ಚಿತ್ರದುರ್ಗ ತಾಲ್ಲೂಕು ಸಬ್ ರಿಜಿಸ್ಟರ್ ಕಚೇರಿಯಲ್ಲಿ ಬ್ರಹಾಂಡ ಭ್ರಷ್ಟಾಚಾರ ನಡೆಯುತ್ತಿದೆ ಎಂದು ವಕೀಲರೊಬ್ಬರಿಂದ ಗಂಭೀರ ಆರೋಪ‌. 

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಮಾ.13): ಚಿತ್ರದುರ್ಗ ತಾಲ್ಲೂಕು ಸಬ್ ರಿಜಿಸ್ಟರ್ ಕಚೇರಿಯಲ್ಲಿ ಬ್ರಹಾಂಡ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಗಂಭೀರ ಆರೋಪ‌ ಕೇಳಿ ಬಂದಿದೆ. ಕ್ರಯಪತ್ರ, ಪಾಲು ವಿಭಾಗ ಇನ್ನಿತರ ಕೆಲಸಗಳ ನೊಂದಣಿಗೂ ಇಂತಿಷ್ಟು ಹಣ ನಿಗದಿ ಮಾಡಿ ಲಂಚ ಪಡೆಯುತ್ತಿದ್ದಾರೆ. ಬಡವರು ತಮ್ಮ ಜಮೀನು ಅಥವಾ ಸೈಟ್ ನೊಂದಣಿ ಮಾಡಿಸಿಕೊಳ್ಳುವುದೇ ಕಷ್ಟಕರವಾಗಿದೆ ಎಂದು ವಕೀಲರೊಬ್ಬರು ಆರೋಪಿಸಿದ್ದಾರೆ. ಜನರಿಗೆ ಅನುಕೂಲ ಆಗಲಿ ಎಂದು ಸರ್ಕಾರ ರಾಜ್ಯದಲ್ಲಿರುವ ಸರ್ಕಾರಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳಿಗೆ ಹಾಗಾಗಿ ಎಚ್ಚರಿಕೆ ಕೊಡುತ್ತಲೇ ಇರುತ್ತದೆ. ಆದ್ರೂ ಸರ್ಕಾರಿ ಕಚೇರಿಗಳಲ್ಲಿ ಲಂಚಾವತಾರ ಮಾತ್ರ ಕಡಿಮೆಯಾದಂತೆ ಕಾಣುವುದಿಲ್ಲ. ಇದಕ್ಕೆ ನಿರ್ದೇರ್ಶನ ಎಂಬಂತೆ, ಚಿತ್ರದುರ್ಗ ತಾಲೂಕು ಸಬ್ ರಿಜಿಸ್ಟರ್ ಕಚೇರಿಯಲ್ಲಿ ಸ್ವತಃ ಅಧಿಕಾರಿಯೇ ಲಂಚಕ್ಕೆ ಬೇಡಿಕೆ ಇಡ್ತಿದ್ದಾರೆ ಎಂದು ವಕೀಲ ಸಾಮಾಜಿಕ ಹೋರಾಟಗಾರ ಲೀಲಾಧರ್ ಠಾಕೂರ್ ಪತ್ರಿಕಾಗೋಷ್ಠಿ ನಡೆಸಿ ಗಂಭೀರ ಆರೋಪ‌ ಮಾಡಿದ್ದಾರೆ.

ಸಾಮಾನ್ಯ ವ್ಯಕ್ತಿ ತಮ್ಮ ಜಾಗದ ಕ್ರಯಪತ್ರ, ಪಾಲು ವಿಭಾಗ, ದಾನಪತ್ರ, ಹಕ್ಕ ಬಿಡುಗಡೆ ಪತ್ರ ಹೀಗೆ ಇನ್ನಿತರ ನೊಂದಾಣಿ ಕಾರ್ಯಕ್ಕೆ ಅಧಿಕಾರಿಯೇ ಲಂಚ ಇಷ್ಟು ನೀಡಬೇಕು ಎಂದು ಬೇಡಿಕೆ ಇಡ್ತಿದ್ದಾರಂತೆ. 1 ಲಕ್ಷ ಮಾರುಕಟ್ಟೆ ಬೆಲೆಗೆ 1ಸಾವಿರ ಲಂಚ ನೀಡಿದ್ರೆ ಮಾತ್ರ ನೋಂದಣಿ ಮಾಡಲಾಗುವುದು ಎಂದು ಡಿಮ್ಯಾಂಡ್ ಮಾಡಿದ್ದಾರಂತೆ. ಲಂಚ ಯಾಕೆ ನೀಡಬೇಕು ಎಂದು ಅರ್ಜಿದಾರರು ಹೋಗಿ ಕೇಳಿದ್ರೆ ನಾವು ಕೂಡ ಶಾಸಕರು ಸೇರಿ ಅನೇಕರಿಗೆ ಹಣ ನೀಡಿ ಬಂದಿರುತ್ತೇವೆ. ಹಾಗಾಗಿ ನೀವು‌ ಕೊಟ್ರೆ ಮಾತ್ರ ನೋಂದಣಿ ಆಗಲಿದೆ ಇಲ್ಲಾಂದ್ರೆ ಆಗಲ್ಲ ಎಂದು ಹೇಳುತ್ತಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಅಲ್ಲದೇ ಈ ಅಧಿಕಾರಿಯ ಹಿನ್ನೆಲೆಯನ್ನ ನೋಡೋದ್ ಆದ್ರೆ, ರಾಯಚೂರು ಜಿಲ್ಲೆ ಸಿಂಧನೂರಿನಲ್ಲಿ ಕಳೆದ ಎರಡು ವರ್ಷದ ಹಿಂದೆ ಸಬ್ ರಿಜಿಸ್ಟರ್ ಆಗಿದ್ದಾಗಲೂ ಹೀಗೆ ಲಂಚಕ್ಕೆ ಬೇಡಿಕೆ ಇಟ್ಟು ಹಣ ಸ್ವೀಕರಿಸುವ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದು ಸಸ್ಪೆಂಡ್ ಆಗಿದ್ದರು. ಆದ್ರೂ ಕೂಡ ಬುದ್ದಿ ಕಲಿಯದೇ ನಮ್ಮ ಜಿಲ್ಲೆಗೆ ಬಂದಾಗಿನಿಂದಲೂ ಇದೇ ಲಂಚಾವತಾರ ಕೆಲಸ ಮುಂದುವರೆಸಿದ್ದಾರೆ. ಈ ಕುರಿತು ಮೇಲ್ಮಟ್ಟದ ಅಧಿಕಾರಿಗಳ ಗಮನಕ್ಕೂ ತರಲಾಗಿದೆ.‌ ಪ್ರಧಾನಮಂತ್ರಿ, ಸಿಎಂ ಸೇರಿದಂತೆ, ಲೋಕಾಯುಕ್ತ ಕಚೇರಿಗೂ ದೂರು ಸಲ್ಲಿಸಲಾಗಿದೆ ಕೂಡಲೇ ಇವರನ್ನು ಸಸ್ಪೆಂಡ್ ಮಾಡಬೇಕು ಎಂದು ದೂರುದಾರ ವಕೀಲರು ಆಗ್ರಹಿಸಿದ್ದಾರೆ.

ಅಧಿಕಾರಿಗಳ ಹಣದಾಹ, ಲಂಚ ನೀಡಲು ಹಣವಿಲ್ಲದೆ ದುಡಿಮೆಯ ಎತ್ತನ್ನೇ ಕೊಡಲು ಪುರಸಭೆಗೆ ತಂದ ಹಾವೇರಿ ರೈತ!

ಇನ್ನೂ ಈ ಬಗ್ಗೆ ಸ್ವತಃ ತಾಲ್ಲೂಕು ಸಬ್ ರಿಜಿಸ್ಟರ್ ಆಫೀಸರ್ ಲಕ್ಷ್ಮೀ ತುಳಸಿ ಅವರನ್ನೇ ವಿಚಾರಿಸಿದ್ರೆ, ನನಗೂ ಆ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಮಧ್ಯವರ್ತಿಗಳು ಲಂಚ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ ಅದೆಲ್ಲಾ‌ ಸತ್ಯಕ್ಕೆ ದೂರವಾದ ಮಾತು. ನಾನು ಬಂದ ಮೇಲೆ ಮಧ್ಯ ವರ್ತಿಗಳ ಹಾವಳಿ ಕಡಿಮೆ ಮಾಡಿದ್ದೇನೆ ಅದಕ್ಕಾಗಿಯೇ ಈ ರೀತಿ ಆರೋಪಗಳು ಬಂದಿರಬಹುದು. ನಾವು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಅನುಮತಿ‌ ಇರುವುದಿಲ್ಲ ಮೇಲಾಧಿಕಾರಿಗಳ ಗಮನಕ್ಕೆ ತರ್ತೀವಿ ಎಂದು ನುಸುಳಿಕೊಳ್ಳುವ ಪ್ರಯತ್ನ ಮಾಡಿದರು.

ಲೋಕಾ ಬಳಿಕ ಮಾಡಾಳು, ಪುತ್ರಗೆ ಈಗ ಇ.ಡಿ. ಕಂಟಕ

ಒಟ್ಟಾರೆಯಾಗಿ ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಕಚೇರಿಗಳು ಅಂದ್ರೆ ಸಾಕು ಭ್ರಷ್ಟಾಚಾರ ತಾಂಡವ ಆಡ್ತಿರೋ ಸ್ಥಳಗಳು ಎಂದು ಜನರು ಮಾತನಾಡ್ತಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಅಧಿಕಾರಿಗಳು ಬ್ರೋಕರ್ ಗಳ ಮೂಲಕ ಲಂಚ ಸ್ವೀಕಾರ ಮಾಡ್ತಿರೋದು ನಾಚಿಕೆಗೇಡಿನ ಸಂಗತಿ. ಸಂಬಂಧಪಟ್ಟ ಅಧಿಕಾರಿಗಳು ಲಂಚ ಪಡೆಯುವವರಿಗೆ ಹೆಡೆಮುರಿ ಕಟ್ಟಬೇಕಿದೆ.