ಕೇಸಿಲ್ಲದಿದ್ದರೂ ಹಿಂಸೆ ನೀಡಿದ ಪೊಲೀಸ್: ಇನ್ಸ್‌ಪೆಕ್ಟರ್ ಸೇರಿ ನಾಲ್ವರಿಗೆ ದಂಡ
ವ್ಯಕ್ತಿಗೆ ಕಿರುಕುಳ: ಇನ್ಸ್‌ಪೆಕ್ಟರ್ ಸೇರಿದಂತೆ ನಾಲ್ವರಿಗೆ ದಂಡ| ದೂರುದಾರರಿಗೆ 40 ಸಾವಿರ ಪರಿಹಾರ ರೂಪದಲ್ಲಿ ಒಂದು ತಿಂಗಳೊಳಗೆ ನೀಡಬೇಕು| ನ್ಯಾಯಾಲಯ ಆದೇಶ|
ಬೆಂಗಳೂರು(ಫೆ.22): ಠಾಣೆಯಲ್ಲಿ ಪ್ರಕರಣ ದಾಖಲಾಗದಿದ್ದರೂ, ವ್ಯಕ್ತಿಯೊಬ್ಬರನ್ನು ಠಾಣೆಗೆ ಕರೆತಂದು, ವಿನಾಕಾರಣ ಹಿಂಸೆ ನೀಡಿದ್ದ ಆರೋಪದಲ್ಲಿ 2018ರಲ್ಲಿ ಕೆ.ಆರ್.ಪುರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆಗಿದ್ದ ಜಯರಾಮ್ ಸೇರಿದಂತೆ ನಾಲ್ಕು ಜನ ಸಿಬ್ಬಂದಿಗೆ ತಲಾ 10 ಸಾವಿರ ದಂಡ ವಿಧಿಸಿರುವ ಮಾನವ ಹಕ್ಕುಗಳ ಆಯೋಗ, ತಪ್ಪಿತಸ್ಥರ ವಿರುದ್ಧ ತನಿಖೆ ನಡೆಸಿ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ಮಹಾನಿರ್ದೇಶಕರಿಗೆ ಸೂಚನೆ ನೀಡಿದೆ. ಅಲ್ಲದೆ, ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗ ಸದಸ್ಯ ಕೆ.ಬಿ.ಚಂಗಪ್ಪ ಅವರಿದ್ದ ಪೀಠ ಸೂಚನೆ ನೀಡಿದೆ.
ಟಿ.ಬೊಮ್ಮನಹಳ್ಳಿಯ ರಾಘವೇಂದ್ರ ಎಂಬುವವರು ಪೊಲೀಸರ ವಿರುದ್ಧ ದೂರು ನೀಡಿದ್ದರು. 2018ರ ಮೇ 10ರಂದು ಮೆಯೋಹಾಲ್ ನ್ಯಾಯಾಲಯದಲ್ಲಿ ಚೆಕ್ ಬೌನ್ಸ್ ಪ್ರಕರಣ ಸಂಬಂಧ ಹಾಜರಾಗಿ ಮನೆಗೆ ಬರುತ್ತಿದೆ. ಈ ಸಂದರ್ಭದಲ್ಲಿ ಕೆ.ಆರ್.ಪುರಂ ಪೋಲೀಸ್ ಠಾಣೆಯ ಪೇದೆಗಳಾದ ವೆಂಕಟೇಶ್ ಮತ್ತು ಬಸವರಾಜ, ನಿಮ್ಮ ವಿರುದ್ಧ ವಾರೆಂಟ್ ಇದೆಯೆಂದು ಹೇಳಿ ಠಾಣೆಗೆ ಕರೆದುಕೊಂಡು ಹೋಗಿ ಲಾಕಪ್‌ನಲ್ಲಿರಿಸಿದ್ದರು, ಠಾಣಾ ಇನ್ಸ್‌ಪೆಕ್ಟರ್ ಜಯರಾಮ್ ಎಂಬುವವರು ಅವಾಚ್ಯ ಶಬ್ದಗಳಿಂದ ನಿಂದಿಸಿ ದೈಹಿಕ ಹಿಂಸೆ ನೀಡಿದ್ದರು, ಕೊನೆಗೆ ಅವರು ನೀಡಿದ ಹಿಂಸೆಯಿಂದಾಗಿ ಚೆಕ್ ಬೌನ್ಸ್ ಮೊತ್ತ ನೀಡುವುದಾಗಿ ಹೇಳಿದ ನಂತರ ಮರುದಿನ ಬೆಳಗ್ಗೆ 10.30ಕ್ಕೆ ಬಿಡುಗಡೆ ಮಾಡಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ನಂತರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಯೋಗಕ್ಕೆ ಕೋರಿದ್ದರು. ಪ್ರಕರಣ ದಾಖಲಿಸಿಕೊಂಡ ಆಯೋಗ ಉಪ ಪೊಲೀಸ್ ಅಧೀಕ್ಷಕರಿಂದ ವಿಚಾರಣೆ ನಡೆಸಿ ವರದಿ ಸಲ್ಲಿಸಲು ಸೂಚಿಸಿತ್ತು. ದೂರುದಾರರಾದ ರಾಘವೇಂದ್ರ ಮತ್ತು ಸೆಲ್ವಿ ಎಂಬುವವರ ನಡುವೆ ಚೆಕ್ ಬೌನ್ಸ್ ಕೇಸ್ ಇತ್ತು. ಎಫ್‌ಐಆರ್ ದಾಖಲಾಗದೇ ಇದ್ದರೂ ದೂರುದಾರರನ್ನು ಠಾಣೆಗೆ ಕರೆತಂದು ದೈಹಿಕ ಮತ್ತು ಮಾನಸಿಕವಾಗಿ ಹಿಂಸೆ ನೀಡಿದ್ದರು. ಅಲ್ಲದೆ, ಅಕ್ರಮ ಬಂಧನದಲ್ಲಿಟ್ಟಿದ್ದರು ಎಂದು ತಿಳಿಸಲಾಗಿತ್ತು.
ನಂತರ ಪ್ರಕರಣ ಸಂಬಂಧ ಸ್ಪಷ್ಟನೆ ನೀಡುವಂತೆ ಕೆ.ಆರ್. ಪುರಂ ಪೋಲೀಸ್ ಠಾಣೆಯ ಅಂದಿನ ಇನ್ಸ್‌ಪೆಕ್ಟರ್ ಎಚ್.ಜಯರಾಜ್, ಸಬ್ ಇನ್ಸ್‌ಪೆಕ್ಟರ್ ಎಚ್.ಮಂಜುನಾಥ, ಮುಖ್ಯ ಪೇದೆಗಳಾದ ಜೆ.ಎಸ್.ಬಸವರಾಜಪ್ಪ, ವೆಂಕಟೇಶ್ ಅವರಿಗೆ ನೋಟಿಸ್ ಜಾರಿ ಮಾಡಿತ್ತು. ಆದರೆ ನೊಟಿಸ್‌ಗೆ ಉತ್ತರ ನೀಡದ ಹಿನ್ನೆಲೆಯಲ್ಲಿ ಆರೋಪಿಗಳು ತಪ್ಪೆಸಗಿರುವುದು ಸಾಬೀತಾಗಿದೆ ಎಂದು ಪರಿಗಣಿಸಿದ ನ್ಯಾಯಾಲಯ ದೂರುದಾರರಿಗೆ 40 ಸಾವಿರ ಪರಿಹಾರ ರೂಪದಲ್ಲಿ ಒಂದು ತಿಂಗಳೊಳಗೆ ನೀಡಬೇಕು ಎಂದು ಸರ್ಕಾರದ ಒಳಾಡಳಿತ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದೆ.