ಎಂ.ಜಿ.ರೋಡ್‌, ಬ್ರೀಗೇಡ್‌ ರೋಡ್‌, ಚರ್ಚ್ ಸ್ಟ್ರೀಟ್ ಸೇರಿದಂತೆ ಇಂದಿರಾನಗರ, ಕೋರಮಂಗಲ, ವೈಟ್‌ಫೀಲ್ಡ್‌, ಎಲೆಕ್ಟ್ರಾನಿಕ್‌ ಸಿಟಿಯ ರಸ್ತೆಗಳು ವಿದ್ಯುದೀಪಗಳಿಂದ ಅಲಂಕೃತಗೊಂಡು ಜಗಮಗಿಸುತ್ತಿವೆ. ವಾರಾಂತ್ಯದ ಹಿನ್ನೆಲೆಯಲ್ಲಿ ಸಂಭ್ರಮ ದುಪ್ಪಟ್ಟಾಗಿರಲಿದ್ದು, ಭಾನುವಾರ ಸಂಜೆ 5 ಗಂಟೆಯಿಂದಲೇ ಜನ ಸೇರುವ ನಿರೀಕ್ಷೆಯಿದೆ. ಇಲ್ಲೆಲ್ಲ ತಡರಾತ್ರಿ 1ರವರೆಗೆ ಭರ್ಜರಿ ಪಾರ್ಟಿ ನಡೆಯಲಿದೆ. 

ಬೆಂಗಳೂರು(ಡಿ.31):  ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಳ್ಳಲು ಸಿಲಿಕಾನ್‌ ಸಿಟಿ ತುದಿಗಾಲಲ್ಲಿ ನಿಂತಿದೆ. ಕೊರೋನಾ ಹರಡುವ ಆತಂಕ ಮೀರಿ ಭರ್ಜರಿ ಪಾರ್ಟಿಗೆ ನಗರದ ‘ಪಾರ್ಟಿ ಝೋನ್‌’ಗಳು ಸಿದ್ಧಗೊಂಡಿವೆ.

ನಗರದ ಎಂ.ಜಿ.ರೋಡ್‌, ಬ್ರೀಗೇಡ್‌ ರೋಡ್‌, ಚರ್ಚ್ ಸ್ಟ್ರೀಟ್ ಸೇರಿದಂತೆ ಇಂದಿರಾನಗರ, ಕೋರಮಂಗಲ, ವೈಟ್‌ಫೀಲ್ಡ್‌, ಎಲೆಕ್ಟ್ರಾನಿಕ್‌ ಸಿಟಿಯ ರಸ್ತೆಗಳು ವಿದ್ಯುದೀಪಗಳಿಂದ ಅಲಂಕೃತಗೊಂಡು ಜಗಮಗಿಸುತ್ತಿವೆ. ವಾರಾಂತ್ಯದ ಹಿನ್ನೆಲೆಯಲ್ಲಿ ಸಂಭ್ರಮ ದುಪ್ಪಟ್ಟಾಗಿರಲಿದ್ದು, ಭಾನುವಾರ ಸಂಜೆ 5 ಗಂಟೆಯಿಂದಲೇ ಜನ ಸೇರುವ ನಿರೀಕ್ಷೆಯಿದೆ. ಇಲ್ಲೆಲ್ಲ ತಡರಾತ್ರಿ 1ರವರೆಗೆ ಭರ್ಜರಿ ಪಾರ್ಟಿ ನಡೆಯಲಿದೆ. ಶನಿವಾರ ರಾತ್ರಿಯೇ ಈ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರಿದ್ದರು. ಇದರಿಂದ ಸಂಪೂರ್ಣ ಟ್ರಾಫಿಕ್ ಜಾಮ್‌ ಉಂಟಾಗಿತ್ತು.

ಹೊಸ ವರ್ಷಾಚರಣೆಗೆ ವಾರ್ನಿಂಗ್,4 ಸಾವಿರ ಗಡಿ ತಲುಪಿದ ಸಕ್ರೀಯ ಕೋವಿಡ್ ಪ್ರಕರಣ!

ಕೊರೋನಾಕ್ಕೆ ಡೋಂಟ್‌ ಕೇರ್‌

ಕಳೆದ ವರ್ಷ ಯಾವುದೇ ಆತಂಕವಿಲ್ಲದೆ ಸಂಭ್ರಮದಿಂದ ಹೊಸವರ್ಷ ಸ್ವಾಗತಿಸಿದ್ದರು. ಆದರೆ, ಈ ಬಾರಿ ಕೊರೋನಾ ಉಪತಳಿ ಜಿ.ಎನ್‌.1 ಹರಡುವ ಆತಂಕ ಒಳಗೊಳಗೆ ಕಾಡುತ್ತಿದೆ. ಆದರೆ, ಪಾರ್ಟಿ, ಸಂಭ್ರಮಾಚರಣೆ ಈ ಆತಂಕ ಯಾವುದೇ ಅಡ್ಡಿಯಾದಂತೆ ತೋರುತ್ತಿಲ್ಲ. ಹಲವು ಹೊಟೆಲ್‌, ಬಾರ್ ಆ್ಯಂಡ್‌ ರೆಸ್ಟೋರೆಂಟ್‌, ಪಬ್‌, ಹೋಂ ಸ್ಟೇಗಳಲ್ಲಿ ಸ್ವಲ್ಪ ಮಟ್ಟಿಗೆ ಹ್ಯಾಂಡ್‌ ಸ್ಯಾನಿಟೈಝರ್‌ ಇಟ್ಟಿರುವುದು ಬಿಟ್ಟರೆ ಸಾಮಾಜಿಕ ಅಂತರ, ಮಾಸ್ಕ್‌ ಕಡ್ಡಾಯದಂತ ಯಾವುದೇ ನಿರ್ಬಂಧ ವಿಧಿಸಲಾಗಿಲ್ಲ. ಜೊತೆಗೆ ಸರ್ಕಾರದಿಂದಲೂ ಎಂ.ಜಿ ರಸ್ತೆ ಸೇರಿ ಇತರೆಡೆ ನಿರ್ಬಂಧ ಇಲ್ಲದಿರುವ ಹಿನ್ನೆಲೆಯಲ್ಲಿ ಸಂಭ್ರಮಕ್ಕೆ ಯಾವುದೆ ರೀತಿ ಅಂಕುಶ ಇಲ್ಲ. ಹೀಗಾಗಿ ಪಾರ್ಟಿಗೆ ಯಾವುದೆ ಅಡ್ಡಿಯಿಲ್ಲ.

ವರ್ಷಾಚರಣೆ: ಬೆಂಗ್ಳೂರಲ್ಲಿ ಮಧ್ಯರಾತ್ರಿ 1.30ರವರೆಗೂ ಮೆಟ್ರೋ ರೈಲು

ಮದ್ಯದ ಹೊಳೆ

ಈಗಾಗಲೇ ಆತಿಥ್ಯ ಉದ್ಯಮಗಳು ಗ್ರಾಹಕರನ್ನು ಸೆಳೆಯಲು ವಿಶೇಷ ಪ್ಯಾಕೇಜ್‌, ತರಹೇವಾರಿ ಚಟುವಟಿಕೆಗಳು, ರಿಯಾಯಿತಿಯನ್ನು ಘೋಷಿಸಿವೆ. ಹೊಷ ವರ್ಷಕ್ಕೆ ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚಿನ ಮದ್ಯದ ಹೊಳೆ ಹರಿಯುವುದು ನಿಶ್ಚಿತವಾಗಿದ್ದು, ಹೋಟೆಲ್‌, ಬಾರ್ ಆ್ಯಂಡ್‌ ರೆಸ್ಟೋರೆಂಟ್‌, ಪಬ್‌, ಹೋಂ ಸ್ಟೇಗಳು ಈಗಾಗಲೇ ಸಾಕಷ್ಟು ದಾಸ್ತಾನನ್ನು ಮಾಡಿಟ್ಟುಕೊಂಡಿವೆ. ಜೊತೆಗೆ ದೇಸಿ ತಿನಿಸುಗಳ ಜೊತೆಗೆ ಫ್ರೆಂಚ್‌, ಚೈನೀಸ್‌, ಇಟಾಲಿಯನ್‌, ಜಪಾನೀಸ್‌ ಸೇರಿದಂತೆ ಹಲವು ಬಗೆಯ ಖಾದ್ಯಗಳನ್ನು ಉಣಬಡಿಸಲು ಸಿದ್ಧಗೊಂಡಿವೆ.

ಕುಟುಂಬ ಸಮೇತ ಬರುವ ಗ್ರಾಹಕರಿಗೆ, ಜೋಡಿಗಳಿಗೆ ತೊಂದರೆಯಾಗದಂತೆ ಹೋಟೆಲ್‌ಗಳಲ್ಲಿ ಪ್ರತ್ಯೇಕ ವ್ಯವಸ್ಥೆಯಿದೆ. ಜೊತೆಗೆ ಅಹಿತಕರ ಘಟನೆ ತಡೆಯಲು ಪೊಲೀಸ್‌ ಸಿಬ್ಬಂದಿ ಜೊತೆಗೆ ಎಲ್ಲ ಹೋಟೇಲ್‌, ಪಬ್‌ಗಳು ಬೌನ್ಸರ್‌ಗಳನ್ನು ನಿಯೋಜನೆ ಮಾಡಿಕೊಂಡಿವೆ. ಜೊತೆಗೆ ಪಾರ್ಟಿ ಬಳಿಕ ಸುರಕ್ಷಿತವಾಗಿ ಮನೆಗೆ ತಲುಪಿಸಲು ಕ್ಯಾಬ್ ವ್ಯವಸ್ಥೆಯೂ ಇದೆ.