ಮರಗಣತಿ: 10 ತಿಂಗಳಾದ್ರೂ ಸಮಿತಿಯೇ ರಚನೆಯಾಗಿಲ್ಲ; ಕೋರ್ಟ್ ಗರಂ

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಮರಗಳ ಸಮಗ್ರ ಗಣತಿ ಪ್ರಕ್ರಿಯೆ ವಿಳಂಬ ಮಾಡುತ್ತಿರುವ ಬಿಬಿಎಂಪಿ ಹಾಗೂ ಸರ್ಕಾರದ ಕ್ರಮಕ್ಕೆ ಹೈಕೋರ್ಟ್‌ ಸೋಮವಾರ ತೀವ್ರ ಬೇಸರ ವ್ಯಕ್ತಪಡಿಸಿದೆ.

court slams bbmp for delaying tree survey in bangalore

ಬೆಂಗಳೂರು(ಜ.28): ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಮರಗಳ ಸಮಗ್ರ ಗಣತಿ ಪ್ರಕ್ರಿಯೆ ವಿಳಂಬ ಮಾಡುತ್ತಿರುವ ಬಿಬಿಎಂಪಿ ಹಾಗೂ ಸರ್ಕಾರದ ಕ್ರಮಕ್ಕೆ ಹೈಕೋರ್ಟ್‌ ಸೋಮವಾರ ತೀವ್ರ ಬೇಸರ ವ್ಯಕ್ತಪಡಿಸಿದೆ.

ನಗರದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗಾಗಿ ನೂರಾರು ಮರಗಳನ್ನು ಕತ್ತರಿಸಲಾಗುತ್ತಿದೆ ಎಂದು ಆರೋಪಿಸಿ ದತ್ತಾತ್ರೇಯ ಟಿ.ದೇವರೆ ಮತ್ತು ಬೆಂಗಳೂರು ಪರಿಸರ ಟ್ರಸ್ಟ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎಸ್‌.ಓಕ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಎಲ್ಲೆಂದರಲ್ಲಿ ಕಸ ಹಾಕಿದ್ರೆ ಅಲ್ಲೇ ಎಲೆಕ್ಟ್ರಾನಿಕ್ ದಂಡ ರಸೀದಿ..!

ಅಭಿವೃದ್ಧಿ ಕಾಮಗಾರಿಗಳಿಗೆ ತೆರವು ಮಾಡಲು ಉದ್ದೇಶಿಸಲಾಗಿರುವ ಮರಗಳ ರಕ್ಷಣೆಯ ಸಾಧ್ಯತೆ ಮತ್ತು ಅದಕ್ಕೆ ಅನುಸರಿಸಬೇಕಾದ ಕಾರ್ಯ ವಿಧಾನಗಳ ಕುರಿತು ಪರಿಶೀಲನೆ ನಡೆಸಲು ಹಾಗೂ ಮರಗಳನ್ನು ಕತ್ತರಿಸದೆ ಅನ್ಯ ಮಾರ್ಗವಿಲ್ಲ ಎಂದಾಗ ಮಾತ್ರ ಅವುಗಳನ್ನು ಕತ್ತರಿಸುವ ಪ್ರಸ್ತಾವನೆ ನೀಡಲು ಪರಿಸರ, ವಿಜ್ಞಾನ, ತಂತ್ರಜ್ಞಾನ ಸೇರಿ ಇತರ ಕ್ಷೇತ್ರಗಳ ತಜ್ಞರನ್ನು ಒಳಗೊಂಡ ಸಮಿತಿಯೊಂದನ್ನು ರಚಿಸುವಂತೆ 2019ರ ಏಪ್ರಿಲ್‌ನಲ್ಲಿ ಸರ್ಕಾರ ಮತ್ತು ಬಿಬಿಎಂಪಿಗೆ ಹೈಕೋರ್ಟ್‌ ನಿರ್ದೇಶನ ನೀಡಿತ್ತು. ಅದರಂತೆ ಸಮಿತಿ ಮರಗಳ ಸಂರಕ್ಷಣೆ ಬಗ್ಗೆ ಅನುಸರಿಸಬೇಕಾದ ಕಾರ್ಯ ವಿಧಾನ ಮತ್ತು ಮಾರ್ಗಸೂಚಿಗಳನ್ನು ರೂಪಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕಿತ್ತು. ಈ ಮಧ್ಯೆ ತಜ್ಞರ ಸಮಿತಿಯ ಕಾರ್ಯವಿಧಾನ ಮತ್ತು ಮಾರ್ಗಸೂಚಿಗಳ ಬಗ್ಗೆ ಬಿಬಿಎಂಪಿಯ ಡಿಎಫ್‌ಒ ಸೋಮವಾರ ಹೈಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿತು.

ಮಾರ್ಗಸೂಚಿಗೆ ಅಸಮಾಧಾನ:

ಈ ಪ್ರಮಾಣಪತ್ರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಪೀಠ, ತಜ್ಞರ ಸಮಿತಿ ಮಾರ್ಗಸೂಚಿಗಳನ್ನು ರಚನೆ ಮಾಡಬೇಕಿತ್ತು. ಆದರೆ, ತಜ್ಞರ ಸಮಿತಿಯು ಮಾರ್ಗಸೂಚಿಗಳನ್ನು ರೂಪಿಸಿದೆಯೇ? ಇಲ್ಲವೇ ತಜ್ಞರ ಸಮಿತಿಯೊಂದಿಗೆ ಸಮಾಲೋಚಿಸಿ ಬಿಬಿಎಂಪಿ ಮಾರ್ಗಸೂಚಿಗಳನ್ನು ರಚಿಸಲಾಗಿದೆಯೇ? ಎಂಬ ಬಗ್ಗೆ ಈ ಪ್ರಮಾಣಪತ್ರ ಯಾವುದೇ ಉಲ್ಲೇಖವಿಲ್ಲ. ಮೇಲಾಗಿ ಮಾರ್ಗಸೂಚಿಗಳಿಗೆ ತಜ್ಞರ ಸಮಿತಿಗೆ ಸಂಬಂಧಪಡದ ವ್ಯಕ್ತಿ (ಡಿಎಫ್‌ಒ) ಪ್ರಮಾಣಪತ್ರಕ್ಕೆ ಸಹಿ ಹಾಕಿದ್ದಾರೆ. ಆದ್ದರಿಂದ ಮಾರ್ಗಸೂಚಿಗಳನ್ನು ಒಪ್ಪಲಾಗದು ಎಂದು ತಿಳಿಸಿದ ನ್ಯಾಯಪೀಠ, ಸೂಕ್ತವಾದ ಮಾರ್ಗಸೂಚಿಗಳನ್ನು ರಚನೆ ಮಾಡುವಂತೆ ತಜ್ಞರ ಸಮಿತಿಗೆ ನಿರ್ದೇಶಿಸುವಂತೆ ರಾಜ್ಯ ಸರ್ಕಾರವು ತಾಕೀತು ಮಾಡಿತು.

ಈವರೆಗೂ ಮಾರ್ಗಸೂಚಿಗಳನ್ನು ರಚನೆ ಮಾಡದಿರುವ ಕಾರಣ ನಗರದಲ್ಲಿ ಮರಗಳನ್ನು ತೆರವುಗೊಳಿಸಲು ಸಮಿತಿ ನೀಡಿರುವ ಅನುಮತಿ ಆಧರಿಸಿ ಯಾವುದೇ ಕ್ರಮ ಜರುಗಿಸಬಾರದು ಎಂದು ಬಿಎಂಆರ್‌ಸಿಎಲ್‌ಗೆ ನಿರ್ದೇಶಿಸಿತು.

ನಗರಕ್ಕೆ ಸೀಮಿತಗೊಳಿಸಿದ್ದಕ್ಕೆ ಕಿಡಿ:

ಬೆಂಗಳೂರು ನಗರ ಹಾಗೂ ಗ್ರಾಮಾಂತರ ವ್ಯಾಪ್ತಿಗೆ ರಚಿಸಲಾಗಿದ್ದ ತಜ್ಞರ ವಿಶೇಷ ಸಮಿತಿಯನ್ನು ಕೇವಲ ಬಿಬಿಎಂಪಿ ವ್ಯಾಪ್ತಿಗೆ ಸೀಮಿತಗೊಳಿಸಿ ಸರ್ಕಾರವು 2020ರ ಜ.16ರಂದು ಅಧಿಸೂಚನೆ ಹೊರಡಿಸುವುದಕ್ಕೆ ನ್ಯಾಯಪೀಠ ಇದೇ ವೇಳೆ ಆಕ್ಷೇಪ ವ್ಯಕ್ತಪಡಿಸಿತು. ಹೈಕೋರ್ಟ್‌ ಅನುಮತಿ ಇಲ್ಲದೇ ತಜ್ಞರ ಸಮಿತಿಯನ್ನು ಬೆಂಗಳೂರು ನಗರಕ್ಕೆ ಸೀಮಿತಿಗೊಳಿಸಿ ಸರ್ಕಾರ ಹೇಗೆ ನೋಟಿಫಿಕೇಷನ್‌ ಹೊರಡಿಸಿದೆ. ಈ ಕುರಿತು ವಿವರಣೆ ಸರ್ಕಾರಕ್ಕೆ ವಿವರಣೆ ನೀಡಬೇಕು ಎಂದು ನ್ಯಾಯಪೀಠ ಎಂದು ಸೂಚಿಸಿ ವಿಚಾರಣೆ ಮುಂದೂಡಿತು.

ವೆಬ್‌ಸೈಟ್‌ ರೂಪಿಸಿದ್ರೆ ಸಾಕೇ?

ಮರಗಳ ಗಣತಿ ಕಾರ್ಯ ಆರಂಭಿಸಲಾಗಿದೆಯೇ ಎಂದು ನ್ಯಾಯಪೀಠವು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮರ ವಿಜ್ಞಾನ ಸಂಸ್ಥೆಯ ಪರ ವಕೀಲರ, ಈಗಾಗಲೇ ಆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಅದಕ್ಕಾಗಿ ವೆಬ್‌ಸೈಟ್‌ ರೂಪಿಸಲಾಗಿದೆ ಎಂದು ತಿಳಿಸಿದರು. ಇದರಿಂದ ಮತ್ತಷ್ಟುಕೋಪಗೊಂಡ ನ್ಯಾಯಪೀಠ, ವೆಬ್‌ಸೈಟ್‌ ರೂಪಿಸಿದ ಮಾತ್ರಕ್ಕೆ ಮರಗಳ ಗಣತಿ ಆರಂಭವಾಗಿದೆ ಎಂದರ್ಥವೇ? ಎಂದು ಖಾರವಾಗಿ ಪ್ರಶ್ನಿಸಿತು. ನಂತರ ಮರಗಳ ಗಣತಿಯನ್ನು ಯಾವಾಗ ಆರಂಭಿಸಲಾಗುತ್ತದೆ ಎಂಬುದನ್ನು ನಿರ್ದಿಷ್ಟವಾಗಿ ಹೇಳಬೇಕು ಎಂದು ತಾಕೀತು ಮಾಡಿತು.

Latest Videos
Follow Us:
Download App:
  • android
  • ios