Davanagere: ಪಾಲಿಕೆ ಭ್ರಷ್ಟಾಚಾರ: ಬೈರತಿ ಪಾತ್ರ ತನಿಖೆಯಾಗಲಿ; ಕಾಂಗ್ರೆಸ್ ಪ್ರತಿಭಟನೆ
ದಾವಣಗೆರೆ ಪಾಲಿಕೆ ಭ್ರಷ್ಟಾಚಾರ, ಹಗರಣಗಳ ಬಗ್ಗೆ, ನಗರಾಭಿವೃದ್ಧಿ ಸಚಿವ ಬಸವರಾಜ ಬೈರತಿ, ಆಯುಕ್ತ ವಿಶ್ವನಾಥ ಮುದಜ್ಜಿ ಪಾತ್ರದ ಕುರಿತಂತೆ ನ್ಯಾಯಾಂಗ ತನಿಖೆಗೆ ಒತ್ತಾಯಿಸಿ ಪಾಲಿಕೆ ವಿಪಕ್ಷ ಕಾಂಗ್ರೆಸ್‌ನಿಂದ ಪಾಲಿಕೆ ಆವರಣದಲ್ಲಿ ಬುಧವಾರ ಪ್ರತಿಭಟಿಸಲಾಯಿತು.
ದಾವಣಗೆರೆ (ನ.10) : ದಾವಣಗೆರೆ ಪಾಲಿಕೆ ಭ್ರಷ್ಟಾಚಾರ, ಹಗರಣಗಳ ಬಗ್ಗೆ, ನಗರಾಭಿವೃದ್ಧಿ ಸಚಿವ ಬಸವರಾಜ ಬೈರತಿ, ಆಯುಕ್ತ ವಿಶ್ವನಾಥ ಮುದಜ್ಜಿ ಪಾತ್ರದ ಕುರಿತಂತೆ ನ್ಯಾಯಾಂಗ ತನಿಖೆಗೆ ಒತ್ತಾಯಿಸಿ ಪಾಲಿಕೆ ವಿಪಕ್ಷ ಕಾಂಗ್ರೆಸ್‌ನಿಂದ ಪಾಲಿಕೆ ಆವರಣದಲ್ಲಿ ಬುಧವಾರ ಪ್ರತಿಭಟಿಸಲಾಯಿತು.
ಸಚಿವ ಸಂಪುಟ ವಿಸ್ತರಣೆ ಸಿಎಂಗೆ ಬಿಟ್ಟ ಸಂಗತಿ: ಸಚಿವ ಬೈರತಿ ಬಸವರಾಜ
ನಗರದ ಪಾಲಿಕೆ ಆವರಣದ ಗಾಂಧಿ ಪುತ್ಥಳಿ ಬಳಿ ಪಾಲಿಕೆ ವಿಪಕ್ಷ ನಾಯಕ ಜಿ.ಎಸ್.ಮಂಜುನಾಥ ಗಡಿಗುಡಾಳ್ ನೇತೃತ್ವದಲ್ಲಿ ಆಡಳಿತ ಪಕ್ಷ ಬಿಜೆಪಿ ಭ್ರಷ್ಟಾಚಾರ, ಲಂಚದ ಹಣದಲ್ಲಿ ಸಚಿವ ಬಸವರಾಜ ಬೈರತಿ ಪಾತ್ರದ ಬಗ್ಗೆ ತನಿಖೆಗೆ ಒತ್ತಾಯಿಸಿ ಕಾಂಗ್ರೆಸ್ ಸದಸ್ಯರು, ಮುಖಂಡರು, ಕಾರ್ಯಕರ್ತರು ಘೋಷಣೆ ಕೂಗಿದರು.
ಇದೇ ವೇಳೆ ಮಾತನಾಡಿದ ಮಂಜುನಾಥ ಗಡಿಗುಡಾಳ್, ಜಕಾತಿ ವಸೂಲಿ ಟೆಂಡರ್ ಅವಧಿ ವಿಸ್ತರಿಸಲು 15 ಲಕ್ಷ ರು.ಗಳನ್ನು ಸಚಿವ ಬಸವರಾಜ ಬೈರತಿಗೆ ನೀಡಿರುವುದಾಗಿ, ಉಳಿದ ಹಣ ಆಯುಕ್ತರಿಗೂ ನೀಡಬೇಕೆಂಬುದಾಗಿ ಲೋಕಾಯುಕ್ತರ ಬಲೆಗೆ ಸಿಕ್ಕಿ ಬಿದ್ದಿರುವ ಆರೋಪಿ, ಪಾಲಿಕೆ ವ್ಯವಸ್ಥಾಪಕ ವೆಂಕಟೇಶ್ ಆಡಿಯೋ ಎಲ್ಲಾ ಕಡೆ ವೈರಲ್ ಆಗಿದೆ. ಅದನ್ನೇ ಸಾಕ್ಷ್ಯವಾಗಿಟ್ಟು, ಉನ್ನತ ಮಟ್ಟದ ತನಿಖೆ ನಡೆಸಿ, ಸಚಿವರು, ಆಯುಕ್ತರ ಪಾತ್ರ ಏನೆಂಬುದು ಬಯಲಿಗೆಳೆಯಬೇಕು ಎಂದರು.
ನ್ಯಾಯಾಂಗ ತನಿಖೆ ಆಗಲಿ:
ಪಾಲಿಕೆಯಲ್ಲಿ ವ್ಯಾಪಕ ಭ್ರಷ್ಟಾಚಾರ ಬೇರು ಬಿಟ್ಟಿದೆÜ. ಶೇ.40 ಕಮಿಷನ್ ಪಡೆಯುವ ಬಿಜೆಪಿ ಆಳ್ವಿಕೆಯಲ್ಲಿ ಪಾಲಿಕೆಯೂ ಅದಕ್ಕೆ ಹೊರತಲ್ಲ. ಜಕಾತಿ ಟೆಂಡರ್ ವಿಸ್ತರಣೆಗೆ 3 ಲಕ್ಷ ಪಡೆಯುವಾಗ ಸಿಕ್ಕಿ ಬಿದ್ದ ಆರೋಪಿ ವ್ಯವಸ್ಥಾಪಕ ವೆಂಕಟೇಶ ಜಕಾತಿ ಅವಧಿ ವಿಸ್ತರಿಸಲು ನೀಡುವ ಆದೇಶಕ್ಕೆ ಬರುವ ಹಣದಲ್ಲಿ ಆಯುಕ್ತ ವಿಶ್ವನಾಥ ಮುದಜ್ಜಿಗೆ ನೀಡಬೇಕೆಂಬುದಾಗಿ ಹೇಳಿದ್ದಾನೆ. ಅಲ್ಲದೇ, ಸಚಿವ ಬೈರತಿಗೂ 15 ಲಕ್ಷ ರು. ಕೊಟ್ಟಿದ್ದಾಗಿ ಹೇಳಿದ್ದನ್ನು ಸರ್ಕಾರ ಲಘುವಾಗಿ ಪರಿಗಣಿಸದೇ ಪಾಲಿಕೆಯಲ್ಲಿ ಬಿಜೆಪಿ ಆಳ್ವಿಕೆ ಅವಧಿಯಲ್ಲಿ ಆಗಿರುವ ಎಲ್ಲಾ ಭ್ರಷ್ಟಾಚಾರದ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು ಎಂದು ಆಗ್ರಹಿಸಿದರು.
ತೀವ್ರ ಸ್ವರೂಪದ ಹೋರಾಟ:
ಸದಸ್ಯ ಎ.ನಾಗರಾಜ ಮಾತನಾಡಿ, ಕಳೆದ ಎರಡೂವರೆ ವರ್ಷದಲ್ಲಿ 1 ಕೋಟಿ ರು.ಗೂ ಹೆಚ್ಚು ಕರೆದಿರುವ ಟೆಂಡರ್ ಬಗ್ಗೆ ಲೋಕಾಯುಕ್ತ ತನಿಖೆ ಆಗಬೇಕು. ಅಲ್ಲದೇ, ಆದೇಶ ಮುಂದುವರಿಕೆ ಎಂಬ ಆದೇಶ ಮಾಡಿರುವ ಆಯುಕ್ತ ವಿಶ್ವನಾಥ ಮುದಜ್ಜಿ ವಿರುದ್ಧವೂ ತನಿಖೆ ನಡೆಸಬೇಕು. ಯಾವುದೇ ಕಾರಣಕ್ಕೂ ಈ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ. ಒಂದು ವೇಳೆ ಯಾರನ್ನಾದರೂ ರಕ್ಷಿಸಲು ಮುಂದಾದರೆ ಕಾಂಗ್ರೆಸ್ ತೀವ್ರ ಸ್ವರೂಪದ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.
ಕಾಂಗ್ರೆಸ್ಸಿನವರಿಗೆ ಬಿಜೆಪಿ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ: ಸಚಿವ ಬೈರತಿ
ಪಾಲಿಕೆ ಸದಸ್ಯರಾದ ಮಾಜಿ ಉಪ ಮೇಯರ್‌ಗಳಾದ ಅಬ್ದುಲ್ ಲತೀಫ್, ಕೆ.ಚಮನ್ ಸಾಬ್, ಪಾಮೇನಹಳ್ಳಿ ನಾಗರಾಜ, ಉದಯಕುಮಾರ, ಮುಖಂಡರಾದ ದಿನೇಶ ಕೆ.ಶೆಟ್ಟಿ, ಡಿ.ಬಸವರಾಜ, ಕೆ.ಜಿ.ಶಿವಕುಮಾರ, ಮನು, ಗಾಂಧಿ ನಗರ ರಮೇಶ, ಡೋಲಿ ಚಂದ್ರು, ಎಸ್.ಮಲ್ಲಿಕಾರ್ಜುನ, ಗಣೇಶ ಹುಲ್ಮನಿ, ಸರ್ವಮಂಗಳ ಇತರರಿದ್ದರು.