕ್‌ ಲೈನ್‌ನಲ್ಲಿ ಕಾಳೇನ ಅಗ್ರಹಾರ, ಹುಳಿಮಾವು, ಐಐಎಂ-ಬೆಂಗಳೂರು (IIM Bengaluru), ಜೆಪಿ ನಗರ ನಾಲ್ಕನೇ ಹಂತ, ಜಯದೇವ ಆಸ್ಪತ್ರೆ, ಸ್ವಾಗತ್‌ ರೋಡ್‌ ಕ್ರಾಸ್‌, ಡೈರಿ ಸರ್ಕಲ್‌, ಲಕ್ಕಸಂದ್ರ, ಲ್ಯಾಂಗ್‌ಫಾರ್ಡ್‌ ಟೌನ್‌, ರಾಷ್ಟ್ರೀಯ ಮಿಲಿಟರಿ ಸ್ಕೂಲ್‌, ಎಂ.ಜಿ.ರೋಡ್‌, ಶಿವಾಜಿನಗರ, ಕಾಂಟೋನ್ಮೆಂಟ್‌, ಪಾಟರಿ ಟೌನ್‌, ಟ್ಯಾನರಿ ರೋಡ್‌, ವೆಂಕಟೇಶಪುರ, ಕಾಡುಗೊಂಡನಹಳ್ಳಿ ಮತ್ತು ನಾಗವಾರ ನಿಲ್ದಾಣ ಬರಲಿದೆ. 2031ರ ಹೊತ್ತಿಗೆ ಈ ಮೆಟ್ರೋ ಮಾರ್ಗದಲ್ಲಿ 5 ಲಕ್ಷ ಜನ ಪ್ರಯಾಣಿಕರು ಓಡಾಡುವ ಅಂದಾಜನ್ನು ಮೆಟ್ರೋ ನಿಗಮ ಹಾಕಿಕೊಂಡಿದೆ.